HOME » NEWS » District » MAN FROM CHITRADURGA DO SEEMANTHA FOR A GOAT FOR HIS DAUGHTER VTC SNVS

ಮಗಳ ಆಸೆಯಂತೆ ಮೇಕೆಗೆ ಸೀಮಂತ ಕಾರ್ಯ ಮಾಡಿದ ಪೋಷಕರು; ಚಿತ್ರದುರ್ಗದ ಈ ಊರಿನವರಿಗೆ ಹಬ್ಬದೂಟ

ಮುದ್ದಿನ ಮಗಳ ಜೊತೆ ಬೆಳೆದ ಮುದ್ದಿನ ಮೇಕೆ ಮರಿ ಗರ್ಭಧರಿಸಿದ್ದು, ಮಗಳ ಆಸೆಯಂತೆ ಈ ಆಡಿಗೆ ಸೀಮಂತ ಮಾಡಿದ್ದಾರೆ ಚಳ್ಳಕೆರೆಯ ನನ್ನಿವಾಳ ಗ್ರಾಮದ ಒಂದು ಕುಟುಂಬ.

news18-kannada
Updated:March 13, 2021, 7:53 AM IST
ಮಗಳ ಆಸೆಯಂತೆ ಮೇಕೆಗೆ ಸೀಮಂತ ಕಾರ್ಯ ಮಾಡಿದ ಪೋಷಕರು; ಚಿತ್ರದುರ್ಗದ ಈ ಊರಿನವರಿಗೆ ಹಬ್ಬದೂಟ
ಚಿತ್ರದುರ್ಗದಲ್ಲಿ ಮೇಕೆಗೆ ಸೀಮಂತ ಮಾಡುತ್ತಿರುವುದು
  • Share this:
ಚಿತ್ರದುರ್ಗ: ಮನೆಯಲ್ಲಿ ಮಗಳೋ ಅಥವಾ ಸೊಸೆಯೋ ಗರ್ಭಿಣಿಯಾದರೆ ಕುಟುಂಬದವರೆಲ್ಲ ಸೇರಿ ಬಂಧು - ಬಳಗವನ್ನ ಕರೆದು ಸೀಮಂತ ಕಾರ್ಯ ಮಾಡೋದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕುಟುಂಬವೊಂದು ಮನೆಯಲ್ಲಿ ಸಾಕಿದ್ದ ಮೇಕೆಗೂ ಸೀಮಂತ ಮಾಡಿ ಊರಿನ ಜನರಿಗೆ ಊಟ ಹಾಕಿ ಸಂಭ್ರಮಿಸಿದ್ದಾರೆ. ಮೇಕೆ ಮೇಲಿನ ಪ್ರೀತಿಗೆ ಮಾಡಿದ ಸೀಮಂತ ಕಾರ್ಯ ಪ್ರಾಣಿ ಪ್ರೀತಿಯನ್ನ ಇಮ್ಮಡಿಗೊಳಿಸಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ರಾಜು ಮತ್ತು ಗೀತಾ ಕುಟುಂಬ ವಾಸವಾಗಿದ್ದು, ಇವರಿಗೆ ಇಬ್ಬರು ಹೆಣ್ಣುಮಕ್ಕಳು. ವಯಸ್ಸಿಗೆ ಬಂದ ಮೊದಲನೆ ಮಗಳು ತಂದೆ ತಾಯಿಯ ಇಷ್ಟಕ್ಕೆ ವಿರುದ್ಧವಾಗಿ ಪ್ರಿಯಕರನ ಜೊತೆ ಮದುವೆ ಆಗಿ ಹೋಗಿದ್ದಳು. ಬಳಿಕ ಇದ್ದ ಒಬ್ಬ ಮಗಳು ರಜನಿಗೆ ಈ ಕುಟುಂಬದವರು ಪ್ರೀತಿಯ ಧಾರೆ ಎರೆದು ಬೆಳೆಸಿದ್ದಾರೆ‌. ಆಕೆಗೆ ಅಂತ ತಂದೆ ರಾಜು ಜಿಂಕೆಯನ್ನು ತಂದುಕೊಟ್ಟು ಸಾಕಿ ಖುಷಿಪಡಿಸಿದ್ದಾರೆ. ಆದರೆ ಎರಡು ವರ್ಷಗಳ ಬಳಿಕ ಅದು ಕಾನೂನಿಗೆ ವಿರುದ್ದ ಎಂದು ಕಾಡಿಗೆ ಬಿಟ್ಟದ್ದರಂತೆ. ಆದರೆ ಎರಡು ವರ್ಷಗಳ ಕಾಲ ಜಿಂಕೆಯನ್ನ ಸಾಕಿ ಒಡನಾಟ ಬೆಳಸಿಕೊಂಡಿದ್ದ ರಜನಿ ಅದನ್ನ ಮರೆಯಲಾಗದೆ ಒಂದೇ ಸಮನೆ ನೆನೆದು ಅಳುವುದಕ್ಕೆ ಶುರು ಮಾಡಿದ್ದಳಂತೆ. ಇದನ್ನ ತಪ್ಪಿಸೋಕೆ ರಜನಿ ತಂದೆ ಹೆಣ್ಣು ಮೇಕೆ ಮರಿಯೊಂದನ್ನ ತಂದು ಕೊಟ್ಟಿದ್ದಾರೆ‌.

ಇದನ್ನೂ ಓದಿ: ಚಂಡೀಗಢದಲ್ಲಿ ನಡೆಯಲಿರುವ ಸ್ಕೇಟಿಂಗ್ ಹಾಕಿ ಚಾಂಪಿಯನ್ ಶಿಪ್​ಗೆ ರಾಜ್ಯದ 5 ತಂಡ ಭಾಗಿ; ಕಾರವಾರದಲ್ಲಿ ತರಬೇತಿ

ಬಳಿಕ ಮೇಕೆಯನ್ನ ಚನ್ನಾಗಿ ಸಾಕಿದ್ದ ರಜನಿ ಅದು ಗರ್ಭ ಧರಿಸಿದ ಬಳಿಕ ಸೀಮಂತ ಮಾಡಬೇಕು ಅಂತ ತಂದೆ ಬಳಿ ಹೇಳಿಕೊಂಡಿದ್ದಳು. ಮೊದಲೇ ಮೊದಲ ಮಗಳು ದೂರವಾದ ದುಃಖದಲ್ಲಿದ್ದ ರಜನಿಯ ತಂದೆತಾಯಿ ಆಕೆಯ ಆಸೆಯನ್ನ ಈಡೇರಿಸಲು ಒಪ್ಪಿದ್ದರು. ಅದರಂತೆ ಮೇಕೆ ಈಗ ಗರ್ಭ ಧರಿಸಿದ ವಿಷಯ ತಿಳಿದಿದೆ. ಆದ್ದರಿಂದ ಮಗಳು ರಜನಿ ಆಸೆಯಂತೆ ಇತ್ತೀಚೆಗೆ ಮೇಕೆಗೆ ಸೀಮಂತ ಕಾರ್ಯ ಮಾಡುಲು ಸಕಲ ಸಿದ್ದತೆ ಮಾಡಿಕೊಂಡು, ಮನೆ ಮುಂದೆ ತಳಿರು ತೋರಣ ಕಟ್ಟಿ, ದೀಪಾಲಾಂಕಾರ ಮಾಡಿ ಸಿಂಗಾರಗೊಳಿಸಿದ್ದಾರೆ. ಅಲ್ಲದೇ ಸೀಮಂತ ಕಾರ್ಯಕ್ಕೆ ನನ್ನಿವಾಳ ಗ್ರಾಮದ ಜನರು, ಸಂಬಂಧಿಕನ್ನ ಕರೆದು ಸೀಮಂತ ಕಾರ್ಯ ಮಾಡಿದ್ದಾರೆ. ಅದು ಮನೆಯ ಮಗಳಿಗೆ ನೀಡುವಂತೆ ಅರಿಶಿನ ಕುಂಕುಮ, ಬಳೆ,ಸೀರೇ ತೊಡಿಸಿ, ತೊಟ್ಟಿಲ್ಲಲ್ಲಿ ಕೂರಿಸಿ ಪ್ರೀತಿಯ ಧಾರೆ ಎರೆದು ಆರತಿ  ಬೆಳಗಿದ್ದಾರೆ. ಅಷ್ಟೇ ಅಲ್ಲದೆ ಸೀಮಂತ ಕಾರ್ಯಕ್ಕೆ ಅಂತಲೇ ಓಳಿಗೆ ಮಾಡಿಸಿ ಊರಿನ ಜನರಿಗೆ ಸಿಹಿ ಊಟ ಹಾಕಿದ್ದಾರೆ.

ಮೂಲತಃ ಹಾಸನ ಜಿಲ್ಲೆಯವರಾದ ರಾಜು ಈ ಗ್ರಾಮದಲ್ಲಿ ವಾಸವಾಗಿದ್ದು, ಕಲೆ ಸಂಸ್ಕೃತಿ ಅಂದ್ರೆ ಹೆಚ್ಚು ಪ್ರೀತಿ. ಹಾಗಾಗಿ ಮೊದಲಿನಿಂದಲೂ ಪರಿಸರ, ಪ್ರಾಣಿ ಪಕ್ಷಿಗಳನ್ನ ಸಾಕುವ ಹವ್ಯಾಸ ಮೈಗೂಡಿದೆ. ಮಗಳು ರಜನಿಗೂ ತಂದೆಯ ವ್ಯಕ್ತಿತ್ವ ಮೈಗೂಡಿದ್ದು ಮಗಳ ಆಸೆಯಂತೆ ಸೀಮಂತ ಮಾಡಿದ್ದು ಒಂದುಕಡೆಯಾದ್ರೆ, ಮೊದಲ ಮಗಳಿಗೆ ಮಾಡಬೇಕಿದ್ದ ಕಾರ್ಯವನ್ನ ಮೇಕೆಗೆ ಮಾಡಿ ಖುಷಿಪಟ್ಟಿದ್ದಾರೆ.

ವರದಿ: ವಿನಾಯಕ್ ತೊಡರನಾಳ್
Published by: Vijayasarthy SN
First published: March 13, 2021, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories