ಚಿಕ್ಕಮಗಳೂರು : ಹರ್ನಿಯಾ ಆಪರೇಷನ್ ವೇಳೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ತನ್ನ ಖಾಸಗಿ ಅಂಗಕ್ಕೆ ಗಾಯ ಮಾಡಿದ್ದಾರೆಂದು ರೋಗಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು (Medical Negligence) ದಾಖಲಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ. ನನ್ನ ಖಾಸಗಿ ಅಂಗಕ್ಕೆ (Private Part) ಗಾಯ ಮಾಡಿದ್ದಾರೆ. ಮುಂದೆ ನನ್ನ ಆರೋಗ್ಯದಲ್ಲಿ ಸಮಸ್ಯೆಯಾದರೆ ಸಿಬ್ಬಂದಿಗಳೇ ಕಾರಣ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂಡಿಗೆರೆ ಪೊಲೀಸ್ ಠಾಣೆಗೆ ಯೋಗೇಂದ್ರ ಎಂಬುವವರು ದೂರು ಸಲ್ಲಿಸಿದ್ದಾರೆ. ಆದ್ರೆ ದೂರು ನೀಡಿದ್ರೂ ಆಸ್ಪತ್ರೆ ಮುಖ್ಯಾಧಿಕಾರಿ (Health Officer) ಶಾಂಭವಿ ಉಡಾಫೆ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ. ಹೀಗಾಗಿ ಆಸ್ಪತ್ರೆ ಮುಖ್ಯಾಧಿಕಾರಿ ವಿರುದ್ಧ ಯೋಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೋಗೇಂದ್ರ ಎಂಬ ವ್ಯಕ್ತಿ ಹರ್ನಿಯಾ ಅಪರೇಷನ್ (Hernia Surgery) ಮಾಡಿಸಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ರು.
ಎಡವಟ್ಟಿನ ನಂತರ ಬೇರೆ ಊರಿಗೆ ಹೋಗಿ ಎನ್ನುತ್ತಿದ್ದಾರೆ
ಅದರಂತೆಯೇ ದಿನಾಂಕ 12/10/2021ರಂದು ಅಪರೇಷನ್ ಕೂಡ ನಡೆಸಲಾಗಿದೆ. ಆದರೆ ಈ ಸಂದರ್ಭದಲ್ಲಿ ನನ್ನ ಖಾಸಗಿ ಅಂಗಕ್ಕೆ ಪೈಪನ್ನ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದು, ನನ್ನ ಖಾಸಗಿ ಅಂಗದಲ್ಲಿ ಊತ ಕಾಣಿಸಿಕೊಂಡಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ. ಈ ರೀತಿ ಯಾಕೆ ಮಾಡಿದ್ದೀರಿ ಅಂತಾ ಕೇಳಿದ್ರೆ ಬೆಂಗಳೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯಾಧಿಕಾರಿ ಶಾಂಭವಿ ಅವರಿಗೆ ಹೇಳಿದ್ರೂ ಉಡಾಫೆ ವರ್ತನೆ ತೋರಿಸಿದ್ದಾರೆ ಅಂತಾ ಮಾನಸಿಕವಾಗಿ ನೊಂದಿರುವ ಯೋಗೇಂದ್ರ ತಿಳಿಸಿದ್ದಾರೆ.
ಮುಂದೆ ಏನೇ ಆದ್ರೂ ಇವರೇ ಕಾರಣ
ತನ್ನ ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದಿದ್ದರಿಂದ ನೊಂದಿರುವ ವ್ಯಕ್ತಿ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ. ಮುಂದೆ ನನ್ನ ಆರೋಗ್ಯದಲ್ಲಿ ಏನಾದ್ರೂ ಏರುಪೇರು ಕಾಣಿಸಿಕೊಂಡ್ರೆ ಆಸ್ಪತ್ರೆ ಸಿಬ್ಬಂದಿಗಳೇ ಕಾರಣ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಹರ್ನಿಯಾ ಅಪರೇಷನ್ ಮಾಡಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡಿರುವ ವ್ಯಕ್ತಿ ಮುಂದೆ ಏನಾಗುತ್ತೋ ಅನ್ನೋ ಆತಂಕದಲ್ಲಿಯೇ ಪ್ರತಿ ಕ್ಷಣಗಳನ್ನ ಕಳೆಯುವಂತಾಗಿದೆ.
ಇದನ್ನೂ ಓದಿ: Monkey Menace: ಆಸ್ಪತ್ರೆ ವಾರ್ಡ್ ಒಳಗೆ ಕೋತಿ ಕಾಟ, ಮಕ್ಕಳ ಆಸ್ಪತ್ರೆಯಲ್ಲಿ ಮಂಚದಿಂದ ಮಂಚಕ್ಕೆ ಜಿಗಿಯುತ್ತಿವೆ ಮಂಗಗಳು!
ಆರೋಪಗಳ ಮೂಲ ಸರ್ಕಾರಿ ಆಸ್ಪತ್ರೆ
ಜನಸಾಮಾನ್ಯರು ಆಸ್ಪತ್ರೆಗೆ ಹೋದಾಗ ಸರಿಯಾಗಿ ಚಿಕಿತ್ಸೆ ನೀಡಲ್ಲ ಅನ್ನೋ ಆರೋಪ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ವಿರುದ್ದ ಸಾಮಾನ್ಯವಾಗಿ ಆಗಾಗ ಕೇಳಿ ಬರುತ್ತಲೇ ಇರುತ್ತೆ. ಇನ್ನು ರೋಗಿಗಳ ಕಷ್ಟಕ್ಕೆ ಸರಿಯಾಗಿ ಸ್ಪಂದಿಸಲ್ಲ ಅನ್ನೋ ಆರೋಪ ಆಸ್ಪತ್ರೆ ಮುಖ್ಯಾಧಿಕಾರಿ ಶಾಂಭವಿ ವಿರುದ್ಧ ಈ ಹಿಂದೆ ಕೂಡ ಅನೇಕ ಬಾರಿ ಕೇಳಿ ಬಂದಿತ್ತು. ಇದೀಗ ಹರ್ನಿಯಾ ಅಪರೇಷನ್ನಿಂದ ನೊಂದಿರುವ ವ್ಯಕ್ತಿಯೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿರೋದು ಆಸ್ಪತ್ರೆಯ ಕರ್ಮಕಾಂಡವನ್ನ ಬಟಾಬಯಲು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ