ಚಾಮರಾಜನಗರ(ಫೆಬ್ರವರಿ. 13); ರೈತ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ವಿಚಾರ ಧಾರೆಗಳು ಇಂದು ನಿಜವಾಗುತ್ತಿವೆ. ವಿಶ್ವ ವಾಣಿಜ್ಯ ಒಪ್ಪಂದದಿಂದ ಕೃಷಿ ಕ್ಷೇತ್ರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ 30 ವರ್ಷಗಳ ಹಿಂದೆಯೇ ಹೇಳಿದ್ದ ಮಾತುಗಳು ಇಂದು ನಿಜವಾಗುತ್ತಿವೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ. ಚಾಮರಾಜನಗರದಲ್ಲಿ ರೈತ ನೇತಾರ ಪ್ರೊ. ಎಂ.ಡಿ ನಂಜುಂಡಸ್ವಾಮಿ ಅವರ 85 ನೇ ಜನ್ಮದಿನಾಚರಣೆ ಹಾಗು ರೈತ ವಿರೋಧಿ ಕಾಯ್ದೆಗಳ ವಿರುದ್ದ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, "ಪ್ರೊ.ಎಂ.ಡಿ. ನಂಜುಂಡಸ್ವಾಮಿ ಬದುಕಿದ್ದರೆ ಒಂದೋ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು ಇಲ್ಲವೇ ದೇಶದ್ರೋಹಿ ಎನಿಸಿಕೊಂಡು ಕಾನೂನು ಬಾಹಿರ ತಡೆ ಕಾಯ್ದೆಯನ್ವಯ ಜೈಲಿಗೆ ತಳ್ಳಲ್ಪಡುತ್ತಿದ್ದರು" ಎಂದು ಕೇಂದ್ರ ಸರ್ಕಾರದ ನಡೆ ವಿರುದ್ದ ಅಸಹನೆ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಕಂಪನಿಯ ಸರ್ಕಾರವಿತ್ತು ಆದರೆ ಈಗ ಹತ್ತಾರು ಕಂಪನಿಗಳ ಸರ್ಕಾರವಿದೆ,ಪ್ರಜಾಪ್ರಭುತ್ವದ ಲಕ್ಷಣ ಮೋದಿ ಸರ್ಕಾರದಲ್ಲಿ ಕಾಣುತ್ತಿಲ್ಲ, ಇಂದು ಜನರಿಂದ ಆಯ್ಕೆಯಾದವರು ಸರ್ಕಾರ ನಡೆಸುತ್ತಿಲ್ಲ. ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರ್ಕಾರ ನಡೆಸುತ್ತಿದ್ದಾರೆ ಎಂದು ಅವರು ವಾಗ್ಧಾಳಿ ನಡೆಸಿದರು.
ಕನಿಷ್ಟ ಬೆಂಬಲಬೆಲೆ ಹಿಂದೆಯು ಇತ್ತು, ಈಗಲು ಇದೆ, ಮುಂದೆಯು ಇರುತ್ತೆ ಎಂದು ಪ್ರಧಾನಿ ಮೋದಿ ಪ್ರವಾದಿಯಂತೆ ಹೇಳುತ್ತಿದ್ದಾರೆ. ಹಾಗಿದ್ದರೆ ಲಕ್ಷಾಂತರ ರೈತರು ಯಾಕಾಗಿ ಹೋರಾಟ ನಡೆಸುತ್ತಿದ್ದಾರೆ. ರೈತರೇನು ಮೂಢಾತ್ಮರೇ ಎಂದು ದೇವನೂರು ಮಹದೇವ ಪ್ರಶ್ನಿಸಿದರು. ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ನೂರಾರು ರೈತರು ಮೃತ ಪಟ್ಟಿದ್ದರೂ ಸಹ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ. ಅವರ ನಡೆನುಡಿ ಗಮನಿಸಿದರೆ ಇದು ಜನರಿಂದ ಆಯ್ಕೆಯಾದ ಸರ್ಕಾರದಂತೆ ಕಾಣಿಸುತ್ತಿಲ್ಲ ಎಂದು ಅವರು ಹೇಳಿದರು.
2011 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕೇಂದ್ರ ಯುಪಿಎ ಸರ್ಕಾರ ಮೋದಿ ಅವರನ್ನು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು, ಆಗ ಕನಿಷ್ಠ ಬೆಂಬಲ ಬೆಲೆಯನ್ನ ಕಾನೂನಾತ್ಮಕವಾಗಿ ಕಡ್ಡಯಗೊಳಿಸಬೇಕು ಎಂದು ವರದಿ ನೀಡಿದ್ದರು, ಈಗ ರೈತರು ಅದನ್ನೇ ಕೇಳುತ್ತಿದ್ದಾರೆ , ಆದರೆ ಮೋದಿಯವರೇ, ನಿಮ್ಮ ಮಾತನ್ನು ನೀವೇ ಕೇಳಿಸಿಕೊಳ್ಳುತ್ತಿಲ್ಲ ಎಂದು ದೇವನೂರು ಮಹದೇವ ಟೀಕಿಸಿದರು.
ಇದನ್ನೂ ಓದಿ: ಇಂಡಿಗೋ: ಮಾರ್ಚ್ 28 ರಿಂದ ಬೆಂಗಳೂರು, ಅಗರ್ತಲಾ ಸೇರಿ ಹಲವು ನಗರಗಳಿಗೆ 22 ಹೊಸ ವಿಮಾನ ಸೇವೆ
ರಾತ್ರಿ ಕಂಡ ಬಾವಿಗೆ ಹಗಲು ಬೀಳಿಸುವ ಕಾನೂನುಗಳು ಬರುತ್ತಿವೆ, ಬಣ್ಣಬಣ್ಣದ ಮಾತುಗಳು ಜನಸಾಮಾನ್ಯರಿಗೆ, ಬಂಡವಾಳ ಮಾತ್ರ ಕಾರ್ಪೊರೇಟ್ ಕಂಪನಿಗಳಿಗೆ ಹರಿದು ಹೋಗುತ್ತದೆ, ಹೀಗೆ ಲಂಗು ಲಗಾಮು ಇಲ್ಲದೆ ಕಾನೂನುಗಳು ಜಾರಿಯಾದ್ರೆ, ರೈತ ಬೆಳೆದ ಬೆಳೆಗಳ ಕೃತಕ ಅಭಾವ ಸೃಷ್ಠಿಯಾಗುತ್ತೆ, ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರುತ್ತವೆ. ಮಧ್ಯಮ ವರ್ಗದವರು ಬಡತನದತ್ತ ದೂಡಲ್ಪಡುತ್ತಾರೆ. ಬಡವರು ಹಸಿವಿನ ದವಡೆಗೆ ಸಿಲುಕುತ್ತಾರೆ ಎಂದು ದೇವನೂರು ಮಹದೇವ ಎಚ್ಚರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ