ಮಸ್ಕಿಯಲ್ಲಿ ರಾಜ್ಯ ಬಿಜೆಪಿಯ ಅತಿರಥರ ಭರ್ಜರಿ ಪ್ರಚಾರ; ಕೊರೋನಾ ನಿಯಮಗಳಿಗೂ ಡೋಂಟ್ ಕೇರ್

ಮಸ್ಕಿ ಕ್ಷೇತ್ರದ ಉಪಚುನಾವಣೆ ಮುಂದಿನ ತಿಂಗಳು ಇದ್ದು, ಬಿಜೆಪಿ ಈಗಲೇ ಅಖಾಡಕ್ಕೆ ಇಳಿದಿದೆ. ಅಧಿಕೃತವಾಗಿ ಘೋಷಣೆಯಾಗದಿದ್ದರೂ ಪ್ರತಾಪ್ ಗೌಡ ಬಿಜೆಪಿ ಅಭ್ಯರ್ಥಿ ಆಗುವುದು ನಿಶ್ಚಿತವಾಗಿದೆ. ನಿನ್ನೆ ಸಿಎಂ ಒಳಗೊಂಡ ಪ್ರಮುಖ ಬಿಜೆಪಿ ನಾಯಕರು ಮಸ್ಕಿಯಲ್ಲಿ ಪ್ರಚಾರ ನಡೆಸಿದರು.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ದಂಡು

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ದಂಡು

  • Share this:
ರಾಯಚೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಘೋಷಣೆ ಆಗ್ತಿದ್ದಂತೆ ಅಲರ್ಟ್ ಆಗಿರುವ ಬಿಜೆಪಿ ನಿನ್ನೆ ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಬೃಹತ್ ಚುನಾವಣಾ ಸಮಾವೇಶ ನಡೆಸಿತು. ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ 30ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾದರು. ಈ ಸಂದರ್ಭದಲ್ಲಿ ತಾವೇ ರೂಪಿಸಿದ ಕೊರೋನಾ ನಿಯಮಾವಳಿಗಳ ಉಲ್ಲಂಘನೆ ಮಾಡಿದ್ದರೆ, ಇನ್ನೊಂದು ಕಡೆ ಜಾತಿವಾರು ಮತ ಸಮೀಕರಣ ಮಾಡುವ ಯತ್ನ ನಡೆಯಿತು.

ರಾಜ್ಯದಲ್ಲಿ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್​ಗೆ ಅಖಾಡ ಸಿದ್ದಗೊಂಡಿದೆ. ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರೋ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅಭ್ಯರ್ಥಿಯಾಗೋದು ಪಕ್ಕಾ ಆಗಿದೆ. ಹೀಗಾಗಿ, ಬಿಜೆಪಿಯ ಅಗ್ರ ನಾಯಕರುಗಳು ನಿನ್ನೆ ಪ್ರತಾಪ್ ಗೌಡ ಪಾಟೀಲ ಪರ ಮತಯಾಚನೆ ಮಾಡಿದ್ದಲ್ಲದೆ ಮುಂದಿನ ಸಚಿವರಿಗೆ ಮತ ಹಾಕಿ ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಪ ಮುಖಮಂತ್ರಿಗಳಾದ ಸವದಿ, ಕಾರಜೋಳ ಹಾಗೂ ಸಚಿವರಾದ ಈಶ್ವರಪ್ಪ, ರಾಮುಲು ಸೇರಿದಂತೆ ಇಡೀ ಬಿಜೆಪಿ ಟೀಂ ಪ್ರತಾಪ್ ಗೌಡ ಪಟೀಲ್ ಪರ ಮತಯಾಚನೆ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಯಥಾಪ್ರಕಾರ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು, ಗ್ರಾಮೀಣ ಭಾಗದಲ್ಲಿ ಸರಕಾರದ ಕಾರ್ಯಕ್ರಮಗಳಿಂದಾಗಿ ಜನ ನಮ್ಮನ್ನು ಬೆಂಬಲಿಸಿದ್ದಾರೆ ಎಂದರು.

ಇದನ್ನೂ ಓದಿ: ಔಷಧೀಯ ಗುಣ ಉಳ್ಳ ಕಪ್ಪು ಗೋಧಿ ಬೆಳೆದ ಗದಗ ರೈತ: ಇವರ ಪ್ರಯೋಗಕ್ಕೆ ಎಲ್ಲೆಡೆ ಮೆಚ್ಚುಗೆ

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ರಾಜ್ಯದಲ್ಲಿ ಕಾಂಗ್ರೆಸ್ ಒಡೆದು ಹೋಳಾಗಿದೆ. ಮುಂದೆ ಈ ಪಕ್ಷ ನಾಮಾವಶೇಷವಾಗಲಿದೆ. ಬೆಂಗಳೂರಿನ ಕೆಜಿ ಹಳ್ಳಿ ಹಾಗು ಡಿಜೆ ಹಳ್ಳಿಯಲ್ಲಿ ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದರೂ, ಬೆಂಕಿ ಹಚ್ಚಿದ ಆರೋಪಿ ಸಂಪತ್ ರಾಜ್ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. ಇದು ಕಾಂಗ್ರೆಸ್ಸಿನಲ್ಲಿಯ ಗುಂಪುಗಾರಿಕೆಗೆ ಸಾಕ್ಷಿ ಎಂದರು.

ಘಟಾನುಘಟಿ ನಾಯಕರೆಲ್ಲರೂ ಸೇರಿದ್ದ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ದ ಇಡೀ ಬಿಜೆಪಿ ಟೀಂ ಆರೋಪಗಳ ಸುರಿಮಳೆಗಳನ್ನೇ ಸುರಿಸಿತು. ಸಮಾವೇಶಕ್ಕೂ ಮುನ್ನ ಸಿಂಧನೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಈ ಬಾರಿ ಮಸ್ಕಿ ಸೇರಿದಂತೆ ಎಲ್ಲಾ ಉಪಚುನಾವಣೆಗಳಲ್ಲಿ ನಾವು ಗೆಲ್ಲೋದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇವೆ, ಒಳ್ಳೆಯ ಕೆಲಸಗಳನ್ನ ಮಾಡಿದ್ದೇವೆ. ಹೀಗಾಗಿ ಈ ಬಾರಿ ನಾವು ಗೆದ್ದೇ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಡಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ರಕ್ತದಲ್ಲಿ ಬರೆದು ಕೊಡುತ್ತೇನೆ, ನಮ್ಮ ಸರಕಾರದಲ್ಲಿ ಪರಿಶಿಷ್ಟ ವರ್ಗದವರಿಗೆ ಶೇ 7.5 ರಷ್ಟು ಮೀಸಲಾತಿ ಕೊಡಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಸಿಎಂ ಗಳಾದ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಡಾ ಶಿವರಾಜ ಪಾಟೀಲ, ರಾಜೂಗೌಡ ಪಾಟೀಲ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Farmers Mahapanchayat: ಯುಜಜನ ರೊಚ್ಚಿಗೇಳುವ ಮುನ್ನ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಿ; ರಾಕೇಶ್ ಟಿಕಾಯತ್ ಎಚ್ಚರಿಕೆ!

ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ನಡೆದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಕೊರೋನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗಿತ್ತು. ಜಿಲ್ಲಾಡಳಿತ 500 ಜನರಿಗೆ ಸೀಮಿತಗೊಳಿಸಿದ್ದರೂ ಕೂಡಾ 20 ಸಾವಿರಕ್ಕೂ ಅಧಿಕ ಜನ ಸೇರಿದ್ದರು. ಇಡೀ ಸಮಾವೇಶದಲ್ಲಿ ಬಹುತೇಕರಿಗೆ ಮಾಸ್ಕ್ ಹಾಗೂ ಭೌತಿಕ ಅಂತರ ಕಾಪಾಡಲು ಆಗಿರದೇ ಇದ್ದದ್ದನ್ನ ನೋಡಿದ್ರೆ, ಜನಸಾಮಾನ್ಯರಿಗೆ ಇರುವ ನಿಯಮ, ರಾಜಕಾರಣಿಗಳಿಗೆ ಇಲ್ಲವೇನು ಎಂಬಂತೆ ಕಂಡು ಬಂತು.

ಇದೇ ವೇಳೆ ಮದ್ಯ ನಿಷೇಧಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ಮದ್ಯ ನಿಷೇಧ ಆಂದೋಲನಾ ಸಮಿತಿ ಕಾರ್ಯಕರ್ತರು ಮನವಿ ನೀಡಲು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಸಿಎಂ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು. ಇದೇ ವೇಳೆ ಮಾದಿಗ ಮೀಸಲಾತಿಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿಯೂ ಪ್ರತಿಭಟನೆ ನಡೆಯಿತು.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: