BC Patil: ಸಚಿವ ಬಿ.ಸಿ. ಪಾಟೀಲ್ ಮನೆಯಲ್ಲಿ ಲಸಿಕೆ ಪಡೆದ ಪ್ರಕರಣ: ತಾಲ್ಲೂಕು ವೈದ್ಯಾಧಿಕಾರಿ ಅಮಾನತು
ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಸಚಿವರು ಈ ನಿಯಮಗಳನ್ನು ಮುರಿದಿದ್ದರು.
ಮನೆಯಲ್ಲೇ ಕೊರೋನಾ ವ್ಯಾಕ್ಸಿನ್ ಪಡೆದಿದ್ದ ಸಚಿವ ಬಿ.ಸಿ. ಪಾಟೀಲ್.
ಹಾವೇರಿ: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಮನೆಯಲ್ಲಿ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ. ಮಕಾಂದಾರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ಕೆ.ವಿ. ತ್ರೀಲೋಕ ಚಂದ್ರ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿಯೇ ಲಸಿಕೆ ಪಡೆದಿದ್ದಕ್ಕೆ ಸಚಿವ ಬಿ.ಸಿ. ಪಾಟೀಲ್ ವಿವಾದಕ್ಕೆ ಕಾರಣವಾಗಿದ್ದರು. ಮಾರ್ಚ್ 2 ರಂದು ಹಿರೇಕೆರೂರು ಮನೆಯಲ್ಲಿ ಸಚಿವ ಪಾಟೀಲ ಹಾಗೂ ಅವರ ಪತ್ನಿ ವನಜಾ ಪಾಟೀಲ ವ್ಯಾಕ್ಸಿನ್ ಹಾಕಿಸಿಕೊಂದಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್. ಮಕಾಂದಾರ ತಮ್ಮ ಸಿಬ್ಬಂದಿ ಸಮೇತ ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳ ಹಿಂದೆ ತಾಲೂಕು ಆರೋಗ್ಯಾಧಿಕಾರಿಗೆ ದಿಹೆಚ್ಓ ಕಾರಣ ಕೇಳಿ ನೋಟೀಸ್ ನೀಡಿದ್ದರು.
ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದ ಬಿ.ಸಿ.ಪಾಟೀಲ್:
ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಂಡು ಜನರನ್ನು ಪ್ರೇರೇಪಿಸುವ ಕೆಲಸ ಮಾಡಿದ್ದರು. ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳವ ಮೂಲಕ ಸರಳತೆ ಮೆರೆದಿದ್ದರು. ಆದರೆ, ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಪತ್ನಿ ವನಜಾ ಪಾಟೀಲ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು, ಆರೋಗ್ಯ ಸಿಬ್ಬಂದಿಗಳನ್ನ ಮನೆಗೆ ಕರೆಯಿಸಿ ಲಸಿಕೆ ಹಾಕಿಸಿಕೊಂಡ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಸಚಿವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಹಿರೇಕೆರೂರು ಆರೋಗ್ಯ ಅಧಿಕಾರಿಗಳೇ ನಿಯಮಗಳನ್ನು ಮೀರಿ ನಡೆದುಕೊಳ್ಳುವ ಮೂಲಕ ಜನಸಾಮಾನ್ಯರಿಗೊಂದು ನಿಯಮ ಜನಪ್ರತಿನಿಧಿಗಳಿಗೊಂದು ನಿಯಮವೇ? ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು.
ಇನ್ನು ಮಾರ್ಚ್ 02 ಮನೆಯಲ್ಲಿ ಲಸಿಕೆ ಪಡೆದ ವಿಚಾರವಾಗಿ ಹಿರೇಕೆರೂರು ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ, ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ನಾವೇನು ಅಪರಾಧ ಮಾಡಿದ್ದಿವಾ? ಕಳ್ಳತನ ಮಾಡಿದ್ದೀವಾ ? ನಾನು ಸರಕಾರದ ಒಂದು ಭಾಗ. ಮನೆಯಲ್ಲಿ ಸಾಕಷ್ಟು ಜನರು ಕಾಯುತ್ತಿದ್ದರು. ಆಸ್ಪತ್ರೆಯಲ್ಲಿ ತೊಂದರೆ ಆಗುತ್ತಿತ್ತು.
ಜನರಿಗೆ ತೊಂದರೆ ಕೊಡಬಾರ್ದು ಅಂತಾ ನಾನು ಮನೆಯಲ್ಲೇ ಲಸಿಕೆ ಹಾಕಿಸಿಕೊಂಡೆ. ನಾನು ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದರೆ ಇಷ್ಟು ದೊಡ್ಡ ಸುದ್ದಿ ಆಗ್ತಿರ್ಲಿಲ್ಲ. ಲಸಿಕೆ ಬಗ್ಗೆ ಈಗ ನನ್ನಿಂದ ಜನರಲ್ಲಿ ಜಾಗೃತಿ ಮೂಡಿದಂತಾಗಿದೆ. ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿ ಆಗಿದ್ದೇನೆ. ನಾವ್ಯಾಕೆ ಹಾಕಿಸಿಕೊಳ್ಳಬಾರ್ದು ಅಂತಾ ಜನರಲ್ಲಿ ಭಾವನೆ ಬರ್ತಿದೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡಿದ್ದರು.
ಈ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ಸುಧಾಕರ, ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಇಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಮನೆಗೆ ಹೋಗಿ ಲಸಿಕೆ ನೀಡುವಂತಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
(ವರದಿ: ಮಂಜುನಾಥ ತಳವಾರ)
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ