ಶಿವಮೊಗ್ಗ(ಜುಲೈ.26): ರಾಜ್ಯದ ಪ್ರಮುಖ ಪಕ್ಷಿಧಾಮಗಳಲ್ಲಿ ಮಂಡಗದ್ದೆ ಕೂಡ ಒಂದು. ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಒಂದು ಕಾಲದಲ್ಲಿ ಸೆಳೆಯುತ್ತಿದ್ದ ಪಕ್ಷಿಧಾಮವಿದು. ಆದರೆ, ಕಳೆದ ಐದಾರು ವರ್ಷಗಳಿಂದ ಈ ಪಕ್ಷಿಧಾಮಕ್ಕೆ ಆಗಮಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯ ಸರ್ಕಾರ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ನಿರ್ಲಕ್ಷದಿಂದ ಪಕ್ಷಿಧಾಮ ಅಳಿವಿನಂಚಿಗೆ ಸಾಗುತ್ತಿದೆ. ಸಂತಾನೋತ್ಪತ್ತಿಗಾಗಿ ಬರುತ್ತಿರುವ ಪಕ್ಷಿಗಳು ಸಂಖ್ಯೆ ಸಹ ಕಡಿಮೆಯಾಗುತ್ತಿದೆ.
ಈ ಪಕ್ಷಿಧಾಮ ತುಂಗಾ ನದಿಯ ಮಧ್ಯದಲ್ಲಿ ಸಹ್ಯಾದ್ರಿಯ ದಟ್ಟ ಕಾನನದ ನಡುವೆ ಇದೆ. ಇದು ಸಂತಾನೋತ್ಪತ್ತಿಗಾಗಿ ಬರುವ ಸಾವಿರಾರೂ ವಿದೇಶಿ ಪಕ್ಷಿಗಳಿಗೆ ನಲೆಯೊದಗಿಸಿದೆ. ಈಗ್ರೇಟ್, ಕಾರ್ವೊರಾಂಟ್, ಜಾಲಪಾದ, ಡಾರ್ಟರ್, ಸ್ನೇಕ್ ಬರ್ಡ್ ಸೇರಿದಂತೆ ಹಲವು ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ.
ಸುತ್ತಲೂ ಹರಡಿದ ಹಿನ್ನೀರು, ದಟ್ಟ ಕಾನನದ ನಡುವೆ ಹಕ್ಕಿಗಳ ಕಲರವ ಪ್ರವಾಸಿಗರನ್ನು ಸೆಳೆಯುತ್ತದೆ. ಇಂತಹ ಪಕ್ಷಿಧಾಮ ಇರುವುದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ. ಈ ಗ್ರಾಮ ಪಕ್ಷಿಧಾಮದಿಂದಲೇ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ.
ಒಂದು ಕಾಲದಲ್ಲಿ ಪ್ರತಿ ನಿತ್ಯ ನೂರಾರು ಜನ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಪಕ್ಷಧಾಮ ವೀಕ್ಷಣೆ ಮಾಡಿ, ಪರಿಸರದ ಸೌಂದರ್ಯ ಸವಿದು ಹೋಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪಕ್ಷಿಧಾಮ ಅಳಿವಿನಂಚಿನ ಕಡೆಗೆ ಸಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಯಾವಾಗ ಗಾಜನೂರು ಬಳಿ ತುಂಗಾ ಮೇಲ್ದಂಡೆ ಯೋಜನೆಗಾಗಿ ಅಣೆಕಟ್ಟನ್ನು ಏರಿಕೆ ಮಾಡಿ ಕಟ್ಟಲಾಯಿತು. ಈ ಸಮಯದಲ್ಲಿ ಮಂಡಗದ್ದೆ ಗ್ರಾಮ ತುಂಗಾ ಹೀನ್ನಿರಿನಲ್ಲಿ ಮುಳುಗಡೆಯಾಯಿತು. ಇದೇ ವೇಳೆ ಪಕ್ಷಿಧಾಮಕ್ಕೂ ಸಹ ತುಂಗಾ ಹಿನ್ನೀರು ಹಾನಿ ಮಾಡಿತು. ಮಳೆಗಾಲದಲ್ಲಿ ಅತಿಯಾದ ಮಳೆಯಾಗಿ ಅಣೆಕಟ್ಟು ಭರ್ತಿಯಾದ ಸಮಯದಲ್ಲಿ ಮಂಡಗದ್ದೆ ಪಕ್ಷಿಧಾಮ ತೊಂದರೆಗೆ ಸಿಲುಕುತ್ತದೆ.
ತುಂಗಾ ನದಿ ತುಂಬಿ ಹರಿದರೆ, ತುಂಗಾ ನದಿಯ ನಡು ಗಡ್ಡೆಯಲ್ಲಿ ಇರುವಂತ ಮರಗಳಲ್ಲಿ ಪಕ್ಷಿಗಳು ಕಟ್ಟಿದಂತಹ ಗೂಡು ನೀರಿನಲ್ಲಿ ಮುಳುಗುತ್ತದೆ. ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಗಮಿಸಿ ಇಟ್ಟ ಮೊಟ್ಟೆ, ಮರಿಗಳು ಇದರಿಂದ ನಾಶವಾದ ನೀದರ್ಶಗಳು ಸಹ ಇವೆ. ಹೀಗಾಗಿ ವಲಸೆ ಬರುವಂತ ಪಕ್ಷಿಗಳ ಸಂಖ್ಯೆ ಸಹ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಾ ಸಾಗಿದೆ.
ಕಳೆದ ಐದಾರು ವರ್ಷಗಳಿಂದ ಪಕ್ಷಿಗಳು ಬರುವ ಪ್ರಮಾಣ ತಗ್ಗಿದೆ. ತುಂಗಾ ಮೇಲ್ದಂಡೆ ಯೋಜನೆ ಆದ ನಂತರ ಮಂಡಗದ್ದೆ ಪಕ್ಷಿಧಾಮದ ಅಭಿವೃದ್ಧಿ ಕಡೆಗೆ ಯಾರು ಗಮನ ಹರಿಸಿಲ್ಲ. ಇನ್ನು ಪಕ್ಷಿಧಾಮದ ಸುತ್ತ ಗಿಡ ಗಂಟೆಗಳು ಬೆಳೆದಿವೆ. ಪಕ್ಷಿ ವೀಕ್ಷಣೆಗೆ ಸೂಕ್ತವಾದ ಟವರ್ ಸಹ ಇಲ್ಲವಾಗಿದೆ. ನದಿಗೆ ಅಡ್ಡಲಾಗಿ ಯಾವುದೇ ತಡೆ ಗೋಡೆಗಳು ಇಲ್ಲ. ಹೀಗಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಸುರಿದು ತುಂಗಾ ನದಿ ಉಕ್ಕಿ ಹರಿದರೆ, ಇಲ್ಲಿನ ಪಕ್ಷಿ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ನದಿ ನೀರಿನ ರಭಸಕ್ಕೆ ನಡುಗಡ್ಡೆಯ ಮರಗಳಲ್ಲಿ ಕಟ್ಟಿದ ಗೂಡುಗಳು ಕೊಚ್ಚಿ ಹೋಗಿತ್ತವೆ.
ಮಂಡಗದ್ದೆಯಂತಹ ಸುಂದರ ಪರಿಸರವನ್ನು ನಂಬಿಕೊಂಡು ಸಂತಾನೋತ್ಪತ್ತಿಗಾಗಿ ಬರುತ್ತಿದ್ದ ಪಕ್ಷಿಗಳಿಗೆ ಈಗ ಇಲ್ಲಿ ಸುರಕ್ಷತೆ ಇಲ್ಲವಾಗಿದೆ. ಪಕ್ಷಿಧಾಮದ ಅಭಿವೃದ್ಧಿ ಮಾಡಿ, ನದಿಯ ಮಧ್ಯ ದೊಡ್ಡದಾದ ಕಟ್ಟೆ ಮಾಡಿ, ಮರಗಳನ್ನು ಬೆಳೆಸಿ ಪಕ್ಷಿಧಾಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.
ಹೊಸ ರಸ್ತೆ ಮಾಡಿದ 15 ದಿನಕ್ಕೆ ಪ್ಯಾಚ್ ವರ್ಕ ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಚಿವರ ಕ್ಷೇತ್ರ
ಇನ್ನು ಮುಳುಗಡೆಯಿಂದಾಗಿ ಗ್ರಾಮದ ಜನರು ಬೇರೆ ಬೇರೆ ಕಡೆ ಹೋಗಿ ನೆಲೆಸಿದ್ದಾರೆ. ಹೀಗಾಗಿ ಇಲ್ಲಿ ಪ್ರವಾಸಿಗರು ಬಂದರೂ ಉಳಿದುಕೊಳ್ಳಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ. ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಇಲ್ಲಿವೆ. ಪ್ರವಾಸಿಗರು ಸೇರಿದಂತೆ ಪೋಟೋಗ್ರಾಫಿ ಮಾಡುವಂತವರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರೆ ಅವರಿಗೂ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನಿರಾಸೆಯಾಗಿ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಮತ್ತು ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ನಿರ್ಲಕ್ಷದಿಂದ ರಾಜ್ಯದ ಪ್ರಸಿದ್ದ ಪಕ್ಷಿಧಾಮವೊಂದು ಅವನತಿಯತ್ತಾ ಸಾಗಿದೆ. ಸಾವಿರಾರು ಮೈಲು ದೂರದಿಂದ ಸಂತಾನೋತ್ಪತ್ತಿಗಾಗಿ ಆಗಮಿಸಿ ಪಕ್ಷಿಗಳು ಇಲ್ಲಿ ಬಂದು ಮುಖ ಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪಕ್ಷಿಧಾಮ ಉಳುವಿಗೆ ಸೂಕ್ತ ಕ್ರಮ ವಹಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ