ವಿಜಯಪುರ: ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಕರ್ನಾಟಕಕ್ಕೆ ಬಂದು ವಿವಾದಿತ ಹೇಳಿಕೆ ನೀಡುವ ಅಲ್ಲಿನ ಜನಪ್ರತಿನಿಧಿಗಳನ್ನು ರಾಜ್ಯ ಪ್ರವೇಶಿಸದಂತೆ ನಿಷೇಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಛತ್ರಪತಿ ಶಿವಾಜಿ ಫೌಂಡೇಶನ ಅಧ್ಯಕ್ಷ ಕಿರಣ ಕಾಳೆ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಮರಾಠಾ ಮುಖಂಡ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠಾ ಅಭಿವೃದ್ಧಿ ನಿಗಮ ರಚನೆಯನ್ನು ಸ್ವಾಗತಿಸುತ್ತೇವೆ. ಸಿಎಂ ಯಡಿಯೂರಪ್ಪ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅಲ್ಲದೇ, ಈ ನಿಗಮ ಸ್ಥಾಪನೆಗೆ ಬೆಂಬಲ ನೀಡಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ. ಮಾಜಿ ಸಚಿವ ಸಿ. ಟಿ. ರವಿ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಾನಾ ಕನ್ನಡ ಪರ ಸಂಘಟನೆಗಳಲ್ಲಿ ಮರಾಠಾ ಸಮುದಾಯದವರು ಪದಾಧಿಕಾರಿಗಳಾಗಿದ್ದಾರೆ. ಕರ್ನಾಟಕದ ಮರಾಠಿಗರಿಗೆ ಕನ್ನಡ ಚಿತ್ರೋದ್ಯಮದ ನಟ, ನಟಿಯರ ಹೆಸರು ಗೊತ್ತಿದೆ. ಪುನಿತ್ ರಾಜಕುಮಾರ, ದರ್ಶನ, ಸುದೀಪರಂಥ ನಟರ ಅಭಿಮಾನಿಯಾಗಿದ್ದಾರೆ. ರಾಜಕೀಯದಲ್ಲಿ ಯಡಿಯೂರಪ್ಪ, ಸಿದ್ಧರಾಮಯ್ಯ, ಎಂ.ಬಿ. ಪಾಟೀಲ, ಯತ್ನಾಳ ಮುಂತಾದವರ ಅಭಿಮಾನಿಗಳಿದ್ದಾರೆ. ಬಹುತೇಕರು ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಇಲ್ಲಿನ ಮರಾಠಿಗರಿಗೆ ಕನ್ನಡವೇ ಹಾಸು ಹೊಕ್ಕಾಗಿರುವಾಗ ನಿಗಮ ಸ್ಥಾಪನೆ ವಿರೋಧಿಸಿ ಬಂದ್ ಕರೆ ನೀಡುವುದು ಸರಿಯಲ್ಲ. ಕನ್ನಡ ಪರ ಸಂಘಟನೆಗಳು ಕೂಡಲೇ ಬಂದ್ ಕರೆಯನ್ನು ಹಿಂಪಡೆಯಬೇಕು ಎಂದು ಕಿರಣ ಕಾಳೆ ಮನವಿ ಮಾಡಿದರು.
ಇದನ್ನೂ ಓದಿ: ಮರಾಠಿ ಪ್ರಾಧಿಕಾರ ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ; ಪೊಲೀಸರಿಂದ ವಾಟಾಳ್ ನಾಗರಾಜ್ ಬಂಧನ
ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಮಾತನಾಡಿ, ಮರಾಠಾ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಶಿವಾಜಿ ಮೂಲಸ್ಥಾನ ಕರ್ನಾಟಕ. ಮರಾಠಿಗರು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಶಿವಾಜಿ ತಂದೆ ಶಾಜಿ ಬೆಂಗಳೂರು ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿನಗರ ಹೆಸರು ಶಿವಾಜಿಯಿಂದ ಬಂದಿದ್ದಾರೆ. ಈ ಹಿಂದೆ ಎಂಇಎಸ್ನಿಂದ ಏಳು ಜನ ಶಾಸಕರು ಆಯ್ಕೆಯಾಗುತ್ತಿದ್ದರು. ಈಗ ಯಾರೂ ಆಯ್ಕೆಯಾಗುತ್ತಿಲ್ಲ. ಬೆಳಗಾವಿಯಲ್ಲಿ ಮಾತ್ರ ಎಂಇಎಸ್ ಬೆಂಬಲಿಗರಿದ್ದಾರೆ. ಆದರೆ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯತ ಇರುವ ಮರಾಠಿಗರು ಯಾವತ್ತೂ ಎಂಇಎಸ್ ಬೆಂಬಲಿಸಿಲ್ಲ. ತಲೆತಲಾಂತರಗಳಿಂದ ಕನ್ನಡಿಗರೊಂದಿಗೆ ಒಂದಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 45 ಲಕ್ಷ ಜನ ಮರಾಠಿಗರಿದ್ದಾರೆ. ಕರ್ನಾಟಕದಲ್ಲಿರುವ ಮರಾಠಿಗರು ಪಾಕಿಸ್ತಾನದವರಲ್ಲ. ನಾವೆಲ್ಲ ಕನ್ನಡಿಗರೇ. ಪ್ರತಿಯೊಂದನ್ನೂ ಜಾತಿಗೆ ಹೋಲಿಸಬಾರದು. ಬೆಳಗಾವಿ ಹೊರತುಪಡಿಸಿ ಬೇರೆ ಜಿಲ್ಲೆಯ ಮರಾಠಾ ಜನರು ಎಂಇಎಸ್ ಪರವಾಗಿ ಎಂದೂ ಹೋರಾಟ ಮಾಡಿಲ್ಲ. ಸುಮಾರು 70 ವರ್ಷಗಳಿಂದ ಆಗಾಗ ಆಯಾ ಸಿಎಂಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿರಲಿಲ್ಲ. ಈಗ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸಿಎಂ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ಪರಶುರಾಮ ರಜಪೂತ, ಬಂಜಾರಾ ಧರ್ಮ ಗುರುಗಳಾದ ಗೋಪಾಲ ಮಹಾರಾಜ, ಕರವೇ ಪ್ರವೀಣ ಶೆಟ್ಟಿ ಬಣದ ಮಾಜಿ ಜಿಲ್ಲಾಧ್ಯಕ್ಷ ಸಂತೋಷ ಪವಾರ, ಮರಾಠ ಸಮಾಜದ ಅಧ್ಯಕ್ಷರಾದ ವಿಜಯಕುಮಾರ ಘಾಟಗೆ, ಮುಖಂಡರಾದ ವಿಶ್ವನಾಥ ಬೋಸಲೇ, ಕೆ. ಕೆ. ಎಂ. ಪಿ. ಅಧ್ಯಕ್ಷ ಶಿವಾಳ್ಕರ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ದೇಶ ವಿದ್ರೋಹಿಗಳ ಜತೆ ಕಾಂಗ್ರೆಸ್ ನಂಟು, ದೇಶದ ಸಮಗ್ರತೆಯಲ್ಲಿ ಕೈ ನಿಲುವೇನು?; ಕೇಂದ್ರ ಸಚಿವ ಜೋಶಿ ಪ್ರಶ್ನೆ
ಯತ್ನಾಳ ವಿರುದ್ಧ ಕರವೇ ನಾರಾಯಣಗೌಡ ಬಣ ಪ್ರತಿಭಟನೆ:
ಈ ಮಧ್ಯೆ, ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬೆಂಬಲ ಮತ್ತು ಕನ್ನಡ ಪರ ಸಂಘಟನೆಗಳ ಕುರಿತು ಹೇಳಿಕೆ ನೀಡಿರುವ ಶಾಸಕ ಯತ್ನಾಳ ವಿರುದ್ಧ ವಿಜಯಪುರದಲಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ ಚೌಕಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಕಚೇರಿ ಬಳಿ ತೆರಳಿ ಧರಣಿ ನಡೆಸಿದರು. ಬಳಿಕ ಯತ್ನಾಳ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಸಿಗಲು ಯಡಿಯೂರಪ್ಪ ಕಾರಣ: ಕೈ ಶಾಸಕ ನಂಜೇಗೌಡ ಹೇಳಿಕೆ
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಯ ಎಂ. ಸಿ. ಮುಲ್ಲಾ ಮಾತನಾಡಿ, ಕೂಡಲೇ ಯತ್ನಾಳ ಕನ್ನಡಪರ ಸಂಘಟನೆಗಳ ಕುರಿತು ಆಡಿರುವ ಮಾತಿನ ಕುರಿತು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕರವೇ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಪ್ರಕಾಶ ಕುಂಬಾರ, ಫಯಾಜ ಕಲಾದಗಿ, ಅಶೋಕ ಹಾರಿವಾಳ, ದಸ್ತಗೀರ ಸಾಲೋಟಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ