ಮಂಡ್ಯದಲ್ಲಿ ಕೃಷಿ ಸಚಿವರಿಂದ ವಿಶಿಷ್ಟ ಕಾರ್ಯಕ್ರಮ; ಮಡುವಿನಕೋಡಿ ಗ್ರಾಮದಲ್ಲಿ ರೈತರಾದ ಬಿ.ಸಿ.ಪಾಟೀಲ್

ರೈತರ ಆತ್ಮಹತ್ಯೆ ನಾಡು ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಸಚಿವರು ರೈತರ ಜೊತೆ ಒಂದು ದಿನ ಹೆಸರಿನಲ್ಲಿ ಹೊಸ ಕಾರ್ಯಕ್ರಮ ಪರಿಚಯಿಸಿದ್ದಾರೆ. ಲಾಕ್ಡೌನ್ ಬಳಿಕ‌ ರಾಜ್ಯ  ಸರ್ಕಾರದ ಕೃಷಿ ಸಚಿವರು ಖುದ್ದು ರೈತರ ಸಮಸ್ಯೆ ಆಲಿಸಲು ಈ  ವಿನೂತನ ಕಾರ್ಯಕ್ರಮ ಆಯೋಜಿಸಿ, ರೈತರಿಗೆ ಧೈರ್ಯ ತುಂಬಲು ಮುಂದಾಗಿದ್ದಾರೆ.

ಭತ್ತದ ಬೆಳೆಗೆ ಗೊಬ್ಬರ ಹಾಕುತ್ತಿರುವ ಸಚಿವರಾದ ಬಿ.ಸಿ.ಪಾಟೀಲ್ ಮತ್ತು ನಾರಾಯಣಗೌಡ.

ಭತ್ತದ ಬೆಳೆಗೆ ಗೊಬ್ಬರ ಹಾಕುತ್ತಿರುವ ಸಚಿವರಾದ ಬಿ.ಸಿ.ಪಾಟೀಲ್ ಮತ್ತು ನಾರಾಯಣಗೌಡ.

  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮಾಜಿ ಸಿ.ಎಂ. ಕುಮಾರಸ್ವಾಮಿ ತಾವು ಸಿ.ಎಂ.ಆಗಿದ್ದ ವೇಳೆ ಸೀತಾಪುರದಲ್ಲಿ ಭತ್ತದ ನಾಟಿ‌ ಮಾಡಿ ರೈತರಿಗೆ ವಿಶ್ವಾಸ ತುಂಬಿದ್ದರು. ಅದೇ ರೀತಿ ಇಂದು ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ರೈತರೊಂದಿಗೊಂದು ದಿನ ಹೆಸರಿನ ವಿನೂತನ ಕಾರ್ಯಕ್ರಮ ತಂದಿದ್ದಾರೆ. ಅದರಂತೆ ಇಂದು ಮಂಡ್ಯದಲ್ಲಿ ರಾಗಿನಾಟಿ ಮಾಡಿ ಕಬ್ಬಿನ ಬಿತ್ತನೆ ಹಾಗೂ ಭತ್ತಕ್ಕೆ ಗೊಬ್ಬರ ಹಾಕುವ ಮೂಲಕ ಜಿಲ್ಲೆಯ ರೈತರ ಸಮಸ್ಯೆಗೆ ದನಿಯಾಗಿ ರೈತರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. 

ಹೌದು! ಕಳೆದ ಎರಡು ವರ್ಷದ ಹಿಂದೆ ಸಕ್ಕರೆ ನಾಡು ಮಂಡ್ಯದಲ್ಲಿ ಮಾಜಿ ಸಿ.ಎಂ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಭತ್ತದ ನಾಟಿ ಮಾಡಿದ್ರು. ಆ ಮೂಲಕ ಆತ್ಮಹತ್ಯೆ ನಾಡಾಗಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅದೇ ರೀತಿ ಇಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ 64ನೇ ಹುಟ್ಟುಹಬ್ಬವನ್ನು ರೈತರ ಜೊತೆಗೆ ಆಚರಿಸಲು ನಿರ್ಧರಿಸಿ ಅದಕ್ಕಾಗಿ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೊಡಿ ಗ್ರಾಮದಲ್ಲಿ ರೈತರೊಂದಿಗೊಂದು ದಿನ ಹೆಸರಿನ‌ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಯೋಗದೊಂದಿಗೆ  ಆಯೋಜಿಸಿ ರೈತರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದರು.

ಇನ್ನು ಇದಕ್ಕಾಗಿ ಇಂದು ಮಡುವಿನಕೋಡಿ ಗ್ರಾಮದಲ್ಲಿ ರೈತರ ಜಮೀನಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ಜೊತೆ  ಕೃಷಿ ಸಚಿವ  ಬಿ.ಸಿ ಪಾಟೀಲ್ ಜಿಲ್ಲೆಯ ಹಲವು ಪ್ರಗತಿಪರ ರೈತರ ಜಮೀನಿಗೆ ಭೇಟಿ ನೀಡಿದರು. ಬಳಿಕ ಮಡುವಿನಕೋಡಿ ಗ್ರಾಮದ ರೈತರ ಜಮೀನನಲ್ಲಿ ಖುದ್ದು ಜಮೀನಿಗಿಳಿದು ರಾಗಿ ನಾಟಿ ಮಾಡಿದರು. ಅಲ್ಲದೆ ಭತ್ತಕ್ಕೆ ಗೊಬ್ಬರ ಹಾಕಿ ಟ್ರ್ಯಾಕ್ಟ ರ್ ಚಲಾಯಿಸಿ ಹಲವು ಕೃಷಿ ಕೆಲಸಗಳನ್ನು ಮಾಡಿದರು.

ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತರ ಸಮಸ್ಯೆ ಅರಿಯುವ ಸಲುವಾಗಿ ರೈತರೊಂದಿಗೆ ಒಂದು  ದಿನ ಕಳೆಯಲು ಈ ಕಾರ್ಯಕ್ರಮ ಆಯೋಜಿಸಿದ್ದು, ರೈತರ ಜೊತೆ ಈ ದಿನ ಕಳೆಯುತ್ತಿರುವುದು ಖುಷಿ ಆಗಿದೆ. ಮುಂದಿನ ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಮುಂದುವರೆಸುವುದಾಗಿ ತಿಳಿಸಿದರು.

ಇನ್ನು ಈ ರೈತರೊಂದಿಗೆ ಒಂದು ದಿನ ಹೆಸರಿನ ವಿಶಿಷ್ಟ ಕಾರ್ಯಕ್ರಮಕ್ಕೆಂದು ಬಂದ ಇಬ್ಬರು ಸಚಿವರಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತದೊಂದಿಗೆ ಎತ್ತಿನ ಗಾಡಿ ಮೂಲಕ ಮೆರವಣಿಗೆ ಮಾಡಿ ವೇದಿಕೆಗೆ ಕರೆ ತಂದರು. ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ‌ಬಳಿಕ ರಾಶಿ ಹಾಕಿದ ಧಾನ್ಯಕ್ಕೆ ರಾಶಿ ಪೂಜೆ ಮಾಡುವ ಮೂಲಕ ವೇದಿಕೆಯ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನು ಓದಿ: ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ

ವೇದಿಕೆಯಲ್ಲಿ ಗೂಗಲ್ ಮೀಟ್ ಮೂಲಕ ಪ್ರಗತಿಪರ ರೈತರ  ಜೊತೆ  ಸಂವಾದ ಹಾಗೂ ಚರ್ಚೆ ನಡೆಸುವ ಮೂಲಕ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಿ ಸಮಗ್ರ ಕೃಷಿ ಪದ್ದತಿ ಅಳಡಿಸಿಕೊಳ್ಳಬೇಕು. ಆ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೃಷಿ ಸಚಿವರು  ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕೂಡ ರೈತರ ಹಿತಕ್ಕಾಗಿ ಸರ್ಕಾರ ಬದ್ದವಾಗಿದೆ. ಯಾವುದೇ ಕಾರಣಕ್ಕೂ ರೈತರು ಧೃತಿಗೆಡದಂತೆ ಮನವಿ ಮಾಡಿ ರೈತರಿಗಾಗಿ ಸರಕಾರ ಹಲವು ರೈತ ಪರ ಯೋಜನೆ ತಂದಿರೋದಾಗಿ ತಿಳಿಸಿದರು‌.

ಒಟ್ಟಾರೆ ರೈತರ ಆತ್ಮಹತ್ಯೆ ನಾಡು ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಸಚಿವರು ರೈತರ ಜೊತೆ ಒಂದು ದಿನ ಹೆಸರಿನಲ್ಲಿ ಹೊಸ ಕಾರ್ಯಕ್ರಮ ಪರಿಚಯಿಸಿದ್ದಾರೆ. ಲಾಕ್ಡೌನ್ ಬಳಿಕ‌ ರಾಜ್ಯ  ಸರ್ಕಾರದ ಕೃಷಿ ಸಚಿವರು ಖುದ್ದು ರೈತರ ಸಮಸ್ಯೆ ಆಲಿಸಲು ಈ  ವಿನೂತನ ಕಾರ್ಯಕ್ರಮ ಆಯೋಜಿಸಿ, ರೈತರಿಗೆ ಧೈರ್ಯ ತುಂಬಲು ಮುಂದಾಗಿದ್ದಾರೆ.
Published by:HR Ramesh
First published: