ರಾಮನಗರ(ಚನ್ನಪಟ್ಟಣ): ಆತ ಸ್ನೇಹಿತನ ಪತ್ನಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಇದೀಗ ಸ್ನೇಹಿತನ ಪತ್ನಿಗೆ ಲೈಂಗಿಕ ಸಂಪರ್ಕ ಮಾಡಿ ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಇಟ್ಟುಕೊಂಡು ಆಕೆಗೆ ಸದಾ ಬ್ಲಾಕ್ ಮೇಲ್ ಮಾಡಿ ಇಲ್ಲಿಯವರೆಗೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ರೂಪಾಯಿ ಹಣ ವಸೂಲಿ ಮಾಡಿದ್ದಾನೆ. ಆತನ ಕಾಟ ತಡೆಯಲಾಗದೇ ನೊಂದ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮೋಸ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲೇ ಬೇಕು ಎಂದು ಹೋರಾಟ ಮಾಡುತ್ತಿದ್ದಾಳೆ.
ಆರೋಪಿ ಸಂತೋಷ್ ಕುಮಾರ್ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಶೆಟ್ಟಿಹಳ್ಳಿ ಗ್ರಾಮದ ನಿವಾಸಿ. 37 ವರ್ಷದ ಸಂತೋಷ್ ಕುಮಾರ್ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ಬೇರೆ ಹೆಣ್ಣು ಮಕ್ಕಳನ್ನ ಪುಸಲಾಯಿಸಿ ಅವರ ಬಳಿ ಹಣ ಕೀಳುವುದೇ ಕಾಯಕ ಮಾಡಿಕೊಂಡಿದ್ದಾನೆ ಈತ. ಅದೇ ರೀತಿ ಸಂತೋಷ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಈಗ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟು ಅದನ್ನ ಚಿತ್ರೀಕರಣ ಮಾಡಿ ಮಹಿಳೆಗೆ ಆ ವಿಡಿಯೋಗಳನ್ನ ತೋರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಹಣ ಕೊಡದಿದ್ದರೆ ವಿಡಿಯೋವನ್ನ ಎಲ್ಲಡೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಅವನ ಬೆದರಿಕೆಗೆ ಅಂಜಿದ ಮಹಿಳೆ ಶಿಲ್ಪಾ ಆತ ಕೇಳಿಕೇಳಿದಾಗೆಲ್ಲಾ ಸಾಕಷ್ಟು ಹಣ ಕೊಟ್ಟಿದ್ದಾಳೆ. ಹಣ ಕೇಳುವ ಚಾಳಿಯನ್ನ ಮುಂದುವರೆಸಿದ್ದ ಸಂತೋಷ್ ಶಿಲ್ಪಾಳಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾನೆ. ಸಂತೋಷ್ ಕಿರುಕುಳ ತಾಳಲಾಗದೇ ನೊಂದ ಮಹಿಳೆ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಮಹಿಳೆಯೂ ದೂರು ಕೊಡಲು ಮುಂದಾದಾಗ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಕಚೇರಿಯಲ್ಲಿ ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Murder: ಕಾದು ಕುಳಿತು ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಕೊಲೆ: ದುಷ್ಕರ್ಮಿಗಳು ಪರಾರಿ
ಇತ್ತೀಚೆಗೆ ತನ್ನನ್ನ ಮಾಗಡಿ ಬಳಿ ಇರುವ ಸಾವನದುರ್ಗ ಬೆಟ್ಟಕ್ಕೆ ಕರೆದುಕೊಂಡು ಹೋಗಿ ತನಗೆ ಮತ್ತು ಬರುವ ಔಷಧಿ ಕೊಟ್ಟು ತನ್ನ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದನೆಂದು ಶಿಲ್ಪಾ ಆರೋಪಿಸಿದ್ದಾಳೆ. ನಂತರ ಬೆತ್ತಲಾಗಿರುವ ವಿಡಿಯೋ ಚಿತ್ರೀಕರಣ ಮಾಡಿ ಅದನ್ನೇ ಇಟ್ಟುಕೊಂಡು ಹಣ ಕೇಳಲು ಮುಂದಾಗಿದ್ದಾನೆ. ನೊಂದ ಮಹಿಳೆ ಶಿಲ್ಪಾ ತನ್ನ ಮನೆಯವರಿಗೆ ವಿಚಾರ ಗೊತ್ತಾದರೆ ನನ್ನನ್ನ ಉಳಿಸುವುದಿಲ್ಲ ಎಂದು ಮನೆಯಲ್ಲಿದ್ದ ಹಣ, ಹಾಗೂ ಒಡೆವೆಗಳನ್ನ ಅಡವಿಟ್ಟು ಸಂತೋಷ್ಗೆ ಕೊಟ್ಟಿದ್ದಾಳೆ. ಅದೇ ರೀತಿ ಸ್ತ್ರೀ ಶಕ್ತಿ ಸಂಘ ಹಾಗೂ ಕೈ ಸಾಲ ಮಾಡಿಯೂ ಸಂತೋಷನಿಗೆ ಹಣ ಕೊಟ್ಟಿದ್ದಾಳೆ.
ಇತ್ತೀಚೆಗೆ ಮನೆಯಲ್ಲಿದ್ದ ಒಡೆವೆಗಳು ಕಾಣೆಯಾಗಿದ್ದ ಬಗ್ಗೆ ಮಹಿಳೆಯ ಬಳಿ ಮನೆಯವರು ಪ್ರಶ್ನೆ ಮಾಡಿದಾಗ ಸಂತೋಷನ ಆಟ ಸಂಪೂರ್ಣ ಬಯಲಾಗಿದೆ. ಹೆಣ್ಣು ಮಕ್ಕಳನ್ನ ಪುಸಲಾಯಿಸಿ ಅಮಾಯಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಿರುವ ಇಂತಹ ವ್ಯಕ್ತಿಗಳಿಗೆ ಶಿಕ್ಷೆ ಕೊಡಿಸಲೇಬೇಕು ಎಂದು ಮಹಿಳಾ ಸಂಘಟನೆಯವರು ಸಹ ನೊಂದ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನೂ ಓದಿ: ಗುಂಡ್ಲುಪೇಟೆ ಬಳಿ ತೋಟದ ಮನೆಗೆ ನುಗ್ಗಿ ದರೋಡೆ; ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ
ಒಟ್ಟಾರೆಯಾಗಿ, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ಬಳಿಕ ಆರೋಪಿಯ ಮತ್ತಷ್ಟು ಪ್ರಕರಣಗಳು ಹೊರಬೀಳುವ ಸಾಧ್ಯತೆ ಇದೆ. ಇದೀಗ ನೊಂದ ಮಹಿಳೆಗೆ ಎಷ್ಟರಮಟ್ಟಿಗೆ ನ್ಯಾಯ ಸಿಗಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ