ಪುಸ್ತಕಗಳ ವಿಮರ್ಶಾ ಸ್ಪರ್ಧೆ ‘ಮನ್ವಂತರ’ ಅವಧಿ ಮುಕ್ತಾಯ; ಸೆ. 17ರಂದು ವಿಜೇತರ ಘೋಷಣೆ

ಲಾಕ್ ಡೌನ್ ಸಮಯದಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾಧಿಕಾರಿಗಳು ವಿವಿಧ ಪುಸ್ತಕಗಳನ್ನ ಸೂಚಿಸಿ ಯಾವುದಾದರೂ ಒಂದು ಪುಸ್ತಕದ ವಿಮರ್ಶೆ ಕಳಿಸಿಕೊಡಲು ಕೋರಿದ್ದರು. ಆದರೆ, ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪರ್ಧೆ ಬಂದಿಲ್ಲ ಎನ್ನಲಾಗಿದೆ.

news18-kannada
Updated:September 2, 2020, 4:25 PM IST
ಪುಸ್ತಕಗಳ ವಿಮರ್ಶಾ ಸ್ಪರ್ಧೆ ‘ಮನ್ವಂತರ’ ಅವಧಿ ಮುಕ್ತಾಯ; ಸೆ. 17ರಂದು ವಿಜೇತರ ಘೋಷಣೆ
ಅಶೋಕ ಲಾಂಛನ.
  • Share this:
ಕೊಪ್ಪಳ: ಕೊರೋನಾ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಜಿಲ್ಲೆಯ ಜನರಿಗೆ ಓದುವ ಅಭಿರುಚಿ ಬೆಳೆಸಲು ಮನ್ವಂತರ ಹೆಸರಿನ ಪುಸ್ತಕ ವಿಮರ್ಶೆ ಸ್ಪರ್ಧೆಯನ್ನು ಆಯೋಜಿಸಿದ್ದರು. ಓದುವಾಸಕ್ತರಿಗೆ ಇದು ಉತ್ತಮ ವೇದಿಕೆಯೇನೋ ನಿಜ. ಆದರೆ ಆಸಕ್ತರು ವಿಮರ್ಶೆ ಕಳಿಸಿಕೊಡುವಲ್ಲಿ ಉದಾಸೀನ ತೋರಿದರೇನೋ ಎಂಬ ಅನುಮಾನ ಮೂಡುವಂತೆ ಹೆಸರು ನೋಂದಣಿಗೂ ಹಾಗೂ ವಿಮರ್ಶೆ ಕಳಿಸಿಕೊಡುವುದಕ್ಕೂ ಇದ್ದ ಗಡುವನ್ನು ವಿಸ್ತರಿಸಲಾಗಿತ್ತು. ಆದರೂ ನಿರೀಕ್ಷಿತ ಪ್ರಮಾಣದ ಪ್ರತಿಕ್ರಿಯೆ ಮನ್ವಂತರಕ್ಕೆ ದೊರಕದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಮಕ್ಕಳಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಎರಡು ವಿಭಾಗಗಳಲ್ಲಿ ಮನ್ವಂತರದಡಿ ನೋಂದಣಿಗೆ ಅವಕಾಶ ಕಲ್ಪಿಸಿದ್ದರು. ಪ್ರತಿ ವಿಭಾಗದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕ ಒಳಗೊಂಡಂತೆ ಒಟ್ಟು ಐದು ಪುಸ್ತಕಗಳ ಹೆಸರನ್ನು ಸೂಚಿಸಿ ಯಾವುದಾದರೂ ಒಂದು ಪುಸ್ತಕದ ವಿಮರ್ಶೆ ಕಳಿಸಿಕೊಡಲು ಸೂಚಿಸಲಾಗಿತ್ತು. ವಿಮರ್ಶೆ ಹೇಗಿರಬೇಕು? ಯಾವ ಅಂಶಗಳನ್ನು ಒಳಗೊಂಡಿರಬೇಕು? ಕೃತಿಯಲ್ಲಿರುವ ನ್ಯೂನತೆಗಳೇನು? ಪುಸ್ತಕದಲ್ಲಿ ಸರಿಪಡಿಸಬಹುದಾಗಿದ್ದ ಅಂಶಗಳೇನು? ಎಂಬೆಲ್ಲ ಮಾಹಿತಿ ವಿಮರ್ಶೆಯಲ್ಲಿರಬೇಕು ಎಂದು ಟಿಪ್ಪಣಿಯನ್ನೂ ಸಹ ವಿವರಿಸಲಾಗಿತ್ತು. ಮನ್ವಂತರದಡಿ ಪುಸ್ತಕ ವಿಮರ್ಶೆಗೆ ಹೆಸರು ನೋಂದಣಿ ಮಾಡಲು ಆಗಸ್ಟ್ 15 ಕೊನೆಯ ದಿನ ಎಂದು ಹೇಳಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿಯಾಗದ್ದರಿಂದ ಮತ್ತೆ ಮೂರು ದಿನ ನೋಂದಣಿಯ ಅವಧಿ ವಿಸ್ತರಿಸಲಾಗಿತ್ತು. ವಿಮರ್ಶೆ ಕಳಿಸಲು ಆಗಸ್ಟ್ 25 ಕೊನೆಯ ದಿನ ಎಂದು ಹೇಳಲಾಗಿತ್ತು. ಇದಕ್ಕೂ ಸಹ ನೋಂದಣಿ ಮಾಡಿದ ಎಲ್ಲರಿಂದ ವಿಮರ್ಶೆಗಳು ಬರಲಿಲ್ಲ. ಹಾಗಾಗಿ ಆಗಸ್ಟ್ 31ರವರೆಗೆ ವಿಮರ್ಶೆ ಕಳಿಸುವ ದಿನವನ್ನು ವಿಸ್ತರಿಸಲಾಗಿತ್ತು. ಈಗ ಎಲ್ಲವೂ ಮುಗಿದಿದೆ. ಆದರೂ  ಜಿಲ್ಲಾಧಿಕಾರಿಯವರ ಪ್ರಕಾರ 6 ಸಾವಿರ ನೋಂದಣಿ ಪೈಕಿ 2,400 ಜನ ಮಾತ್ರ ಪುಸ್ತಕ ವಿಮರ್ಶೆ ಕಳಿಸಿದ್ದಾರೆ.

ಮಕ್ಕಳ ವಿಭಾಗ:

ಮಕ್ಕಳ ವಿಭಾಗದ ಮನ್ವಂತರದಡಿ ನಿಗದಿಪಡಿಸಲಾದ ಡಾ. ಶಿವರಾಂ ಕಾರಂತರ ‘ಚೋಮನ ದುಡಿ’ ಪುಸ್ತಕ ಕುರಿತು ಕೊಪ್ಪಳ ತಾಲೂಕಿನ 379, ಗಂಗಾವತಿ ತಾಲೂಕಿನ 661, ಯಲಬುರ್ಗಾ ತಾಲೂಕಿನ 181 ಹಾಗೂ ಕುಷ್ಟಗಿ ತಾಲೂಕಿನ 848 ಒಟ್ಟಾರೆ 2069 ಮಕ್ಕಳು ಹೆಸರು ನೋಂದಣಿ ಮಾಡಿದ್ದಾರೆ.

ಸುಧಾ ಮೂರ್ತಿಯವರ ‘ಮಹಾಶ್ವೇತ’ ಪುಸ್ತಕ ಕುರಿತು ಕೊಪ್ಪಳ ತಾಲೂಕಿನ 119, ಗಂಗಾವತಿ ತಾಲೂಕಿನ 193, ಯಲಬುರ್ಗಾ ತಾಲೂಕಿನ 49 ಹಾಗೂ ಕುಷ್ಟಗಿ ತಾಲೂಕಿನ 340 ಒಟ್ಟಾರೆ 701 ಮಕ್ಕಳು ಹೆಸರು ನೋಂದಣಿ ಮಾಡಿದ್ದಾರೆ.

ಆರ್.ಕೆ. ನಾರಾಯಣ ಅವರ ‘ಸ್ವಾಮಿ ಮತ್ತು ಸ್ನೇಹಿತರು’ ಪುಸ್ತಕ ಕುರಿತು ಕೊಪ್ಪಳ ತಾಲೂಕಿನ 208, ಗಂಗಾವತಿ ತಾಲೂಕಿನ 413, ಯಲಬುರ್ಗಾ ತಾಲೂಕಿನ 50 ಹಾಗೂ ಕುಷ್ಟಗಿ ತಾಲೂಕಿನ 578 ಒಟ್ಟಾರೆ 1249 ಮಕ್ಕಳು ಹೆಸರು ನೋಂದಣಿ ಮಾಡಿದ್ದಾರೆ.

ಅಮಿಶ್ ತ್ರಿಪಾಠಿಯವರ ‘ಮೆಲುಹ’ ಇಂಗ್ಲಿಷ್ ಪುಸ್ತಕ ಕುರಿತು ಕೊಪ್ಪಳ ತಾಲೂಕಿನ 21, ಗಂಗಾವತಿ ತಾಲೂಕಿನ 28, ಯಲಬುರ್ಗಾ ತಾಲೂಕಿನ 1 ಹಾಗೂ ಕುಷ್ಟಗಿ ತಾಲೂಕಿನ 70 ಒಟ್ಟಾರೆ 120 ಮಕ್ಕಳು ಹೆಸರು ನೋಂದಣಿ ಮಾಡಿದ್ದಾರೆ.ಅರವಿಂದ ಅಡಿಗ ಅವರ ‘ದಿ ವೈಟ್ ಟೈಗರ್’ ಇಂಗ್ಲಿಷ್ ಪುಸ್ತಕ ಕುರಿತು ಕೊಪ್ಪಳ ತಾಲೂಕಿನ 44, ಗಂಗಾವತಿ ತಾಲೂಕಿನ 130, ಯಲಬುರ್ಗಾ ತಾಲೂಕಿನ 4 ಹಾಗೂ ಕುಷ್ಟಗಿ ತಾಲೂಕಿನ 101 ಒಟ್ಟಾರೆ 279 ಮಕ್ಕಳು ಹೆಸರು ನೋಂದಣಿ ಮಾಡಿದ್ದಾರೆ.

ಸಾರ್ವಜನಿಕ ವಿಭಾಗ:

ಸಾರ್ವಜನಿಕರಿಗಾಗಿ ಮನ್ವಂತರದಡಿ ನಿಗಡಿಪಡಿಸಲಾದ ಡಾ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಪುಸ್ತಕ ವಿಮರ್ಶೆ ಮಾಡುವ ಕುರಿತು ಕೊಪ್ಪಳ ತಾಲೂಕಿನಲ್ಲಿ 83, ಗಂಗಾವತಿ ತಾಲೂಕಿನಲ್ಲಿ 209, ಯಲಬುರ್ಗಾ ತಾಲೂಕಿನಲ್ಲಿ 34 ಕುಷ್ಟಗಿ ತಾಲೂಕಿನಲ್ಲಿ 212 ಒಟ್ಟಾರೆ 538 ಜನರು ಹೆಸರು ನೋಂದಣಿ ಮಾಡಿದ್ದಾರೆ.

ಎಸ್.ಎಲ್.ಭೈರಪ್ಪ ಅವರ ‘ವಂಶವೃಕ್ಷ’ ಪುಸ್ತಕ ವಿಮರ್ಶೆ ಮಾಡುವ ಕುರಿತು ಕೊಪ್ಪಳ ತಾಲೂಕಿನಲ್ಲಿ 52, ಗಂಗಾವತಿ ತಾಲೂಕಿನಲ್ಲಿ 123, ಯಲಬುರ್ಗಾ ತಾಲೂಕಿನಲ್ಲಿ 14 ಕುಷ್ಟಗಿ ತಾಲೂಕಿನಲ್ಲಿ 131 ಒಟ್ಟಾರೆ 320 ಜನರು ಹೆಸರು ನೋಂದಣಿ ಮಾಡಿದ್ದಾರೆ.

ಗಿರೀಶ್ ಕಾರ್ನಾಡ್ ಅವರ ‘ಆಡಾಡತಾ ಆಯುಷ್ಯ’ ಪುಸ್ತಕ ವಿಮರ್ಶೆ ಮಾಡುವ ಕುರಿತು ಕೊಪ್ಪಳ ತಾಲೂಕಿನಲ್ಲಿ 9, ಗಂಗಾವತಿ ತಾಲೂಕಿನಲ್ಲಿ 26, ಯಲಬುರ್ಗಾ ತಾಲೂಕಿನಲ್ಲಿ 3 ಕುಷ್ಟಗಿ ತಾಲೂಕಿನಲ್ಲಿ 27 ಒಟ್ಟಾರೆ 65 ಜನರು ಹೆಸರು ನೋಂದಣಿ ಮಾಡಿದ್ದಾರೆ.

ಟ್ರೆವರ್ ನೋಹ ಅವರ ‘ಬಾರ್ನ್ ಎ ಕ್ರೈಮ್’ ಪುಸ್ತಕ ವಿಮರ್ಶೆ ಮಾಡುವ ಕುರಿತು ಕೊಪ್ಪಳ ತಾಲೂಕಿನಲ್ಲಿ 9, ಗಂಗಾವತಿ ತಾಲೂಕಿನಲ್ಲಿ 31, ಯಲಬುರ್ಗಾ ತಾಲೂಕಿನಲ್ಲಿ 1 ಕುಷ್ಟಗಿ ತಾಲೂಕಿನಲ್ಲಿ 6 ಒಟ್ಟಾರೆ 47 ಜನರು ಹೆಸರು ನೋಂದಣಿ ಮಾಡಿದ್ದಾರೆ.

ಪೀಲ್ ನೈಟ್ ಅವರ ‘ಶೋ ಡಾಗ್’ ಪುಸ್ತಕ ವಿಮರ್ಶೆ ಮಾಡುವ ಕುರಿತು ಕೊಪ್ಪಳ ತಾಲೂಕಿನಲ್ಲಿ 7, ಗಂಗಾವತಿ ತಾಲೂಕಿನಲ್ಲಿ 22, ಯಲಬುರ್ಗಾ ತಾಲೂಕಿನಲ್ಲಿ 0 ಕುಷ್ಟಗಿ ತಾಲೂಕಿನಲ್ಲಿ 4 ಒಟ್ಟಾರೆ 33 ಜನರು ಹೆಸರು ನೋಂದಣಿ ಮಾಡಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಮನ್ವಂತರ ಕಾರ್ಯಕ್ರಮದಡಿ ಪುಸ್ತಕ ವಿಮರ್ಶೆ ಕಳಿಸಲು ಹೆಸರು ನೋಂದಣಿ ಮಾಡಿಕೊಂಡವರು ಕೊಪ್ಪಳ ತಾಲೂಕಿನಲ್ಲಿ 931, ಗಂಗಾವತಿ ತಾಲೂಕಿನಲ್ಲಿ 1836, ಯಲಬುರ್ಗಾ ತಾಲೂಕಿನಲ್ಲಿ 337 ಹಾಗೂ ಕುಷ್ಟಗಿ ತಾಲೂಕಿನಲ್ಲಿ 2317. ಒಟ್ಟಾರೆ ಜಿಲ್ಲೆಯಲ್ಲಿ ಆಗಸ್ಟ್ 18ವರೆಗೆ 5421 ಜನರು ಹೆಸರು ನೋಂದಣಿ ಮಾಡಿದ್ದಾರೆ. ಇದುವರೆಗೂ ಬಂದಿರುವ ವಿಮರ್ಶೆಗಳು ಕೇವಲ 2,400!

ಇಲ್ಲಿಯವರೆಗೆ ಅವಧಿ ವಿಸ್ತರಿಸಿ ಅವಕಾಶ ನೀಡಲಾಗಿತ್ತು. ಈಗ ಮನ್ವಂತರದಡಿ ವಿಮರ್ಶೆ ಕಳಿಸುವ ಅವಧಿ ಮುಗಿದಿದೆ. ಬಂದಿರುವ ವಿಮರ್ಶೆಗಳಲ್ಲಿ ಪ್ರತಿ ಪುಸ್ತಕಕ್ಕೂ ಪ್ರತಿ ತಾಲೂಕಿನಿಂದ ಇಬ್ಬರ ಅತ್ಯುತ್ತಮ ವಿಮರ್ಶೆ ಆಯ್ಕೆ ಮಾಡಿ ಸಂದರ್ಶನ ನಡೆಸುವ ಮೂಲಕ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುವುದು. ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ಉದಯದ ದಿನ ಬಹುಮಾನ ವಿತರಿಸುವ ಕುರಿತು ಯೋಜಿಸಲಾಗಿದೆ. ಅಷ್ಟರೊಳಗೆ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ವರದಿ: ಬಸವರಾಜ ಕರುಗಲ್
Published by: Vijayasarthy SN
First published: September 2, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading