16 ತಿಂಗಳ ಶಿಷ್ಯ ವೇತನಕ್ಕೆ ಆಗ್ರಹಿಸಿ 8 ದಿನಗಳಿಂದ ದಾವಣಗೆರೆ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ

ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು  16 ತಿಂಗಳ ಸ್ಟೈಫಂಡ್ ಬಿಡುಗಡೆಗೆ ಆಗ್ರಹಿಸಿ ಕಳೆದ 8  ದಿನಗಳಿಂದ ಜಯದೇವ ಸರ್ಕಲ್‍ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಭೇಟಿ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿ ಶೀಘ್ರವೇ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ.

ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ.

  • Share this:
ದಾವಣಗೆರೆ; ಕಳೆದ 16 ತಿಂಗಳಿಂದ ಬಾಕಿ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಕಳೆದ 8 ದಿನಗಳಿಂದ ನಗರದ ಜಯದೇವ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಶಿಷ್ಯ ವೇತನ ನೀಡುವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ದಾವಣಗೆರೆ ಸಂಸದ ಜಿಎಂ ಸಿದ್ದೆಶ್ವರ, ಎಂಎಲ್​ಸಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ ಪಿ ಹನುಮಂತರಾಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನೆ ಕೈ ಬಿಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಆದರೆ, ವಿದ್ಯಾರ್ಥಿಗಳು ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.

ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ 230 ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕಳೆದ 16 ತಿಂಗಳಿಂದ ಶಿಷ್ಯವೇತನ ನಿಲ್ಲಿಸಿದೆ. ಈ ಬಗ್ಗೆ 16 ತಿಂಗಳಿಂದ ಸಿಎಂ, ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕಾಲೇಜು ಆಡಳಿತ ಮಂಡಳಿ ಶಿಷ್ಯ ವೇತನ ನೀಡಬೇಕು ಎಂದು ಹೇಳುತ್ತಿದೆ. ಇತ್ತ ಕಾಲೇಜು ಆಡಳಿತ ಮಂಡಳಿ, ಸರ್ಕಾರವೇ ಶಿಷ್ಯ ವೇತನ ನೀಡಬೇಕು ಎಂದು ಹೇಳುತ್ತಿದೆ. ಈ ಇಬ್ಬರ ಜಗಳದಲ್ಲಿ ವಿದ್ಯಾರ್ಥಿಗಳು ಶಿಷ್ಯ ವೇತನ ಸಿಗದಂತಾಗಿದೆ. ಇದರಿಂದ ಕಾಲೇಜಿನ ಶುಲ್ಕ ಹಾಗೂ ಶೈಕ್ಷಣಿಕ ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಪಿಜಿ ವಿದ್ಯಾರ್ಥಿ ಡಾ. ಹರೀಶ್  ಬೇಸರ ವ್ಯಕ್ತಪಡಿಸಿದರು. ಪ್ರವೇಶ ಪಡೆಯುವ ಮುನ್ನವೇ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದ್ದರೆ ನಾವು ಈ ಕಾಲೇಜಿನಲ್ಲಿ ಪ್ರವೇಶವನ್ನೇ ಪಡೆಯುತ್ತಿರಲಿಲ್ಲ. ನಮ್ಮ ಸೇವೆಯನ್ನು ಬಳಸಿಕೊಳ್ಳುತ್ತಿರುವ ಸರ್ಕಾರ ಶಿಷ್ಯ ವೇತನ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

16 ತಿಂಗಳಿಂದ ಯಾವುದೇ ವೇತನ ಇಲ್ಲದೆ ಕೆಲಸ ಮಾಡಿದ್ದೇವೆ. ಇದರ ಮಧ್ಯೆ ಕೊರೋನಾ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಗಳಲ್ಲಿ ಕೊರೋನಾ ವಾರಿಯರ್‌ಗಳಾಗಿ  ಕೆಲಸ ಮಾಡುತ್ತಿದ್ದೇವೆ. ಕೆಲವು ಜೂನಿಯರ್‌ ಡಾಕ್ಟರ್‌ಗಳಿಗೂ ಕೊರೋನಾ ಸೋಂಕು ತಗುಲಿದೆ. ಇಂತಹ ಸಂಕಷ್ಟ ಎದುರಿಸಿದರೂ ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು
ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ನಮ್ಮನ್ನು ಜೀತದಾಳುಗಳ ರೀತಿ ನೋಡುತ್ತಿದೆ. ತುರ್ತು ಸೇವೆಗೆ ತೊಂದರೆಯಾಗದಂತೆ ನಾವು ಈಗ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ಅನಾಹುತಗಳಿಗೆ ಸರ್ಕಾರವೇ ಕಾರಣವಾಗುತ್ತದೆ ಎಂದರು.

ಶಿಷ್ಯ ವೇತನಕ್ಕೆ ಆಗ್ರಹಿಸಿ ತಮ್ಮ ಹೋರಾಟ ಮುಂದುವರಿಸಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪತ್ರ ಚಳುವಳಿ ಆರಂಭಿಸಿದ್ದಾರೆ. ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು  16 ತಿಂಗಳ ಸ್ಟೈಫಂಡ್ ಬಿಡುಗಡೆಗೆ ಆಗ್ರಹಿಸಿ ಕಳೆದ 8  ದಿನಗಳಿಂದ ಜಯದೇವ ಸರ್ಕಲ್‍ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಭೇಟಿ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿ ಶೀಘ್ರವೇ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಇದನ್ನು ಓದಿ: ಕೊರೋನಾ ಭೀತಿ; ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮದುವೆ ಸಮಾರಂಭಗಳಿಗೆ ಬ್ರೇಕ್

ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಾಗೂ ವೈದ್ಯಕೀಯ ಸಚಿವರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಜೆಜೆಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಕಾಲೇಜು ಆಡಳಿತ ಮಂಡಳಿಯೇ ಭರಿಸಲಿದೆ. ಪ್ರತಿಭಟನಾನಿರತ ವೈದ್ಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ನಿನ್ನೆ ಈ ಕುರಿತು ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಸ್ಥಳೀಯ ಶಾಸಕರು, ಕಾಲೇಜಿನ ಅಧ್ಯಕ್ಷರು ಆದ ಶಾಮನೂರು ಶಿವಶಂಕರಪ್ಪ ಅವರ ಸಮ್ಮುಖದಲ್ಲಿ ನಾವು ಉನ್ನತ ಮಟ್ಟದ ಸಭೆ ನಡೆಸಿದ್ದೇವೆ. ಈ  ಸಭೆಯಲ್ಲಿ ಇಡೀ ರಾಜ್ಯದಲ್ಲಿ ಆಯಾ ಕಾಲೇಜಿನ ಆಡಳಿತ ಮಂಡಳಿಯೇ ಶಿಷ್ಯವೇತನ ನೀಡುತ್ತಿವೆ. ಆದರೆ, ಇಲ್ಲಿ ಸರ್ಕಾರವೇ ಭರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಶೀಘ್ರವೇ ಆಡಳಿತ ಮಂಡಳಿ ವೇತನ ಭರಿಸುವುದಾಗಿ  ಒಪ್ಪಿಕೊಂಡಿದ್ದಾರೆ. ಸೋಮವಾರ ಶಿಷ್ಯವೇತನ  ಬಿಡುಗಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

 
Published by:HR Ramesh
First published: