ಮಂಗಳೂರಿನಲ್ಲಿ ಕೃಷಿಕರಿಗೆ ಕಂಟಕವಾಗಿರುವ ಬಸವನಹುಳುಗಳ ಕಾಟ : ಆತಂಕದಲ್ಲಿ ರೈತರು

ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಹುಳುಗಳು ಇದೀಗ ಬೆಳ್ತಂಗಡಿ ತಾಲೂಕಿನ ಸುಮಾರು 250 ಎಕರೆ ಕೃಷಿಭೂಮಿಯನ್ನು ಆವರಿಸಿಕೊಂಡು ಬಿಟ್ಟಿದೆ

news18-kannada
Updated:August 27, 2020, 2:55 PM IST
ಮಂಗಳೂರಿನಲ್ಲಿ ಕೃಷಿಕರಿಗೆ ಕಂಟಕವಾಗಿರುವ ಬಸವನಹುಳುಗಳ ಕಾಟ : ಆತಂಕದಲ್ಲಿ ರೈತರು
ಬಸವನ ಹುಳುಗಳು
  • Share this:
ಮಂಗಳೂರು(ಆಗಸ್ಟ್.27): ​ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರಿಗೆ ಆಫ್ರಿಕನ್ ಜೈಂಟ್ ಎಂಬ ರಕ್ಕಸ ಹುಳುಗಳ ಕಂಟಕ ಹೆಚ್ಚಾಗಲಾರಂಭಿಸಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದ ಈ ಹುಳುಗಳು ಇದೀಗ ಇಡೀ ಜಿಲ್ಲೆಯನ್ನೇ ಆವರಿಸಲಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ನೂರಾರು ಹೆಕ್ಟೇರ್ ಕೃಷಿಭೂಮಿಗೆ ಈ ಹುಳುಗಳು ಲಗ್ಗೆ ಇಟ್ಟಿದ್ದು, ರಾತ್ರಿ ಹಗಲಾಗುವುದರೊಳಗೆ ತೋಟದ ಚಿತ್ರಣವನ್ನೇ ಬದಲಾಯಿಸಲಾರಂಭಿಸಿದೆ. ಸರಕಾರ ಕೂಡಲೇ ಈ ಹುಳುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆನ್ನುವ ಒತ್ತಾಯ ಇದೀಗ ಕೃಷಿಕರಿಂದ ಕೇಳಿ ಬರಲಾರಂಭಿಸಿದೆ.

ಮಿಡತೆಗಳ ದಾಳಿಯಿಂದ ಬಜಾವಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಇದೀಗ ತಮ್ಮ ಕೃಷಿ ಉಳಿಸಿಕೊಳ್ಳಲು ರಾತ್ರಿಪೂರ್ತಿ ಜಾಗರಣೆ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆಫ್ರಿಕನ್ ಜೈಂಟ್ ಸ್ನೈಲ್ (ಆಫ್ರಿಕನ್ ಬಸವನ ಹುಳು) ಎನ್ನುವ ರಕ್ಕಸ ಹುಳುಗಳು ಇದೀಗ ಜಿಲ್ಲೆಯ ಬಹುಪಾಲು ಕೃಷಿ ತೋಟಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಹುಳುಗಳು ಇದೀಗ ಬೆಳ್ತಂಗಡಿ ತಾಲೂಕಿನ ಸುಮಾರು 250 ಎಕರೆ ಕೃಷಿಭೂಮಿಯನ್ನು ಆವರಿಸಿಕೊಂಡು ಬಿಟ್ಟಿದೆ. ವರ್ಷದಿಂದ ವರ್ಷಕ್ಕೆ ತನ್ನ ವಂಶ ವೃದ್ಧಿಸಿಕೊಳ್ಳುತ್ತಿರುವ ಈ ಹುಳುಗಳು ಕೃಷಿಕನಿಗೆ ಕಂಟಕವಾಗಿ ಪರಿಣಮಿಸಿದೆ. ಅಡಿಕೆ ಎಲೆ, ಅಡಿಕೆಯ ಹಿಂಗಾರ, ತೆಂಗಿನ ಹಿಂಗಾರ, ತೆಂಗಿನ ಗರಿ, ತರಕಾರಿ ಗಿಡ, ಬಾಳೆ ಗಿಡ ಹೀಗೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಿರುವ ಈ ಹುಳುಗಳ ನಿಯಂತ್ರಣ ಸಾಧ್ಯವಾಗದೆ ಕೃಷಿಕ ಕಂಗಾಲಾಗಿದ್ದಾನೆ.

ರಾತ್ರಿ ವೇಳೆಯಲ್ಲಿ ತನ್ನ ಕಾರ್ಯಾಚರಣೆ ನಡೆಸುವ ಈ ಹುಳುಗಳು ಬೆಳಗಾಗುವ ವೇಳೆಗಾಗಲೇ ಕೆಲವು ಮರಗಳ ಹಿಂಗಾರ, ಎಲೆ ಎಲ್ಲವನ್ನೂ ಸ್ವಾಹ ಮಾಡಿ ಹಾಕುತ್ತಿವೆ. ಇದರಿಂದಾಗಿ ರಾತ್ರಿ ಪೂರ್ತಿ ಕೃಷಿಕರು ಜಾಗರಣೆ ಮಾಡಬೇಕಾದ ಸ್ಥಿತಿ ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ನಿರ್ಮಾಣವಾಗಿದೆ. ಬೆಳಿಗ್ಗಿನ ವೇಳೆ ಅಡಗಿಕೊಂಡಿರುವ ಈ ಹುಳಗಳು ರಾತ್ರಿ ವೇಳೆಗೆ ತಮ್ಮ ಚಟುವಟಿಕೆ ಆರಂಭಿಸುತ್ತವೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೂ ಈ ವಿಚಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಮೆಟಲ್ ಡಿ ಹೈಡ್ ಎನ್ನುವ ಹುಳುಗಳ ನಾಶಕವನ್ನು ಬಳಸುವಂತೆ ಸೂಚಿಸಿದ್ದಾರೆ. ಇದನ್ನು ಎಕರೆಗೆ 1 ಕಿಲೋದಂತೆ ಬಳಸಬೇಕಾಗಿದ್ದು, ಸಾಮಾನ್ಯ ಕೃಷಿಕ ಇಡೀ ತೋಟಕ್ಕೆ ಇದನ್ನು ಪ್ರಯೋಗಿಸಲು ಕನಿಷ್ಟ 3500 ರೂಪಾಯಿಗಳನ್ನು ವಿನಿಯೋಗಿಸಬೇಕಿದೆ. ಇದು ದಿನವೊಂದರ ಖರ್ಚಾಗಿದ್ದು, ಹುಳಗಳು ಸಂಪೂರ್ಣ ನಾಶವಾಗುವವರೆಗೂ ಪ್ರತೀ ದಿನವೂ 3500 ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇಷ್ಟೊಂದು ಹಣ ಖರ್ಚು ಮಾಡುವ ತಾಕತ್ತು ಯಾವ ಕೃಷಿಕನಲ್ಲೂ ಇಲ್ಲದ ಕಾರಣ ಸರಕಾರವೇ ಹುಳುಗಳಿಂದ ಕೃಷಿಕನನ್ನು ರಕ್ಷಿಸಬೇಕು ಎಂದು ಕೃಷಿಕರು ಒತ್ತಾಯಿಸಲಾರಂಭಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ನಟ ನಟಿಯರು, ಮ್ಯೂಸಿಕ್ ಡೈರೆಕ್ಟರ್ಸ್ ಇವರ ಗ್ರಾಹಕರು

ಸಣ್ಣದು, ದೊಡ್ಡದು ಹೀಗೆ ತೋಟಗಳೆಂಬ ತಾರತಮ್ಯ ಮಾಡದೆ ಈ ಹುಳುಗಳು ಎಲ್ಲಾ ತೋಟಗಳಿಗೂ ನುಗ್ಗಿ ಕೃಷಿ ಹಾನಿ ಮಾಡುತ್ತಿವೆ. ನಾಲ್ಕು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಹುಳುಗಳು ಇದೀಗ ಲಕ್ಷಾಂತರ ಸಂಖ್ಯೆಯಲ್ಲಿ ಒಂದೇ ತೋಟದ ಒಳಗೆ ಕಾಣ ಸಿಗುತ್ತಿದೆ. ಹುಳುಗಳ ಈ ರೀತಿಯ ಕಾಟದಿಂದ ಕೃಷಿಕ ಹೈರಾಣಗಾಗಿದ್ದು, ಸರಕಾರದ ಮಟ್ಟದಲ್ಲೇ ಇದರ ನಿಯಂತ್ರಣ ಸಾಧ್ಯ ಎನ್ನುವ ನಿರೀಕ್ಷೆಯಲ್ಲಿದ್ದಾನೆ.
ಬೆಳ್ತಂಗಡಿಯ ಕೆಲವು ತೋಟಗಳಲ್ಲಿ ಈ ಹಿಂದೆ ಕಂಡು ಬಂದಿದ್ದ ಮಿಡತೆಗಳ ಕಾಟದಿಂದ ಹೇಗಾದರೂ ತಪ್ಪಿಸಿಕೊಂಡಿದ್ದ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕನನ್ನು ಆಫ್ರಿಕನ್ ಹುಳಗಳಿಂದ ರಕ್ಷಿಸಬೇಕಿದೆ.
Published by: G Hareeshkumar
First published: August 27, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading