ಕೊರೋನಾಕ್ಕೂ ಕುಗ್ಗದ ಮಂಡ್ಯದ ಐದು ರೂಪಾಯಿ ಡಾಕ್ಟರ್ ; ಪ್ರತಿನಿತ್ಯ ನೂರಾರು ಜನರಿಗೆ ವೈದ್ಯರ ಚಿಕಿತ್ಸೆ

ಡಾ.ಶಂಕರೇಗೌಡರು ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತರಾದವರಲ್ಲ. ಜಿಲ್ಲೆ, ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಜನಪ್ರಿಯ ವೈದ್ಯರೆನಿಸಿಕೊಂಡಿದ್ದಾರೆ

ಡಾ.ಎಸ್.ಸಿ.ಶಂಕರೇಗೌಡ

ಡಾ.ಎಸ್.ಸಿ.ಶಂಕರೇಗೌಡ

  • Share this:
ಮಂಡ್ಯ(ಜುಲೈ.01): ಕೊರೋನಾ ಅಂದ್ರೆ ಪ್ರಪಂಚದ ಹಿರಿಯಣ್ಣನೂ ಕೂಡ ನಲುಗಿ ಹೋಗಿದ್ದಾನೆ. ಆದರೆ, ಸಕ್ಕರೆ ನಾಡು ಮಂಡ್ಯದಲ್ಲಿರುವ ವೈದ್ಯರೊಬ್ಬರು ಯಾವ ಕೊರೋನಾವನ್ನೂ ಲೆಕ್ಕಿಸದೆ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ನಿತ್ಯ ತಮ್ಮ ಬಳಿ ಬರುವ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ. ಅದೇ ರೀತಿ ಇಡೀ ದೇಶಕ್ಕೆ ಮಾದರಿಯಾದ ವೈದ್ಯರೊಬ್ಬರು ಸಕ್ಕರೆ ನಾಡು ಮಂಡ್ಯದಲ್ಲಿದ್ದಾರೆ. ಅವರೇ ಜನ ಮೆಚ್ಚಿದ ಮಂಡ್ಯದ ಖ್ಯಾತ ಚರ್ಮ ರೋಗ ತಜ್ಞ ಡಾ.ಎಸ್.ಸಿ.ಶಂಕರೇಗೌಡ ಅರ್ಥಾತ್ ಐದು ರೂಪಾಯಿ ಡಾಕ್ಟರ್. ಡಾ.ಶಂಕರೇಗೌಡರನ್ನ ಜನ ಪ್ರೀತಿಯಿಂದ ಕರೆಯುವುದು ಐದು ರೂಪಾಯಿ ಡಾಕ್ಟರ್ ಅಂತಾ.  ಡಾ.ಶಂಕರೇಗೌಡರು, ತಾವು ನೀಡುವ ಚಿಕಿತ್ಸೆಗೆ ಪಡೆಯೋದು ಐದು ರೂಪಾಯಿ ಮಾತ್ರ.

ಇನ್ನು ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಲ್ಲ. ಐದು ರೂಪಾಯಿಗೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇವರು ಬರೆಯುವ ಔಷಧಿಗಳು ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡುವ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗಲಿದ್ದಾರೆ.

ಡಾ.ಶಂಕರೇಗೌಡರು ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತರಾದವರಲ್ಲ. ಜಿಲ್ಲೆ, ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಜನಪ್ರಿಯ ವೈದ್ಯರೆನಿಸಿಕೊಂಡಿದ್ದಾರೆ. ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. ಇವರ ಬಳಿ ಚಿಕಿತ್ಸೆ ಪಡೆಯುವುದಕ್ಕೆ ನಿತ್ಯ ನೂರಾರು ಜನ ಸಾಲುಗಟ್ಟಿ ನಿಲುತ್ತಾರೆ.ಯಾರು ಎಂತಹ ಶ್ರೀಮಂತರೆ ಆಗಿರಲಿ ಶಿಫಾರಸು ಎನ್ನುವುದು ಇಲ್ಲವೇ ಇಲ್ಲ. ರಾಜಕಾರಣಿ, ಅಧಿಕಾರಿ, ಉದ್ಯಮಿ, ಬಡವ, ಬಲ್ಲಿದ ಎಲ್ಲರೂ ಇವರ ಬಳಿ ಸಮಾನರೇ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ, ಎಲ್ಲರಿಗೂ ಒಂದೇ ದರ. ಹೀಗಾಗಿ ಇವರ ಬಳಿ ಬರುವವರು ಹೇಳೋದು ಬಸ್ ಚಾರ್ಜ್ ತಗಲುವ ವೆಚ್ಚದಲ್ಲೇ ನಾವು ಚಿಕಿತ್ಸೆ ಪಡೆಯಬಹುದು ಅಂತಾರೆ.

ಇನ್ನು ಸಾಮಾನ್ಯವಾಗಿ ವೈದ್ಯರು ಅಂದ್ರೆ, ಸುಲಿಗೆ ಮಾಡುವವರೇ ಹೆಚ್ಚು ಎನ್ನುವ ಮಾತಿದೆ. ಆದರೆ, ಅದೆಲ್ಲದಕ್ಕೂ ಅಪವಾದ ನಮ್ಮ ಮಂಡ್ಯದ ಐದು ರೂಪಾಯಿ ಡಾಕ್ಟರ್. ವೈದ್ಯರ ಚಿಕಿತ್ಸಾ ವೆಚ್ಚ ನಿರ್ಧರಿಸುವುದಕ್ಕೆ ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಇದೆ. ಆ ದರವನ್ನೇ ಇತರೆ ವೈದ್ಯರು ನಿರ್ಧಾರ ಮಾಡುತ್ತಾರೆ. ಆದರೆ, ಐದು ರೂಪಾಯಿ ಡಾಕ್ಟರ್ ಗೆ ಐಎಂಎಯ ಹಂಗೇ ಇಲ್ಲ. ಹಲವು ಸಲ ಐಎಂಎ ಇವರ ದರ ಹೆಚ್ಚಳಕ್ಕೆ ನೀಡಿದ ಸಾಕಷ್ಟು ಸಲಹೆಗೂ ಇವರು ಕ್ಯಾರೆ ಅಂದಿಲ್ಲ. ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವಾರು ಮುಷ್ಕರ ನಡೆಸಿದ್ದಾರೆ. ಆದರೆ, ಈ ಡಾಕ್ಟರ್ ಅಂತಹ ಯಾವುದೇ ಮುಷ್ಕರದಲ್ಲಿ ಪಾಲ್ಗೊಂಡಿಲ್ಲ.

ವೈದ್ಯರಾದವರು ರೋಗಿಗಳ ಚಿಕಿತ್ಸೆ ಮಾಡಬೇಕು. ಅದನ್ನ ಮಾಡದೆ ಇರುವವರು ನಿಜವಾಗಿಯೂ ವೈದ್ಯನೇ ಅಲ್ಲ. ನಾನು ಯಾರ ಹಂಗಲ್ಲೂ ಇಲ್ಲ. ಅವರ ಮಾತು ಕೇಳುವ ಅವಶ್ಯಕತೆಯೂ ಇಲ್ಲ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಇದೇ ರೀತಿಯಲ್ಲಿ ನಾನು ಮುಂದುವರೆಯುತ್ತೇನೆ  ಎಂದು ವೈದ್ಯ ಡಾ.ಶಂಕರೇಗೌಡರು ಹೇಳುತ್ತಾರೆ.ಡಾ.ಶಂಕರೇಗೌಡರು ಬರೀ ವೈದ್ಯರಷ್ಟೇ ಅಲ್ಲ. ಯಶಸ್ವಿ ರೈತ  ಹಾಗೂ ಸಜ್ಜನಿಕೆಯ ರಾಜಕಾರಣಿ ಕೂಡ ಹೌದು. ತಮ್ಮ ಸ್ವಗ್ರಾಮ ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು, ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಕಳೆದ ಜಿಲ್ಲಾ ಪಂಚಾಯತ್ ಅವಧಿಯಲ್ಲಿ ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಚುನಾವಣೆಗೆ ಕೂಡ ಸ್ಪರ್ಧೆ ಮಾಡಿದರು. ಅಭೂತಪೂರ್ವ ಗೆಲುವು ಸಾಧಿಸಿದ್ದ ಡಾ.ಶಂಕರೇಗೌಡರು ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ಇನ್ನು ಇವರ ದೈನಂದಿನ ಚಟುವಟಿಕೆ ಕೂಡ ಡಿಫರೆಂಟ್. ಮಂಡ್ಯದ ಬಂದೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲೇ ಇವರ ವಾಸ. ಬೆಳಿಗ್ಗೆ ಎದ್ದ ಬಳಿಕ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದುವುದು. ಬಳಿಕ ಊರಿನಲ್ಲಿ ಎರಡು ಗಂಟೆ ಕಾಲ ಜಮೀನು ಕೆಲಸ. ಜಮೀನು ಕೆಲಸ ಮುಗಿದ ಬಳಿಕ, ಸ್ಥಳಕ್ಕೆ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ. ನಂತರ ಮನೆಗೆ ಬಂದು ತಿಂಡಿ ಅಥವಾ ಊಟದ ಬಳಿಕ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.

ಅಲ್ಲದೇ ಕೊರೋನಾ ಬಂದಾಗಿನಿಂದಲೂ, ಬಹುತೇಕ ಖಾಸಗಿ ಕ್ಲಿನಿಕ್ ಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಜನ ಸಾಮಾನ್ಯರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲೂ ಕೊರೋನಾ ಮಹಾಮಾರಿಗೆ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಮೊದಲು ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ಕ್ಲಿನಿಕ್ ಮಾಡಿಕೊಂಡಿದ್ದರು. ಅಲ್ಲೇ ಚಿಕಿತ್ಸೆ ಕೂಡ ನೀಡುತ್ತಿದ್ದರು.

ಇದನ್ನೂ ಓದಿ : ಮಂತ್ರಾಲಯ ಶ್ರೀ ಗುರು ರಾಘವೇಂದ್ರರ ವೃಂದಾವನ ದರ್ಶನ ಸದ್ಯಕ್ಕಿಲ್ಲ ; ಶ್ರೀಮಠದ ನಿರ್ಧಾರದಿಂದ ಭಕ್ತರಿಗೆ ನಿರಾಸೆ

ವರ್ಷದ ಹಿಂದೆ ಇವರಿಗೆ ರಸ್ತೆ ಅಪಘಾತ ಆಗಿ, ಬ್ಲಡ್ ಕೂಡ ಕ್ಲಾಟ್ ಆಗಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು, ಚಿಕಿತ್ಸೆ ನೀಡುತ್ತಿದ್ದಾರೆ. ಈಗಲೂ ಬೆಳಿಗ್ಗೆ 8ರಿಂದ 9.30ರವರೆಗೆ ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಒಟ್ಟಾರೆ, ಕೊರೋನಾ ನಡುವೆಯೂ ತಮ್ಮ ಕಾಯಕ ಮುಂದುವರಿಸಿರುವ ಡಾ.ಶಂಕರೇಗೌಡರ  ಸೇವೆಗೆ ಎಲ್ಲರ ಪ್ರಶಂಸೆ ವ್ಯಕ್ತವಾಗಿದೆ. ಇವರ ಸೇವೆ ಸದಾ ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಆಶಯ ಕೂಡ
First published: