ಬಡವರ ಪರ ಹೋರಾಡುವ ಸಿದ್ದರಾಮಯ್ಯ ದೊಡ್ಡ ಲೀಡರ್: ಅಭಿಮಾನ ತೋರಿಸಿದ ಶ್ರೀರಾಮುಲು

ಹಿಂದುಳಿದವರ ಪರ ಅನೇಕ ವರ್ಷ ಕಾಲ ಹೋರಾಡಿ ಬಂದಿರುವ ಸಿದ್ದರಾಮಯ್ಯ ಅವರನ್ನ ಗೌರವಿಸುತ್ತೇನೆ. ಆದರೆ, ರಾಜಕಾರಣ ವಿಚಾರ ಬಂದರೆ ಸೈದ್ಧಾಂತಿಕವಾಗಿ ಅವರನ್ನ ವಿರೋಧಿಸುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಚಿತ್ರದುರ್ಗ: ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ಹಿಂದುಳಿದವರ ಪರ ಅನೇಕ ವರ್ಷಗಳ ಕಾಲ ಹೋರಾಟ ಮಾಡಿ ಮೇಲೆ ಬಂದ ದೊಡ್ಡ ಲೀಡರ್. ಅವರು ಹಿಂದುಳಿದ ಸಮುದಾಯದವರು, ಅವರು, ಸೀನಿಯರ್ ಲೀಡರ್. ಅಂಥವರಿಗೆ ಗೌರವ ನೀಡುವುದು ನಮ್ಮ ಸಂಪ್ರದಾಯ ಎಂದು ಚಿತ್ರದುರ್ಗ ಜಿಲ್ಲೆಯ ಹಿರೇಹಳ್ಳಿಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾಜಿ ಸಿಎಂ ಸಿದ್ದು ಬಗ್ಗೆ ಗೌರವ ಪೂರ್ವಕ ಮಾತುಗಳನ್ನ ಆಡಿದ್ದಾರೆ. ಜಿಲ್ಲೆಯ ಸ್ವ ಕ್ಷೇತ್ರ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಹಿರೇಹಳ್ಳಿ ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿ, ಸಾರ್ವಜನಿಕರು, ಅಧಿಕಾರಿಗಳ ಜೊತೆ ಸಭೆ ಮಾಡಿದರು. ಬಳಿಕ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ  ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ. ಶ್ರೀರಾಮುಲು, ಈ ಕುರಿತು ಉಮೇಶ್ ಅಣ್ಣ ಅವರನ್ನ ಕೇಳಿದರೆ ಸರಿ ಇರುತ್ತದೆ, ಈ ಕುರಿತು ನಾನು  ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಉಮೇಶ್ ಕತ್ತಿ ನನ್ನ ದೋಸ್ತ್ ಇದ್ದಾನೆ, ಅವರಲ್ಲೇ ಕೇಳಿ ಎಂದು ಹೇಳಿದರು.

ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರಾಮುಲು, “ಕಳೆದ ಚುನಾವಣೆಯಲ್ಲಿ ನಮ್ಮಂತಹ ವಾಲ್ಮೀಕಿ ಸಮುದಾಯಕ್ಕೆ ಎರಡು ಕ್ಷೇತ್ರ ಸ್ಪರ್ಧೆಗೆ ಅವಕಾಶ ಸಿಕ್ಕಿತು. ನೆಹರೂ, ಇಂದಿರಾ ಗಾಂಧಿ ಫ್ಯಾಮಿಲಿ ಎರಡು ಕಡೆ ಸ್ಪರ್ಧೆ ಮಾಡಿದ ವಿಷಯವನ್ನ ಕೇಳಿದ್ದೆ. ಸಿದ್ದರಾಮಯ್ಯ ರಂತಹ ದೊಡ್ಡವರು ಎರಡು ಕಡೆ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಎರಡು ಕಡೆ ಸ್ಪರ್ಧೆಗೆ ಅವಕಾಶ ನೀಡಿದರು. ಅದು ಮೊದಲ ಬಾರಿ ನನ್ನ ಜೀವನದಲ್ಲಿ ಎರಡು ಕ್ಷೇತ್ರಗಳಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿದ್ದು. ಬಾದಾಮಿ ಜನರು ನನ್ನನ್ನು ಗೆಲ್ಲಿಸೋಕೆ ಬಹಳ ಪ್ರಯತ್ನಿಸಿದರು. ಆದರೆ ಸ್ಪಲ್ಪದರಲ್ಲೇ ಸೋಲಾಯ್ತು. ಚುನಾವಣೆ ಸಂದರ್ಭಗಳಲ್ಲಿ ಜನರು ಹಣೆ ಬರಹ ಬರೆಯುತ್ತಾರೆ. ಚುನಾವಣಾ ರಣರಂಗದಲ್ಲಿ ಮತ್ತೆ ಈ ಅವಕಾಶ ನೀಡಲು ಪಕ್ಷ ತೀರ್ಮಾನ ಮಾಡುತ್ತದೆ” ಎಂದು ಮತ್ತೆ ಸಿದ್ದು ವಿರುದ್ದ ಬಾದಾಮಿಯಲ್ಲಿ ಕಣಕ್ಕಿಳಿಯಲು ಪರೋಕ್ಷವಾಗಿ ಒಲವು ತೋರಿದರು.

ಇನ್ನು, ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಖಾರವಾಗಿ ಉತ್ತರ ನೀಡುತ್ತಾ, ಟೀಕೆ ಮಾಡುತ್ತಾ, ಟಾಂಟ್ ನೀಡಿ ಕಾಲೆಳೆದು ಪ್ರತಿಕ್ರಿಯೆ ನೀಡುತ್ತಿದ್ದ ಸಚಿವ ಬಿ. ಶ್ರೀರಾಮುಲು ಅದ್ಯಾಕೋ ಬರು ಬರುತ್ತಾ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಅವರ ಹೇಳಿಕೆಗಳಿಂದಲೇ ಕಂಡು ಬರುತ್ತಿದೆ. ಹಾಗೆಯೇ ನಿನ್ನೆ ಕೂಡಾ ಸಿದ್ದರಾಮಯ್ಯ ಕುರಿತು ಗೌರವದಿಂದ ಅವರು ಮಾತನಾಡಿದರು.

ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಭತ್ತದ ಕ್ರಾಂತಿ

"ಮಾಜಿ ಸಿಎಂ ಸಿದ್ದರಾಮಯ್ಯ ನಾನು ಇಬ್ಬರೂ ಹಿಂದುಳಿದ ಸಮುದಾಯದವರು, ಸಿದ್ದರಾಮಯ್ಯ ಅನೇಕ ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬಂದ ದೊಡ್ಡ ನಾಯಕ. ಸಿದ್ದರಾಮಯ್ಯ ಸೀನಿಯರ್ ಲೀಡರ್, ಬಡವರ ಪರ, ಹಿಂದುಳಿದವರ ಪರ, ಬಡ ಜನರ ಪರ ಹೋರಾಟದಿಂದ ಮೇಲೆ ಬಂದ ಮನುಷ್ಯ. ಅಂಥವರಿಗೆ ನಾನು ಗೌರವ ನೀಡುವುದು ನಮ್ಮ ಸಂಪ್ರದಾಯ, ನಮ್ಮ ಅವರ ರಾಜಕಾರಣ, ಪಕ್ಷದ ಸಿದ್ದಾಂತಗಳು ಬೇರೆ. ರಾಜಕಾರಣ ವಿಚಾರ ಬಂದ ವೇಳೆ ಸಿದ್ದರಾಮಯ್ಯ ಅವರನ್ನ ವಿರೋಧಿಸುವೆ. ನಮ್ಮ ಪಕ್ಷದ ಸಿದ್ದಾಂತ ನಮ್ಮದು, ಅವರ ಪಕ್ಷ ಸಿದ್ದಾಂತ ಅವರದ್ದು. ವ್ಯಕ್ತಿತ್ವ, ಹಿಂದುಳಿದ ಸಮುದಾಯ ಅಂತ ಬಂದ ವೇಳೆ ಸಿದ್ದರಾಮಯ್ಯ ಅವರಿಗೆ ನಾನು ಗೌರವ ನೀಡುತ್ತೇನೆ" ಎಂದು ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ತಮ್ಮ ಅಭಿಮಾನ ತೋರ್ಪಡಿಸಿದರು.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: