ಮಸ್ಕಿ: ಬೈ ಎಲೆಕ್ಷನ್, ಅಖಾಡ ಸಿದ್ದ, ಭರ್ಜರಿ ಪ್ರಚಾರಕ್ಕೆ ಸಿದ್ದತೆ

ಪ್ರತಾಪಗೌಡರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ಎಪ್ರಿಲ್ ೧೭ ರಂದು ನಡೆಯಲಿದೆ.   ನಿನ್ನೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ 8 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

ಮಸ್ಕಿಯಲ್ಲಿ ಬಿಜೆಪಿ ಚುನಾವಣಾ ಸಿದ್ಧತೆ ಸಭೆ

ಮಸ್ಕಿಯಲ್ಲಿ ಬಿಜೆಪಿ ಚುನಾವಣಾ ಸಿದ್ಧತೆ ಸಭೆ

  • Share this:
ರಾಯಚೂರು(ಏಪ್ರಿಲ್ 04): ಪ್ರತಾಪಗೌಡರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ಎಪ್ರಿಲ್ ೧೭ ರಂದು ನಡೆಯಲಿದೆ.   ನಿನ್ನೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ 8 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

10 ಜನರಿಂದ ಒಟ್ಟು 13 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ ಎರೆಡೆರಡು ನಾಮಪತ್ರ ಸಲ್ಲಿಸಿದ್ದ ಪ್ರತಾಪಗೌಡ ಹಾಗು ಬಸನಗೌಡ ತಮ್ಮ ಒಂದೊಂದು ನಾಮಪತ್ರsb ಹಿಂಪಡೆದಿದ್ದಾರೆ.  ಇನ್ನು ಬಸನಗೌಡ ಸಹೋದರ ಸಿದ್ದಲಿಂಗಪ್ಪ, ಚಕ್ರವರ್ತಿ ನಾಯಕ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಕಣದಲ್ಲಿ ಈಗ 8 ಜನ ಉಳಿದಿದ್ದಾರೆ. ಕಾಂಗ್ರೆಸ್ ನಿಂದ ಬಸನಗೌಡ ತುರ್ವಿಹಾಳ, ಬಿಜೆಪಿ ಯಿಂದ ಪ್ರತಾಪಗೌಡ ಪಾಟೀಲ ಕಣದಲ್ಲಿದ್ದಾರೆ. ನೋಂದಾಯಿತ ಪಕ್ಷವಾದ ಕರ್ನಾಟಕ ರಾಷ್ಟ್ರೀಯ ಸಮಿತಿಯ ಓಬಳೇಶಪ್ಪ, ದೀಪಿಕಾ, ಅಮರೇಶ, ಶ್ರೀನಿವಾಸ ನಾಯಕ, ಬಸನಗೌಡ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

2018 ರಲ್ಲಿ ಬಿಜೆಪಿಯಿಂದ ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ನಿಂದ ಪ್ರತಾಪಗೌಡ ಸ್ಪರ್ಧಿಸಿದ್ದರು. ಕೇವಲ 213 ಮತಗಳ ಅಂತರದಲ್ಲಿ ಪ್ರತಾಪಗೌಡ ಗೆಲುವು ಸಾಧಿಸಿದ್ದರು. ಬದಲಾದ ರಾಜಕೀಯದಲ್ಲಿ ಈಗ ಕಾಂಗ್ರೆಸ್ ನಿಂದ ಬಸನಗೌಡ ತುರ್ವಿಹಾಳ, ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಸ್ಪರ್ಧಿಸಿದ್ದಾರೆ. ಇಬ್ಬರೂ ಈಗ ಮತ್ತೆ ಏದುರಾಳಿಗಳಾಗಿ ಕಣದಲ್ಲಿ ಇದ್ದಾರೆ. ಆದರೆ ಇಲ್ಲಿ ಅಭ್ಯರ್ಥಿಗಳ ಪಕ್ಷಗಳು ಮಾತ್ರ ಅದಲು ಬದಲಾಗಿವೆ.

ಈಗಾಗಲೇ ಎರಡೂ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು ಆಯಾ ಪಕ್ಷಗಳ ಮುಖಂಡರು ಒಂದು ಹಂತದಲ್ಲಿ ಪ್ರಚಾರ ಮುಗಿಸಿ ಈಗ ಎರಡನೆಯ ಹಂತದ ಪ್ರಚಾರಕ್ಕೆ ಸಿದ್ದವಾಗಿದ್ದಾರೆ. ಬಿಜೆಪಿಯಿಂದ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್, ಈಶ್ವರಪ್ಪ ಸೇರಿ ಹಲವರು ಪ್ರಚಾರ ಮಾಡಿದ್ದು ಈಗ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿಕೊಂಡಿರುವ ವಿಜಯೇಂದ್ರ, ಶ್ರೀರಾಮುಲು, ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜುಗೌಡ ಸೇರಿ ಹಲವರು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪ್ರಚಾರ ಮಾಡಿದ್ದಾರೆ. ನಾಳೆ ಈ ಇಬ್ಬರು ಎರಡು ದಿನಗಳ ಕಾಲ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ನಿಂದ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಎನ್ ಎಸ್ ಬೋಸರಾಜ್ ಪ್ರಚಾರ ನಡೆಸುತ್ತಿದ್ದಾರೆ. ಮಸ್ಕಿ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿಯು ಪ್ರಚಾರಕ್ಕೆ ಭರ್ಜರಿ ಕಾರ್ಯತಂತ್ರ ರೂಪಿಸಿದೆ. ಮಸ್ಕಿ ಕ್ಷೇತ್ರದಲ್ಲಿ ಒಟ್ಟು  231 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಯಿಂದ 7 ಜನರಂತೆ ಕಾರ್ಯಕರ್ತರ ಪಡೆಯನ್ನು ನಿರ್ಮಿಸಿದೆ. ಈ ಕಾರ್ಯಕರ್ತರು ಚುನಾವಣೆ ಮುಗಿಯುವವರೆಗೂ ಮನೆ ಮನೆಗೆ ಹೋಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.

ಪ್ರತಿ ಮನೆಗೂ ಚುನಾವಣೆ ಮುಗಿಯುವರೊಳಗಾಗಿ ಮೂರು ಮೂರು ಬಾರಿ ಭೇಟಿ ನೀಡಿ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸಲಿದ್ದಾರೆ. ಈ ಕಾರ್ಯಕ್ರಮವು ಎಪ್ರಿಲ್ 5 ರಿಂದ ಆರಂಭವಾಗಲಿದೆ. ಮನೆ ಮನೆಗೆ ಪ್ರಚಾರಕ್ಕೆ ಕಾರ್ಯಕರ್ತರನ್ನು ಸಿದ್ದಗೊಳಿಸುವ ಉದ್ದೇಶದಿಂದ ನಿನ್ನೆ ಮಸ್ಕಿಯಲ್ಲಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಸಚಿವ ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಸುರಪುರ ಶಾಸಕ ರಾಜುಗೌಡ ಸೇರಿ ಹಲವಾರು ಮುಖಂಡರು ಪ್ರತಿ ಬೂತ್ ಮಟ್ಟಕ್ಕೆ 7 ಜನರಂತೆ ಸುಮಾರು 2500 ಕಾರ್ಯಕರ್ತರ ಸಭೆ ನಡೆಸಿದರು.
Published by:Soumya KN
First published: