ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲ್ಯಾಕ್​ಮೇಲ್, ಬಾರಿ ಬಾರಿ ಅತ್ಯಾಚಾರ: ಮಂಡ್ಯದ ವ್ಯಕ್ತಿ ಬಂಧನ

ಮತ್ತುಬರುವ ಔಷಧ ಬೆರೆಸಿದ ಕೇಕ್ ತಿನಿಸಿ ಅತ್ಯಾಚಾರ ಎಸಗಿ ಅಶ್ಲೀಲ ದೃಶ್ಯ ಚಿತ್ರೀಕರಿಸಿ ಬ್ಲ್ಯಾಕ್​​ಮೇಲ್ ಮಾಡಿದ್ದಾನೆ. ಹಣ ವಸೂಲಿ ಜೊತೆಗೆ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾನೆ. ಯುವತಿ ನೀಡಿದ ದೂರಿನ ಮೇಲೆ ಮಳವಳ್ಳಿ ಮೂಲದ ಆರೋಪಿ ಸಾಗರ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಡಿ. 25): ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನ ರೇಪ್ ಮಾಡಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ, ಹಾಗೂ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಆನ್​ಲೈನ್ ಫೂಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸಾಗರ್ ಗೌಡ ಬಂಧಿತನಾಗಿರುವ ಆರೋಪಿಯಾಗಿದ್ದಾನೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, 2018, ಸೆಪ್ಟೆಂಬರ್​ನಲ್ಲಿ ಆಕೆಯ ಸಂಬಂಧಿಕರೊಬ್ಬರ ಬರ್ತಡೇ ಪಾರ್ಟಿಯಲ್ಲಿ ಆರೋಪಿ ಸಾಗರ್ ಗೌಡನ ಪರಿಚಯ ಆಗಿರುತ್ತದೆ. ಈಕೆಯ ನಂಬರ್ ಪಡೆದು ವಿನಾಕಾರಣ ಮೆಸೇಜ್​ಗಳನ್ನ ಕಳುಹಿಸುತ್ತಿರುತ್ತಾನೆ. 2019, ಆಗಸ್ಟ್ 10ರಂದು ಆಕೆ ತನಗೆ ಉದ್ಯೋಗ ಹೋಗಿರುವ ವಿಚರವನ್ನು ಆತನಿಗೆ ತಿಳಿಸಿದ್ದಾಳೆ. ಎರಡು ದಿನದ ಬಳಿಕ ಆತ ರೆಸ್ಯೂಮ್ ಸಮೇತ ನಾಯಂಡಹಳ್ಳಿ ಬಸ್ ನಿಲ್ದಾಣಕ್ಕೆ ಬರಲು ಹೇಳುತ್ತಾನೆ. ಅಲ್ಲಿಗೆ ಬಂದ ಆಕೆಗೆ ಮತ್ತುಬರುವ ಕೇಕ್ ತಿನಿಸುತ್ತಾನೆ. ಮಂಪರು ಬಂದ ಆಕೆಗೆ ಸಮೀಪದಲ್ಲೇ ತನ್ನ ಅಕ್ಕನ ಮನೆ ಇದೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬಹುದು ಎಂದು ಹೇಳಿ ಮನೆಯೊಂದಕ್ಕೆ ಕರೆದೊಯ್ಯುತ್ತಾನೆ. ಯಾರೂ ಇಲ್ಲದ ಆ ಮನೆಯಲ್ಲಿ ಯುವತಿ ಮೇಲೆ ಆತ ಅತ್ಯಾಚಾರ ಮಾಡಿ ಫೋಟೋ, ವಿಡಿಯೋ ಚಿತ್ರೀಕರಿಸುತ್ತಾನೆ. ಮನೆಗೆ ಹೋದ ಯುವತಿಗೆ ಆ ಕ್ಲಿಪ್​ಗಳನ್ನ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಬಳಿಕ 1 ಲಕ್ಷ ಹಣವನ್ನೂ ವಸೂಲಿ ಮಾಡಿದ್ದಾನೆ.

ಇದನ್ನೂ ಓದಿ: ಮಂಡ್ಯ ರೈತ ವಿಜ್ಞಾನಿ ಮಂಜೇಗೌಡರಿಂದ ಕೆರೆಯ ನೀರಿನಲ್ಲಿ ವಿದ್ಯುತ್ ತಯಾರಿಕೆ; ಇಡೀ ಊರಿಗೆ ಉಚಿತ ಕರೆಂಟ್

ಬಳಿಕ ಅಷ್ಟಕ್ಕೆ ಸುಮ್ಮನಾಗದ ಆತ ತಾನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಹೇಳಿ ಪುಸಲಾಯಿಸಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾನೆ. ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಇದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಗ್ರಾಮ ಮೂಲದ ಆತನ ಮನೆಗೆ ನ್ಯಾಯ ಕೇಳಲು ಹೋದ ಯುವತಿ ಮನೆಯವರಿಗೆ ಶಾಕ್ ಆಗುತ್ತದೆ. ಆರೋಪಿ ಸಾಗರ್ ಗೌಡ ಈ ಮುಂಚೆಯೂ 26 ಯುವತಿಯರಿಗೆ ಮೋಸ ಮಾಡಿದ ವಿಚಾರ ಆತನ ಅಪ್ಪ ರಾಮೇಗೌಡರಿಂದ ತಿಳಿಯುತ್ತದೆ. ನ್ಯಾಯದ ಮಾತುಗಳನ್ನಾಡುವ ಬದಲು ಆರೋಪಿ ಸಾಗರ್ ಗೌಡನ ತಂದೆ ರಾಮೇಗೌಡ ಉಡಾಫೆಯಿಂದ ವರ್ತಿಸಿದ್ದಾರೆ. ದೌರ್ಜನ್ಯ ಎಸಗಿದ ಎಲ್ಲಾ ಯುವತಿಯರಿಗೂ ನನ್ನ ಮಗ ಬಾಳು ಕೊಡಲು ಆಗುತ್ತಾ? ನಿಮ್ಮ ಜಾತಿ ಬೇರೆ ನನ್ನ ಜಾತಿ ಬೇರೆ ಎಂದು ಹೇಳಿ ತಮಗೆ ಕೊಲೆ ಬೆದರಿಕೆ ಹಾಕಿದರೆಂದು ನೊಂದ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಕೊನೆಗೆ ನೊಂದ ಯುವತಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಆರೋಪಿ ಸಾಗರ್ ಗೌಡನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಬೇರೆ ಯುವತಿಯರಿಗೂ ಇಂಥ ಕೆಲಸ ಮಾಡಿರುವ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ.

ವರದಿ: ಮುನಿರಾಜು ಹೊಸಕೋಟೆ
Published by:Vijayasarthy SN
First published: