HOME » NEWS » District » MES MEMBERS VAIN ATTEMPT TO REMOVE KANNADA FLAG IN BELAGAVI PALIKE BUILDING CSB SNVS

ಬೆಳಗಾವಿ ಪಾಲಿಕೆ ಮುಂಭಾಗ ಕನ್ನಡ ಧ್ವಜ ತೆಗೆಯಲು ಎಂಇಎಸ್ ಮತ್ತೆ ಕಿತಾಪತಿ

ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಹಾರಿಸಲಾಗಿದ್ದ ಕನ್ನಡ ಬಾವುಟವನ್ನು ತೆರವುಗೊಳಿಸುವ ಪ್ರಯತ್ನವನ್ನ ಎಂಇಎಸ್ ಮತ್ತು ಶಿವಸೇನೆ ಇನ್ನೂ ಬಿಟ್ಟಿಲ್ಲ. ನಿನ್ನೆಯೂ ಅಂಥದ್ದೊಂದು ಪ್ರಯತ್ನವಾಗಿದ್ದು, ಪೊಲೀಸರಿಂದಾಗಿ ವಿಫಲಗೊಂಡಿದೆ.

news18-kannada
Updated:March 9, 2021, 8:22 AM IST
ಬೆಳಗಾವಿ ಪಾಲಿಕೆ ಮುಂಭಾಗ ಕನ್ನಡ ಧ್ವಜ ತೆಗೆಯಲು ಎಂಇಎಸ್ ಮತ್ತೆ ಕಿತಾಪತಿ
ಎಂಇಎಸ್ ಪ್ರತಿಭಟನೆ
  • Share this:
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಟ ನಡೆಸಲಾಗಿದೆ. ಇದು ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳ ಹೊಟ್ಟೆಗಿಚ್ಚಿಗೆ ಕಾರಣವಾಗಿದೆ. ಕನ್ನಡ ಧ್ವಜ ತೆಗೆಯಬೇಕು ಇಲ್ಲವೇ ಭಗವಾ ಧ್ವಜ ಹಾರಿಸಬೇಕು ಎಂದು ಅವು ಪಟ್ಟು ಹಿಡಿದಿವೆ. ಅನೇಕ ಸಲ ಹೋರಾಟ ನಡೆಸಿದ್ದು, ನಿನ್ನೆ ಸೋಮವಾರವೂ ಈ ಬಗ್ಗೆ ಎಂಇಎಸ್ ಬೃಹತ್ ಪ್ರತಿಭಟನೆ ನಡೆಸಿತು. ಒಂದು ಕಡೆ ಪ್ರತಿಭಟನೆ, ಮತ್ತೊಂದು ಕಡೆ ಎಂಇಎಸ್ ಮಾಜಿ ಮೇಯರ್ ಸೇರಿ ಸಂಗಡಿಗರಿಂದ ಪಾಲಿಕೆ ಆವರಣದಲ್ಲಿ ಭಗವಾ ಧ್ವಜ ಹಾರಿಸೋ ಯತ್ನ ನಡೆಯಿತು. ಆದರೆ, ಇದಕ್ಕೆ ಬೆಳಗಾವಿ ಪೊಲೀಸರು ಅವಕಾಶ ನೀಡಲಿಲ್ಲ.

ರಾಜ್ಯದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕನ್ನಡ ಧ್ವಜ ಇರಲಿಲ್ಲ. ಕನ್ನಡ ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಕಳೆದ ವರ್ಷ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡಿ ಎಂಇಎಸ್ ಹಾಗೂ ಶಿವಸೇನೆ ನಿರಂತರ ರಾಜಕೀಯ ಆರಂಭಿಸಿವೆ. ಅನೇಕ ಸಲ ಕನ್ನಡ ಧ್ವಜ ತೆರವುಗೊಳಿಸಬೇಕು ಎಂದು ಎಂಎಇಎಸ್ ಪ್ರತಿಭಟನೆ ನಡೆಸಿದೆ. ಆದರೆ ನಿನ್ನೆ ಇದು ದೊಡ್ಡ ಪ್ರಮಾಣದಲ್ಲಿ ಧರಣಿ ನಡೆಸಲು ಹೋಗಿ ಮತ್ತೆ ಮುಖಭಂಗ ಅನುಭವಿಸಿದೆ.

ಎಂಇಎಸ್ ನೇತೃತ್ವದಲ್ಲಿ ಬೆಳಗಾವಿ ಸಂಭಾಜೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದಕ್ಕೆ ಬೆಳಗಾವಿ ಜಿಲ್ಲಾಡಳಿತ ಯಾವುದೇ ಅನುಮತಿ ನೀಡಿರಲಿಲ್ಲ. ನೂರಾರು ಪ್ರತಿಭಟನಾಕಾರನ್ನು ಪೊಲೀಸರು ಸರ್ದಾರ ಹೈಸ್ಕೂಲ್ ಮೈದಾನ ಬಳಿ ತಡೆದರು. ಈ ವೇಳೆಯಲ್ಲಿ ಪ್ರತಿಭಟನಾಕಾರರು ಅಲ್ಲಿಯೇ ಕುಳಿತು ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಕನ್ನಡದಲ್ಲಿ ಮಾತು ಆರಂಭಿಸಿದ್ದರು. ಈ ವೇಳೆಯಲ್ಲಿ ಕೆಲ ಎಂಇಎಸ್ ಪುಂಡರು ವಿರೋಧ ವ್ಯಕ್ತಪಡಿಸಿದರು. ಆದರೂ ಕನ್ನಡ ನಂತರ ಹಿಂದಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮನವೊಲಿಸುವ ಯತ್ನ ಮಾಡಿದ್ರು. ಆದರೆ ಇದಕ್ಕೆ ಎಂಇಎಸ್ ಕಾರ್ಯಕರ್ತರು ಒಪ್ಪದೇ ರಸ್ತೆಯಲ್ಲಿಯೇ ಧರಣಿ ಮುಂದುವರೆಸಿದ್ದರು.

ಇದನ್ನೂ ಓದಿ: ಯುವ ನಾಯಕನ ಮನವಿಗೆ ಸಿಕ್ತು ಮನ್ನಣೆ; ಬಸವನಾಡಿಗೆ ಮಂಜೂರಾಯ್ತು ಫುಡ್ ಪಾರ್ಕ್

ಒಂದು ಕಡೆ ಸರ್ದಾರ್ ಹೈಸ್ಕೂಲ್ ಮೈದಾನದ ಬಳಿ ಎಂಇಎಸ್ ಧರಣಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಪಾಲಿಕೆ ಮುಂಭಾಗದಲ್ಲಿ ಭಗವಾ ಧ್ವಜ ಹಾರಿಸುವ ಯತ್ನ ನಡೆಯಿತು. ಮಾಜಿ ಮೇಯರ್ ಸರಿತಾ ಪಾಟೀಲ್ ಹಾಗೂ ಉಪಮೇಯರ್ ರೇಣು ಕಿಲ್ಲೇಕರ್ ನೇತೃತ್ವದಲ್ಲಿ ಈ ಪ್ರಯತ್ನ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾಜಿ ಮೇಯರ್ ಹಾಗೂ ಉಪ ಮೇಯರ್ ಅವರನ್ನು ವಶಕ್ಕೆ ಪಡೆದರು. ಈ ವಿಚಾರ ತಿಳಿದ ಹೋರಾಟಗಾರರು ಇಬ್ಬರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಪೊಲೀಸರು ಒಪ್ಪಲಿಲ್ಲ, ಸ್ಥಳದಿಂದ ಕಾರ್ಯಕರ್ತರನ್ನು ಕಳುಹಿಸಿ ನಂತರ ಮಾತಕತೆ ನಡೆಸೋಣ ಎಂದು ಹೇಳಿದರು.

ಈ ವೇಳೆ, ಪೊಲೀಸರು ಹಾಗೂ ಹೋರಾಟಗಾರರ ನಡುವೆ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಇನ್ನು, ಎಂಇಎಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ನಡುವೆ ಎರಡು, ಮೂರು ಬಣವಾಗಿತ್ತು. ಆದರೆ ಕೊನೆಗೂ ಪೊಲೀಸರ ಒತ್ತಡಕ್ಕೆ ಮಣಿದ ಹೋರಾಟಗಾರರು ರಸ್ತೆಯಿಂದ ಕಾಲ್ಕಿತ್ತರು. ಬೆಳಗಾವಿ ಪಾಲಿಕೆ ಚುನಾವಣೆವನ್ನು ಮುಂದಿಟ್ಟುಕೊಂಡು ಹೋರಾಟಗಾರರು ಈ ವಿಚಾರವನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡುತ್ತಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by: Vijayasarthy SN
First published: March 9, 2021, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories