ವಿಜಯಪುರ(ಅ. 09): ವಿಜಯಪುರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳು ಶುರುವಾಗಿವೆ. ನಿನ್ನೆಯಷ್ಟೇ ಈ ಕುರಿತು ಮಾತನಾಡಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಜಾರಿಯಾಗಲು ಬಿಜೆಪಿ ಸರಕಾರ ಕಾರಣ ಎಂದ ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪೂರಕ ಎಂಬಂತೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಆಲಮಟ್ಟಿಯಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮಾಜಿ ಸಚಿವ ಎಂ. ಬಿ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಎಂ.ಬಿ. ಪಾಟೀಲ ಗುಂಡಾಗಿರಿ ರಾಜಕಾರಣ ಮಾಡಿದ್ದಾರೆ. ಪಾರುಪತ್ಯ, ದಬ್ಬಾಳಿಕೆ ರಾಜಕಾರಣ ಮಾಡಿದ್ದಾರೆ. ಗೃಹ ಸಚಿವರಿದ್ದಾಗ ಏನ್ ಮಾಡಿದ್ದಾರೆ ಗೊತ್ತಲ್ಲ? ಅವರ ಕಥೆ ಏನು ನಮಗೆ ಗೊತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ತಂದಿದ್ದು ನಮ್ಮ ಸರಕಾರ. ನೀರಾವರಿ ಹೋರಾಟ ಮಾಡಿದ್ದು ಇವರು ಎಂದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರನ್ನು ತೋರಿಸಿ ಕಟೀಲ್ ವಾಗ್ದಾಳಿ ನಡೆಸಿದರು.
ಮೊನ್ನೆಯಷ್ಟೇ ಜಿಲ್ಲೆಯ ನೀರಾವರಿ ನನ್ನ ಕನಸು. ನಾನೇ ನೀರಾವರಿ ಯೋಜನೆ ಮಾಡಿದ್ದು ಎಂದು ಎಂ. ಬಿ. ಪಾಟೀಲ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿದ ಕಟೀಲ್, ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ಶಿಲಾನ್ಯಾಸ ಮಾಡಲಿಲ್ಲ? ನೀವು ಗೂಂಡಾಗಿರಿ ರಾಜಕಾರಣ ಬಿಡಿ. ಮನೆಯಲ್ಲಿಯೇ ಕುಂತು ಮಾಡುತ್ತಿರುವ ರಾಜಕಾರಣ ಬಿಡಿ. ಇದರಿಂದಲೇ ನೀವು ತಿರಸ್ಕಾರಗೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
![Nalin Kumar Kateel]()
ನಳೀನ್ ಕುಮಾರ್ ಕಟೀಲ್
ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ; ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆ
ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಎಂ. ಬಿ. ಪಾಟೀಲ:
ಅತ್ತ ಆಲಮಟ್ಟಿಯಲ್ಲಿ ಕಟೀಲ್ ವಾಗ್ದಾಳಿ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇತ್ತ ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಎಂ. ಬಿ. ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಹೇಳದೇ ತಮ್ಮದೇ ಶೈಲಿಯಲ್ಲಿ ದಾಖಲೆಗಳ ಸಮೇತ ತಿರುಗೇಟು ನೀಡಿದ್ದಾರೆ.
ಫೇಸ್ಬುಕ್, ಟ್ವಿಟರ್ ಮತ್ತು ಮಾಧ್ಯಮ ಪ್ರಕಟಣೆಯ ಮೂಲಕ, ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಮಾಡಿರುವ ನೀರಾವರಿ ಕೆಲಸಗಳನ್ನು ನೆನಪು ಮಾಡಿದ್ದಾರೆ. ಈ ಕುರಿತು ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಏಷಿಯಾದಲ್ಲಿಯೇ ಅತೀ ಉದ್ದವಾದ ಅಕ್ವಾಡಕ್ಟ್ ಅಂದರೆ ನೀರಾವರಿ ಮೇಲ್ಗಾಗುವೆಯ ಸುಂದರವಾದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಅಲ್ಲದೇ, ತಾವು ಜಲಸಂಪನ್ಮೂಲ ಸಚಿವನಾಗಿದ್ದಾಗ 5 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಒಟ್ಟು ರೂ.14,482 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿ, ರೂ.9,809 ಕೋಟಿ ಹಣ ಖರ್ಚು ಮಾಡಲಾಗಿತ್ತು ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
2008-2013 ರವರೆಗಿನ ಬಿಜೆಪಿ ಆಡಳಿತದ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರೂ.1284 ಕೋಟಿ ಅನುಮೋದನೆಯಾಗಿತ್ತು. ಅದರಲ್ಲಿ ಕೇವಲ ರೂ. 530 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಲಾಗಿತ್ತು. ಆದರೆ, 2013 ರಿಂದ 2018ರ ಅವಧಿ ವಿಜಯಪುರ ಜಿಲ್ಲೆಯ ನೀರಾವರಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿದ್ದು, ಅಂದು ಕೈಗೊಂಡ ಯೋಜನೆಗಳಿಂದಲೇ ಇಂದು ಜಿಲ್ಲೆಯ ಬಹುತೇಕ ಜನ ನೆಮ್ಮದಿಯಿಂದಿದ್ದಾರೆ. ನಂತರ ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ರೇವಣ ಸಿದ್ದೇಶ್ವರ ಯೋಜನೆಗೆ ರೂ. 2800 ಕೋ. ಯೋಜನೆಗೆ ಅನುಮೋದನೆ ನೀಡಲಾಗಿದೆ. ಈಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ವಾರ ನಡೆದ ನೀರಾವರಿ ನಿಗಮಗಳ ಬೋರ್ಡ್ ಸಭೆಯಲ್ಲಿ ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ 16 ಕೆರೆಗಳನ್ನು ತುಂಬಿಸುವ ರೂ. 140 ಕೋ. ವೆಚ್ಚದ ಯೋಜನೆ ಹಾಗೂ ತಮ್ಮ ಅವಧಿಯಲ್ಲಿ ನಿರ್ಮಿಸಿರುವ ಕಾಲುವೆಗಳ ಮೂಲಕ ಹಳ್ಳಗಳ ಮೂಲಕ ನೀರು ಹರಿಸಿ ಅಂತರ್ಜಲ ಹೆಚ್ಚಿಸುವ ರೂ. 59 ಕೋ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ ತಾವು ಈಗಾಗಲೇ ಸರಕಾರ, ಸಚಿವರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಅಲ್ಲದೆ ಈ ಎರಡು ಯೋಜನೆಗಳೂ ತಾವು ರೂಪಿಸಿದ್ದು, ಮತ್ತು ತಾವು ಸತತ ಪರಿಶ್ರಮ ಪಟ್ಟು, ನಿರಂತರ ಫಾಲೋಅಪ್ ಮಾಡಿದ ಕಾರಣ ಈ ಯೋಜನೆಗಳಿಗೆ ಅನುಮೋದನೆ ದೊರಕಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾಗಮ ಮುಂದುವರಿಯುತ್ತದೆ; ಯೋಜನೆ ವೈಫಲ್ಯ ಎನ್ನುವುದು ತಪ್ಪು: ಶಿಕ್ಷಣ ಸಚಿವ
ಜಿಲ್ಲೆಯ ಮಹತ್ವಾಕಾಂಕ್ಷಿ ಮುಳವಾಡ ಏತ ನೀರಾವರಿ 3ನೇ ಹಂತದ ರೂ. 5398.55 ಕೋಟಿ, ಚಿಮ್ಮಲಗಿ ಏತ ನೀರಾವರಿ ಯೋಜನೆ ರೂ. 2148.02 ಕೋಟಿ, ಇಂಡಿ ಏತ ನೀರಾವರಿ ಯೋಜನೆ ವಿಸ್ತರಣೆಗೆ ರೂ.367.56 ಕೋಟಿ, ಬೂದಿಹಾಳ-ಪಿರಾಪೂರ ಏತ ನೀರಾವರಿ ಯೋಜನೆ ಮುಖ್ಯ ಸ್ಥಾವರ ರೂ.840 ಕೋಟಿ, ಚಡಚಣ ಏತ ನೀರಾವರಿ ಯೋಜನೆ ಮುಖ್ಯ ಸ್ಥಾವರ ರೂ. 413.20 ಕೋ., ನಾಗರಬೆಟ್ಟ ಏತ ನೀರಾವರಿ ಯೋಜನೆ ರೂ. 170.70 ಕೋ., ಆಲಮಟ್ಟಿ ಎಡದಂಡೆ ಕಾಲುವೆ ಆಧುನೀಕರಣ ರೂ. 112.46 ಕೋ., ತುಬಚಿ-ಬಬಲೇಶ್ವರ ಯೋಜನೆ ರೂ. 3572 ಕೋ., ಕೆರೆ ತುಂಬುವ ಒಟ್ಟು 6 ಯೋಜನೆಗಳು ರೂ. 442.71 ಕೋ., ಆಲಮಟ್ಟಿ ಮತ್ತು ನಾರಾಯಣಪೂರ ಆಣೆಕಟ್ಟುಗಳ ಪುನಶ್ಚೇತನ ಕಾಮಗಾರಿಗೆ ರೂ. 184.50 ಕೋ., ರಸ್ತೆ, ಸೇತುವೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಿಗೆ ರೂ. 120 ಕೋ. ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಮೊತ್ತ ರೂ. 14482 ಕೋ. ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯಲ್ಲಿ ಏಷ್ಯಾದಲ್ಲಿಯೇ ಪ್ರಥಮ ತಿಡಗುಂದಿ ಜಲಸೇತುವೆ ಮಾಡಿದ್ದು ಯಾರು? ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದು ಯಾರು? ಜಿಲ್ಲೆಯಾಧ್ಯಂತ ಸಾವಿರಾರು ಕಿ. ಮೀ. ಕಾಲುವೆಗಳನ್ನು 5 ವರ್ಷಗಳ ಅವಧಿಯಲ್ಲಿ ನಿರ್ಮಿಸಿದ್ದು ಯಾರು? ಎಂಬುದು ಜಿಲ್ಲೆಯ ಸಾಮಾನ್ಯ ರೈತನಿಗೂ ಗೊತ್ತಿರುವ ವಿಷಯವಾಗಿದೆ. ಯುಕೆಪಿ ಯೋಜನೆಗೆ ಹಿಂದಿನ ಸರಕಾರ ರೂ. 17002 ಕೋ. ಅನುಮೋದನೆಯ ಅಂದಾಜು ವೆಚ್ಚಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ಪರಿಷ್ಕರಿಸಿ, ಸವಿಸ್ತಾರ ಯೋಜನಾ ವರದಿಯೊಂದಿಗೆ ಮತ್ತು ನೂತನ ಭೂಸುಧಾರಣಾ ಕಾಯ್ದೆಯ ಮಾನದಂಡಗಳನ್ನು ಅನುಸರಿಸಿ ರೂ. 52000 ಕೋ. ಯೋಜನೆಗಳಿಗೆ ಮಂಜೂರಾತಿ ನೀಡಿದ್ದು, ನೀರಾವರಿ ಯೋಜನೆಗಳ ಕುರಿತು ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಸತತ ಬರ ಪೀಡಿತ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ತಮ್ಮ ಅವಧಿಯಲ್ಲಿ ಕೈಗೊಂಡ ಕಾರ್ಯಗಳು ರಾಜ್ಯ ನೀರಾವರಿ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಇದನ್ನು ಅಂದಿನ ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿಯವರೇ ಪ್ರಶಂಸಿಸಿದ್ದಾರೆ. ತಾವು ನೀರಾವರಿ ವಿಷಯ ಬಗ್ಗೆ ಮಾತನಾಡಿದಾಗ ಕೆಲವು ಬುದ್ದಿಗೇಡಿಗಳು ಸತತವಾಗಿ ಮೈ ಪರಚಿಕೊಳ್ಳುತ್ತವೆ. ಅದು ಒಂದು ರೀತಿಯ ವಾಸಿಯಾಗದ ಕಾಯಿಲೆಯಾಗಿದೆ. ಇಂತಹ ಕಾಯಿಲೆಗೆ ಔಷಧಿ ಇಲ್ಲ ಎಂದು ಎಂ. ಬಿ. ಪಾಟೀಲ ಪ್ರಕಟಣೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವರದಿ: ಮಹೇಶ ವಿ. ಶಟಗಾರ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ