news18-kannada Updated:October 27, 2020, 7:17 AM IST
ಮಂಡ್ಯ ಸರ್ಕಾರಿ ನೌಕರರ ಸಂಘ
ಮಂಡ್ಯ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಈ ಹಿಂದಿನ ಅಧ್ಯಕ್ಷ ರಾಮಕೃಷ್ಣ ಎಂಬುವವರ ವಿರುದ್ಧ ಸಂಘದ ಸದಸ್ಯರ 11 ಕೋಟಿಗೂ ಹೆಚ್ಚು ಹಣವನ್ನ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಕೇಳಿಬಂದಿದೆ. ಮಂಡ್ಯ ಜಿಲ್ಲೆಯಲ್ಲಿ 2014 ರಲ್ಲಿ ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ. ಆ ವೇಳೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದ ರಾಮಕೃಷ್ಣ ಅವರೇ ಗೃಹ ನಿರ್ಮಾಣ ಸಂಘಕ್ಕೂ ಅಧ್ಯಕ್ಷರಾಗಿದ್ದರು. ಆ ವೇಳೆ ಸಂಘದ ವತಿಯಿಂದ ಮಂಡ್ಯ ತಾಲೂಕಿನ ಕೋಣನಹಳ್ಳಿ ಬಳಿಯಲ್ಲಿ ಭೂಮಿ ಖರೀದಿಸಿ ಲೇ ಔಟ್ ಅನ್ನು ನಿರ್ಮಿಸಲಾಗಿತ್ತು. ಆ ಲೇಔಟ್ನಲ್ಲಿ 318 ನಿವೇಶನಗಳಿದ್ದು ಈ ಪೈಕಿ 170 ಸೈಟ್ಗಳು ನೊಂದಣಿಯಾಗಿವೆ. 2004 ರಿಂದ2010 ರ ವರೆಗೂ ಅಧ್ಯಕ್ಷನಾಗಿದ್ದ ರಾಮಕೃಷ್ಣ ತಾನು ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದರೂ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿಯೇ ಮುಂದುವರೆದಿದ್ದರು.
ಹೀಗಿರುವಾಗಲೇ ಇದೇ ಲೇಔಟ್ ಮೇಲೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ರಸ್ತೆ ಕಾಮಗಾರಿಗಾಗಿ 1.02 ಲಕ್ಷ ಚದರ ಅಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ. ಪರಿಹಾರವಾಗಿ 11.32 ಕೋಟಿ ರೂ ಹಣವನ್ನ ಸಂಘದ ಹೆಸರಿಗೆ ಮಂಜೂರು ಮಾಡಿತ್ತು. ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷನಾಗಿಯೇ ಇದ್ದ ರಾಮಕೃಷ್ಣ ಈ 11.32 ಕೋಟಿ ರೂ ಹಣದ ಪೈಕಿ 10.56 ಕೋಟಿ ರೂಗಳನ್ನ ತನ್ನ ಹೆಸರಿನಲ್ಲಿ ಬೇರೆ ಬೇರೆ ಬ್ಯಾಂಕ್ನಲ್ಲಿ ತೆರೆಯಲಾಗಿದ್ದು ಖಾಸಗಿ ಅಕೌಂಟ್ಗೆ ಹಾಕಿಕೊಂಡು ವಂಚನೆ ಮಾಡಲು ಮುಂದಾಗಿದ್ದಾರೆಂದು ಸಂಘದ ಹಾಲಿ ಅಧ್ಯಕ್ಷ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಪ್ಪಂದಿರಿಗೂ ರಜೆ; ಕೇಂದ್ರ ಸರ್ಕಾರದಿಂದ ಚೈಲ್ಡ್ ಕೇರ್ ಲೀವ್ ಸೌಲಭ್ಯ
ಇನ್ನು, ನೂರಾರು ಜನರು ತಮ್ಮ ಹೆಸರಿನಲ್ಲಿ ನಿವೇಶನ ಖರೀದಿಸಲು ಇದೇ ಸಂಘಕ್ಕೆ 3 ರಿಂದ 4 ಲಕ್ಷದ ವರೆಗೂ ಹಣ ನೀಡಿದ್ದಾರೆ. 318 ಜನರಿಗೆ ನಿವೇಶನ ನೀಡುವುದಕ್ಕೆ ಅವಕಾಶ ಇದ್ದರೂ ಇಲ್ಲಿವರೆಗೆ 170 ನಿವೇಶನಗಳನ್ನ ನೊಂದಣಿ ಮಾಡಿಕೊಡಲಾಗಿದೆ. ಇವುಗಳಲ್ಲಿ ಕೆಲವು ನಿವೇಶನಗಳನ್ನೂ ತನಗೆ ಬೇಕಾದವರಿಗೆ ರಾಮಕೃಷ್ಣರ ಆಡಳಿತ ಅವಧಿಯಲ್ಲೇ ಮಾರಾಟ ಮಾಡಲಾಗಿದೆ. ಇದು ನಿವೇಶನ ವಂಚಿತರನ್ನ ಕೆರಳಿಸಿದೆ. ಈಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 127 ಜನರಿಗೆ ಸೇರಿರುವ 1.02 ಲಕ್ಷ ಸ್ಕ್ವೇರ್ ಫೀಟ್ ಅಡಿಯಷ್ಟು ಜಾಗವನ್ನ ಹೆದ್ದಾರಿ ಪ್ರಾಧಿಕಾರ ವಶಕ್ಕೆ ಪಡೆದುಕೊಂಡಿದೆ. ತಮ್ಮ ನಿವೇಶನಕ್ಕಾಗಿ ಹೆದ್ದಾರಿ ಪ್ರಾಧಿಕಾರಿಂದ ಮಂಜೂರಾದ ಹಣವೂ ತಮಗೆ ಸಿಗದಿದ್ದಾಗ ಅನುಮಾನಗೊಂಡ ಕೆಲವರು ಹುಡುಕಾಟ ನಡೆಸಿದಾಗ ರಾಮಕೃಷ್ಣರ ಈ ವಂಚನೆ ವಿಚಾರ ಹೊರಗೆ ಬಂದಿದೆ. ಹೀಗಾಗಿ ರಾಮಕೃಷ್ಣ ನೇತೃತ್ವದ ಆಡಳಿತ ಮಂಡಳಿಯನ್ನ ವಜಾಗೊಳಿಸಿ ಈಗಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭೂ ಗೌಡ ನೇತೃತ್ವದಲ್ಲಿ ಹೊಸದಾಗಿ ಸಂಘ ರಚಿಸಿಕೊಂಡು ರಾಮಕೃಷ್ಣನ ಎಲ್ಲಾ ವ್ಯವಹಾರಗಳನ್ನ ತಡೆಹಿಡಿಯುವಂತೆ ಬ್ಯಾಂಕ್ಗಳಿಗೂ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: Wife Murder : ಕುಡಿದ ಮತ್ತಿನಲ್ಲಿ ಕಪಾಳಮೋಕ್ಷ ; ಗಂಡನಿಂದ ಹೆಂಡತಿ ಹತ್ಯೆ
ಇಲ್ಲಿವರೆಗೆ ರಾಮಕೃಷ್ಣ 1 ಕೋಟಿಯಷ್ಟು ಹಣವನ್ನ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಘದ ಪದಾಧಿಕಾರಿಗಳು ಆತನಿಂದ ಹಣವಸೂಲಿ ಮಾಡುವ ಬಗೆಗೆ ಚಿಂತನೆ ನಡೆಸಿದ್ದಾರೆ. ಆದರೆ, ತಮಗೆ ನಿವೇಶನವೂ ಇಲ್ಲದೆ ಹೆದ್ದಾರಿ ಪ್ರಾಧಿಕಾರದಿಂದ ಬಿಡುಗಡೆಯಾಗಿರುವ ಹಣವೂ ಇಲ್ಲದೆ ನಿವೇಶನ ವಂಚಿತರು ಪರದಾಡುತ್ತಿದ್ದಾರೆ.
ಒಟ್ಟಾರೆ ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂಘದಿಂದ ಮತ್ತು ಸದಸ್ಯರಿಂದ ದೂರು ದಾಖಲಾಗಿದ್ದರೂ ತನಿಖೆ ನಡೆಸಲು ಪೊಲೀಸರು ಮೀನಮೇಷ ಎಣಿಸ್ತಿರೋದು ಮತ್ತಷ್ಟು ಅನುಮಾನ ಮೂಡಿಸಿದೆ.ಇತ್ತ ನಿವೇಶನ ವಂಚಿತರು ಈಗ ಹಣವೂ ಇಲ್ಲದೆ ಅತ್ತ ನಿವೇಶನವೂ ಇಲ್ಲದೆ ಚಿಂತೆ ಮಾಡುತ್ತಿದ್ದಾರೆ. ಇದರ ಮದ್ಯೆ ಸಂಘದ ಪದಾಧಿಕಾರಿಗಳು ಹಣ ವಂಚನೆ ಮಾಡಿರುವ ರಾಮಕೃಷ್ಣರ ಜೊತೆ ರಾಜಿ ಪಂಚಾಯ್ತಿಗೆ ಮುಂದಾಗಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.
ವರದಿ: ರಾಘವೇಂದ್ರ ಗಂಜಾಮ್
Published by:
Vijayasarthy SN
First published:
October 27, 2020, 7:17 AM IST