ಚಿತ್ರದುರ್ಗ(ಏಪ್ರಿಲ್ 11): ದೇಶಾದ್ಯಂತ ಮತ್ತೆ ಕೋವಿಡ್ ಎರಡನೇ ಅಲೆ ಶುರುವಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಸ್ಪೋಟಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕೊರೋನಾ ವಿರುದ್ದ ಸಮರ ಸಾರುವುದು ಅನಿವಾರ್ಯವಾಗಿದೆ.
ಕಳೆದ ವರ್ಷ ದೇಶದ ಆರ್ಥಿಕತೆ, ಜನ ಜೀವನವನ್ನ ಅಲ್ಲೋಲ ಕಲ್ಲೋಲ ಮಾಡಿದ್ದ ಕೊರೋನಾ ಇದೀಗ ಎರಡನೆ ಅಲೆ ಮೂಲಕ ತನ್ನ ಕೆನ್ನಾಲಿಗೆ ಚಾಚುತ್ತಲಿದೆ. ಪರಿಣಾಮ ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರೆಗೆ 05-10 ಸೋಂಕಿತರ ಸಂಖ್ಯೆ ಗಡಿ ದಾಟದಂತೆ ಸುರಕ್ಷತೆ ಮೂಲಕ ಜಿಲ್ಲಾಡಳಿತ ಸುವ್ಯವಸ್ಥೆ ಕಾಪಾಡಿತ್ತು. ಆದರೇ ಇದೀಗ ಇದ್ದಕ್ಕಿದ್ದಂತೆ 45 -57 ಸಂಖ್ಯೆಗೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ. ಇದ್ರಿಂದ ಜಿಲ್ಲಾಡಳಿತಕ್ಕೆ ಮತ್ತೆ ದೊಡ್ಡ ತಲೆನೋವಾಗಿದೆ.
ಸದ್ಯ ಈಗ ಯುಗಾದಿ ಹಬ್ಬದ ಹಿನ್ನಲೆ ದೂರದ ರಾಜಧಾನಿ ಬೆಂಗಳೂರಿಗೆ ತೆರಳಿದ್ದ ಸಾವಿರಾರು ಜನರು ಮರಳಿ ತಮ್ಮ ತಮ್ನ ಊರುಗಳಿಗೆ ಬರುತ್ತಿದ್ದಾರೆ. ಅದೂ ಕೂಡ ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ ಬೆಂಗಳೂರು,ಕೇರಳ,ತಮಿಳುನಾಡು ಸಂಪರ್ಕ ಹಾಗೂ ಟ್ರಾವಲ್ ಹಿಸ್ಟರಿ ಇರುವ ಬಹುತೇಕರಿಗೆ ಸೋಂಕು ತಗುಲುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಕೊರೋನಾ ಸೋಂಕು ತಡೆಯೋ ನಿಟ್ಟಿನಲ್ಲಿ ಎಚ್ಚರ ವಹಿಸಿರೋ ಜಿಲ್ಲಾಡಳಿತ, ಹೋಟೆಲ್ಗಳಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರರಿಗೂ ಮತ್ತು ಅಡುಗೆ ತಯಾರಿಕರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಅನ್ನೂ ಸೂಚನೆ ನೀಡಿದೆ.
ಅಲ್ಲದೇ ಸ್ವತಃ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಯೋಜಿಸಿದ್ದ ಹೋಟೆಲ್ ಮಾಲೀಕರ ಸಂಘದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಜಿಲ್ಲೆಗೆ ಬರುವ ಡ್ರೈವರ್ ಮತ್ತು ಕ್ಲೀನರ್, ಪ್ರವಾಸಿಗಳಿಗೆ, ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಹೋಟೆಲ್ ಮುಂಭಾಗದಲ್ಲಿ ಸರ್ಕಾರದ ಎಸ್ಒಪಿ ಮಾರ್ಗಸೂಚಿಗಳ ಬಗ್ಗೆ ಫಲಕಗಳನ್ನು ಅಳವಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಅಲ್ಲದೇ ಹೋಟೆಲ್ಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿದ್ದರೆ ಅವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಬೇಕು ಮತ್ತು ಕೆಲಸಗಾರರರಿಗೆ 20 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಕೆಲಸಗಾರಿಗೆ ಕೆಮ್ಮು, ಜ್ವರ, ನೆಗಡಿ, ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಿ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ