HOME » NEWS » District » MINISTER BC PATIL TAKE CORONA VACCINE IN HIS HOME RHHSN

ಆರೋಗ್ಯ ಸಿಬ್ಬಂದಿ ಮನೆಗೆ ಕರೆಸಿಕೊಂಡು ಲಸಿಕೆ ಪಡೆದ ಸಚಿವ; ನಾವೇನು ಅಪರಾಧ ಮಾಡಿದ್ದಿವಾ ಎಂದ ಬಿ.ಸಿ. ಪಾಟೀಲ್

ನಾನು ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದರೆ ಇಷ್ಟು ದೊಡ್ಡ ಸುದ್ದಿ ಆಗ್ತಿರ್ಲಿಲ್ಲ. ಲಸಿಕೆ ಬಗ್ಗೆ ಈಗ ನನ್ನಿಂದ ಜನರಲ್ಲಿ ಜಾಗೃತಿ ಮೂಡಿದಂತಾಗಿದೆ. ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿ ಆಗಿದ್ದೇನೆ. ನಾವ್ಯಾಕೆ ಹಾಕಿಸಿಕೊಳ್ಳಬಾರ್ದು ಅಂತಾ ಜನರಲ್ಲಿ ಭಾವನೆ ಬರ್ತಿದೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡರು.

HR Ramesh | news18-kannada
Updated:March 2, 2021, 9:15 PM IST
ಆರೋಗ್ಯ ಸಿಬ್ಬಂದಿ ಮನೆಗೆ ಕರೆಸಿಕೊಂಡು ಲಸಿಕೆ ಪಡೆದ ಸಚಿವ; ನಾವೇನು ಅಪರಾಧ ಮಾಡಿದ್ದಿವಾ ಎಂದ ಬಿ.ಸಿ. ಪಾಟೀಲ್
ಮನೆಯಲ್ಲಿ ಲಸಿಕೆ ಪಡೆಯುತ್ತಿರುವ ಸಚಿವ ಬಿ.ಸಿ. ಪಾಟೀಲ್
  • Share this:
ಹಾವೇರಿ: ದೇಶದಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ನಿರೀಕ್ಷೆಯಂತೆ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಂಡು ಜನರನ್ನು ಪ್ರೇರೇಪಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಸರ್ಕಾರಿ  ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳವ ಮೂಲಕ ಸರಳತೆ ಮೆರೆದಿದ್ದಾರೆ. ಆದರೆ, ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಪತ್ನಿ ವನಜಾ ಪಾಟೀಲ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು, ಆರೋಗ್ಯ ಸಿಬ್ಬಂದಿಗಳನ್ನ ಮನೆಗೆ ಕರೆಯಿಸಿ ಲಸಿಕೆ ಹಾಕಿಸಿಕೊಂಡ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಇಂದು ಸಚಿವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಹಿರೇಕೆರೂರು ಆರೋಗ್ಯ ಅಧಿಕಾರಿಗಳೇ ನಿಯಮಗಳನ್ನು ಮೀರಿ ನಡೆದುಕೊಳ್ಳುವ ಮೂಲಕ ಜನಸಾಮಾನ್ಯರಿಗೊಂದು ನಿಯಮ ಜನಪ್ರತಿನಿಧಿಗಳಿಗೊಂದು ನಿಯಮವೇ? ಎನ್ನುವ ಪ್ರಶ್ನೆಗಳನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟಾಕಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಹೇಳೋದೇನು?

ಸಚಿವ ಬಿ.ಸಿ.ಪಾಟೀಲ್ ಗೆ ಮನೆಯಲ್ಲಿ ಲಸಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದಾರ ಪ್ರತಿಕ್ರಿಯೆ ನೀಡಿದ್ದು, ಸಚಿವರ ಮನೆಯಲ್ಲಿ ಹೆಚ್ಚಿನ ಜನ ಫಲಾನುಭವಿಗಳು ಸಿಗಬಹುದು ಅಂತಾ ಅಲ್ಲಿಗೆ ಹೋಗಿದ್ವಿ. ಆದ್ರೆ, ಸಚಿವರು ಮತ್ತು ಅವರ ಪತ್ನಿಗೆ ಮಾತ್ರ ಲಸಿಕೆ ನೀಡಿದೆವು. ಅವರ ಮನೆಯಲ್ಲಿ ಹೆಚ್ಚಿನ ಫಲಾನುಭವಿಗಳು ಸಿಗಲಿಲ್ಲ. ನಿಯಮದ ಪ್ರಕಾರ ನಿಗದಿತ ಆಸ್ಪತ್ರೆಗಳಲ್ಲೇ ಲಸಿಕೆ ಹಾಕಬೇಕು. ಮನೆಗೆ ಹೋಗಿ ಲಸಿಕೆ ಹಾಕುವ ನಿಯಮ ಇಲ್ಲ. ಸಚಿವರ ಮನೆಯಲ್ಲಿ ಹೆಚ್ಚಿನ ಫಲಾನುಭವಿಗಳು ಸಿಗಬಹುದು ಅಂತಾ ಅವರ ಮನೆಗೆ ಹೋಗಿದ್ವಿ‌. ನಾನೂ ಸೇರಿ ಅಂಬ್ಯುಲೆನ್ಸ್ ಸಮೇತ ಐದು ಜನ ಸಿಬ್ಬಂದಿ ಸಚಿವರ ಮನೆಗೆ ಹೋಗಿದ್ವಿ ಎಂದು ಹೇಳಿದ್ದಾರೆ.

ನಾವೇನು ಅಪರಾಧ ಮಾಡಿದ್ದಿವಾ? ಸಚಿವ ಬಿ. ಸಿ.ಪಾಟೀಲ..!

ಮನೆಯಲ್ಲಿ ಲಸಿಕೆ ಪಡೆದ ವಿಚಾರವಾಗಿ ಹಿರೇಕೆರೂರು ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ನಾವೇನು ಅಪರಾಧ ಮಾಡಿದ್ದಿವಾ? ಕಳ್ಳತನ ಮಾಡಿದ್ದೀವಾ ? ನಾನು ಸರಕಾರದ ಒಂದು ಭಾಗ‌. ಮನೆಯಲ್ಲಿ ಸಾಕಷ್ಟು ಜನರು ಕಾಯುತ್ತಿದ್ದರು. ಆಸ್ಪತ್ರೆಯಲ್ಲಿ ತೊಂದರೆ ಆಗುತ್ತಿತ್ತು. ಜನರಿಗೆ ತೊಂದರೆ ಕೊಡಬಾರ್ದು ಅಂತಾ ನಾನು ಮನೆಯಲ್ಲೇ ಲಸಿಕೆ ಹಾಕಿಸಿಕೊಂಡೆ. ನಾನು ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದರೆ ಇಷ್ಟು ದೊಡ್ಡ ಸುದ್ದಿ ಆಗ್ತಿರ್ಲಿಲ್ಲ. ಲಸಿಕೆ ಬಗ್ಗೆ ಈಗ ನನ್ನಿಂದ ಜನರಲ್ಲಿ ಜಾಗೃತಿ ಮೂಡಿದಂತಾಗಿದೆ. ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿ ಆಗಿದ್ದೇನೆ. ನಾವ್ಯಾಕೆ ಹಾಕಿಸಿಕೊಳ್ಳಬಾರ್ದು ಅಂತಾ ಜನರಲ್ಲಿ ಭಾವನೆ ಬರ್ತಿದೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡರು.

ಇದನ್ನು ಓದಿ: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್​; ಸಚಿವರ ರಾಸಲೀಲೆ ವಿಡಿಯೋ ವಿರುದ್ಧ ದೂರುಇನ್ನು ಈ ವಿಷಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿರುವುದರ ಬಗ್ಗೆ ಮಾತನಾಡಿದ ಪಾಟೀಲ್ ಅವರು, ಕುಮಾರಸ್ವಾಮಿ ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ ನೀಡ್ತಾರೆ ಅಂದ್ರೆ ಯಾವ ಮಟ್ಟದಲ್ಲಿ ಹೇಳಿಕೆ ನೀಡ್ತಾರೆ ಅಂತ ನೀವು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಸರ್ಕಾರ ಇದ್ದಾಗ ಇವರೇನು ಆಸ್ಪತ್ರೆಯಲ್ಲಿ ಕುತ್ಕೊಂಡು ಟ್ರೀಟ್ಮೆಂಟ್ ತಗೊಂಡು ಬರ್ತಿದ್ರಾ? ಮನೆಗೆ ಡಾಕ್ಟರ್ ಗಳನ್ನ ಕರೆಸಿ ದಿನ ಬಿಪಿ ಚೆಕ್ ಮಾಡಿಸ್ತಿರಲಿಲ್ವಾ . ಕುಮಾರಸ್ವಾಮಿ ಯಾಕೆ ಇಷ್ಟು ಸಣ್ಣಪುಟ್ಟಕ್ಕೆ ಪ್ರತಿಕ್ರಿಯೆ ಮಾಡ್ತಾರೋ ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ತಾಲೂಕಾ ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್..!

ಇನ್ನು ಇದೇ ವಿಚಾರಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದಾರಗೆ ಕಾರಣ ಕೇಳಿ‌ ನೊಟೀಸ್ ನೀಡಲಾಗಿದೆ.  ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ನೋಟಿಸ್ ನೀಡಿದ್ದಾರೆ. ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ  ಡಾ.ಝಡ್.ಆರ್.ಮಕಾಂದಾರ ಸೇರಿದಂತೆ ಒಟ್ಟು ಐದು ಜನ ಸಿಬ್ಬಂದಿಗಳು ಆಂಬ್ಯುಲೆನ್ಸ್ ನೊಂದಿಗೆ ಹೋಗಿ ಇವತ್ತು ಬೆಳಿಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ ನಿವಾಸದಲ್ಲಿ ಸಚಿವ ಬಿ.ಸಿ.ಪಾಟೀಲ ಮತ್ತು ಅವರ ಪತ್ನಿ ವನಜಾ ಪಾಟೀಲಗೆ ಲಸಿಕೆ ನೀಡಿದ್ದರು.

ವರದಿ ಮಂಜುನಾಥ್ ತಳವಾರ 
Published by: HR Ramesh
First published: March 2, 2021, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories