ಲಿಂಗಾಯಿತರಿಗೆ ಅಭಿವೃದ್ಧಿ ನಿಗಮದ ಬದಲು ಶೇ.16 ಮೀಸಲಾತಿ ನೀಡಿ; ಸಿಎಂ ಬಿಎಸ್​ವೈಗೆ ಮಾಜಿ ಸಚಿವ ಎಂ.ಬಿ. ಪಾಟೀಲ ಪತ್ರ

ಎರಡು ದಿನಗಳ ಹಿಂದಷ್ಟೇ ಸಿಎಂ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದರು. ಅಲ್ಲದೇ, ಅದಕ್ಕಾಗಿ 50 ಕೋಟಿ ಪ್ರತ್ಯೇಕ ಹಣವನ್ನು ಮೀಸಲಿಟ್ಟಿದ್ದರು. ಮರಾಠ ಸಮಯದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಬೆನ್ನೆಲ್ಲೆ ವೀರಶೈವ ಲಿಂಗಾಯತ ಸಮುದಾಯದವರೂ ತಮ್ಮ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿದ್ದರು.

ಎಂಬಿ ಪಾಟೀಲ್

ಎಂಬಿ ಪಾಟೀಲ್

  • Share this:
ವಿಜಯಪುರ (ನ. 16); ಲಿಂಗಾಯಿತರಿಗೆ ಶೇ. 16ರಷ್ಟು ಮೀಸಲಾತಿ ನೀಡಿ ಎಂದು ಆಗ್ರಹಿಸಿ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಎಂ. ಬಿ. ಪಾಟೀಲ ಸಿಎಂ ಗೆ ಬರೆದ ಪತ್ರದ ಪ್ರತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಈ ಪತ್ರದಲ್ಲಿ ಎಂ. ಬಿ. ಪಾಟೀಲ ಲಿಂಗಾಯಿತರಿಗೆ ಏಕೆ ಮೀಸಲಾತಿ ನೀಡಬೇಕು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪತ್ರದ ಸಾರಾಂಶ ಹೀಗಿದೆ.

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಶೇ.16-18 ರಷ್ಟು ಲಿಂಗಾಯತರು ಇದ್ದು, ಇವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿದೆ. ರಾಜ್ಯದ 6.5ಕೋಟಿ ಜನಸಂಖ್ಯೆಯ ಪೈಕಿ ಲಿಂಗಾಯತರ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಸದ್ಯ ಸಿಗುತ್ತಿರುವ ಮೀಸಲಾತಿ ಸೌಲಭ್ಯಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡ ಲಿಂಗಾಯತರಿಗೆ ಶೇ.16-18ರಷ್ಟು ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ, ಸ್ಕಾಲರ್​ಶಿಪ್ ಸೇರಿದಂತೆ ಎಲ್ಲ ಸೌಲಭ್ಯಗಳಲ್ಲಿ ನೀಡುವ ಮೂಲಕ ಲಿಂಗಾಯತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೆಲವರ ಬೇಡಿಕೆಯಂತೆ ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, 100-200ಕೋಟಿ ಅನುದಾನ ಒದಗಿಸಿದರೆ, ಹೆಚ್ಚಿನ ಪ್ರಯೋಜನವಾಗುವದಿಲ್ಲ. ಈ ಅಭಿವೃದ್ಧಿ ಸ್ಥಾಪನೆ ಎಂಬುದು ಕೇವಲ ಕಣ್ಣೊರೆಸುವ ತಂತ್ರವಾಗುತ್ತದೆ. ನಿಜವಾಗಿ ಲಿಂಗಾಯತರ ಆರ್ಥಿಕ, ಸಾಮಾಜಿಕ ಪ್ರಗತಿ ಸಾಧಿಸಬೇಕಾದರೆ, ರಾಜ್ಯ ಸರ್ಕಾರ ಶೇ.16-18ರಷ್ಟು ಮೀಸಲಾತಿಯನ್ನು ಕಲ್ಪಿಸಲು ಈ ಮೂಲಕ ವಿನಂತಿಸುತ್ತೇನೆ ಎಂದು ಪಾಟೀಲ ಅವರು ಕೇಳಿಕೊಂಡಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ಎಂಬಿ ಪಾಟೀಲ್ ಬರೆದ ಪತ್ರ.


ಇದನ್ನು ಓದಿ: ದೀಪಾವಳಿಯಲ್ಲಿ ಬಲೀಂದ್ರ ಚಕ್ರವರ್ತಿಯ ಆರಾಧನೆ; ಇದು ಕರಾವಳಿಯ ವಿಶೇಷ!

ಇತ್ತೀಚೆಗಷ್ಟೆ ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಹಾಗೂ ಲಿಂಗಾಯಿತ ಸ್ವತಂತ್ರ ಧರ್ಮ ಹೋರಾಟಗಾರ ಬಸವರಾಜ ಹೊರಟ್ಟಿ ಕೂಡ ಈ ನಿಟ್ಟಿನಲ್ಲಿ ಸಿಎಂ ಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಗ ಮತ್ತೊರ್ವ ಲಿಂಗಾಯತ ಪ್ರಭಾವಶಾಲಿ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಈಗ ಮತ್ತೊಂದು ರೂಪ ಪಡೆಯುವ ನಿರೀಕ್ಷೆಯಿದೆ.

ಎರಡು ದಿನಗಳ ಹಿಂದಷ್ಟೇ ಸಿಎಂ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದರು. ಅಲ್ಲದೇ, ಅದಕ್ಕಾಗಿ 50 ಕೋಟಿ ಪ್ರತ್ಯೇಕ ಹಣವನ್ನು ಮೀಸಲಿಟ್ಟಿದ್ದರು. ಮರಾಠ ಸಮಯದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಬೆನ್ನೆಲ್ಲೆ ವೀರಶೈವ ಲಿಂಗಾಯತ ಸಮುದಾಯದವರೂ ತಮ್ಮ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಅಲ್ಲದೇ ಈ ನಿಟ್ಟಿನಲ್ಲಿ ಕಾವೇರಿ ನಿವಾಸದಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಚಿವರಾದ ಡಿಸಿಎಂ ಲಕ್ಷ್ಮಣ ಸವದಿ, ಸೋಮಣ್ಣ ನೇತೃತ್ವದಲ್ಲಿ ಒತ್ತಡ ತಂದಿದ್ದರು. ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಬದಲು ಲಿಂಗಾಯತರಿಗೆ ಶೇ. 16ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದು ಗಮನಾರ್ಹವಾಗಿದೆ.
Published by:HR Ramesh
First published: