ಗುಡಿಗುಂಡಾರಗಳಿಗಿಂತಲೂ ಶಾಲೆ, ಶೌಚಾಲಯಗಳಿಗೆ ಮಹತ್ವ ನೀಡಬೇಕು: ಎಂ.ಬಿ. ಪಾಟೀಲ

ಎಂ ಬಿ ಪಾಟೀಲ

ಎಂ ಬಿ ಪಾಟೀಲ

ಶಾಲೆಗಳು ಜೀವಂತ ದೇವಾಲಯ. ಶೌಚಾಲಯ ಬಹಳ ಮುಖ್ಯ. ಮನೆಯ ಹೆಣ್ಣು ಮಕ್ಕಳ ಮಾನಕ್ಕಿಂತ ಬೇರೇನೂ ಹೆಚ್ಚಲ್ಲ. ಗುಡಿಗುಂಡಾರಗಳಿಗಿಂತ ನಾವು ಶಾಲೆಗಳು ಹಾಗೂ ಶೌಚಾಲಯಗಳಿಗೆ ಮಹತ್ವ ನೀಡಬೇಕಿದೆ ಎಂದು ಮಾಜಿ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

  • Share this:

ವಿಜಯಪುರ: ಗುಡಿ ಗುಂಡಾರಗಳಿಗಿಂತಲೂ ಹೆಚ್ಚಿನ ಮಹತ್ವವನ್ನು ಶಾಲೆಗಳಿಗೆ ನೀಡಬೇಕಿದೆ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಹಾಲಿ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಗಳೆಂದರೆ ಜೀವಂತ ದೇವಾಲಯಗಳು. ಮಕ್ಕಳೇ ದೇವರು ಎಂದು ನಾವೆಲ್ಲ ಭಾಷಣಗಳಲ್ಲಿ ಹೇಳುತ್ತೇವೆಯೇ ಹೊರತು ಗುಡಿ ಗುಂಡಾರಗಳಿಗೆ ನೀಡುವಷ್ಟು ಅನುದಾನವನ್ನು ಶಾಲೆಗಳಿಗೆ ನೀಡುವುದಿಲ್ಲ.  ಆದರೆ, ಇಂದು ಈ ಧೋರಣೆ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.


ಶೌಚಾಲಯಗಳ ವಿಚಾರದಲ್ಲಿಯೂ ಇದೇ ಆಗುತ್ತಿದೆ. ಸರಕಾರ ಶೌಚಾಲಯಗಳನ್ನು ನಿರ್ಮಿಸಿ ಎಂದು ಹೇಳುತ್ತದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಶೌಚಾಲಯಗಳಿಗೆ ಕೆಬಿಜೆಎನ್‌ಎಲ್ ನಿಂದ ಸುಮಾರು ರೂ. 100 ಕೋಟಿ ಅನುದಾನ ನೀಡಿದ್ದೆ. ಆದರೆ, ಒಂದೆರಡು ತಿಂಗಳು ಉಪಯೋಗಿಸಿದ ನಂತರ ಗ್ರಾಮ ಪಂಚಾಯಿತಿಗಳು ಸೇರಿದಂತೆ ಯಾರೂ ಅವುಗಳ ನಿರ್ವಹಣೆ ಮಾಡುವುದಿಲ್ಲ. ಎಲ್ಲಿಯವರೆಗೆ ನಾವು ಮನೆಯ ಮುಂದೆ ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಶೌಚಾಲಯ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳ ಮಾನ, ಮರ್ಯಾದೆಗಿಂತ ಹೆಚ್ಚಿನದು ಏನೂ ಇಲ್ಲ. ಶೌಚಾಲಯ ಕಟ್ಟಿಕೊಳ್ಳಲು ಯಾಕೆ ಹಿಂಜರಿಯುತ್ತೀರಿ? ಸರಕಾರ ಅನುದಾನ ಕೊಡಲಿ ಬಿಡಲಿ, ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಈ ವಿಚಾರದಲ್ಲಿಯೂ ನಾವೆಲ್ಲ ಹಿಂದೆ ಇದ್ದೇವೆ ಎಂದು ಅವರು ತಿಳಿಸಿದರು.


ಹಳಕಟ್ಟಿ, ಬಂಥನಾಳ ಶಿವಯೋಗಿಗಳ, ತಂದೆ ಬಿ. ಎಂ. ಪಾಟೀಲ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅವರ ಪುಣ್ಯ ನಾನು ಗೃಹ 5 ವರ್ಷ ಜಲಸಂನಪ್ಮೂಲ ಸಚಿವನಾಗಿ, ಎರಡು ವರ್ಷ ಗೃಹ ಸಚಿವನಾಗಿ ಆರೇಳು ವರ್ಷ ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಾಗಿವೆ.  ನನ್ನಗಿನ್ನೂ ಬಹಳ ಆಸೆಯಿಲ್ಲ.  ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರನ್ನು ತೆಗೆದುಕೊಂಡು ಹೋಗಿ ಇಂಡಿ ತಾಲೂಕಿನ ಎಲ್ಲ 19 ಕೆರೆಗಳಿಗೆ ನೀರು ತುಂಬಿಸುವ ಕನಸು ಪೂರ್ಣವಾಗಬೇಕಿದೆ.  ಈ ಕಾಮಗಾರಿ ಮುಗಿದರೆ ಬಸವಜನ್ಮಭೂಮಿಯ ಋಣ ತೀರಿಸಿದಂತಾಗುತ್ತದೆ.  ನನಗೇನೂ ಇಂಡಿ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಕ್ಷೇತ್ರದ ಮತ ಹಾಕುವುದಿಲ್ಲ.  ಆದರೆ, ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಒದಗಿಸಿದ ಸಂತೃಪ್ತಿ ಸಿಗಲಿದೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: ಮಹದಾಯಿ ವಿವಾದ: ಸುಪ್ರೀಂ ಸೂಚನೆಯಂತೆ ಜಂಟಿ ಪರಿಶೀಲನಾ ಸಮಿತಿಗೆ ಕರ್ನಾಟಕ, ಗೋವಾ ಪ್ರತಿನಿಧಿಗಳ ನೇಮಕ


ಇಂದಿರಾ ಗಾಂಧಿಯವರನ್ನು ಬಂಗಾರದಲ್ಲಿ ತೂಗಿದ ವಿಜಯಪುರ ಜಿಲ್ಲೆಯಲ್ಲಿ ಐದು ನದಿಗಳು ಹರಿದರೂ ಇಲ್ಲಿ ಕುಡಿಯುವ ನೀರು ಇರಲಿಲ್ಲ. ಆಲಮಟ್ಟಿ ಎತ್ತರ 524 ಮೀಟರ್ ಎತ್ತರವಾದರೆ ಮಾತ್ರ ವಿಜಯಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಬಹಳಷ್ಟು ಜನ ಹೇಳಿದ್ದರು. ಆದರೆ, ಜಲಸಂಪನ್ಮೂಲ ಸಚಿವನಾದ ಮೇಲೆ ನಾನು ರೂ. 14000 ಕೋಟಿ ಖರ್ಚು ಮಾಡಿ ನಮ್ಮ ಜಿಲ್ಲೆಗೆ ನೀರಾವರಿ ಯೋಜನೆ ನೀಡಿ ಕೆರೆಗಳು, ಹಳ್ಳಗಳಿಗೆ ನೀರು ಹರಿಸಿದ್ದೇನೆ. ಹೀಗಾಗಿ ಈಗ 100, 150, 160 ಅಡಿಗೆ ಕೊಳವೆ ಭಾವಿಯಲ್ಲಿ ನೀರು ಸಿಗುತ್ತಿದೆ. ಭಾವಿಗಳಲ್ಲಿ ನೀರು ಬರುತ್ತಿದೆ. ಫೇಲ್ ಆಗಿದ್ದ ಕೊಳವೆ ಭಾವಿಗಳು ಈಗ ರಿಚಾರ್ಜ್ ಆಗಿವೆ. ಕಾಲುವೆಗಳ ಮೂಲಕ ಆರೇಳು ತಿಂಗಳು ಕೃಷಿ ಮಾಡಬಹುದು. ಆದರೆ, ಭಾವಿ, ಬೋರ್​ವೆಲ್​ಗಳಿಗೆ ನೀರು ಬಂದಾಗ ವರ್ಷವಿಡೀ ನೀರಾವರಿ ಮಾಡಬಹುದು. ಈ ಮೊದಲು ಎಕರೆಗೆ ಸುಮಾರು ರೂ. 2 ರಿಂದ 3 ಲಕ್ಷ ಬೆಲೆ ಬಾಳುತ್ತಿದ್ದ ಭೂಮಿ ಈಗ ರೂ. 15 ರಿಂದ 20ಕ್ಕೆ ಏರಿಕೆಯಾಗಿದೆ. ಹಾಗಂತ ಯಾರೂ ಭೂಮಿ ಮಾರಾಟ ಮಾಡಬೇಡಿ. ಮುಂದೆ ರೂ. 50 ಲಕ್ಷಕ್ಕೆ ಎಕರೆ ಬೆಲೆ ಬರಲಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.


ಏತ ನೀರಾವರಿ ಯೋಜನೆಯನ್ನು 640 ಮೀಟರ್ ಎತ್ತರಕ್ಕೆ ಏರಿಸಿದ ಬಳಿಕ ಒಂದೂವರೆ ಲಕ್ಷ ಎಕರೆಗೆ ಹೆಚ್ಚುವರಿಯಾಗಿ ನೀರಾವರಿ ಸೌಲಭ್ಯ ಸಿಕ್ಕಿದೆ. ಇದು ತಾವು ಈ ಭಾಗಕ್ಕೆ ನೀಡಿದ ಪ್ರಮುಖ ಕೊಡುಗೆಯಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು. ಇದೇ ವೇಳೆ, ಶಾಸಕ ಎಂ. ಬಿ. ಪಾಟೀಲ ಶಾಲಾ ಕಟ್ಟಡಕ್ಕೆ ಮತ್ತು ದೇವಸ್ಥಾನದ ಮಹಾದ್ವಾರಕ್ಕೆ ತಲಾ ರೂ. 5 ರಂತೆ ಒಟ್ಟು ರೂ. 10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.


ಇದನ್ನೂ ಓದಿ: NS Lakshminarayan Bhat Death: ಕನ್ನಡದ ಖ್ಯಾತ ಕವಿ ಎನ್​.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ


ಈ ಸಂದರ್ಭದಲ್ಲಿ ತಮ್ಮ ತಾಯಿ ಲಿಂ. ಮಾತೋಶ್ರಿ ಬೌರಮ್ಮ ಗಿರಿಮಲ್ಲಪ್ಪ ಯರನಾಳ ಅವರ ಸ್ಮರಣಾರ್ಥ ಮಹಾದ್ವಾರಕ್ಕೆ ಮತ್ತು ಶಾಲಾ ಕಟ್ಟಡಕ್ಕೆ ತಲಾ ರೂ. 5 ಲಕ್ಷ ಹಣ ನೀಡಿದ ಮಹಾದಾನಿ ಆರ್. ಜಿ. ಯರನಾಳ ಅವರನ್ನು ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಹಿರೇಮಠದ ಶಂಕರಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ವಿಧಾನ ಪರಿಷತ ಮಾಜಿ ಸದಸ್ಯ ಎಸ್. ಎ. ಜಿದ್ದಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಚಾರ್ಯ ಸಿದ್ದಣ್ಣ ಯರನಾಳ, ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಎನ್. ಎಸ್. ಸಜ್ಜನ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಜಿ. ಪಂ. ಮಾಜಿ ಸದಸ್ಯ ವಿ. ಎಸ್. ಪಾಟೀಲ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ವಿ. ಎನ್. ಬಿರಾದಾರ, ಜಕ್ಕಪ್ಪ ಯಡವೆ, ತಾ. ಪಂ. ಅಧ್ಯಕ್ಷೆ ಪ್ರಭಾವತಿ ನಾಟೀಕಾರ, ಸದಸ್ಯ ಲಕ್ಷ್ಮಣ ಕಲಬೀಳಗಿ, ಶಾಸಪ್ಪ ಹಂಚನಾಳ, ಎ. ಜಿ. ಯರನಾಳ, ಸಂಗಮೇಶ ಬಬಲೇಶ್ವರ, ಕಾಶೀನಾಥ ಕಾಖಂಡಕಿ, ಭೀಮನಗೌ ಪಾಟೀಲ, ಶ್ರೀಶೈಲಗೌಡ ಪಾಟೀಲ, ಜೆ. ಎಂ. ಪಾಟೀಲ, ಜೆ. ಎ. ಜಮಾದಾರ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಶ ಸಿಂಧೂರ, ಬಿ. ಜೆ. ವಿಭೂತಿ, ಗ್ರಾ. ಪಂ. ಅಧ್ಯಕ್ಷೆ ಕಾಶೀಬಾಯಿ ನಗರಳೆ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.


ವರದಿ: ಮಹೇಶ ವಿ. ಶಟಗಾರ

top videos
    First published: