ಮಲಪ್ರಭ ನದಿಯ ಪ್ರವಾಹಕ್ಕೆ ಗದಗ ಜಿಲ್ಲೆಯ ಕೊಣ್ಣೂರ ಗ್ರಾಮದ ಬಹುತೇಕ ಮನೆಗಳು ಭಾಗಶಃ ಮುಳುಗಡೆ

ಪ್ರತಿ ಬಾರಿಯೂ ಇದೇ ರೀತಿಯಾಗುತ್ತಿದ್ದು, ನಮ್ಮನ್ನೆಲ್ಲಾ ಆದಷ್ಟು ಬೇಗ ಈ ಸಂಕಷ್ಟದಿಂದ ಮುಕ್ತಿ ಮಾಡಿ, ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಳೆದ ಬಾರಿಯ ಪ್ರವಾಹದಿಂದ ಉಂಟಾದ ಹಾನಿಯನ್ನೇ ಇನ್ನೂ ಸರಿಪಡಿಸಲಾಗಿಲ್ಲ. ಅಷ್ಟರಲ್ಲಿ ಜಿಲ್ಲೆಯ ಜನ ಮತ್ತೆ ಪ್ರವಾಹಕ್ಕೆ ಸಿಲುಕಿದ್ದಾರೆ‌. ಈ ಬಾರಿಯಾದರೂ ಸರ್ಕಾರ ಪಾಠ ಕಲಿತು, ಈ ಪ್ರವಾಹದ ಹಾನಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕಾಗಿದೆ.

ಪ್ರವಾಹದಿಂದ ಗದಗ ಜಿಲ್ಲೆಯಕೊಣ್ಣೂರ ಗ್ರಾಮ ಜಲಾವೃತವಾಗಿರುವುದು.

ಪ್ರವಾಹದಿಂದ ಗದಗ ಜಿಲ್ಲೆಯಕೊಣ್ಣೂರ ಗ್ರಾಮ ಜಲಾವೃತವಾಗಿರುವುದು.

  • Share this:
ಗದಗ: ನವೀಲು ತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನದಿ ದಡದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮಲಪ್ರಭ ಅಚ್ಚುಕಟ್ಟು ಪ್ರದೇಶದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ನವಿಲುತೀರ್ಥ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಇದರಿಂದಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು, ವಾಸನ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದೆ. ಏತನ್ಮಧ್ಯೆ ಕೊಣ್ಣೂರು ಗ್ರಾಮದ 85 ವರ್ಷದ ಶಿವನವ್ವ ವಾಲಿ ಅವರ ಮನೆಗೆ ಮೊಣಕಾಲುದ್ದ ನೀರು ನುಗ್ಗಿದ ಪರಿಣಾಮ ಕಳೆದ ಮೂರು ದಿನಗಳಿಂದ ಊಟ ವಸತಿ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಯಾವೊಬ್ಬ ಅಧಿಕಾರಿಗಳೂ ಸಹ ಇತ್ತ ತಿರುಗಿ ನೋಡಿಲ್ಲ.

ತಮಗೊಂದು ಶಾಶ್ವತ ಪರಿಹಾರ ನೀಡಬೇಕು ಎಂದು 85 ವರ್ಷದ ವೃದ್ಧೆಯ ಬೇಡಿಕೆಯಾಗಿದೆ. ‌ಅಜ್ಜಿಯ ಗೋಳಾಟದ ಕುರಿತು ನ್ಯೂಸ್ 18 ಕನ್ನಡ ವಿಸ್ತೃತವಾದ ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಅಧಿಕಾರಿ ಹಾಗೂ ಜನ ಪ್ರತಿನಿಧಿಗಳು ಅಜ್ಜಿಯ ಮನೆಗೆ ಭೇಟಿ ನೀಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಅವರು ಅಜ್ಜಿಯ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ನರಗುಂದ ತಹಸೀಲ್ದಾರ್ ಮಹೇಂದ್ರ ಸಹ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಜ್ಜಿಗೆ ಶಾಶ್ವತ ಪರಿಹಾರದ ಭರವಸೆ ನೀಡಿದ್ದಾರೆ.

ಇನ್ನು ಗ್ರಾಮದಲ್ಲಿರುವ ರಾಷ್ಟ್ರೀಯ ಹೆದ್ದಾರಿ 283ರ ಸೇತುವೆಯೂ ಸಹ ಮಲಪ್ರಭ ಪ್ರವಾಹಕ್ಕೆ ಮುಳುಗಿದೆ. ಹೀಗಾಗಿ ಗದಗ - ಬಾಗಲಕೋಟೆ, ಹುಬ್ಬಳ್ಳಿ - ಬಾಗಲಕೋಟೆ ನಡುವೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ‌. ಸೇತುವೆ ಮುಳುಗಿದ್ದರಿಂದ ಮುಂದೆ ಹೋಗಲಾರದೇ ಲಾರಿಗಳು ಸಾಲುಗಟ್ಟಿ ನಿಂತಿವೆ. ಇನ್ನು ಕೊಣ್ಣೂರು ಪಕ್ಕದ ವಾಸನ ಗ್ರಾಮದಲ್ಲಿಯೂ ಸಹ ನೀರು ನುಗ್ಗಿದೆ. ಗ್ರಾಮದ ತುಳಸಿಗೇರಿ ದೇವಸ್ಥಾನವು ಜಲಾವೃತವಾಗಿದೆ. ರೈತರು ಬೆಳೆದಿದ್ದ ತೋಟಗಾರಿಕಾ ಬೆಳೆಗಳೂ ಸೇರಿದಂತೆ, ಗೋವಿನ ಜೋಳ, ಹತ್ತಿ, ಹೆಸರು, ಕಬ್ಬು ಬೆಳೆಗಳಿದ್ದ ಜಮೀನುಗಳಲ್ಲಿ ನೀರು ನಿಂತಿದೆ. ಇನ್ನು ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿಯೂ ಸಹ ನೀರು ತುಂಬಿದ್ದು, ಗ್ರಾಮದ ಶುದ್ಧ ನೀರಿನ ಘಟಕ, ದೇವಸ್ಥಾನಕ್ಕೆ ನೀರು ನುಗ್ಗಿದೆ.

ಇದನ್ನು ಓದಿ: ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿವಿ ಆರಂಭಿಸುವಂತೆ ಕೇಂದ್ರಕ್ಕೆ ಸಿ.ಟಿ.‌ ರವಿ ಮನವಿ

ಮಲಪ್ರಭ ನದಿಯ ಪ್ರವಾಹದಿಂದ ನರಗುಂದ ಹಾಗೂ ರೋಣ ತಾಲೂಕಿನ ಸುಮಾರು 20 ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ‌. ಇನ್ನು ಪ್ರತಿ ಬಾರಿಯೂ ಇದೇ ರೀತಿಯಾಗುತ್ತಿದ್ದು, ನಮ್ಮನ್ನೆಲ್ಲಾ ಆದಷ್ಟು ಬೇಗ ಈ ಸಂಕಷ್ಟದಿಂದ ಮುಕ್ತಿ ಮಾಡಿ, ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಳೆದ ಬಾರಿಯ ಪ್ರವಾಹದಿಂದ ಉಂಟಾದ ಹಾನಿಯನ್ನೇ ಇನ್ನೂ ಸರಿಪಡಿಸಲಾಗಿಲ್ಲ. ಅಷ್ಟರಲ್ಲಿ ಜಿಲ್ಲೆಯ ಜನ ಮತ್ತೆ ಪ್ರವಾಹಕ್ಕೆ ಸಿಲುಕಿದ್ದಾರೆ‌. ಈ ಬಾರಿಯಾದರೂ ಸರ್ಕಾರ ಪಾಠ ಕಲಿತು, ಈ ಪ್ರವಾಹದ ಹಾನಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಬೇಕಾಗಿದೆ.
Published by:HR Ramesh
First published: