ಲಾಕ್‍ಡೌನ್​ನಲ್ಲಿ ಕಾಲ ಕಳೆಯದೆ ಕೃಷಿ ಮಾಡಿದ ಎಂಜಿನಿಯರ್; ದುಬೈನಿಂದ ಬಂದು ದುಬಾರಿ ಬೆಲೆಯ ಕಪ್ಪು ಅಕ್ಕಿಯ ಭತ್ತ ಬೆಳೆದ ಸಾಯೂಜ್

ತಾವು ಬೆಳೆದ ಭತ್ತದ ಅಕ್ಕಿಯನ್ನು ಆ್ಯಪ್ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ. ಕಪ್ಪು ತಳಿಯ ಭತ್ತದಲ್ಲಿ ಔಷಧೀಯ ಗುಣವಿದ್ದು, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗೂ ಅತ್ಯುಪಯುಕ್ತ ಎನ್ನಲಾಗಿದೆ. ಒಟ್ಟಿನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಲವರು ಸುಮ್ಮನೆ ಕಾಲ ಕಳೆದಿದ್ದರೆ, ಸಾಯೂಜ್ ವಿನೂತನ ರೀತಿಯ ಭತ್ತ ಬೆಳೆದು ಇತರರಿಗೂ ಮಾದರಿಯಾಗಿದ್ದಾನೆ.

ಕಪ್ಪು ತಳಿಯ ಭತ್ತ ಬೆಳೆದ ಸಾಯೂಜ್

ಕಪ್ಪು ತಳಿಯ ಭತ್ತ ಬೆಳೆದ ಸಾಯೂಜ್

  • Share this:
ಕೊಡಗು: ಆತ ಚಿಕ್ಕಪ್ಪನ ಮದುವೆಗೆಂದು ದುಬೈನಿಂದ ಕೊಡಗಿನ ನೆಲ್ಯಹುದಿಕೇರಿಗೆ ಬಂದಿದ್ದ. ವಾಪಸ್ ಹೊರಡಬೇಕೆನ್ನುವಷ್ಟರಲ್ಲಿ ಕೊರೋನಾದಿಂದಾಗಿ ದೇಶವೇ ಲಾಕ್ ಡೌನ್ ಆಗಿತ್ತು. ಈ ಸಮಯದಲ್ಲಿ ಸುಮ್ಮನೆ ಕಾಲ ವ್ಯರ್ಥ ಮಾಡದೆ ದುಬಾರಿ ಬೆಲೆಯ ಕಪ್ಪು ಅಕ್ಕಿ ತಳಿಯ ಭತ್ತದ ಕೃಷಿ ಮಾಡಿ ಎಲ್ಲರು ಅಚ್ಚರಿಪಡುವಂತೆ ಮಾಡಿದ್ದಾನೆ.

ಹೌದು, ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದವರಾದ ಸಾಯೂಜ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ದುಬೈನಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಚಿಕ್ಕಪ್ಪನ ಮದುವೆಗೆಂದು ಬಂದವರು ಕೊಡಗಿನಲ್ಲಿ ಲಾಕ್ ಆಗಿಬಿಟ್ಟಿದ್ದರು. ಲಾಕ್ ಡೌನ್ ಎಂದು ಸುಮ್ಮನೆ ಕುಳಿತುಕೊಳ್ಳುವ ಬದಲು ಕೃಷಿ ಮಾಡೋಣ ಎಂದು ನಿರ್ಧರಿಸಿದರು. ಬಳಿಕ ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ಶ್ರೇಯಸ್, ಸ್ಥಳೀಯ ಡಾಮಿನಸ್ ಯುವಕ ಸಂಘದ ಅಧ್ಯಕ್ಷ ಹಾಗೂ ಯುವ ಕೃಷಿಕ ಶೌಕತ್, ಕೆ.ಟಿ ಶಾಜಿ ಅವರೊಂದಿಗೆ ಸೇರಿಕೊಂಡು ಕೃಷಿ ಆರಂಭಿಸಿದ್ದರು. ಸಾಂಪ್ರದಾಯಿಕ ಕೃಷಿ ಮಾಡುವ ಬದಲು ಛತ್ತೀಸ್​ಗಢದಿಂದ ಕಪ್ಪು ಅಕ್ಕಿ ತಳಿಯ ಭತ್ತದ ಬೀಜಗಳನ್ನು ತಂದು ಬಿತ್ತನೆ ಮಾಡಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿದ್ದಂತೆ; ವಿಜ್ಞಾನಿ ಡಾ.ಅಶೋಕ್

ನೆಲ್ಯಹುದಿಕೇರಿ ಸಮೀಪದ ನಲ್ವತ್ತೆಕ್ರೆ ಗ್ರಾಮದಲ್ಲಿ ತಮ್ಮ 2 ಎಕರೆ ಗದ್ದೆಯಲ್ಲಿ ಭತ್ತದ ಫಸಲು ಬೆಳೆದು ನಿಂತಿದ್ದು ಕಟಾವಿಗೆ ಸಿದ್ಧವಾಗಿದೆ. ಪಾಳು ಬಿಟ್ಟಿದ್ದ 2 ಎಕರೆ ಗದ್ದೆಯಲ್ಲಿ ದುಬಾರಿ ಬೆಲೆಯ ಕಪ್ಪುಅಕ್ಕಿಯ ಭತ್ತದ ತಳಿ ಜೀವ ತಳೆದು ನಿಂತಿದೆ. ಪಾಳು ಭೂಮಿ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಉಳಿದ ಗದ್ದೆಯಲ್ಲಿ ದೊಡ್ಡಿ ಅಕ್ಕಿ, ಕೊಡಗು ಜೀರಿಗೆ ಅಕ್ಕಿ, ತನು ತಳಿ ಭತ್ತ ಬೆಳೆದಿದ್ದಾರೆ. ಕಪ್ಪು ಅಕ್ಕಿಯ ಜೊತೆ ಮಣಿಪುರ ಹಾಗೂ ಬರ್ಮಾ ತಳಿ ಕೂಡ ನಾಟಿ ಮಾಡಲಾಗಿದೆ. ಬರ್ಮಾ ಮಾರುಕಟ್ಟೆಯಲ್ಲಿ ಕಪ್ಪು ಅಕ್ಕಿಗೆ ಬಹುಬೇಡಿಕೆ ಇದ್ದು, ಪ್ರತಿ ಕೆ.ಜಿ ಅಕ್ಕಿಗೆ 300 ಬೆಲೆಗೆ ಮಾರಾಟವಾಗುತ್ತದೆ ಎನ್ನಲಾಗುತ್ತಿದೆ.

ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ಶ್ರೇಯಸ್ ಡ್ರಾಪ್ಔಟ್ ಎಂಬ ಆಡ್ರಾಯ್ಡ್ ಆ್ಯಪ್ ಸಿದ್ದಗೊಳಿಸಿದ್ದು, ತಾವು ಬೆಳೆದ ಭತ್ತದ ಅಕ್ಕಿಯನ್ನು ಆ್ಯಪ್ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ. ಕಪ್ಪು ತಳಿಯ ಭತ್ತದಲ್ಲಿ ಔಷಧೀಯ ಗುಣವಿದ್ದು, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗೂ ಅತ್ಯುಪಯುಕ್ತ ಎನ್ನಲಾಗಿದೆ. ಒಟ್ಟಿನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಲವರು ಸುಮ್ಮನೆ ಕಾಲ ಕಳೆದಿದ್ದರೆ, ಸಾಯೂಜ್ ವಿನೂತನ ರೀತಿಯ ಭತ್ತ ಬೆಳೆದು ಇತರರಿಗೂ ಮಾದರಿಯಾಗಿದ್ದಾನೆ.
Published by:HR Ramesh
First published: