ಹಾಸನ(ಸೆ.03): ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಕಾರ್ನರ್ ಸೈಟ್ ಮಾರಾಟ ಮಾಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ. ಹಾಸನದಲ್ಲಿ ಅಧಿಕಾರಿಗಳೊಂದಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇದು ಮೊದಲಿನಿಂದಲು ಬಂದಿರುವ ಪ್ರಕ್ರಿಯೆ ಇದೇನು ಹೊಸದಲ್ಲ. ರಾಜ್ಯದ ಎಲ್ಲೆಡೆ ಕಾರ್ನರ್ ಸೈಟ್ಗಳನ್ನು ಮಾರಾಟ ಮಾಡುತ್ತೇವೆ ಎಂದರು. ಹಾಗೆಯೇ ಡಿಸೆಂಬರ್ ಅಂತ್ಯದ ಒಳಗೆ ರಾಜ್ಯದಲ್ಲೆಡೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ರಸ್ತೆ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ರು. ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಹಣ ಬಿಡುಗಡೆ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಇಡೀ ಪ್ರಪಂಚದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ಇಲಾಖೆಗೆ ಯಾವುದೇ ತೊಂದರೆಯಾಗುವುದಿಲ್ಲಾ ಸಿಎಂ ಎಂದಿನಂತೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಹಣಕಾಸು ಇಲಾಖೆ ಸಿಎಂ ಕೈಯಲ್ಲಿದೆ ಸರಿದೂಗಿಸುತ್ತಾರೆ ಎಂದರು.
ನಗರದಲ್ಲಿ ಮತ್ತೊಂದು ಅತ್ಯುತ್ತಮವಾದ ಬಡಾವಣೆ ನಿರ್ಮಾಣಕ್ಕೆ ಸರಕಾರವು ಸಂಪೂರ್ಣ ಸಹಕಾರ ಕೊಡಲು ಸಿದ್ಧವಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾದ ಬಿ.ಎ ಬಸವರಾಜು ಭರವಸೆಯೊಂದಿಗೆ ಅಭಯ ಹಸ್ತ ನೀಡಿದ್ದಾರೆ.
ನಿವೇಶನದ ಫೈಲನ್ನು ಜಿಲ್ಲಾಧಿಕಾರಿಗಳು ತಕ್ಷಣ ನೀಡಿ ಅಪ್ರೂವಲ್ ಮಾಡಿ ಹಾಸನದಲ್ಲಿ ಇನ್ನೊಂದು ಅತ್ಯುತ್ತಮವಾದ ಬಡಾವಣೆ ನಿರ್ಮಾಣ ಮಾಡಲು ಸರಕಾರ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ಧವಾಗಿದೆ. ಸುಮಾರು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಉತ್ತಮ ಬಡಾವಣೆ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ಸುತ್ತ ಮುತ್ತೆ ಇರುವ 4ರಿಂದ 25 ಎಕರೆಗಿಂತ ಭೂಮಿ ಕಡಿಮೆ ಇರುವ ಭೂಮಿಗೆ ಬಡಾವಣೆ ಮಾಡಲು ಅನುಮತಿ ಕೊಡಬಾರದು ಎಂದು ಇಡೀ ರಾಜ್ಯದಲ್ಲಿ ಇಂತಹ ನಿರ್ಧಾರವನ್ನು ಪ್ರಾಧಿಕಾರ ತೆಗೆದುಕೊಳ್ಳಬೇಕಾಗಿದೆ. ವಿಶೇಷವಾಗಿ ಜಿಲ್ಲಾಧಕಾರಿಗಳಿಗೂ ಸೂಚನೆಯನ್ನು ಕೊಡಲಾಗಿದೆ. 25 ಎಕರೆ ಭೂಮಿ ಇದ್ದರೇ ಅದಕ್ಕೆ ಒಂದು ಅರ್ಥ ಬರುತ್ತದೆ. ಸರಕಾರದ ವತಿಯಿಂದ ಹೆಚ್ಚು ಬಡಾವಣೆ ನಿರ್ಮಾಣವಾಗಿ ಪ್ರಾಧಿಕಾರವು ಹೆಚ್ಚು ಸಂಪನ್ಮೂಲವನ್ನು ಕ್ರೂಢಿಕರಿಸಲಿ ಎಂಬ ದೃಷ್ಠಿಯಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ನಿವೇಶನದ ಅಭಿವೃದ್ಧಿ ಬಗ್ಗೆ ವಿಧಾನ ಸಭೆಯ ಮುಂದಿಟ್ಟು ಅನುಮೋದನೆ ಪಡೆದು ಇನ್ನೆರಡು ಮೂರು ತಿಂಗಳಲ್ಲಿ ಅಭಿವೃದ್ಧಿ ಕೆಲಸ ಪ್ರಾರಂಭಿಸಲಾಗುವುದು. ಪತ್ರಕರ್ತರಿಗೆ ಇದುವರೆಗು ಯಾವ ನಿವೇಶನವನ್ನು ಕೊಟ್ಟಿರುವುದಿಲ್ಲ. ಈ ನಿಟ್ಟಿನಲ್ಲಿ ಗಣನೆಗೆ ತೆಗೆದುಕೊಂಡಿದ್ದು, ಒಂದು ಸಾವಿರ ಎಕರೆಯಲ್ಲಿ ಗೃಹ ನಿರ್ಮಾಣ ಮಾಡಿದರೆ ಅದರಲ್ಲಿ ಶೇ.5 ಭಾಗದಷ್ಟು ನಿವೇಶನವನ್ನು ಸರಕಾರ ನಿಗಧಿ ಮಾಡುವ ಧರದಲ್ಲಿ ಮೀಸಲಿಟ್ಟು ಕೊಡುವ ಕೆಲಸವನ್ನು ಮಾಡಲಾಗುವುದು ಎಂದು ಭರವಸೆ ನುಡಿದರು. ಈಗಾಗಲೇ ಸಂಬಂಧಪಟ್ಟವರ ಬಳಿ ಮಾತನಾಡಲಾಗಿದ್ದು, ಸಚಿವ ಸಂಪೂಟ ಸಭೆಯಲ್ಲಿ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಕೊಡಲು ಸರಕಾರವು ಇಂದು ಹಾಸನ ನಗರದಲ್ಲಿ 119 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲ ತಿಂಗಳುಗಳಲ್ಲೇ ಕಾಮಗಾರಿ ಮುಗಿಯುವ ಬಗ್ಗೆ ತಿಳಿದು ಬಂದಿದೆ. ಅಮೃತ ಯೋಜನೆ ಕಾಮಗಾರಿ ವೇಳೆ ಎಲ್ಲೆಲ್ಲಿ ರಸ್ತೆಗಳು ಹಾಳಾಗಿದೆ ಎಲ್ಲಾವನ್ನು ಸರಿಪಡಿಸಲಾಗುವುದು ಎಂದರು.
ಇದನ್ನೂ ಓದಿ: ಮೋದಿ ವೈಫಲ್ಯವನ್ನು ಮುಚ್ಚಿಹಾಕಲು ಯಡಿಯೂರಪ್ಪ ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ; ಸಿದ್ದರಾಮಯ್ಯ ಕಿಡಿ
ಜಿಲ್ಲಾಧಿಕಾರಿಗಳ ಜೊತೆ ನಡೆಸಲಾದ ಸಭೆಯಲ್ಲಿ ಕೊರೋನಾ ವಿಚಾರವಾಗಿ ಚರ್ಚೆ ಮಾಡಿದ್ದು, ಯಾವ ರೋಗಿಗೂ ಚಿಕಿತ್ಸೆಯಲ್ಲಿ ಕೊರತೆಯಾಗಬಾರದು ಎಂದು ಹೇಳಲಾಗಿದೆ. ರೋಗಿಗೆ ಹಾಸಿಗೆ ಕೊರತೆ, ಇಂಜೆಕ್ಷನ್ ಆಕ್ಸಿಜನ್ ಸೇರಿದಂತೆ ಎಲ್ಲಾವು ಕೂಡ ಸಮರ್ಪಕವಾಗಿ ಮಾಡುವ ಕೆಲಸ ಮಾಡಲಾಗುತ್ತಿರುವುದಾಗಿ ಖುದ್ಧಾಗಿ ಡಿಸಿಯವರು ಹೇಳಿದ್ದಾರೆ. ಇಂದು ಕೊರೋನಾವು ಪ್ರಪಂಚದಾದ್ಯಂತ ಹರಡಿ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರವಾಗಿದೆ. ಎಲ್ಲಾ ವಿಷಯದಲ್ಲಿ ಮುಖ್ಯಮಂತ್ರಿಗಳು ತೀರ್ಮಾನಕೈಗೊಳ್ಳುತ್ತಾರೆ. ಆದರೇ ನಮ್ಮ ಇಲಾಖೆ ಮತ್ತು ಅಭಿವೃದ್ಧಿಯಲ್ಲಿ ಯಾವ ಕುಂಠಿತವಾಗುವುದಿಲ್ಲ. ಈಗಾಗಲೆ ಮುಖ್ಯಮಂತ್ರಿಗಳು ಸಹಕಾರ ಕೊಡುತ್ತಿರುವುದಾಗಿ ಸಂತೋಷ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ