ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಸರ್ಕಾರದಿಂದ ಕಣ್ಣೊರೆಸುವ ತಂತ್ರ: ಎಂಬಿ ಪಾಟೀಲ್ ವಾಗ್ದಾಳಿ

ಕೃಷ್ಣಾ ಮೇಲ್ದಂಡೆ ಯೋಜನೆಗೆ ನೆರೆ ರಾಜ್ಯಗಳು ತಕರಾರು ಸಲ್ಲಿಸಿವೆ. ಆದ್ದರಿಂದ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು ಕಷ್ಟ. ಆದರೂ ಸರ್ಕಾರ ಭರವಸೆ ಮಾತ್ರ ನೀಡುತ್ತಿದೆ ಎಂದು ಮಾಜಿ ನೀರಾವರಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಎಂಬಿ ಪಾಟೀಲ

ಎಂಬಿ ಪಾಟೀಲ

  • Share this:
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವುದು ಕಷ್ಟಸಾಧ್ಯ.  ಒಂದು ವೇಳೆ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತಂದು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಸಿದರೆ ಕೃತಜ್ಞತೆ ಸಲ್ಲಿಸುವುದಾಗಿ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಮಾತನಾಡಿದ ಅವರು, ಯಾವುದೇ ನೀರಾವರಿ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆಯಾಗಬೇಕಾದರೆ ಎರಡು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.  ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಣೆಯಾಗಲು ಅದಕ್ಕಿದ್ದ ಪೂರಕ ಅಂಶಗಳೇ ಕಾರಣ ಎಂದು ಅವರು ಹೇಳಿದ್ದಾರೆ.

ಯಾವುದೇ ನೀರಾವರಿ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಣೆಯಾಗಬೇಕಾದರೆ ಆ ಯೋಜನೆಯಡಿ 2 ಲಕ್ಷ ಹೆಕ್ಟೇರ್ ಅಂದರೆ 5 ಲಕ್ಷ ಎಕರೆ ನೀರಾವರಿಯಾಗಬೇಕು.  ಅಲ್ಲದೇ, ಈ ಯೋಜನೆ ಯಾವುದೇ ವಿವಾದಕ್ಕೆ ಈಡಾಗಿರಬಾರದು.  ಕೃಷ್ಣಾ ಮೇಲ್ದಂಡೆ ಯೋಜನೆಯಡಿ 2 ಲಕ್ಷ ಹೆಕ್ಟೇರ್ ಅಂದರೆ 5 ಲಕ್ಷ ಎಕರೆ ನೀರಾವರಿ ಸೌಲಭ್ಯ ದೊರೆಯುತ್ತದೆ.  ಆದರೆ, ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಮತ್ತು ನೀರು ಹಂಚಿಕೆ ವಿರುದ್ಧ ನೆರೆಯ ರಾಜ್ಯಗಳು ಸುಪ್ರೀಂ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿವೆ.  ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಷ್ಟ್ರೀಯ ನೀರಾವರಿ .ಯೋಜನೆ ಎಂದು ಘೋಷಸುವುದು ಕಷ್ಟಸಾಧ್ಯ ಎಂದು ಎಂ. ಬಿ. ಪಾಟೀಲ ಹೇಳಿದರು.

ಇದನ್ನೂ ಓದಿ: Gelatin Blast - ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟ: 6 ಮಂದಿ ಸಾವು

ಒಂದು ವೇಳೆ ರಾಜ್ಯ ಸರಕಾರ ನೆರೆಯ ರಾಜ್ಯಗಳ ಮನವೊಲಿಸಿ ಕೇಸುಗಳನ್ನು ಹಿಂಪಡೆಯುವಂತೆ ಮಾಡಿ ಕೇಂದ್ರದ ಮೇಲೆ ಒತ್ತಡ ತಂದು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಸರಕಾರವನ್ನು ಅಭಿನಂದಿಸುತ್ತೇನೆ. ಈ ಯೋಜನೆ ಕಷ್ಟಸಾಧ್ಯ ಎಂದು ಗೊತ್ತಿದೆ. ಅಲ್ಲದೇ, ಈ ಯೋಜನೆಗೆ ಈ ಹಿಂದೆ ಯಡಿಯೂರಪ್ಪ ವಿಧಾನ ಸಭೆಯಲ್ಲಿ ಘೋಷಿಸಿದಂತೆ ಪ್ರತಿ ವರ್ಷ ತಲಾ ರೂ. 10 ಸಾವಿರ ಕೋಟಿ ರೂ ಬಜೆಟ್​ನಲ್ಲಿ ಹಣ ಮೀಸಲಿಡಲಿ. ಆದರೆ, ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ಈ ವಿಚಾರವನ್ನು ಮರೆಮಾಚಲು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ತರುವುದಾಗಿ ಹೇಳುವ ಮೂಲಕ ಸರಕಾರ ಉತ್ತರ ಕರ್ನಾಟಕ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಇಟ್ಟಂಗಿಹಾಳ ಫುಡ್ ಪಾರ್ಕ್:

ಇದೇ ವೇಳೆ, ತಾವೇ ಶಾಸಕರಾಗಿರುವ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಫುಡ್ ಪಾರ್ಕ್ ಯೋಜನೆ ಕುರಿತು ಎಂ. ಬಿ. ಪಾಟೀಲ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಜೆ.ಪಿ. ನಡ್ಡಾ ಭೇಟಿ ಮಾಡಿದ ಶಾಸಕ ಯತ್ನಾಳ್, ಪಕ್ಷದ ಶಿಸ್ತು ಕಾಪಾಡುವಂತೆ ಯತ್ನಾಳ್​ಗೆ ಸೂಚನೆ

ಬಹಳ ದಿನಗಳಿಂದ ಇಲ್ಲಿ ಫುಡ್ ಪಾರ್ಕ್ ಆಗಬೇಕೆಂದು ಸುಮಾರು 76 ಎಕರೆ ಮೀಸಲಿಡಲಾಗಿದೆ. ಅಧಿಕಾರಿ ಮನೋಜ ಅವರು ಆಸಕ್ತಿ ತೆಗೆದುಕೊಂಡಿದ್ದಾರೆ. ಇಲ್ಲಿ ಒಂದು ಕಡೆ ಫುಡ್ ಪಾರ್ಕ್, ಮತ್ತೋಂದೆಡೆ ವೈನ್ ಉದ್ಯಮಕ್ಕಾಗಿ 140 ಎಕರೆ ಜಮೀನಿದೆ.  ನಾನು ಸಚಿವರಿಗೆ ಪತ್ರ ಬರೆದಿದ್ದೆ, ನನ್ನ ಪುತ್ರ ಬಸನಗೌಡ ಪಾಟೀಲ ಮುಂತಾದವರು ಬಿ. ಸಿ. ಪಾಟೀಲ ಅವರನ್ನು ಭೇಟಿ ಮಾಡಿದ್ದರು. ಆಗ ಅವರು ನೀಡಿದ ಭರವಸೆಯಂತೆ ಇಂದು ಭೇಟಿ ನೀಡಿದ್ದಾರೆ. ವೈನ್ ಪಾರ್ಕ್ ಮತ್ತು ಫುಡ್ ಪಾರ್ಕ್ ಪ್ರತ್ಯೇಕವಾಗಿ ಮಾಡುವುದರಿಂದ ಮೂಲಭೂತ ಸೌಕರ್ಯಗಳನ್ನು ಎರಡೆರಡು ಬಾರಿ ಮಾಡಬೇಕಾಗುತ್ತದೆ. ಉಗ್ರಾಣ, ಶೀತಲೀಕರಣ ಘಟಕಗಳನ್ನು ಒಂದೇ ಕಡೆ ಮಾಡುವುದರಿಂದ ಸಾಮಾನ್ಯವಾಗಿ ಉಪಯೋಗಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರ ಕೂಡ ಆಹಾರ ಸಂಸ್ಕರಣೆಗೆ ಅವಕಾಶ ನೀಡಿದೆ. ರೂ. 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ನಿರುದ್ಯೋಗಿ ಯುವಕರು, ತೋಟಗಾರಿಕೆ ಬೆಳೆಗಾರರಿಗೆ ಇಲ್ಲಿ ಲೀಸ್ ಮೇಲೆ ಜಾಗ ನೀಡಿದರೆ ದ್ರಾಕ್ಷಿ, ದಾಳಿಂಬೆ ಸಂಸ್ಕರಣೆಗೆ ಅವಕಾಶವಾಗಲಿದೆ. ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ನೀರಾವರಿ ಸೌಲಭ್ಯ ಸಿಗುತ್ತಿದೆ. ವಿಜಯಪುರ ನಗರದಿಂದ ಸುಮಾರು ಇಟ್ಟಂಗಿಹಾಳ 10 ರಿಂದ 15 ನಿಮಿಷ ದೂರವಿದೆ. ಸಣ್ಣ ಉದ್ಯೋಗಿಗಳಿಗೆ ಈ ಫುಡ್ ಪಾರ್ಕ್ ಹೇಳಿ ಮಾಡಿಸಿದಂತಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: