Green Heroes: ಗುಬ್ಬಚ್ಚಿಗಳಿಗಾಗಿ ಮನೆ ಮೀಸಲಿಟ್ಟ ಪಕ್ಷಿ ಪ್ರೇಮಿ; ಪರಿಸರ ಪ್ರೇಮಿಯ ಬಗ್ಗೆ ತಿಳಿಯಲೇಬೇಕು

Environmental Activists: ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ, ಎಂದು  ಹೇಳುವ ಸಲಾವುದ್ದೀನ್ ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ

ಮನೆಯನ್ನೇ ಗುಬ್ಬಚ್ಚಿಗಳ ಗೂಡಾಗಿಸಿದ ಸಲಾವುದ್ದೀನ್​ರ ಮನೆ

ಮನೆಯನ್ನೇ ಗುಬ್ಬಚ್ಚಿಗಳ ಗೂಡಾಗಿಸಿದ ಸಲಾವುದ್ದೀನ್​ರ ಮನೆ

  • Share this:
ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗುತ್ತಲೇ ಇವೆ. ಹೀಗೇ ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಅದಕ್ಕೆ ಕಾರಣ ಆಧುನಿಕತೆಯ ಭರಾಟೆ ಇದ್ದರೂ ಇರಬಹುದು. ನಿಜ ಆಧುನಿಕತೆಯ ಭರಾಟೆಗೆ ಪರಿಸರ ವಿನಾಶವಾಗುತ್ತಿದೆ. ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು, ಪ್ರಕೃತಿ ವಿಕೋಪಗಳು ಘಟಿಸುತ್ತಿವೆ. ಈ ಮಧ್ಯೆ ನಮ್ಮ ನಡುವೆ ಚಿಲಿಪಿಲಿಯೆಂದು ಉಲಿಯುತ್ತಿದ್ದ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಕತ್ತಲು ಸರಿದು ಮೂಡಣದಲ್ಲಿ ಸೂರ್ಯ ಉದಯಿಸುವ ಹೊತ್ತಿಗೆ ಮನೆಯ ಅಂಗಳದಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದ ಪಕ್ಷಿಗಳ ದನಿ ಇಂದು ಕೇಳದಂತಾಗಿದೆ.

ಗುಬ್ಬಚ್ಚಿ, ಹದ್ದು, ಗೂಬೆ, ಕೊಕ್ಕರೆಗಳಂಥ ಪಕ್ಷಿಗಳ ಸಂತತಿ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗಿಡ ಮರಗಳು ಕಣ್ಮರೆಯಾಗಿ ಎಲ್ಲೆಡೆಗಿದ್ದ ಹಚ್ಚ ಹಸಿರು ಮಾಯವಾಗಿ ಬಟಾಬಯಲು ಕಾಣುತ್ತಿದೆ. ಇದರಿಂದ ಪಕ್ಷಿಲೋಕ ಅವಸಾನದ ಅಂಚಿಗೆ ಬಂದು ತಲುಪಿದೆ. ಇದನ್ನ ಮನಗಂಡಿರುವ ರಾಯಚೂರಿನ ಸಲಾವುದ್ದೀನ್ ಎಂಬ ಪಕ್ಷಿ ಪ್ರೇಮಿಯೋರ್ವರು ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣವನ್ನಾಗಿ ಮಾಡಿದ್ದಾರೆ.

ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್  ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ. ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವುಗಳ ವಾಸಕ್ಕಾಗಿ ಮನೆಯ ಪಕ್ಕ ಅವುಗಳಿಗಾಗಿಯೇ ಪುಟ್ಟ ಮನೆಯನ್ನೂ ನಿರ್ಮಿಸಿದ್ದಾರೆ. ಮನುಷ್ಯರಂತೆ ಇಲ್ಲಿ ಪಕ್ಷಿಗಳು ಸ್ನಾನ‌ ಮಾಡುತ್ತವೆ. ಊಟ ಮಾಡುತ್ತವೆ. ಹಾಡಿ ನಲಿದು ಸಂಸಾರ ಕೂಡ ನಡೆಸುತ್ತವೆ. ಪಕ್ಷಿ ಪ್ರೇಮಿ ಸಲೀಂ ಅಲಿಯವರಂತೆ ರಾಯಚೂರು ಜಿಲ್ಲೆಯಲ್ಲಿ ಈ ಸಲಾವುದ್ದೀನ್ ಚಿರಪರಿಚಿತರಾಗಿದ್ದಾರೆ.

ಇಂತಹ ಸಲಾವುದ್ದೀನ್ ರ ಮನೆ ಹಕ್ಕಿಗಳಿಂದ ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣದಂತಾಗಿದೆ. ಇಲ್ಲಿಗೆ ಶಾಲಾ ದಿನಗಳಲ್ಲಿ ನಿತ್ಯ ನೂರಾರು ಶಾಲಾ ಮಕ್ಕಳು ಭೇಟಿ ನೀಡಿ ಪಕ್ಷಿ ಸಂಕುಲ ಕಂಡು ಖುಷಿ ಪಡುತ್ತಾರೆ.

ಗುಬ್ಬಚ್ಚಿಗಳ ಜತೆ ಸಲಾವುದ್ದೀನ್​


ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ, ಎಂದು  ಹೇಳುವ ಸಲಾವುದ್ದೀನ್ ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ. ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ. ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ಬಿಸಿಲೂರಿನ ಪಕ್ಷಿ ಪ್ರೇಮಿ ಸಲಾವುದ್ದೀನ್.

ಅಷ್ಟೇ ಅಲ್ಲ ಈ ಭೂಮಿ‌ ಮೇಲೆ ಮನುಷ್ಯನಿಗೆ‌ ಮಾತ್ರ ವಾಸಿಸೋದಕ್ಕೆ‌ಅಧಿಕಾರ ಇಲ್ಲ. ಪ್ರಾಣಿ ಪಕ್ಷಿಗಳಿಗೂ ನಮ್ಮಷ್ಟೇ ಅಧಿಕಾರ ಇದೆ ಅಂತಾರೆ ಸಲಾವುದ್ದೀನ್. ಪ್ರಪಂಚ‌ ಎಷ್ಟೆಲ್ಲಾ ಬೆಳೆದಿದೆ‌ ಅಂದ್ರೂ ಇವತ್ತು ಬೇಸಿಗೆ ಬಂತು ಅಂದ್ರೆ ಮನುಷ್ಯ ನೀರಿಗಾಗಿ ಹತ್ತಾರು ಕಿಲೋ ಮೀಟರ್ ನಡೆಯೋದನ್ನ ಕಾಣ್ತೇವೆ. ಅಂತದ್ದರಲ್ಲಿ ಈ ಪಕ್ಷಿಗಳಿಗೆ ಹೇಗಾಗಬೇಡ. ಹಾಗಾಗಿ ಪ್ರತಿಯೊಬ್ಬರೂ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವ ಮನಸ್ಸು ಮಾಡಬೇಕು ಅಂತಾರೆ ಪಕ್ಷಿ ಪ್ರೇಮಿ ಸಲಾವುದ್ದೀನ್.

ಇನ್ನು ಇವರ‌ ಕೆಲಸಕ್ಕೆ ಸ್ಥಳೀಯರು, ಸೇರಿದಂತೆ ಅಧಿಕಾರಿ ವರ್ಗ ಜನಪ್ರತಿನಿಧಿಗಳು, ಪರಿಸರ ಪ್ರೇಮಿಗಳು ಮಾರುಹೋಗಿದ್ದಾರೆ.
Published by:Sharath Sharma Kalagaru
First published: