Love-murder & suicide: 8 ವರ್ಷ ಪ್ರೀತಿಸಿ ಮದುವೆಗೆ ಒಲ್ಲೆ ಎಂದವಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಲವರ್​​​

ವಾರದ ಹಿಂದಷ್ಟೆ ಸೌಮ್ಯಳ ನಿಶ್ಚಿತಾರ್ಥ ನಡೆದೆ ಹೋಯ್ತು. ಸಂದೇಶ್ ಗೆ ಇದ್ಯಾವುದರ ಅರಿವೂ ಇರಲಿಲ್ಲ. ಈ ನಡುವೆ ಸಂದೇಶ್ ಮನೆಗೆ ಕಾಲ್ ಮಾಡಿ ಮಗನನ್ನು ಮದುವೆ ಆಗಲ್ಲ ಎಂದು ತಾಯಿಯ ಬಳಿಯೇ ಹೇಳಿಬಿಟ್ಟಿದ್ದಳಂತೆ. ಸಂದೇಶ್ ನಂಬರ್ ಕೂಡಾ ಬ್ಲಾಕ್ ಆಯ್ತು. ಅವನಿಗೆ ದಿಕ್ಕೇ ತೋಚದಂತಾಯ್ತು.

ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂದೇಶ್

ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂದೇಶ್

  • Share this:
ಉಡುಪಿ: ಅವನೊಬ್ಬ ಪಾಗಲ್ ಪ್ರೇಮಿ. ಅವಳು ಇಲ್ಲಾಂದ್ರೆ ಬದುಕೊಲ್ಲ ಅನ್ನೋವಷ್ಟರ ಮಟ್ಟಿಗೆ ಆಕೆ ಮೇಲೆ ಪ್ರೀತಿ ಆತನಿಗೆ.‌ ಅದು ಒಂದೆರಡು ತಿಂಗಳ ಪ್ರೀತಿ ಅಲ್ಲ. ಎಂಟು ವರ್ಷಗಳ ಸುದೀರ್ಘ ಪ್ರೀತಿ. ಆದ್ರೆ ಅದ್ಯಾವಾಗ ಆಕೆ ಪ್ರೀತಿಗೆ ಎಳ್ಳು ನೀರು‌ ಬಿಟ್ಟು ಬೇರೆ ಮದುವೆ ನಿರ್ಧಾರ ಮಾಡಿದ್ಲೋ ಆಗ್ಲೆ‌ ನೋಡಿ ಆತ ಪಾಗಲ್ ಆಗಿ ಕೆಟ್ಟ ನಿರ್ಧಾರ ಕೈಗೊಂಡೇ ಬಿಟ್ಟ.‌  ಪ್ರೀತಿ ಕುರುಡು ಅಂತಾರೆ ಆದ್ರೆ ಕುರುಡು ಪ್ರೀತಿ ಜೀವಗಳೆರಡನ್ನ ಬಲಿ‌‌ತೆಗೆದುಕೊಳ್ಳೋವಷ್ಟರ ಮಟ್ಟಿಗೆ ಇದೆಯಂದ್ರೆ ಏನು ಹೇಳ್ಬೇಕು ಹೇಳಿ.  ಪ್ರಜ್ಞಾವಂತರ ನಗರ ಉಡುಪಿಯಲ್ಲಿ ಜನರೇ ಪ್ರಜ್ಞೆ ತಪ್ಪಿ ಬೀಳುವಂತಹಾ ಘಟನೆ ನಡೆದಿದೆ.

ಉಡುಪಿಯಲ್ಲಿ ಆ ಸಂಜೆ  ಅಷ್ಟಮಿಯ ಸಂಭ್ರಮ, ಎಲ್ಲಿ ನೋಡಿದರೂ ಕೃಷ್ಣ ಜಪದ ಕಲರವ, ಮಠದ ಪರಿಸರದಿಂದ ಹೆಚ್ಚೇನೂ ದೂರವಲ್ಲದ ಅಂಬಾಗಿಲು ಪರಿಸರದಲ್ಲಿ ಹಾಡುಹಗಲೇ ಹೀಗೊಂದು ದಾರುಣ ಘಟನೆ ನಡೆಯಬಹುದೆಂದು ಯಾರೂ ಊಹಿಸಿರಲಿಲ್ಲ, ಎಲ್ಲರೂ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ಹೊತ್ತು! ಆ ಹುಡುಗಿಯೂ ಡ್ಯೂಟಿ ಮುಗಿಸಿ ಹೊಸ ಡಿಯೋ ಗಾಡಿಯಲ್ಲಿ ಮನೆಯ ದಾರಿ ಹಿಡಿದಿದ್ದಳು. ಒಂದೆರಡು ಕಿಮೀ ದಾಟಿದರೆ ಮನೆ, ಆದರೆ ಯಮರಾಯ, ಪ್ರೇಮಿಯ ರೂಪದಲ್ಲಿ ಅಲ್ಲೇ ಕಾಯುತ್ತಿದ್ದ, ಉಡುಪಿ ಸಂತೆಕಟ್ಟೆ ಪರಿಸರದ ರೋಬೋ ಸಾಫ್ಟ್ ಕಂಪೆನಿಯಿಂದ ಸ್ವಲ್ಪವೇ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಹೀಗೆ ಯುವಜೋಡಿ ರಕ್ತದ ಮಡುವಲ್ಲಿ ಬಿದ್ದು ಒದ್ದಾಡಿದ್ದು ನೋಡಿ ಜನತೆ ಬೆಚ್ಚಿಬಿದ್ದಿದ್ದಾರೆ.

ಆಕೆಯ ಹೆಸರು ಸೌಮ್ಯಶ್ರೀ, ವಯಸ್ಸು  28. ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಡಾಟಾ ಎಂಟ್ರಿ ಮಾಡುತ್ತಿದ್ದವಳು, ಕೆಲಸ ಮುಗಿಸಿ ಬರುವಾಗ ಆಕೆಯ ಪ್ರೇಮಿ  ಸಂದೇಶ್ ಕುಲಾಲ್ ಬೈಕ್ ನಲ್ಲಿ ಬಂದು ಅಡ್ಡಗಟ್ಟಿದ್ದಾನೆ. ಹೈವೇ ಬದಿಯಲ್ಲಿದ್ದ ಲಾರಿಯ ಮರೆಯಲ್ಲಿ ಇಬ್ಬರ ನಡುವೆ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಿದೆ. ಇದ್ದಕ್ಕಿದ್ದಂತೆ ವ್ಯಗ್ರನಾದ ಸಂದೇಶ್ ಕುಲಾಲ್ ಚಾಕು ತೆಗೆದಿದ್ದಾನೆ. ಆಕೆ ಗಾಬರಿಯಿಂದ ಓಡಲು ಯತ್ನಿಸಿದಾಗ ನಶೆ ಏರಿದವರಂತೆ, ಪದೇ ಪದೇ ಆಕೆಯ ಕತ್ತಿಗೆ ಇರಿಯಲಾರಂಭಿಸಿದ್ದಾನೆ.

ಒಂದಲ್ಲ, ಎರಡಲ್ಲ ಮೂರಲ್ಲ 18 ಬಾರಿ ಇರಿತ! ಒಂದೊಂದು ಇರಿತಕ್ಕೂ ಆ ಎಳೆಯ ದೇಹದಿಂದ ರಕ್ತ ಚಿಮ್ಮುತ್ತಿದ್ದರೆ, ಆತ ಸೈಕೋಪಾತ್ ನಂತೆ ಇರಿತ ಮುಂದುವರಿಸಿದ್ದ. ಅವಳು ಕುಸಿದು ಬೀಳುತ್ತಿದ್ದಂತೆ, ತನ್ನ ಕತ್ತನ್ನು ತಾನೇ ಸೀಳಿಕೊಂಡುಬಿಟ್ಟ, ಅಬ್ಬಾ ಇಷ್ಟೊಂದು ಕ್ರೂರವಾಗಿ ಸಾಯಿಸಲು ಅಥವಾ ಸಾಯಲು ಸಾಧ್ಯವಿದೆಯೇ ಹೇಳಿ, ನೋಡುತ್ತಿದ್ದ ಜನರಿಗೆ ಹತ್ತಿರ ಹೋಗಲು ಭಯ! ತುಂತುರು ಮಳೆಯ ನಡುವೆ ನೆಲಕ್ಕೆ ಬಿದ್ದ ರಕ್ತ ಸುತ್ತಲೂ ಭೂಮಿಯನ್ನು ಕೆಂಪು ಮಾಡಿತ್ತು. ಸುತ್ತಲೂ ನೂರಾರು ಜನ ಸೇರಿದ್ದರು. ಬಿದ್ದವರನ್ನು ಎತ್ತಿ ಆಸ್ಪತ್ರೆಗೆ ಕಳಿಸೋಣವೆಂದರೆ, ಯಾವ ವಾಹನವೂ ನಿಲ್ಲಿಸಲಿಲ್ಲ. ವಾಹನ ಇದ್ದವರೂ ಅದರಲ್ಲೂ ರಿಕ್ಷಾ ಚಾಲಕರು ಮನಸ್ಸು ಮಾಡಿಲ್ಲ. ಇನ್ನು ಕೆಲವರು ನಿಲ್ಲಿಸಿದರೂ ಹತ್ತಿರಕ್ಕೂ ಸುಳಿಯಲಿಲ್ಲ.

ಕೊನೆಗೂ ಸತ್ತಂತಿದ್ದ ಹುಡುಗಿಯನ್ನು ಆಂಬುಲೆನ್ಸ್  ಹತ್ತಿಸಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಯ್ತು. ಆ ಹುಡುಗನ ಮೈ ಬಿಸಿಯಾಗಿತ್ತು. ಬದುಕಿಯಾನು ಎಂಬ ಆಸೆಯಿಂದ ಆತನನ್ನೂ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯ್ತು. ಆದರೆ ಯುವತಿ ಅಂದೇ ಸಾವನ್ನಪ್ಪಿದರೆ ಯುವಕ ಮರುದಿನ ಸಾವನ್ನಪ್ಪಿದ್ದ.

ಇಂತಹಾ ಸಾವು ನಡೆದಾಗಲೆಲ್ಲಾ ಅಲ್ಲೊಂದು ವನ್ ಸೈಡ್ ಲವ್ ಸ್ಟೋರಿ ಇರೋದು ಮಾಮೂಲು. ಆದರೆ ಇಲ್ಲಿ ಹಾಗಲ್ಲ, ಇದು ಬೋತ್ ಸೈಡ್ ಲವ್ ಸ್ಟೋರಿ. ತೆಂಕನಿಡಿಯೂರಿನ ಕಾಲೇಜಿನಲ್ಲಿ ಅರಳಿದ ಪ್ರೇಮಕಥೆ ಅದು. ಇಬ್ಬರೂ ಡಿಗ್ರಿ ಮಾಡುವಾಗಿನಿಂದಲೇ ಹುಟ್ಟಿಕೊಂಡ ಪ್ರೀತಿ. ಎಂಟು ವರ್ಷ ಕಳೆದರೂ ಮದುವೆಯಾಗುವ ಭರವಸೆಯೊಂದಿಗೆ ಆ ಪ್ರೀತಿ ಜೀವಂತವಾಗಿತ್ತು. ಸಂದೇಶ್ ಕುಲಾಲ್   ಒಬ್ಬ ಮುಗ್ದ ಹುಡುಗ. ಯಾವ ತಂಟೆ ತಕರಾರು ಮಾಡಿಕೊಳ್ಳದ ಅಪ್ಪಟ ಪ್ರೇಮಿ. ತನ್ನ ಲವ್ವರ್ ಸೌಮ್ಯಶ್ರೀ ಬಗ್ಗೆ ಮಾತ್ರ ಇನ್ನಿಲ್ಲದಷ್ಟು ಪೊಸೆಸಿವ್. ಡಿಗ್ರಿ ಮುಗಿದ ನಂತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದವ, ನಂತರ ನಗರದ ಹೋಲ್ ಸೇಲ್ ಮೆಡಿಕಲ್ ಶಾಪ್ ವೊಂದರಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ.

ನಗರದ ಹೊರವಲಯದಲ್ಲಿರುವ ಅಲೆವೂರು ಗ್ರಾಮದ ರಾಮಪುರದ ನಿವಾಸಿ. ಒಬ್ಬ ಅಣ್ಣ, ಮತ್ತೊಬ್ಬ ಅಕ್ಕ ಇದ್ದು, ತಕ್ಕಮಟ್ಟಿಗೆ ದುಡಿದುಕೊಂಡು ನೆಮ್ಮದಿಯಾಗಿದ್ದ. ಇನ್ನು ತನ್ನ ಪ್ರೀತಿ ಉಳಿಸಲು ಪ್ರಾಣ ಕೂಡ ಬಿಡಲು ರೆಡಿಯಾಗಿದ್ದ ಎರಡು ವರ್ಷಗಳ ಹಿಂದೆ ಮನೆಯಲ್ಲಿ ಆಕಯನ್ನ‌ ಮದುವೆಯಾಗದಿದ್ದರೆ ಸಾಯುತ್ತೇನೆ ಎಂದೂ ಹೇಳಿದ್ದ ಇದಕ್ಕೆ ಸಂದೇಶ್  ಮನೆಯವರು ಒಪ್ಪಿದ್ರು ಕೂಡ ಹುಡುಗಿ‌ ಮನೆಯಲ್ಲೂ ಓಕೆ ಆಗಿತ್ತು.‌ ಇನ್ನು  ಸೌಮ್ಯಶ್ರೀ ಕೂಡ ಇಬ್ಬರು ಅಣ್ಣಂದಿರ ಮುದ್ದಿನ ತಂಗಿ. ಸಹೋದರರಿಬ್ಬರೂ ದುಬೈನಲ್ಲಿ ದುಡಿಮೆ. ತಂದೆ ಸೈಕಲ್ ಶಾಪ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಡಿಗ್ರಿ ಮುಗಿದ ನಂತರ ಈಕೆ ಸೊಸೈಟಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಡಾಟಾ ಎಂಟ್ರಿ ಮಾಡುವ ಡ್ಯೂಟಿಗೆ ಜಾಯಿನ್ ಆಗಿದ್ದಳು. ಸಾಯುವ ದಿನ ಅದೇ ಕೆಲಸ ಮುಗಿಸಿ ಮನೆಯ ಹಾದಿ ಹಿಡಿದಿದ್ದಳು.

ತೆಂಕನಿಡಿಯೂರು ಕಾಲೇಜಿನಲ್ಲಿ ಕಲಿಯುವಾಗಲೇ ಶುರುವಾದ ಇವರ ಪ್ರೇಮಕಥೆ ಎಲ್ಲಾ ಸಹಪಾಠಿಗಳಿಗೂ ಗೊತ್ತಿತ್ತು. ವರ್ಷಗಳು ಕಳೆದಂತೆ ಮನೆಯವರಿಗೂ ಗೊತ್ತಾಯ್ತು. ಇಬ್ಬರದ್ದೂ ಬೇರೆ ಬೇರೆ ಜಾತಿ. ಇವರ ಮದುವೆಗೆ ಮೊದಲು ಅಡ್ಡಿಯಾಗಿದ್ದೇ ಜಾತಿ. ಸಂದೇಶ್ ಮನೆಯಲ್ಲಿ ಸದ್ಯ ಮದುವೆ ಬೇಡ ಎಂದಿದ್ದರು. ಮದುವೆ ಆಗದಿದ್ದರೆ ಸಾಯ್ತೇನೆ ಎಂದು ಎರಡು ವರ್ಷಗಳ ಹಿಂದೆಯೇ ಸಂದೇಶ್ ಅಕ್ಕನ ಬಳಿ ಹೇಳಿದ್ದ. ಈ ಕಡೆ ಸೌಮ್ಯಶ್ರೀ ಮನೆಯಲ್ಲೂ ವಿರೋಧವಿತ್ತು. ಸೌಮ್ಯಳ ತಾಯಿ ಸವಿತಾ ಸಮಾಜದಲ್ಲಿ ಸಕ್ರಿಯವಾಗಿದ್ದ ಮಹಿಳೆ. ಹಾಗಾಗಿ ಅನ್ಯಜಾತಿಯ ವಿವಾಹ ಮೊದಲು ಪಥ್ಯವಾಗಲಿಲ್ಲ. ಆದರೆ ಮಗಳ ಮೇಲಿನ ಮಮತೆಯಿಂದ ಒಪ್ಪಿ ಹುಡುಗನ ಮನೆಗೆ ಹೋಗಿ ಮಾತುಕತೆಯನ್ನೂ ನಡೆಸಲಾಗಿತ್ತು.

ಸಂದೇಶನ ಅಣ್ಣನ ಮದುವೆ ಆಗ್ತಿದ್ದಂತೆ ಇವರ ಮದುವೆ ಮಾಡಿಸುವ ಎಲ್ಲಾ ಸಾಧ್ಯತೆಯೂ ಇತ್ತು. ಹೀಗಿದ್ದೂ ಪ್ರೇಮಿಗಳು ದುರಂತ ಸಾವು ಕಾಣೂವಂತಾಯ್ತು. ಸೌಮ್ಯಶ್ರೀ ಮನೆಯವರು ಒಪ್ಪಿಗೆ ಏನೋ ಕೊಟ್ಟಿದ್ದರು. ಆದರೆ ಒಳಗೊಳಗೇ ಈ ಮದುವೆ ಸಮ್ಮತ ಇರಲಿಲ್ಲ. ಆಕೆಯ ತಂದೆಗೆ ಈಗಾಗಲೇ ಮೂರು ಬಾರಿ ಹಾರ್ಟ್ ಅಟ್ಯಾಕ್ ಆಗಿತ್ತು. ಮತ್ತೊಂದು ಆಘಾತ ಎದುರಿಸುವ ಸ್ಥಿತಿಯಲ್ಲಿ ಅವರೂ ಇರಲಿಲ್ಲ. ಅಣ್ಣನ ಮದುವೆಯಾಗದೆ ತಾನು ಮದುವೆ ಆಗಲ್ಲ ಎಂದು ಸಂದೇಶ್ ಪಟ್ಟು ಹಿಡಿದಿದ್ದ. ಇತ್ತೀಚೆಗೆ ಅಣ್ಣನ ಎಂಗೇಜ್ ಮೆಂಟ್ ಕೂಡಾ ನಡೆದಿತ್ತು. ಆದರೆ ಸೌಮ್ಯಳ ಮನೆಯಲ್ಲಿ ಮದುವೆಗೆ ಭಾರೀ ಅವಸರವಿತ್ತು. ಅದೇನಾಯ್ತೋ ಗೊತ್ತಿಲ್ಲ, ಸೌಮ್ಯ ಮನೆಯವರು ಒಂದು ಕಠಿಣ ನಿರ್ಧಾರಕ್ಕೆ ಬಂದರು. ಆಕೆಗೆ ಮಂಗಳೂರಿನ ಸೆಲೂನ್ ವೊಂದರ ಮಾಲೀಕನ ಜೊತೆ ಮದುವೆ ನಿಶ್ಚಯ ಮಾಡಿದರು.

ವಾರದ ಹಿಂದಷ್ಟೆ ಸೌಮ್ಯಳ ನಿಶ್ಚಿತಾರ್ಥ ನಡೆದೆ ಹೋಯ್ತು. ಸಂದೇಶ್ ಗೆ ಇದ್ಯಾವುದರ ಅರಿವೂ ಇರಲಿಲ್ಲ. ಈ ನಡುವೆ ಸಂದೇಶ್ ಮನೆಗೆ ಕಾಲ್ ಮಾಡಿ ಮಗನನ್ನು ಮದುವೆ ಆಗಲ್ಲ ಎಂದು ತಾಯಿಯ ಬಳಿಯೇ ಹೇಳಿಬಿಟ್ಟಿದ್ದಳಂತೆ. ಸಂದೇಶ್ ನಂಬರ್ ಕೂಡಾ ಬ್ಲಾಕ್ ಆಯ್ತು. ಅವನಿಗೆ ದಿಕ್ಕೇ ತೋಚದಂತಾಯ್ತು. ಹದಗೆಡುತ್ತಿದ್ದ ಅಪ್ಪನ ಆರೋಗ್ಯ ಸ್ಥಿತಿ ಗಮನಿಸಿಯೇ ಸೌಮ್ಯಶ್ರೀ ಮದುವೆಯ ನಿರ್ಧಾರಕ್ಕೆ ಬಂದಿರಬೇಕು, ಇನ್ನೊಂದೆಡೆ ಅಣ್ಣನ ಮೇಲಿನ ಪ್ರೀತಿಯಿಂದ ಸಂದೇಶ್ ಮದುವೆ ಮುಂದೂಡುತ್ತಾ ಬಂದಿದ್ದ. ಮನೆಯವರ ಮೇಲಿನ ಪ್ರೀತಿಗೆ ಇಬ್ಬರಿಗೂ ಪ್ರೇಮ ವಂಚನೆಯಾಗಿತ್ತು. ಆ ಒಂದು ಕೆಟ್ಟ ಗಳಿಗೆಯಲ್ಲಿ ಎಲ್ಲವೂ ಮುಗಿದೇ ಹೋಗಿತ್ತು.

ಇದನ್ನೂ ಓದಿ: Extra Marital Affair: ಪಾಪಪ್ರಜ್ಞೆ ಕಾಡುತ್ತಿದೆ.. ಅಕ್ರಮ ಸಂಬಂಧ ಸಾಕು ಎಂದ ವಿವಾಹಿತೆಯ ಬರ್ಬರ ಕೊಲೆ!

ಪ್ರಿಯತಮೆಯನ್ನು 18 ಬಾರಿ ಇರಿದು 22 ಕಡೆಗಳಲ್ಲಿ ಗಾಯಗೊಳಿಸಿದ್ದರಿಂದ ಆಕೆ ಬಹುತೇಖ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು.ಇರಿತಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಸತ್ತಿದ್ದಳು. ಅವಳಿಗಿಂತ ನಾಲ್ಕಾರು ಗಂಟೆ ಹೆಚ್ಚು ಉಸಿರಾಡಿದರೂ ಸಂದೇಶ್ ಜೀವಾನೂ ಉಳಿಯಲಿಲ್ಲ, ಮಂಗಳವಾರ ಬೆಳಿಗ್ಗೆ ಆತನೂ ಬಲಿಯಾಗಿದ್ದಾನೆ. ಎರಡೂ ಕುಟುಂಬಗಳಿಗೆ ಈ ದುರಂತವನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಪ್ರಿಯತಮೆಯನ್ನು ಕೊಂದು ತಾನೂ ಸಾಯೋದು ಸಂದೇಶ್ ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಆಕೆ ಎಂಗೇಜ್ಮೆಂಟ್ ಆದ ವಿಚಾರ,ಅವನಿಗೆ ತಡವಾಗಿ ಗೊತ್ತಾಗಿದೆ. ಗೊತ್ತಾದಾಗ ಶಾಕ್ ಆಗಿದೆ. ಇತ್ತೀಚೆಗೆ ಆಕೆ ತನ್ನನ್ನು ದೂರ ಮಾಡುವಾಗಲೇ ಡೌಟ್ ಬಂದಿತ್ತು. ಮನೆಯಲ್ಲೂ ಈ ಬಗ್ಗೆ ಹೇಳಿಕೊಂಡಿದ್ದ, ಆದ್ದಾಯ್ತು ಬಿಡು, ನಿನಗೆ ಬೇರೆ ದುವೆ ಮಾಡೋಣ ಎಂದಿದ್ದರು.

ಮೊದಲೇ ಸೌಮ್ಯಳ ಬಗ್ಗೆ ಪೊಸೆಸಿವ್ ಬೇರೆ, ತಾನು ಮದುವೆಯಾಗಬೇಕಾದ ಹುಡುಗಿ ಹೀಗೆ ಅನಾಮತ್ತಾಗಿ ಹೇಳದೆ ಮದುವೆ ಮುಂದಾಗಿರೋದು ಗೊತ್ತಾದಾಗ ಭೂಮಿ ಕುಸಿದೇ ಹೋಗಿದೆ.ಕೆಲಸಕ್ಕೂ ಹೋಗಲೂ ಮನಸ್ಸಿಲ್ಲದೆ, ವಿಲವಿಲ ಒದ್ದಾಡಿದ್ದಾನೆ. ತಾನು ಕೆಲಸ ಮಾಡುವ ಮೆಡಿಕಲ್ ಕಂಪೆನಿಯಲ್ಲಿ ಮೂರು ದಿನ ರಜೆ ತೆಗೆದುಕೊಂಡಿದ್ದ ಸಂದೇಶ್ ಚಿಕ್ಕಮಗಳೂರಿಗೆ ಹೋಗೋದಾಗಿ ಹೇಳಿದ್ದ. ಆಫೀಸಿನ ಬೈಕ್ ನಲ್ಲೇ ಓಡಾಡಿಕೊಂಡಿದ್ದ. ಕೊಲೆಗೆ ಪ್ಲಾನ್ ಮೊದಲೇ ಮಾಡಿದ್ದ, ತರಕಾರಿ ಕೊಚ್ಚುವ ಶಾರ್ಪ್ ಚೂರಿ ಖರೀದಿ ಮಾಡಿದ್ದ. ಯಾವುದೇ ದುಶ್ಚಟವಿಲ್ಲದ ಹುಡುಗ, ಆದ್ರೆ ಪ್ರೀತಿ ಎಂಬ ಅಮಲು ಈ ಪ್ರೀತಿಯನ್ನೇ ಅಂತ್ಯಗೊಳಿಸಿದೆ.

ಮನೆಯಲ್ಲಿ ಊಟವನ್ನೂ ಮಾಡದೆ ಕೊಲ್ಲೂರಿಗೆ ಹೋಗೋದಾಗಿ ಹೇಳಿದ್ದ. ಸೌಮ್ಯ ಕೆಲಸ ಮುಗಿಸಿ ಬರೋದನ್ನೇ ಕಾಯುತ್ತಿದ್ದ, ಅವಳನ್ನು ಕಂಡವನೇ ಹುಚ್ಚನಂತಾಗಿ ವಾಗ್ವಾದಕ್ಕಿಳಿದಿದ್ದ. ಕೊನೆಗೂ ಆಕೆಯನ್ನು ಕೊಂದು ತಾನೂ ಸತ್ತು ಹೋದ. ನಗರ ಪೊಲೀಸರು ಸ್ಥಳಕ್ಕೆ ಬರುವಾಗ ಎಲ್ಲಾ ಕಥೆ ಮುಗಿದಿತ್ತು. ಆತನ ಮೇಲೊಂದು ಕೊಲೆ ಕೇಸ್, ಆತ ಸತ್ತ ನಂತರ ಮತ್ತೊಂದು ಸುಸೈಡ್ ಕೇಸ್. ಒಟ್ಟಾರೆ ಪಾಗಲ್ ಪ್ರೇಮಿ ಸ್ವಲ್ಪವಾದರೂ ತಾಳ್ಮೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ. ಮದುವೆಯಾರೂ ಆಗದಿದ್ದರೂ ಸುಖವಾಗಿ ಬದುಕಲು ನೂರು ಅವಕಾಶ ಇತ್ತು. ಹೀಗೆ ಅನಾಮತ್ತಾಗಿ ರಸ್ತೆಬದಿಯಲ್ಲಿ ಎರಡು ಯುವ ಹೃದಯಗಳು ಒಡ್ಡಾಡಿ ಸತ್ತಿರುವುದು ವಿಪರ್ಯಾಸವೇ ಸರಿ..
Published by:Kavya V
First published: