Nail Free Tree - ‘ಮೊಳೆಮುಕ್ತ ಮರ’ ಅಭಿಯಾನ; ಬೆಂಗಳೂರು ಹುಡುಗರಿಂದ ಕಾಲ್ನಡಿಗೆ ಜಾಥಾ

ಬಿತ್ತಿಪತ್ರ ಇತ್ಯಾದಿ ಕೂರಿಸಲು ಹೊಡೆಯಲಾಗುವ ಮೊಳೆಗಳಿಂದ ಮರಗಳು ಹಾಳಾಗುತ್ತವೆ. ಆದ್ದರಿಂದ ಬೆಂಗಳೂರಿನ ಮರಗಳನ್ನ ರಕ್ಷಿಸಲು ಮೊಳೆಮುಕ್ತ ಮರ (Nail Free Tree) ಅಭಿಯಾನ ನಡೆಯುತ್ತಿದೆ. ಅದರ ಭಾಗವಾಗಿ ಇಂದು ಕಾಲ್ನಡಿಗೆ ಜಾಥಾ ಆಯೋಜನೆಯಾಗಿತ್ತು.

ಮೊಳೆಮುಕ್ತ ಮರ ಬೆಂಗಳೂರಿಗೆ ಅಭಿಯಾನ

ಮೊಳೆಮುಕ್ತ ಮರ ಬೆಂಗಳೂರಿಗೆ ಅಭಿಯಾನ

  • Share this:
ಬೆಂಗಳೂರು: ಅಂತಾರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಬೆಂಗಳೂರು ಹುಡುಗರ ತಂಡ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದೊಂದಿಗೆ ಇಂದು ಜಾಗೃತಿ ಕಾಲ್ನಡಿಗೆ ಜಾಥಾ ಜರುಗಿತು. ಎಂ.ಜಿ. ರಸ್ತೆಯ ಬಾಲಭವನದಿಂದ ಪಾಲಿಕೆಯ ಆವರಣದಲ್ಲಿರುವ ಡಾ. ರಾಜ್‌ಕುಮಾರ್‌ ಗಾಜಿನ ಮನೆಯವರೆಗೆ ನಡೆದ "ಮೊಳೆ ಮುಕ್ತ ಮರ" ಬೆಂಗಳೂರಿಗಾಗಿ ಜಾಗೃತಿ ಕಾಲ್ನಡಿಗೆ ಜಾಥಾಕ್ಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.

ನಂತರ ಮಾತನಾಡಿ, ನಗರದಲ್ಲಿ ಮೊಳೆ ಮುಕ್ತ ಮರ ಬೆಂಗಳೂರಿಗಾಗಿ ಹಲವಾರು ನಾಗರಿಕರು ಸಂಘ/ಸಂಸ್ಥೆಗಳು ಸೇರಿ ತಂಡಗಳನ್ನು ಮಾಡಿಕೊಂಡು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿ, ನಗರದಾದ್ಯಂತ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಲು ಹೊಡೆದಿರುವ ಮೊಳೆ, ಸ್ಟ್ಯಾಪ್ಲರ್ ಮೂಲಕ ಪಿನ್ ಹೊಡೆದಿರುವುದನ್ನು ತೆಗೆಯುವ ಕಾರ್ಯ ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯಕ್ರಮ. ಯಾವ ಕಾರ್ಯಕ್ರಮ/ಯೋಜನೆಯು ಜನರಿಂದ ಸ್ವಯಂ ರೂಪುಗೊಳ್ಳುತ್ತದೆಯೋ ಅದು ಯಶಸ್ವಿಯಾಗಲಿದೆ ಎಂದು ಮಂಜುನಾಥ್ ತಿಳಿಸಿದರು.

ನಗರ ಹಸುರೀಕರಣಗೊಳಿಸಿ ನಗರವು 800 ಚ.ಕಿ.ಮೀ ವ್ಯಾಪ್ತಿಯಲ್ಲಿ 1.30 ಕೋಟಿ ಜನಸಂಖ್ಯೆ ವಾಸಿಸುತ್ತಿದ್ದು, ಶೇ. 50 ರಷ್ಟು ಯುವಕ/ಯುವತಿಯರಿದ್ದಾರೆ. ಸ್ವತ: ತಮ್ಮ ಮಕ್ಕಳು ಕಬ್ಬನ್ ಉದ್ಯಾನವನದಲ್ಲಿ ಶಾಲಾ ವತಿಯಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ, ಶಾಲಾ ವತಿಯಿಂದ ನೆನಪಿಗೆ ಎರಡು ಸಸಿಗಳನ್ನು ನೀಡಿದ್ದರು. ಅವುಗಳನ್ನು ನಮ್ಮ ಮನೆಯ ಮುಂಭಾಗದಲ್ಲಿ ನೆಟ್ಟು ಪೋಷಣೆ ಮಾಡಿದರು. ಅವುಗಳೀಗ ಹೆಮ್ಮರವಾಗಿ ಬೆಳೆದಿದ್ದು, ಆ ಮರಗಳು ಈಗ ನೋಡಿದಾಗ ನಮ್ಮವು, ನಾವು ಬೆಳೆಸಿದ ಮರಗಳು ಎಂಬ ಭಾವನೆ ಸ್ವಾಭಾವಿಕವಾಗಿ ಬರಲಿದೆ. ಈ ಪೈಕಿ ಯುವಕರು ಮನಸ್ಸು ಮಾಡಿದರೆ ಯಾವ ಕೆಲಸ ಬೇಕಾದರೂ ಮಾಡಬಹುದು. ಮೊಳೆ ಮುಕ್ತ ಬೆಂಗಳೂರು ಮಾಡುವ ನಿಮ್ಮ ಧ್ಯೇಯವನ್ನು ಹೀಗೆ ಮುಂದುವರಿಸಿಕೊಂಡು ಹೋಗಿ ಎಂದರು.

ಇದನ್ನೂ ಓದಿ: Ramesh Jarkiholi - ಸಿಡಿ ಗ್ಯಾಂಗ್ ಗೊತ್ತಿಲ್ಲ, ಯುವತಿ ಯಾರೆಂದೇ ಗೊತ್ತಿಲ್ಲ ಎಂದ ರಮೇಶ್ ಜಾರಕಿಹೊಳಿ

ಬೆಂಗಳೂರು ಉದ್ಯಾನ ನಗರಿ ಎಂಬ ಹೆಗ್ಗಳಿಕೆ ಹಾಗೆಯೇ ಇರಬೇಕಾದರೆ ಇನ್ನೂ ಹೆಚ್ಚು ಹೆಚ್ಚು ಸಸಿಗಳನ್ನು ನಡೆಬೇಕು. ಈ ಸಂಬಂಧ ನಗರದ ಯುವಕ/ಯುವತಿಯರು ಸೇರಿ ಮುಂದಿನ ಮಳೆಗಾಲದಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿಕೊಳ್ಳಿ. ಆ 10 ಲಕ್ಷ ಸಸಿಗಳನ್ನು‌ ಪಾಲಿಕೆಯಿಂದ ಉಚಿತವಾಗಿ ನೀಡುತ್ತೇವೆ. ಎಲ್ಲರೂ ನಮ್ಮ ನಗರವೆಂದು ಸಸಿಗಳನ್ನು ನೆಡಲು ಮುಂದೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡಿದಾಗ ಹೆಚ್ಚು ಮರಗಳು ಬೆಳೆದು ಇನ್ನೂ ಹಚ್ಚ ಹಸಿರಾದ ನಗರವಾಗಿ ಬದಲಾಗಲಿದ್ದು, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನಿರ್ಮಿಸಲು  ಹೆಚ್ಚು ಅನುಕೂಲಕರವಾಗಲಿದೆ ಎಂದು ಹೇಳಿದರು.

ಎಡಿಜಿಪಿ(ರೈಲ್ವೇಸ್) ಭಾಸ್ಕರ್ ರಾವ್ ಮಾತನಾಡಿ,‌ ಬೆಂಗಳೂರು ನಗರದಲ್ಲಿ ಮರಗಳಿಗೆ ಹೊಡೆದಿರುವ ಮೊಳೆ ತೆಗೆದು ನಗರವನ್ನು ಸುಂದರವಾಗಿರಲು ಮುಂದಾದ ನಿಮ್ಮ ಯೋಚನೆ, ನಗರ ಮೇಲಿರುವ ಪ್ರೀತಿಗೆ ನನ್ನ ಅಭಿನಂದನೆಗಳು. ಮರಗಳ ಮೇಲೆ ಮೊಳೆ, ಬಿತ್ತಿಪತ್ರ, ಕೇಬಲ್ ಗಳ ತೆರವು ಮಾಡುವ ಕೆಲಸ ಆಗುತ್ತಿದೆ. ಪೊಲೀಸ್ ಇಲಾಖೆಯು ಕೂಡಾ ನಿಮ್ಮ ಜೊತೆ ಕೈಜೋಡಿಸಲಿದೆ. ಸದರಿ ತಂಡವು ಕ್ರಿಯಾತ್ಮಕ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಕಡೆ FIR ದಾಖಲಿಸಿ ಹಾಗೂ ಜಾಗೃತಿಯನ್ನು ಮೂಡಿಸಿ ಒಳ್ಳೆಯ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ: HD Kumaraswamy: ಪ್ರಧಾನಿ ಮೋದಿ ರಾಜ್ಯ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಮೊದಲು ಕೊನೆಗಾಣಿಸಲಿ; ಹೆಚ್.​ಡಿ. ಕುಮಾರಸ್ವಾಮಿ

ಬೆಂಗಳೂರು ಹುಡುಗರು ತಂಡದ ವಿನೋದ್ ಮಾತನಾಡಿ, ಸದರಿ ಯೋಜನೆಯು ಮೊದಲಿಗೆ ವಂಸಂತನಗರ ವಾಡ್೯ ವ್ಯಾಪ್ತಿಯಲ್ಲಿ ಮರಗಳ ಮೇಲೆ ಜಾಹೀರಾತು ನೋಡಿ ಅವುಗಳನ್ನು ತೆರವುಗೊಳಿಸಲು 4 ಜನ ಸೇಹ್ನಿತರು ತೀರ್ಮಾನಿಸಿ ಪ್ರಯತ್ನ ಪಟ್ಟೆವು. ಆಗ ನಮಗೆ ಅನುಭವವಾಗಿದ್ದು ಮರಗಳಿಗೆ ಮಳೆ ಹೊಡೆದು ತ್ರೀವವಾದ ಹಾನಿ ಉಂಟಾಗಿ ಪರಿಸರ ಕಲುಷಿತವಾಗುತ್ತಿರುವುದನ್ನು ಗಮನಿಸಿದೆವು. ಬಿಬಿಎಂಪಿ ರವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಭೆ ನಡೆಸುತ್ತಿದ್ದುದನ್ನು ಗಮನಿಸಿ ಆಯುಕ್ತರನ್ನು ತಮ್ಮ ತಂಡದ ಕಾರ್ಯಕ್ಕೆ ಸಹಕರಿಸಿ ರಾಯಭಾರಿಯಾಗುವಂತೆ ಕೋರಿದೆವು. ನಮ್ಮೊಂದಿಗೆ ಆತ್ಮೀಯವಾಗಿ ಮಾತನಾಡಿ ನಿಮ್ಮ ತಂಡವು ಬರೀ ವಸಂತ ನಗರದ ಶಿವಾನಂದ ಸರ್ಕಲ್ ಬಳಿ ಕಾರ್ಯಮಾಡಿದರೆ ಸಾಲದು. ನಿಮ್ಮ ತಂಡವು ನಗರದಾದ್ಯಂತ ಸದರಿ ಕಾರ್ಯ ಹಮ್ಮಿಕೊಂಡು ಕಾರ್ಯನಿರ್ವಹಿಸುವುದಾದರೆ ನನ್ನ ಸಹಮತವಿದೆ ಎಂದು ತಿಳಿಸಿದರು. ಅದರಂತೆ, ನಾವು ಸಾಧ್ಯವಾದಷ್ಟು ನಗರದಾದ್ಯಂತ ಎಲ್ಲಾ ಸಂಘ/ಸಂಸ್ಥೆಗಳು/ಸಂಘಟನೆಗಳೊಂದಿಗೆ ಸಹಕರಿಸಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಕಾಲ್ನಡಿಗೆ ಜಾಥಾ ಮಾರ್ಗ ಎಂ.ಜಿ.ರಸ್ತೆಯ ಬಾಲಭವನದಿಂದ ಪ್ರಾರಂಭವಾಗಿ, ಮ್ಯೂಸಿಯಂ ರಸ್ತೆ, ವಿಠಲ್ ಮಲ್ಯ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ‌ ಮೂಲಕ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ರಾಜ್‌ಕುಮಾರ್‌ ಗಾಜಿನ ಮನೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು‌. ಕಾಲ್ನಡಿಗೆ ಜಾಥಾದಲ್ಲಿ ಮಕ್ಕಳು, ವಿಕಲಚೇತನರು, ಯುವಕ/ಯುವತಿಯರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ವರದಿ: ಶರಣು ಹಂಪಿ
Published by:Vijayasarthy SN
First published: