ಬಾಗಲಕೋಟೆ ತಾಯಿ ಮಕ್ಕಳ ಸಾವು ಪ್ರಕರಣಕ್ಕೆ ತಿರುವು; ಅನೈತಿಕ ಸಂಬಂಧಕ್ಕೆ ಪತ್ನಿ ಮಕ್ಕಳನ್ನೇ ಬಲಿಕೊಟ್ಟನಾ ಪಾಪಿ?

ಬಾದಾಮಿಯ ಹಲಕುರ್ಕಿ ಗ್ರಾಮದಲ್ಲಿ 32 ವರ್ಷದ ಫಕೀರವ್ವ ಹಾಗೂ ಆಕೆಯ ಇಬ್ಬರು ಮಕ್ಕಳ ಶವಗಳು ಕೃಷಿ ಹೊಂಡದಲ್ಲಿ ಪತ್ತೆಯಾಗಿದ್ದವು. ಫಕೀರವ್ವಳ ಗಂಡನೇ ಈ ಮೂವರನ್ನು ಕೊಂದಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಈಗ ಆರೋಪ ಮಾಡಿದ್ದಾರೆ.

ಶವವಾಗಿ ಪತ್ತೆಯಾದ ಫಕೀರವ್ವ ಮತ್ತಾಕೆಯ ಇಬ್ಬರು ಮಕ್ಕಳು

ಶವವಾಗಿ ಪತ್ತೆಯಾದ ಫಕೀರವ್ವ ಮತ್ತಾಕೆಯ ಇಬ್ಬರು ಮಕ್ಕಳು

  • Share this:
ಬಾಗಲಕೋಟೆ (ಮಾ,23): ಬಾಗಲಕೋಟೆಯಲ್ಲಿ  ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದು, ಫಕೀರವ್ವಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ 32ವರ್ಷದ ತಾಯಿ ಫಕೀರವ್ವ ನೀಲನ್ನವರ  ಹಾಗೂ ಆಕೆಯ ಇಬ್ಬರು ಮಕ್ಕಳಾದ 12 ವರ್ಷದ ನೀಲಕಂಠ, 10 ವರ್ಷದ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಫಕೀರವ್ವಳ ಪತಿ ಮಂಜುನಾಥ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ಪತಿಯೊಂದಿಗೆ ಫಕೀರವ್ವ ರವಿವಾರ ಜಗಳಾಡಿಕೊಂಡಿದ್ದರಂತೆ. ಆ ಬಳಿಕ ತನ್ನಿಬ್ಬರ ಮಕ್ಕಳೊಂದಿಗೆ ಗ್ರಾಮದ ಹೊರವಲಯದಲ್ಲಿರುವ ದೇಗುಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾಳೆ. ದಾರಿ ಮಧ್ಯೆ ಎದುರಾದವರಿಗೆ ಇದನ್ನೇ ಹೇಳಿದ್ದಳಂತೆ. ಸೋಮವಾರ ಮಧ್ಯಾಹ್ನದ ವೇಳೆಗೆ ಜಮೀನೊಂದರ ಕೃಷಿ ಹೊಂಡದಲ್ಲಿ ತಾಯಿ ಮಕ್ಕಳ ಶವ ಪತ್ತೆಯಾಗಿವೆ.

ವಿಷಯ ತಿಳಿದು ಗ್ರಾಮಸ್ಥರು,ಹಾಗೂ ಫಕೀರವ್ವಳ ತವರೂರು ತಪ್ಪಸಕಟ್ಟಿ ಗ್ರಾಮದಿಂದ ತಾಯಿ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಏನು ಅರಿಯದ ಇಬ್ಬರು ಕಂದಮ್ಮ ಹಾಗೂ ತಾಯಿ ಶವ ಕಂಡು ಗ್ರಾಮದ ಜನ ಕಣ್ಣೀರಿಟ್ಟು ಮಮ್ಮಲ ಮರುಗಿದ್ದಾರೆ. ಮಗ ನೀಲಕಂಠ ಮಾತು ಬಾರದ ಮೂಗನಾಗಿದ್ದಾನೆ.

ಮದುವೆಯಾದ ಸಂದರ್ಭದಲ್ಲಿ ಮಂಜುನಾಥ್ ಹಾಗೂ ಫಕೀರವ್ವಳ ಸಂಸಾರ ಸುಖವಾಗಿತ್ತಂತೆ. ಹಗಲಿರುಳು ದುಡಿದು ಬದುಕು ಕಟ್ಟಿಕೊಂಡಿದ್ದರಂತೆ. ಫಕೀರವ್ವ ಹೊಲದ ಜವಾಬ್ದಾರಿ ಹೊತ್ತು ಜೀವನ ಸಾಗಿಸುತ್ತಿದ್ದಳಂತೆ. ಆದರೆ ಪತಿಗೆ ಮಾತ್ರ ಬೇರೋಬ್ಬಳ ಅನೈತಿಕ ಸಂಬಂಧ ಇತ್ತು. ವರದಕ್ಷಿಣೆ ಕಿರುಕುಳ ಕೂಡ ನೀಡುತ್ತಿದ್ದ. ಇದರಿಂದ ಪತ್ನಿ ಫಕೀರವ್ವ ಬೇಸತ್ತು ಹೋಗಿದ್ದಳಂತೆ. ಈ ಬಗ್ಗೆ ಫೋನ್ ಮೂಲಕ ತವರು ಮನೆಯ ಸಹೋದರಿ, ಸಹೋದರರಿಗೂ ವಿಷಯ ತಿಳಿಸಿದ್ದಾಳೆ. ತವರು ಮನೆಯವರು ಬಂದು ಮಂಜುನಾಥನಿಗೆ ಬುದ್ದಿ ಹೇಳಿ ಹೋಗಿದ್ದಾರೆ. ಆ ಬಳಿಕವೂ ಫಕೀರವ್ವಳಿಗೆ ನೀನು ನನಗೆ ಬೇಡಾ, ನನ್ನೊಂದಿಗೆ ಬೇರೊಬ್ಬಳಿದ್ದಾಳೆ. ಮನೆ ಬಿಟ್ಟು ಹೋಗು ಎಂದು ಬೆದರಿಕೆ ಹಾಕಿದ್ದಾನಂತೆ. ಆ ಬಳಿಕ ಫಕೀರವ್ವ ಹಾಗೂ ಆಕೆಯ ಇಬ್ಬರು ಮಕ್ಕಳು ಕಾಣೆಯಾದರೂ ತವರು ಮನೆಯವರಿಗೆ ವಿಷಯ ತಿಳಿಸಿಲ್ಲ. ಶವವಾಗಿ ಕೃಷಿ ಹೊಂಡದಲ್ಲಿ ಪತ್ತೆಯಾದ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿ ಮಕ್ಕಳ ಶವವನ್ನು ಬಾದಾಮಿ ತಾಲೂಕಾಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ಪತಿ ಮಂಜುನಾಥ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 6 ಸಚಿವರು ರಾಜೀನಾಮೆ ಕೊಡಬೇಕು, ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಕೇಸ್ ಹಾಕಬೇಕು; ಸಿದ್ದರಾಮಯ್ಯ ಪಟ್ಟು

ಅನೈತಿಕ ಸಂಬಂಧಕ್ಕಾಗಿ ಪತ್ನಿ, ಮಕ್ಕಳನ್ನು ಕೊಂದನಾ ಪಾಪಿ ತಂದೆ?

ಫಕೀರವ್ವ ನೀಲನ್ನವರ ಅವರ ತವರೂರು ಬಾದಾಮಿ ತಾಲೂಕಿನ ತಪ್ಪಸಕಟ್ಟಿ ಗ್ರಾಮ. ಫಕೀರವ್ವಳಿಗೆ ಮೂವರು ಸಹೋದರರು. ಓರ್ವ ಸಹೋದರಿ ಇದ್ದಾಳೆ. ಫಕೀರವ್ವಳನ್ನು ಸಹೋದರರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕಳೆದ 15 ವರ್ಷಗಳ ಹಿಂದೆ ಹಲಕುರ್ಕಿ ಗ್ರಾಮದ ಮಂಜುನಾಥ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಫಕೀರವ್ವಳ ಸಹೋದರರು ನೌಕರಿಯಲ್ಲಿದ್ದು. ಮಂಜುನಾಥನಿಗೆ ಹಣದಾಸೆ ಹೆಚ್ಚಾಗಿ ಆಗಾಗ ಫಕೀರವ್ವಳಿಗೆ ಸಹೋದರರಿಂದ ಹಣ ತರುವಂತೆ ಕಿರುಕುಳ ನೀಡಿ, ಹಣ ಪಡೆಯುತ್ತಿದ್ನಂತೆ. ಜೊತೆಗೆ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದನಂತೆ. ತನ್ನ ಅಕ್ರಮ ಸಂಬಂಧಕ್ಕೆ ಪತ್ನಿ ಮಕ್ಕಳಿಬ್ಬರು ಅಡ್ಡಿಯಾಗುತ್ತಾರೆಂದು ಆತನೇ ಅವರನ್ನು ಕೈಕಾಲು ಕಟ್ಟಿ ಕೃಷಿ ಹೊಂಡಕ್ಕೆ ಹಾಕಿದ್ದಾನೆ ಎಂದು ಮೃತ ಫಕೀರವ್ವಳ ಸಹೋದರ ಪ್ರಕಾಶ್, ಸಹೋದರಿ ಮಹಾದೇವಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಆತನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಕೃಷಿ ಹೊಂಡದಲ್ಲಿ ಮೂವರಿಗೆ ಕೈಕಾಲು ಕಟ್ಟಿ ಹಾಕಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಕೈಕಾಲು ಕಟ್ಟಿಕೊಳ್ಳೋಕೆ ಹೇಗೆ ಸಾಧ್ಯ. ಇದು ಆತ್ಮಹತ್ಯೆ ಅಲ್ಲ ಕೊಲೆಯಾಗಿದೆ. ಇನ್ನು ಕೃಷಿ ಹೊಂಡದಲ್ಲಿ ಶವ ಪತ್ತೆಯಾದರೂ ಮಂಜುನಾಥ ನೋಡೋಕೆ ಬಂದಿಲ್ಲ. ಆತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು ನೋಡಿದರೆ ಆತನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಅನೈತಿಕ ಸಂಬಂಧಕ್ಕಾಗಿ ಪಾಪಿ ತಂದೆ ಮಂಜುನಾಥ ಕೊಲೆ ಮಾಡಿದ್ದಾನಾ? ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿಯಾದರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಬಾದಾಮಿ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ತಾಯಿ ಮಕ್ಕಳ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ತಹಶೀಲ್ದಾರ್ ಎಸ್ ಎಸ್ ಇಂಗಳೆ, ಸಿಪಿಐ ರಮೇಶ್ ಹಾನಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಟ್ಟಿನಲ್ಲಿ ಪೊಲೀಸ್ ತನಿಖೆಯಿಂದ ತಾಯಿ ಮಕ್ಕಳ ಸಾವು ಆತ್ಮಹತ್ಯೆಯೋ ಕೊಲೆಯೋ ಎಂದು ಸತ್ಯಾಸತ್ಯತೆ ತಿಳಿದು ಬರಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: