ಬೆಳಗಾವಿಯಲ್ಲಿ ಎಂಇಎಸ್​ನಿಂದ ಕರಾಳ ದಿನ; ನಿಯಮಮೀರಿ ರಾಜ್ಯೋತ್ಸವ ಆಚರಿಸಿದ ಕರವೇಗೆ ಲಾಠಿ ರುಚಿ

ಕರ್ನಾಟಕದಿಂದ ಬೆಳಗಾವಿಯನ್ನು ಬೇರ್ಪಡಿಸಿ ಮಹಾರಾಷ್ಟ್ರಕ್ಕೆ ಸೇರಿಸಲು ಹೋರಾಡುತ್ತಿರುವ ಎಂಇಎಸ್ ಪ್ರತೀ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದೆ. ಮಹಾರಾಷ್ಟ್ರ ಸರ್ಕಾರದ ಸಚಿವರು ಇಂದು ಕೈಗೆ ಕಪ್ಪು ಪಟ್ಟಿ ಧರಿಸಿದ್ದರು.

ಗುಂಪು ಗುಂಪಾಗಿದ್ದ ಕರವೇ ಕಾರ್ಯಕರ್ತರಿಗೆ ಪೊಲೀಸರ ಲಾಠಿ ರುಚಿ

ಗುಂಪು ಗುಂಪಾಗಿದ್ದ ಕರವೇ ಕಾರ್ಯಕರ್ತರಿಗೆ ಪೊಲೀಸರ ಲಾಠಿ ರುಚಿ

  • Share this:
ಬೆಳಗಾವಿ(ನ. 1): ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ಅತ್ಯಂತ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಈ ನಡುವೆ ನಾಡದ್ರೋಹಿ ಎಂಇಎಸ್ ತನ್ನ ಹಳೇ ಚಾಳಿಯ ಮುಂದುವರೆಸಿದ್ದು, ಇಂದು ಕರಾಳ ದಿನ ಆಚರಣೆ ಮಾಡಿದೆ. ಕರಾಳ ದಿನ ಆಚರಣೆಗೆ ಎದುರಾಗಿ ಮುತ್ತಿಗೆಗೆ ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ರು. ಇನ್ನು, ಗುಂಪು ಗುಂಪು ಸೇರಿ ಕನ್ನಡ ರಾಜ್ಯೋತ್ಸವದ ಆಚರಣೆ ಮುಂದಾಗಿದ್ದ ಕನ್ನಡಾಭಿಮಾನಿಗಳ ಮೇಲೆಯೂ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಪ್ರತಿ ವರ್ಷ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೊರೋನಾ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸರಳ ರಾಜ್ಯೋತ್ಸವಕ್ಕೆ ಜಿಲ್ಲಾಢಳಿತ ಮುಂದಾಗಿತ್ತು. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ನಂತರ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಚಾಲನೆ ನೀಡಿದರು.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬಹುತೇಕ ಸಚಿವರು ಇಂದು ಕೈಗೆ ಕಪ್ಪು ಪಟ್ಟಿಯನ್ನು ಧರಿಸುವ ಮೂಲಕ ಹೊಸ ತಗಾದೆ ತೆಗೆದರು. ಮಹಾರಾಷ್ಟ್ರ ನಿಲುವು, ಎಂಇಎಸ್ ಬಗ್ಗೆ ಮಾತನಾಡಿದ ರಮೇಶ ಜಾರಕಿಹೊಳಿ, ಎಂಇಎಸ್ ಏನೇ ಕರಾಳ ದಿನ ಆಚರಣೆ ಮಾಡಿದರೂ ಪ್ರಯೋಜನ ಇಲ್ಲ. ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ: ರಾಜ್ಯೋತ್ಸವ ದಿನ ಕನ್ನಡ ಹಾಡು ಹೇಳಿ ಗಮನ ಸೆಳೆದ ಸಚಿವೆ: ಮಮ್ಮಿ, ಡ್ಯಾಡಿ ಬೇಡ, ಅಪ್ಪ, ಅಮ್ಮ ಹೇಳಿ ಎಂದ ಶಶಿಕಲಾ ಜೊಲ್ಲೆ

ಬೆಳಗಾವಿಯ ಮರಾಠ ಮಂಡಳ ಕಾರ್ಯಾಲಯದಲ್ಲಿ ಕೆಲವೇ ಜನ ಸೇರಿಕೊಂಡು ಕರಾಳ ದಿನದ ಆಚರಣೆ ಮಾಡಿದರು. ಇದಕ್ಕಾಗಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ಆಯೋಜನೆ ಮಾಡಿದರು. ಜಿಲ್ಲಾಡಳಿತ ಎಂಇಎಸ್ ಕರಾಳ ದಿನಕ್ಕೆ ಅನುಮತಿ ನೀಡಲ್ಲ ಎಂದು ಮೊದಲು ಹೇಳಿತ್ತು. ಕೊನೆಯ ಘಳಿಗೆಯಲ್ಲಿ ಅನುಮತಿ ನೀಡಿದ್ದರು. ಇದು ಕರವೇ ಕೆಂಗಣ್ಣಿಗೆ ಕಾರಣವಾಗಿತ್ತು. ಕರವೇ ಕಾರ್ಯಕರ್ತನೊಬ್ಬ ಕಪ್ಪು ಬಟ್ಟೆ ಧರಿಸಿಕೊಂಡು ಆಚರಣೆ ಸ್ಥಳಕ್ಕೆ ನುಗ್ಗಲು ಯತ್ನಿಸಿದನು. ಈ ವೇಳೆ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದರು.

ಇನ್ನು, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ನೇತೃತ್ವದಲ್ಲಿ 20ಕ್ಕೂ ಕಾರ್ಯಕರ್ತರು ಎಂಇಎಸ್ ಸಭೆಗೆ ನುಗ್ಗಿಲು ಯತ್ನಿಸಿದರು. ಈ ವೇಳೆ ಎಲ್ಲಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಸರಳ ರಾಜ್ಯೋತ್ಸವ ಆಚರಣೆ ಇದ್ದರೂ ಸಹ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನೂರಾರು ಜನ ಯುವಕರು ಕನ್ನಡ ಬಾವುಟ ಹಿಡಿದು ಆಗಮಿಸಿದ್ದರು. ಗುಂಪು ಗುಂಪಾಗಿ ಯುವಕರು ಓಡಾಡುತ್ತಿದ್ದರು. ಈ ವೇಳೆಯಲ್ಲಿ ಪೊಲೀಸರು ಗುಂಪು ಚುದರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆಯಲ್ಲಿ ಅನೇಕ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ವರದಿ: ಚಂದ್ರಕಾಂತ್ ಸುಗಂಧಿ
Published by:Vijayasarthy SN
First published: