ಮಕ್ಕಳ ಆನ್​ಲೈನ್ ಶಿಕ್ಷಣಕ್ಕೆ ನೆಟ್​ವರ್ಕ್ ಸಿಗುತ್ತಿಲ್ಲವೆಂದು ಊರು ತೊರೆಯುತ್ತಿರುವ ಮಲೆನಾಡಿನ ಜನರು

ಆನ್​ಲೈನ್ ಶಿಕ್ಷಣಕ್ಕಾಗಿ ಬದುಕನ್ನೇ ಬದಲಾಯಿಸಿಕೊಂಡ ಮಲೆನಾಡಿನ ಕುಟುಂಬಗಳು, ವ್ಯವಸಾಯಕ್ಕಿಂತ ಮಕ್ಕಳ ಶಿಕ್ಷಣವೇ ಮುಖ್ಯವೆಂದು ಗ್ರಾಮ ತೊರೆದು ನಗರದ ಬಾಡಿಗೆ ಮನೆ ಸೇರಿಕೊಳ್ಳುತ್ತಿವೆ.

news18-kannada
Updated:September 1, 2020, 1:32 PM IST
ಮಕ್ಕಳ ಆನ್​ಲೈನ್ ಶಿಕ್ಷಣಕ್ಕೆ ನೆಟ್​ವರ್ಕ್ ಸಿಗುತ್ತಿಲ್ಲವೆಂದು ಊರು ತೊರೆಯುತ್ತಿರುವ ಮಲೆನಾಡಿನ ಜನರು
ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ವಲಸೆ ಬಂದ ಒಂದು ಕುಟುಂಬ
  • Share this:
ಚಿಕ್ಕಮಗಳೂರು: ಮಲೆನಾಡಿಗರು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಠಿಯಿಂದ ಬದುಕಿ-ಬಾಳಿದ ತೋಟ-ಮನೆ-ಊರನ್ನ ತೊರೆಯುತ್ತಿದ್ದಾರೆ. ಹಳ್ಳಿಯಲ್ಲಿ ಜೀವನ ಸಾಧ್ಯವಿಲ್ಲವೆಂದು ತೊರೆಯುವ ಪ್ರಕರಣಗಳು ಇವಲ್ಲ. ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವಂಥ ಪರಿಸ್ಥಿತಿ ಬಂದಿದೆ.

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಲ್ಭಣವಾಗಿದೆ. ಮಲೆನಾಡಿನ ಜನ ಹೆಚ್ಚಾಗಿ ಅವಲಂಬಿತರಾಗಿರೋದು ಬಿ.ಎಸ್.ಎನ್.ಎಲ್ ನೆಟ್ವರ್ಕ್​ಗೆ. ಆದರೀಗ, ಬಿ.ಎಸ್.ಎನ್.ಎಲ್. ಹೆಸರಿಗಷ್ಟೇ ಎಂಬಂತಿದೆ. ಅದರ ನೆಟ್ವರ್ಕ್ ಕೇಳೋದೇ ಬೇಡ. ಮಳೆ-ಗಾಳಿ ಬಂದ್ರೆ ಇರೋ ಅಲ್ಪಸ್ವಲ್ಪ ನೆಟ್​ವರ್ಕ್ ಕೂಡ ಮಾಯವಾಗುತ್ತೆ. ಮತ್ತೆ ಸಿಕ್ರಿ ಸಿಕ್ತು, ಇಲ್ಲವಾದ್ರೆ ಇಲ್ಲ. ಹಾಗಾಗಿ, ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯದ ಆಸುಪಾಸಿನ ಗಾಳಿಗುಡ್ಡೆ ಗ್ರಾಮದ ಕುಟುಂಬಗಳು ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಚಿಕ್ಕಮಗಳೂರಿನಲ್ಲಿ ಮನೆ ಮಾಡಿಕೊಂಡು ಊರಿಗೆ ಓಡಾಡ್ತಿದ್ದಾರೆ. ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಹೇಳ್ತಿದೆ. ಡಿಜಿಟಲ್ ಇಂಡಿಯಾ ಅಂದ್ರೆ ಇದೇನಾ ಎಂದು ಜನ ಸರ್ಕಾರಕ್ಕೆ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಗುಡ್ ಬೈ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಹೆಚ್ಚಾಯ್ತು ದಾಖಲಾತಿ ಸಂಖ್ಯೆ

ಆರ್ಥಿಕವಾಗಿ ಅನುಕೂಲಸ್ಥರಿಗೆ ನೋ ಪ್ರಾಬ್ಲಂ. ನಗರಕ್ಕೆ ಬಂದು ಮನೆ ಮಾಡಿಕೊಂಡು ಓದುತ್ತಾರೆ. ಆದ್ರೆ, ಎಷ್ಟೋ ಜನಕ್ಕೆ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಲೂ ಆಗಲ್ಲ. ಅವರು ಮಕ್ಕಳ ಭವಿಷ್ಯಕ್ಕಾಗಿ ಏನು ಮಾಡ್ತಾರೆ ಅನ್ನೋದು ಇಲ್ಲಿ ಯಕ್ಷಪ್ರಶ್ನೆ. ಅವರು ಹೇಗೆ ನಗರ ಪ್ರದೇಶಗಳಿಗೆ ಬಂದು ಮಕ್ಕಳಿಗೆ ಓದಿಸುತ್ತಾರೆ ಅನ್ನೋದನ್ನ ಯೋಚಿಸಬೇಕು. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂತಹ ಸಾವಿರಾರು ಹಳ್ಳಿಗಳಿವೆ. ಅವುಗಳಗೆ ರೋಡು, ನೀರು, ಕರೆಂಟ್ ಕೂಡ ಇಲ್ಲ. ಅವರಿಗೆ ಮೂಲಭೂತ ಸೌಕರ್ಯ ಮರೀಚಿಕೆ. ಅಂಥದ್ರಲ್ಲಿ ಮೊಬೈಲ್ ನೆಟ್ವರ್ಕ್ ಕೇಳೋದೇ ಬೇಡ. ಹಾಗಾಗಿ ಸರ್ಕಾರ ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕು ಎಂದು ಮೈಸೂರಿನಲ್ಲಿ ಕೊನೆಯ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೊದಲೆಲ್ಲಾ ಬಿಎಸ್ಸೆನ್ನೆಲ್ ನೆಟ್ವಿರ್ಕ್ ಫ್ರಿಕ್ವೆನ್ಸಿ ಚೆನ್ನಾಗಿ ಸಿಗ್ತಿತ್ತು. ಆದ್ರೀಗ, ನೆಟ್ವರ್ಕ್ ಇಲ್ಲ. ಕರೆಂಟೂ ಇರಲ್ಲ. ಮಕ್ಕಳು ಹಳ್ಳಿಯಲ್ಲಿ ಓದೋದು ಅಸಾಧ್ಯವಾಗಿದೆ. ಹಾಗಾಗಿ, ಎಲ್ಲವನ್ನೂ ಬಿಟ್ಟು ನಗರಕ್ಕೆ ಬಂದಿದ್ದೇವೆ. ಇಲ್ಲಿಂದಲೇ ಹಳ್ಳಿಗೆ ಓಡುತ್ತಿದ್ದೇವೆ ಎಂದು ಹೇಳುವ ಗಾಳಿಗುಡ್ಡೆ ಗ್ರಾಮದ ಕಲ್ಲೇಶ್, ಸರ್ಕಾರ ಕೂಡಲೇ ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಿಂದ ಮಠದಲ್ಲಿಯೇ ಬದುಕು ನಡೆಸುತ್ತಿದೆ ಸಂತ್ರಸ್ತರ ಕುಟುಂಬ ; ಈಡೇರದ ಸರ್ಕಾರದ ಭರವಸೆ..!

ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಆಗ್ತಿಲ್ಲ. ಕಳಪೆ ನೆಟ್ವರ್ಕ್​ನಲ್ಲಿ ಪಾಠ ಕೇಳೋದು, ಓದೋದು ಮಲೆನಾಡಿಗರಿಗೆ ಅಸಾಧ್ಯ. ಹಾಗಾಗಿ, ಸರ್ಕಾರ ಆನ್​ಲೈನ್ ಕ್ಲಾಸ್ ಜಾರಿಗೆ ತರುವ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಬೇಕಾದ ಅಗತ್ಯತೆ ಬಹಳಷ್ಟಿದೆ. ಇಲ್ಲವಾದ್ರೆ, ಮಕ್ಕಳ ಓದು ‘ಆದಂಗಾಯ್ತು ಅಂತರಘಟ್ಟೆ ಜಾತ್ರೆ’ ಎಂಬಂತಾಗೋದ್ರಲ್ಲಿ ಅನುಮಾನ ಇಲ್ಲ.ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: September 1, 2020, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading