HOME » NEWS » District » MAN VOLUNTARILY BECOMES CORONA WARRIOR THROUGH AWARENESS CAMPAIGN RRK SNVS

ನಿತ್ಯವೂ ಮೈಕ್ ಹಿಡಿದು ಬೀದಿಬೀದಿಯಲ್ಲಿ ಕೊರೋನಾ ಜನಜಾಗೃತಿ ಮೂಡಿಸುತ್ತಿರುವ ವೆಂಕಟೇಶ್

ಬೆಳಗ್ಗೆ ಮೈಕ್ ಹಿಡಿದು ತಮ್ಮ ಬೈಕ್​ನಲ್ಲೇ ಹೊರಡುವ ವೆಂಕಟೇಶ್, ರಾಜ್ಯ ಸರ್ಕಾರದ ಜನತಾ ಕರ್ಫ್ಯೂ ನಿಯಮಗಳು, ಕೋವಿಡ್ ನಿಯಮಗಳು, ಹಾಗು ಮುಂಜಾಗ್ರತಾ ಕ್ರಮಗಳನ್ನ ರೆಕಾರ್ಡ್ ಮಾಡಿಟ್ಟುಕೊಂಡು, ತಮ್ಮ ಮೈಕ್ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

news18-kannada
Updated:May 4, 2021, 8:57 AM IST
ನಿತ್ಯವೂ ಮೈಕ್ ಹಿಡಿದು ಬೀದಿಬೀದಿಯಲ್ಲಿ ಕೊರೋನಾ ಜನಜಾಗೃತಿ ಮೂಡಿಸುತ್ತಿರುವ ವೆಂಕಟೇಶ್
ಬಂಗಾರಪೇಟೆಯ ಎಸ್ ಪಿ ವೆಂಕಟೇಶ್
  • Share this:
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿಯೇ ವಾಸವಿರುವ ಎಸ್ ಪಿ ವೆಂಕಟೇಶ್, ಪ್ರತಿದಿನ ಭುಜಕ್ಕೆ ಮೈಕ್ ಹಾಕಿಕೊಂಡು, ಕೈಯಲ್ಲಿ ಒಂದು ಕೋಲು ಹಿಡಿದು ಓಡಾಡಿಕೊಂಡು ಜನಸಂದಣಿ ಪ್ರದೇಶದಲ್ಲಿ ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಎಸ್ ಪಿ ವೆಂಕಟೇಶ್ ಮೂಲತಃ ಗೃಹ ಬಳಕೆ ವಸ್ತುಗಳ ಮಳಿಗೆ ಮಾಲೀಕರಾಗಿದ್ದಾರೆ. ಕಳೆದ ಕೊರೊನಾ ಲಾಕ್‍ಡೌನ್ ವೇಳೆ ಆರಂಭಿಸಿರುವ ಜನಜಾಗೃತಿ ಕಾರ್ಯವನ್ನು ಇಂದಿಗೂ ಮುಂದುವರೆಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಬಂಗಾರಪೇಟೆಯಲ್ಲಿ ಹೆಚ್ಚು ಜನರು ಸೇರುವಂಥ ಪ್ರದೇಶವಾದ, ತರಕಾರಿ ಮಾರುಕಟ್ಟೆ, ಕುವೆಂಪು ವೃತ್ತ, ಬಜಾರ್ ರಸ್ತೆ, ಹೂ ಮಾರುಕಟ್ಟೆ ಹೀಗೆ ನಗರದ ಹಲವೆಡೆ ಬೈಕ್‍ನಲ್ಲಿ ತೆರಳಿ, ರಸ್ತೆಯುದ್ದಕ್ಕು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮೈಕ್ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಬಂಗಾರಪೇಟೆ ನಗರದವರೇ ಆಗಿರುವ ಎಸ್‍ಪಿ ವೆಂಕಟೇಶ್, ವ್ಯಾಪಾರಿಯಾಗಿ ಈ ಭಾಗದಲ್ಲಿ ಪರಿಚಿತರಾಗಿದ್ದು, ಕಳೆದ ಹಲವು ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕೊರೊನಾ ವೇಳೆಯಲ್ಲಿ ನಮ್ಮೂರಿಗೆ ಏನಾದರೊಂದು ಸೇವೆ ನೀಡಬೇಕು ಎನ್ನುವ ಉದ್ದೇಶದಿಂದಲೇ ಜನಜಾಗೃತಿ ಮೂಡಿಸಲು ಮುಂದಾಗಿದ್ದೇನೆ ಎಂದು ನ್ಯೂಸ್ 18 ಕನ್ನಡಕ್ಕೆ ಅವರು ತಿಳಿಸಿದ್ದಾರೆ.

ಬೆಳಗ್ಗೆ ಮೈಕ್ ಹಿಡಿದು ತಮ್ಮ ಬೈಕ್‍ನಲ್ಲೇ ಹೊರಡುವ ಇವರು, ರಾಜ್ಯ ಸರ್ಕಾರದ ಜನತಾ ಕರ್ಫ್ಯೂ ನಿಯಮಗಳು, ಕೋವಿಡ್ ನಿಯಮಗಳು, ಹಾಗು ಮುಂಜಾಗ್ರತಾ ಕ್ರಮಗಳನ್ನ ರೆಕಾರ್ಡ್ ಮಾಡಿಟ್ಟುಕೊಂಡು, ತಮ್ಮ ಮೈಕ್ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನರು ಹೆಚ್ಚಿರುವ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲೆ ತೆರಳಿ, ಬಾಯಿ ಮಾತಿನಿಂದಲೇ ದಯವಿಟ್ಟು ಅಂತರ ಕಾಪಾಡಿ, ಮಾಸ್ಕ್ ಹಾಕಿ, ಅನಗತ್ಯ ಸಂಚಾರ ಮಾಡಬೇಡಿ, ಎಲ್ಲರು ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಹೇಳುತ್ತಾ ಬೆಳಗ್ಗೆ ಮತ್ತು ಸಂಜೆ ಕೊರೊನಾ ಜಾಗೃತಿಯನ್ನ ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮವರೇ ನಮ್ಮ ಕಷ್ಟಕ್ಕೆ ಆಗೋದು.. ಕಿಮ್ಸ್​​ಗೆ ನೆರವಿನ ಹಸ್ತ ಚಾಚಿದ ಖಾಸಗಿ ಕಂಪನಿಗಳು..!

ಕೋಲಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚತ್ತಿದ್ದು, ಬಂಗಾರಪೇಟೆ ತಾಲೂಕಿನಲ್ಲೂ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕೊರೋನಾ ವಕ್ಕರಿಸಿದ್ದು, 3 ವೈದ್ಯರು ಸೇರಿ 12 ಮಂದಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡು, ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪ್ರತಿನಿತ್ಯ ತಾಲೂಕು ಆಡಳಿತ, ಪುರಸಭೆ, ಪೊಲೀಸರು ಕೊರೋನಾ ಜನಜಾಗೃತಿಯನ್ನ ಮೂಡಿಸುತ್ತಿದ್ದರೂ, ಜನರು ಗುಂಪು ಸೇರುವುದು ಮಾಸ್ಕ್ ಧರಿಸದೇ ಇರುವುದು ಕಂಡುಬರುತ್ತಲೆ ಇತ್ತು.

ಒಟ್ಟಿನಲ್ಲಿ ಕೊರೊನಾ ಜನಜಾಗೃತಿ ಮೂಡಿಸುವಲ್ಲಿ ಬಂಗಾರಪೇಟೆಯ ವೆಂಕಟೇಶ್ ಅವರು ನಿಸ್ವಾರ್ಥ ಸೇವೆ ಮಾಡುತ್ತಾ ಕೋವಿಡ್ ವಾರಿಯರ್ ಆಗಿ ಮೆಚ್ಚುಗೆ ಗಳಿಸಿದ್ದಾರೆ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಜೊತೆಗೆ ಸರ್ಕಾರದ ಸೂಚನೆಗಳನ್ನು ಪಾಲಿಸುತ್ತಾ, ಕರ್ಪ್ಯೂ ನಿಯಮಗಳನ್ನು ಉಲ್ಲಂಘನೆ ಮಾಡದೆ, ಸಹಕರಿಸಿ ಕೊರೊನಾ ಹರಡದಂತೆ ಸಹಕರಿಸಲು ವೆಂಕಟೇಶ್ ಕೋರಿದ್ದಾರೆ.

ವರದಿ: ರಘುರಾಜ್
Published by: Vijayasarthy SN
First published: May 4, 2021, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories