ಬೆಳಗಾವಿ, ಬಸವಕಲ್ಯಾಣಕ್ಕಿಂತ ಮಸ್ಕಿಯಲ್ಲಿ ಭರ್ಜರಿ ಮತದಾನ; ಪಿಪಿಇ ಕಿಟ್ ಧರಿಸಿಯೇ ಮತದಾನ ಮಾಡಿದ ಅಭ್ಯರ್ಥಿ

ಮಸ್ಕಿಯಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದೆ. ಬೆಳಗಾವಿಯಲ್ಲಿ ಕೇವಲ ಶೇ. 54.73ರಷ್ಟು ಮಾತ್ರ ವೋಟಿಂಗ್ ಆಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶೇ. 61.49ರಷ್ಟು ಮತದಾನವಾಗಿರುವುದು ವರದಿಯಾಗಿದೆ.

ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ

ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ

  • Share this:
ರಾಯಚೂರು: ಕಳೆದ ಎರಡು ತಿಂಗಳಿನಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಭರ್ಜರಿ ಪ್ರಚಾರ ನಡೆಯಿತು. ರಾಜಕೀಯ ಆರೋಪ ಪ್ರತ್ಯಾರೋಪಗಳು ಸಹ ನಡೆದವು. ಅಬ್ಬರದಿಂದ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಮಸ್ಕಿಯಲ್ಲಿ ಮತದಾನ ಬಲು ಜೋರಾಗಿತ್ತು. ಮಸ್ಕಿಯಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನವಾಗಿದೆ. ಬೆಳಗಾವಿಯಲ್ಲಿ ಕೇವಲ ಶೇ. 54.73ರಷ್ಟು ಮಾತ್ರ ವೋಟಿಂಗ್ ಆಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಶೇ. 61.49ರಷ್ಟು ಮತದಾನವಾಗಿರುವುದು ವರದಿಯಾಗಿದೆ.

ಕೊರೋನಾ ಅಬ್ಬರ ಹಾಗು ಬಿರುಬಿಸಿಲಿನ ಮಧ್ಯೆಯೂ ಮಸ್ಕಿಯಲ್ಲಿ ಭರ್ಜರಿ ಮತದಾನವಾಗಿದೆ. ನಿನ್ನೆ ಶನಿವಾರ ಮುಂಜಾನೆಯಿಂದಲೇ ಕ್ಷೇತ್ರದಾದ್ಯಂತ ಭರ್ಜರಿ ಮತದಾನ ನಡೆಯಿತು. ಗ್ರಾಮೀಣ ಹಾಗು ಪಟ್ಟಣ ಪ್ರದೇಶಗಳಲ್ಲಿಯೂ ಭರ್ಜರಿ ಮತದಾನವಾಗಿದೆ. ಅಂತಿಮವಾಗಿ ಶೇ 70.48 ರಷ್ಟು ಮತದಾನವಾಗಿದೆ. ಒಟ್ಟು 206429 ಮತದಾರರಿದ್ದು ನಿನ್ನೆ ಸಂಜೆ ಮುಗಿದ ಮತದಾನದ ನಂತರ ಒಟ್ಟು 1,45,482 ಮತದಾರರು ಮತ ಹಾಕಿದ್ದಾರೆ. ಅದರಲ್ಲಿ 80 ವಯಸ್ಸು ಮೇಲ್ಪಟ್ಟವರು, ಕೊರೋನಾ ಸೋಂಕಿತರು, ಸಂಪರ್ಕಿತರು, ಚುನಾವಣಾ ಸೇವೆಯಲ್ಲಿರುವವರು ಒಟ್ಟು  246 ಜನ ಪೋಸ್ಟಲ್ ವೋಟು ಮಾಡಿದ್ದಾರೆ. ಅವರಲ್ಲಿ 80 ವರ್ಷ ಮೇಲ್ಪಟ್ಟವರು 175 ಜನರಿದ್ದಾರೆ. ಅಲ್ಲಲ್ಲಿ ಸಣ್ಣ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ಮುಗಿದಿದೆ, ಈಗ 305 ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

ಇದನ್ನೂ ಓದಿ: Bus Strike - ಸಾರಿಗೆ ಮುಖಂಡರ ಒಣ ಪ್ರತಿಷ್ಠೆ, ಕಚ್ಚಾಟಕ್ಕೆ ಬಡವಾಗುತ್ತಿದೆಯಾ ಸಾರಿಗೆ ನೌಕರರ ಮುಷ್ಕರ?

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್​ನಿಂದ ಬಸನಗೌಡ ತುರ್ವಿಹಾಳ, ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ ಓಬಳೇಶ ಹಾಗು ಐವರು ಪಕ್ಷೇತರರು ಅದೃಷ್ಟಪರೀಕ್ಷೆ ನಡೆಸಿದ್ದಾರೆ. ಬಸನಗೌಡ ತುರ್ವಿಹಾಳ ಅವರು ತಮ್ಮ ಸ್ವಗ್ರಾಮವಾದ ತುರ್ವಿಹಾಳದಲ್ಲಿ ಮುಂಜಾನೆಯೇ ಮತದಾನ ಮಾಡಿದರು. ಅದರೆ ಕೊರೋನಾ ಸೋಂಕು ಇರುವ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಸಂಜೆ 6.30 ಕ್ಕೆ ಮತದಾನ ಮಾಡಿದರು. ಪಿಪಿಇ ಕಿಟ್ ಹಾಕಿಕೊಂಡು ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಮತದಾನ ಮಾಡಿದರು. ಮಸ್ಕಿಯ ಕಿಲ್ಲಾ ಓಣಿಯಲ್ಲಿರುವ ಮತಗಟ್ಟೆ ಸಂಖ್ಯೆ 88 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರಿಗೆ ಕಳೆದ ಐದು ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್ ವರದಿ ದೃಡವಾಗಿತ್ತು, ಅದರಿಂದಾಗಿ ಅವರು ಕಳೆದ ಐದು ದಿನಗಳಿಂದ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದರು.

ಕೊರೊನಾ ಪಾಸಿಟಿವ್ ಇದ್ದವರು ಸಂಜೆ ಮತದಾನಕ್ಕೆ ಅವಕಾಶ ನೀಡಿದ್ದರಿಂದ ಸರಿಯಾಗಿ 6.30 ಕ್ಕೆ ಅವರು ತಮ್ಮ ಹಕ್ಕು ಚಲಾಯಿಸಿದರು. ಮನೆಯಿಂದಲೇ ಪಿಪಿಇ ಕಿಟ್ ಧರಿಸಿಕೊಂಡು ಬಂದ ಪ್ರತಾಪಗೌಡ ಮತಗಟ್ಟೆಗೆ ಬಂದಿದ್ದರು, ಈ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿಯೂ ಸಹ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿಕೊಂಡಿದ್ದರೆ, ಈ ಸಂದರ್ಭದಲ್ಲಿ ಎಂಸಿಸಿ ತಂಡ ಮುಖ್ಯಸ್ಥರಾದ ಆದಿತ್ಯ ಆಮ್ಲಾನ್ ಬಿಸ್ವಾಸ ಸಹ ಇದ್ದು ಪ್ರತಾಪಗೌಡ ರ ಮತದಾನದ ಸಂದರ್ಭದಲ್ಲಿ ಇದ್ದು ಪರಿಶೀಲಿಸಿದರು.

ಇದನ್ನೂ ಓದಿ: ಬೆಳಗಾವಿ ಲೋಕಸಭೆ ಉಪಚುನಾವಣೆ: ಕ್ಷೇತ್ರದಲ್ಲಿ ಶೇ 55.61ರಷ್ಟು ಮತದಾನ; ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ!

ಮತದಾನದ ನಂತರ ಮಾತನಾಡಿದ ಪ್ರತಾಪಗೌಡ ಪಾಟೀಲ, ನನಗೆ ಕೊವಿಡ್ ಆಗಿ ಮನೆಯಲ್ಲಿದ್ದರೂ ನಮ್ಮ ಕುಟುಂಬದವರು ಹಾಗು ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ನಾನು ಸುಮಾರು 15000 ಮತಗಳ ಅಂತರ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ತುರ್ವಿಹಾಳದಲ್ಲಿ ಮತದಾನ ಮಾಡಿದ ಬಸನಗೌಡ ಸಹ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಬಾರಿ ಜನ ನನ್ನನ್ನು ಬೆಂಬಲಿಸಲಿದ್ದಾರೆ, ಕಳೆದ ಬಾರಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದು ಆದರೆ ಈ ಬಾರಿ ಜನ ಕೈ ಬಿಡುವುದಿಲ್ಲ ಎಂದಿದ್ದಾರೆ.

ಚುನಾವಣೆ ಮುಗಿದಿದೆ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಸೋಂಕಿನ ನಡುವೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಸನಗೌಡ ಸಹ ಚುನಾವಣೆಯ ನಂತರ ರಿಲಾಕ್ಸ್ ಮೂಡಿನಲ್ಲಿದ್ದಾರೆ. ಈಗ ಯಾರ ಗೆಲ್ಲಲಿದ್ದಾರೆ, ಯಾವ ಯಾವ ಪ್ರದೇಶದಿಂದ ಎಷ್ಟು ಮತ ಬರುತ್ತವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಈ ಲೆಕ್ಕಾಚಾರಕ್ಕೆ ಅಂತಿಮವಾಗಿ ಮೇ 2 ರಂದು ತೀರ್ಪು ಬರಲಿದೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: