HOME » NEWS » District » MARATI LOVE TO SHASHIKALA JOLLEY TS NAGABHARANA EXPRESS DISAPPOINTED RHHSN SAKLB

ಸಚಿವೆ ಜೊಲ್ಲೆ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ; ಸಚಿವರ ಕಾರ್ಯವೈಖರಿಗೆ ಟಿ.ಎಸ್.ನಾಗಾಭರಣ ಆಕ್ರೋಶ

ಕರ್ನಾಟಕದ ಗಡಿಯಲ್ಲಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಶೇ. 05 ರಷ್ಟು ಕೃಪಾಂಕ ನೀಡಲಾಗುತ್ತಿದೆ. ಉದ್ಯೋಗ ಹಾಗೂ ಶೈಕ್ಷಣಿಕ ಪ್ರವೇಶದ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನೀಡಿದಂತೆ ಅವರಿಗೂ ನೀಡಲಾಗುತ್ತಿದೆ. ಆದರೆ ಇದರ ಬಗ್ಗೆ ಕೆಲವೊಬ್ಬರಿಗೆ ಸರಿಯಾದ ಮಾಹಿತಿ ಇಲ್ಲದೆ ಕರ್ನಾಟಕದಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

news18-kannada
Updated:January 19, 2021, 4:23 PM IST
ಸಚಿವೆ ಜೊಲ್ಲೆ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ; ಸಚಿವರ ಕಾರ್ಯವೈಖರಿಗೆ ಟಿ.ಎಸ್.ನಾಗಾಭರಣ ಆಕ್ರೋಶ
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಎಸ್.ನಾಗಾಭರಣ.
  • Share this:
ಕಲಬುರ್ಗಿ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ಮರಾಠಿ ಮಯವಾಗಿದ್ದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವ ಸುಧಾಕರ್ ಸಹ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಸ್ವಾಗತ ಗೀತೆಯಿಂದ ಹಿಡಿದು ಎಲ್ಲವೂ ಮರಾಠಿ ವ್ಯಾಮೋಹದಿಂದ ಕೂಡಿದ್ದರೂ ಸಚಿವೆ ಜೊಲ್ಲೆ ಅದನ್ನು ಸಮರ್ಥಿಸಿಕೊಂಡಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಖ್ಯಾತ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಭಾಗಿಯಾದ ಕಾರ್ಯಕ್ರಮದಲ್ಲಿ ಮರಾಠಿ ಪ್ರೀತಿ, ಅದಕ್ಕೆ ಸಚಿವರ ಸಮರ್ಥನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ  ಭಾಗಿಯಾದ ಕಾರ್ಯಕ್ರಮ ಮರಾಠಿಮಯವಾಗಿದ್ದರ ಕುರಿತು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಈ ವರ್ಷ ನಾವು ಕನ್ನಡ ಅನುಷ್ಠಾನ ವರ್ಷವನ್ನಾಗಿ ಆಚರಿಸುತ್ತಿದ್ದೇವೆ. ಮತ್ತೊಂದೆಡೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ಕ್ಯಾತೆ ತೆಗೆದು ಹೇಳಿಕೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಗಡಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮರಾಠಿ ಮೇಳೈಸಿದ್ದು ಸರಿಯಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದನ್ನು ಖಂಡಿಸಿ ಅವರಿಗೆ ಪತ್ರ ಬರೆಯಲಿದೆ. ಸಚಿವರಿಂದ ವಿವರಣೆ ಕೇಳುತ್ತೇವೆ ಎಂದರು.

ಬರೀ ದಂಡನೆಗಳಿಂದ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕನ್ನಡ ಕಾಳಜಿಯ ಮನಸ್ಸು ಬೇಕು. ಸಚಿವರಾದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆನ್ನೋದನ್ನು ಅರಿತುಕೊಳ್ಳಬೇಕು. ಈ ರೀತಿಯ ಸೂಕ್ಷ್ಮ ಸಂದರ್ಭದಲ್ಲಿ ಹೇಗಿರಬೇಕೆನ್ನೋದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ಸಂಬಂಧ ವಿವರಣೆ ಕೇಳಿ ಸಚಿವರಿಗೆ ಪತ್ರ ಬರೆಯಲಿದ್ದೇವೆ ಎಂದು ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಇದನ್ನು ಓದಿ: ಸಚಿವ ಸಂಪುಟ ಪುನಾರಚಿಸಿ, 6 ಬಾರಿ ಶಾಸಕನಾಗಿರುವ ನನಗೆ ಅವಕಾಶ ನೀಡಿ; ಚಿತ್ರದುರ್ಗ ಎಂಎಲ್​ಎ ತಿಪ್ಪಾರೆಡ್ಡಿ

ಐಎಎಸ್, ಐಪಿಎಸ್ ಅಧಿಕಾರಿಗಳು ಕನ್ನಡ ಕಲಿಯೋದರಲ್ಲಿ, ಮಾತನಾಡೋದರಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಲೇ ಇವೆ. ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾರೇ ಆಗಿರಲಿ, ಎಂಥದ್ದೆ ಪ್ರಭಾವಿ ಅಧಿಕಾರಿಯಾಗಿರಲಿ ಕನ್ನಡ ನೆಲದಲ್ಲಿ ಕೆಲಸ ಮಾಡಬೇಕೆಂದರೆ ಕನ್ನಡ ಕಲಿಯಲೇಬೇಕು. ಈ ಸಂಬಂಧ ತರಬೇತಿಯನ್ನೂ ನೀಡಿರಲಾಗಿರುತ್ತೆ. ಇದರ ಹೊರತಾಗಿಯೂ ಕೆಲ ಅಧಿಕಾರಿಗಳು ಕನ್ನಡ ಕಲಿಕೆಯ ವಿಷಯದಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆ. ಅವರಿಗೆ ನೋಟೀಸ್ ನೀಡಲಾಗುವುದು. ವಾಗ್ದಂಡನೆ ಮಾಡಲಾಗುವುದು. ಹಿಂಬಡ್ತಿಯನ್ನೂ ನೀಡಲಾಗುವುದು. ಆದರೆ ಇದುವರೆಗೆ ಯಾವುದೇ ಅಧಿಕಾರಿಗೆ ಹಿಂಬಡ್ತಿ ನೀಡಿರುವ ಉದಾಹರಣೆಯಿಲ್ಲ ಎಂದು ಟಿ.ಎಸ್.ನಾಗಾಭರಣ ತಿಳಿಸಿದರು.

ಕರ್ನಾಟಕದ ಗಡಿಯಲ್ಲಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಶೇ. 05 ರಷ್ಟು ಕೃಪಾಂಕ ನೀಡಲಾಗುತ್ತಿದೆ. ಉದ್ಯೋಗ ಹಾಗೂ ಶೈಕ್ಷಣಿಕ ಪ್ರವೇಶದ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನೀಡಿದಂತೆ ಅವರಿಗೂ ನೀಡಲಾಗುತ್ತಿದೆ. ಆದರೆ ಇದರ ಬಗ್ಗೆ ಕೆಲವೊಬ್ಬರಿಗೆ ಸರಿಯಾದ ಮಾಹಿತಿ ಇಲ್ಲದೆ ಕರ್ನಾಟಕದಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟವರ ಮೂಲಕ ಗಡಿ ಭಾಗದ ಕನ್ನಡಿಗರಿಗೆ ಈ ಮಾಹಿತಿ ರವಾನಿಸಲಾಗುವುದು. ಗಡಿ ಭಾಗದಲ್ಲಿರುವ ಕನ್ನಡಿಗರ ಹಿತ ರಕ್ಷಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
Published by: HR Ramesh
First published: January 19, 2021, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories