ಉಡುಪಿಯಲ್ಲಿ ‘ಮಾರ್ವಾಡಿ ಹಠಾವೋ’ ಎಂಬ ಶಾಂತಿ ಕದಡುವ ಅಭಿಯಾನ
ಮಾರ್ವಾಡಿಯೊಬ್ಬರ ಅಂಗಡಿಯಿಂದ ಮೋಸವಾಯಿತು ಎಂದು ವ್ಯಕ್ತಿಯೊಬ್ಬರು ಆರೋಪಿಸಿ ವಿಡಿಯೋ ಪೋಸ್ಟ್ ಮಾಡಿದ ನಂತರ ಉಡುಪಿಯಲ್ಲಿ ಮಾರ್ವಾಡಿ ಹಠಾವೋ ಅಭಿಯಾನ ಸೃಷ್ಟಿಯಾಗಿದೆ. ಇದು ಕೋಮು ಬಣ್ಣವನ್ನೂ ಪಡೆದುಕೊಂಡಿದೆ.
ಉಡುಪಿಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾರ್ವಾಡಿ ಹಠಾವೊ ಅಭಿಯಾನ
ಉಡುಪಿ: ಮೌನವಾಗಿದ್ದ ಕರಾವಳಿ ಜಿಲ್ಲೆಯಲ್ಲಿ ಕಿಡಿಗೇಡಿಗಳು ಬೆಂಕಿಯ ಕಡ್ಡಿ ಗೀರಿದ್ದಾರೆ. ಉಡುಪಿಯಲ್ಲಿ ಇದ್ದಕ್ಕಿದ್ದಂತೆ ‘ಮಾರ್ವಾಡಿ ಹಠಾವೋ’ ಆಂದೋಲನ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಅಭಿಯಾನಕ್ಕೆ ಧರ್ಮ ಮತ್ತು ರಾಜಕೀಯ ಕೂಡ ಎಂಟ್ರಿ ಕೊಟ್ಟಿದೆ. ಎತ್ತಿನಗಾಡಿಗೆ ಹೋಗದ ಒಂದು ಜಾಗಕ್ಕೆ ಒಬ್ಬ ಮಾರ್ವಾಡಿ ತಲುಪುತ್ತಾನೆ ಎಂಬ ಮಾತಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಮಾರ್ವಾಡಿಗಳು ದೇಶದ ಉದ್ದಗಲವನ್ನು ತಲುಪಿ ಗೂಟ ಊರಿಬಿಟ್ಟಿದ್ದಾರೆ. ಉಡುಪಿಯಲ್ಲಿ 30 ವರ್ಷಗಳಿಂದ ವ್ಯಾಪಾರ ವಹಿವಾಟು ಮಾಡುವ ರಾಜಸ್ಥಾನ ಮೂಲದವರು ಕಳೆದೆರಡು ದಿನಗಳಿಂದ ವಿಚಲಿತರಾಗಿದ್ದಾರೆ. ಇದಕ್ಕೆ ಕಾರಣ ಆ ಒಂದು ವಿಡಿಯೋ.
ಉಡುಪಿ ನಗರದ ಪರ್ಕಳದ ನಿವಾಸಿ ದೀಪಕ್ ಭಂಡಾರಿ ಸ್ಟಿಂಗ್ ಆಪರೇಷನ್ ಮಾಡಿದ ವಿಡಿಯೋ ಅದು. ಉಡುಪಿಯ ಮರುಸಾಗರ್ ಎಂಬ ಎಲೆಕ್ಟ್ರಾನಿಕ್ ಅಂಗಡಿಯಿಂದ ಇವರು ವಯರ್ಗಳನ್ನು ಖರೀದಿ ಮಾಡಿದ್ದರು. ಮನೆಗೆ ಹೋಗಿ ಅಳತೆ ಮಾಡುವಾಗ ಲೆಕ್ಕಕ್ಕಿಂತ ವಯರ್ ಕಮ್ಮಿಯಿತ್ತು. ಅಂಗಡಿಗೆ ವಾಪಸಾಗಿ ತಗಾದೆ ಎತ್ತಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಒಂದು ಘಟನೆ ಮಾರ್ವಾಡಿ ಹಠಾವೋ ಎಂಬ ಸೋಶಿಯಲ್ ಮೀಡಿಯಾ ಅಭಿಯಾನವಾಗಿ ಪರಿವರ್ತನೆಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಬಂದಿರುವ ಕಮೆಂಟ್ಗಳಲ್ಲಿ ಹಿಂದೂ ಮುಸಲ್ಮಾನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಎರಡು ಧರ್ಮದ ನಡುವಿನ ವ್ಯಾಪಾರದ ವಾರ್ಗೂ ಕಾರಣವಾಗಿದೆ. ಉತ್ತರ ಭಾರತದ ವಲಸಿಗರಿಂದ ಸ್ಥಳೀಯರಿಗೆ ವ್ಯಾಪಾರ ಕುದುರುತ್ತಿಲ್ಲ ಎಂಬ ಬಿಸಿಬಿಸಿ ಚರ್ಚೆ ನಡೆದಿದೆ.
ಮಾರ್ವಾಡಿ ಹಠಾವೋ ಅಭಿಯಾನದ ಫೋಟೋ
ಮೂರು ದಶಕಗಳಲ್ಲಿ ಒಂದಿನಿತೂ ಮೋಸ ನಡೆಸದೆ ನಾವು ವ್ಯಾಪಾರ ಮಾಡುತ್ತಿದ್ದೇವೆ. ಅಭಿಯಾನದ ಹಿಂದೆ ವೈಯಕ್ತಿಕ ಹಿತಾಸಕ್ತಿ ಇದೆ ಎಂಬುದು ವ್ಯಾಪಾರಿಗಳ ವಾದ. ಇಷ್ಟಾಗುತ್ತಲೇ ಘಟನೆಗೆ ಬಿಜೆಪಿ ಪ್ರವೇಶ ಮಾಡಿದೆ. ರಾಜಸ್ಥಾನಿಗರಿಂದ ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ವಸ್ತುಗಳು ಸಿಗುತ್ತಿವೆ. ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಬಿಜೆಪಿಯ ವಾದ.
ಕೋಮು ಸಾಮರಸ್ಯದಿಂದ ಇರುವ ಉಡುಪಿ ಜಿಲ್ಲೆಯಲ್ಲಿ ಕೆಲ ದುಷ್ಟ ಶಕ್ತಿಗಳು ಹುಳಿ ಹಿಂಡುವ ಪ್ರಯತ್ನ ಮಾಡುತ್ತಿವೆ. ಸ್ಥಳೀಯ ಕೆಲ ವ್ಯಾಪಾರಿಗಳು ಮಾರ್ವಾಡಿ ಹಠಾವೋ ಅಭಿಯಾನದ ಹಿಂದೆ ನಿಂತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸೆನ್ ಪೊಲೀಸರು ಕಿಡಿಗೇಡಿಗಳ ಬೆನ್ನು ಬಿದ್ದಿದ್ದು ಅಭಿಯಾನದ ಹಿಂದಿರುವವರ ಮೇಲೆ ನಿಗಾ ಇಟ್ಟಿದ್ದಾರೆ.
ವರದಿ: ಪರೀಕ್ಷಿತ್ ಶೇಟ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ