ಕಲಬುರಗಿ: ಆತ ತನ್ನ ಪತ್ನಿ ಮತ್ತು ಮುದ್ದಾದ ಮಗಳ ಜೊತೆ ಸುಖವಾಗಿ ಸಂಸಾರ ಮಾಡುತ್ತಿದ್ದ. ಆದರೆ ಆತನ ತಲೆಯಲ್ಲಿ ಅದೆಲ್ಲಿಂದೋ ಬಂತೋ ಅನುಮಾನದ ಪಿಶಾಚಿ. ಕಂಠಪೂರ್ತಿ ಕುಡಿದು ಮನೆಗೆ ಬಂದವ ಮಲಗಿದ್ದ ಪತ್ನಿ ಮತ್ತು ಮಗಳನ್ನ ಬಾರದ ಲೋಕಕ್ಕೆ ಕಳಿಸಿದ್ದಾನೆ. ರಕ್ತದ ಮಡುವಿನಲ್ಲಿ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ತಾಯಿ ಮತ್ತು ಮಗಳು. ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಮತ್ತೊಂದೆಡೆ ಪೊಲೀಸರಿಂದ ತಲಾಶ್.. ಅಷ್ಟಕ್ಕೂ ಇಂತಹ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ತೊಗರಿಯ ಕಣಜ ಕಲಬುರಗಿ ಜಿಲ್ಲೆ.
47 ವರ್ಷದ ಪತಿ ದಿಗಂಬರ್ ಗಾಂಜಲಿ ತನ್ನ 35 ವರ್ಷದ ಪತ್ನಿ ಜಗದೀಶ್ವರಿ ಹಾಗೂ 11 ವರ್ಷದ ಮುದ್ದಾದ ಮಗಳು ಪ್ರಿಯಾಂಕಳನ್ನು ಕೊಲೆ ಮಾಡಿದ್ದಾನೆ. ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ವಾಸವಾಗಿದ್ದ ಈ ಸುಂದರ ಕುಟುಂಬ ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಹಲವು ವರ್ಷಗಳಿಂದ ಅನ್ನೊನ್ಯವಾಗಿದ್ದ ಈ ಕುಟುಂಬದ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ.
ಪತ್ನಿಯ ಮೇಲೆ ಅನುಮಾನಪಡುತ್ತಿದ್ದ ಪತಿ!
ಪತ್ನಿ ಜಗದೀಶ್ವರಿಯನ್ನ ಪತಿ ದಿಗಂಬರ್ ಅನುಮಾನದ ದೃಷ್ಟಿಯಿಂದ ನೋಡಲಾರಂಭಿಸಿದ. ಬರುಬರುತ್ತಾ ನೀನು ಅಕ್ರಮ ಸಂಬಂಧ ಹೊಂದ್ದೀಯ ಅಂತಾ ಜಗಳ ಆಡಲು ಶುರು ಮಾಡಿದ್ದ. ಆದ್ರೆ ಕಳೆದ ತಡರಾತ್ರಿ 2.30 ಗಂಟೆಗೆ ಪತಿ ದಿಗಂಬರ್ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಹಿಗೇ ಮನೆಗೆ ಬಂದ ದಿಗಂಬರ್, ಮೊಣಚಾದ ಕಟ್ಟಿಗೆಯಿಂದ ಮಲಗಿದ್ದ ಪತ್ನಿ ಜಗದೀಶ್ವರಿ ಮತ್ತು ಮಗಳು ಪ್ರಿಯಾಂಕ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತಲೆಗೆ ಮತ್ತು ದೇಹದ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಜಗದೀಶ್ವರಿ ಮತ್ತು ಮಗಳು ಪ್ರಿಯಾಂಕ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ.
ಕಿಡಿಗೇಡಿಗಳಿಗೆ ಹೆದರಿ ವಾಸ ಬದಲಿಸಿದ್ದರು..!
ಇನ್ನೂ ದಿಗಂಬರ್ ಗಾಂಜಲಿ ಈ ಹಿಂದೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಪತ್ನಿ ಹಾಗೂ ಮಗಳೊಂದಿಗೆ ಕಲಬುರಗಿ ನಗರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಆದರೆ ಅದೊಂದು ದಿನ ಪಾನಿಪುರಿ ತಿನ್ನಲು ಅಂತಾ ಕಿಡಿಗೇಡಿಗಳ ತಂಡ ಬಂದಿತ್ತು. ಪಾನಿಪುರಿ ತಿಂದನಂತರ ಹಣ ಕೊಡದೆ ಹೋಗುತ್ತಿದ್ದಾಗ ಕಿಡಿಗೇಡಿಗಳನ್ನ ಪ್ರಶ್ನಿಸಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.. ಇದರಿಂದ ರೊಚ್ಚಿಗೆದ್ದ ದಿಗಂಬರ್, ಕಡಚಿಯಿಂದ ಕಿಡಿಗೇಡಿಗಳ ಮೇಲೆ ಹಲ್ಲೆಗೈಯ್ದಿದ್ದಾನೆ.. ಹಲ್ಲೆಯಿಂದ ಸಿಟ್ಟಿಗೆದ್ದ ಆ ಗ್ಯಾಂಗ್, ನಿನ್ನನ್ನ ಮುಗಿಸಿಬಿಡುತ್ತೇವೆ ಅಂತಾ ಧಮ್ಕಿ ಹಾಕಿದ್ದರು.
ತಾಯಿಯ ಜೊತೆ ಮಗಳ ಬರ್ಬರ ಹತ್ಯೆ
ಕಿಡಿಗೇಡಿಗಳು ಧಮ್ಕಿಯಿಂದ ಬೆದರಿದ ದಿಗಂಬರ್ ಪತ್ನಿ ಜಗದೀಶ್ವರಿ, ನಾವು ಇಲ್ಲಿ ಇರೋದು ಬೇಡ, ಸೇಡಂನಲ್ಲಿ ತವರು ಮನೆ ಇದೆ. ಅಲ್ಲಿ ಕೆಲದಿನಗಳು ಉಳಿದು ಅಲ್ಲೆ ಪಾನಿಪುರಿ ವ್ಯಾಪಾರ ಮಾಡಿದ್ರಾಯಿತು ಅಂತಾ ಎರಡು ತಿಂಗಳ ಹಿಂದೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಹೀಗೆ ಕಲಬುರಗಿ ನಗರದಿಂದ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಗೆ ಶಿಫ್ಟ್ ಆದ ನಂತರ ಸ್ವಂತದ್ದು ಪಾನಿಪುರಿ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಕಂಠಪೂರ್ತಿ ಕುಡಿದು ಬಂದು ಪತ್ನಿಯಲ್ಲದೇ ಏನು ಅರಿಯದ ಮುದ್ದಾದ ಮಗಳನ್ನ ಸಹ ತನ್ನ ಸಿಟ್ಟಿಗೆ ಬಲಿ ಪಡೆದಿದ್ದಾನೆ. ಇನ್ನೂ ಘಟನೆ ನಂತರ ಸೇಡಂ ಪೊಲೀಸರು ಆರೋಪಿ ದಿಗಂಬರ್ನನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Man Sets Wifes Lover Ablaze: ಹೆಂಡತಿ ಜೊತೆ ಅಕ್ರಮ ಸಂಬಂಧ; ರೊಚ್ಚಿಗೆದ್ದು ಲವರ್ಗೆ ಗತಿ ಕಾಣಿಸಿದ ಗಂಡ!
ಅದೆನೇ ಇರಲಿ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಪತಿ ಕೃಷ್ಣನ ಜನ್ಮಸ್ಥಾನಕ್ಕೆ ಹೋದರೆ, ಅನುಮಾನದ ಪಿಶಾಚಿಗೆ ಬಲಿಯಾಗಿ ಪತ್ನಿ ಮತ್ತು ಮುದ್ದಾದ ಮಗಳು ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ದುರಂತವೇ ಸರಿ. ಇನ್ನು ಪತ್ನಿ ಮತ್ತು ಮಗಳನ್ನ ಹತ್ತೆಗೈಯ್ದ ದಿಗಂಬರ್ಗೆ ಕಠಿಣ ಶಿಕ್ಷೆ ನೀಡಬೇಕು ಅಂತಾ ಕುಟುಂಬಸ್ಥರ ಆಗ್ರಹವಾಗಿದೆ.
ವರದಿ: ಅರುಣ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ