ಮಲ್ಲಿಕಾರ್ಜುನ ಖರ್ಗೆಯಿಂದ 550 ಬೆಡ್ ಗಳ ದೇಣಿಗೆ ; ಹುಟ್ಟು ಹಬ್ಬ ಕೈಬಿಟ್ಟು ಸೋಂಕಿತರ ನೆರವಿಗೆ ಮುಂದಾದ ಕೈ ನಾಯಕ

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವುದನ್ನು ಕೈಬಿಟ್ಟು, ಸೋಂಕಿತರ ನೆರವಿಗೆ ನೆರವಿನ ಹಸ್ತ ಚಾಚಿದ್ದಾರೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ

  • Share this:
ಕಲಬುರ್ಗಿ(ಜುಲೈ.19): ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯಲ್ಲಿ ಸೋಂಕು ದಿನೇ ದಿನೇ ವ್ಯಾಪಕಗೊಳ್ಳಲಾರಂಭಿಸಿದೆ. ಜಿಲ್ಲೆಯಲ್ಲಿ ಸುಮಾರು ಸಾವಿರ ಆ್ಯಕ್ಟಿವ್ ಕೇಸ್ ಗಳಿದ್ದು, ನಿಗದಿತ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿ ಹೌಸ್, ಸ್ಪಂ ಬೋರ್ಡ್, ಕೆಸರಟಗಿ ಆಶ್ರಯ ಮನೆ ಸೇರಿದಂತೆ ಹಲವೆಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿಯೂ ಬೆಡ್ ಸೇರಿದಂತೆ ಸಮರ್ಪಕ ವ್ಯವಸ್ಥೆ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸೋಂಕಿತರ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ. 

ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟು ಹಬ್ಬ ಜುಲೈ 21ಕ್ಕೆ ಇದೆ. ಈ ಬಾರಿ ಕೊರೋನಾ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ  ಜನ್ಮ ದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿರುವ ಮಲ್ಲಿಕಾರ್ಜುನ ಖರ್ಗೆ, ತಮ್ಮ ಅಭಿಮಾನಿಗಳಿಗೂ ಜನುಮದಿನ ಆಚರಿಸದಂತೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಕೊರೋನಾ ಸಂಕಷ್ಟಕ್ಕೆ ಗುರಿಯಾಗಿರುವ ಸೋಂಕಿತರಿಗೆ ನೆರವಾಗಲು ಖರ್ಗೆ ಮುಂದಾಗಿದ್ದಾರೆ. ಕಲಬುರ್ಗಿಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳಲಾರಂಭಿಸಿದೆ. ಕೆಲವೆಡೆ ಸರಿಯಾದ ಬೆಡ್ ಸಿಗದೆ ಪರದಾಟ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಜೊತೆಗೂಡಿ 550 ಹಾಸಿಗೆಗಳನ್ನು ಕಲಬುರ್ಗಿ ಜಿಲ್ಲೆಗೆ 550 ದೇಣಿಗೆಯಾಗಿ ನೀಡಿದ್ದಾರೆ.ಕಲಬುರ್ಗಿಯ ಜಿಮ್ಸ್ ಹಾಗೂ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದ್ದು, ಬೇರೆ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಅನುಕೂಲವಾಗಲೆಂದು ಹಾಸಿಗೆ ದೇಣಿಗೆಯಾಗಿ ನೀಡಲಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗಲೆಂದು ಹಾಸಿಗೆ ವ್ಯವಸ್ಥೆ ಮಾಡಿದ್ದು, ಒಟ್ಟು 650 ಹಾಸಿಗೆಗಳು ದೇಣಿಗೆಯಾಗಿ ನೀಡಲಾಗಿದೆ. ಕಲಬುರ್ಗಿಗೆ 550 ಹಾಗೂ ರಾಯಚೂರಿಗೆ 100 ಹಾಸಿಗೆ ದೇಣಿಗೆ ನೀಡಲಾಗಿದೆ.

ಇದನ್ನೂ ಓದಿ : ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ : ಸಿಎಂ ಯಡಿಯೂರಪ್ಪ ಮೇಲೆ ಹೈಕಮಾಂಡ್ ಗರಂ

ಒಂದು ಬೆಡ್ ಸಾವಿರ ರೂಪಾಯಿ ಮೌಲ್ಯದ್ದಾಗಿದ್ದು, ಕನಿಷ್ಟ 400 ಕೆ.ಜಿ. ಭಾರ ತಾಳಬಲ್ಲದಾಗಿದೆ. ಜಿಲ್ಲಾಡಳಿತ ಬೆಡ್ ಗಳ ಸದುಪಯೋಗ ಮಾಡಿಕೊಳ್ಳಬೇಕು. ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ಯಾರಿಗೂ ಬೆಡ್ ಸಿಗದಂತಾಗಬಾರದೆಂದು ಕೈಲಾದಷ್ಟು ನೆರವು ನೀಡಲಾಗುತ್ತಿದೆ. ಇದನ್ನ ಸಬ್ಬಳಕೆಯಾಗಲಿ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಿಂದ ಬೆಡ್ ಗಳ ರವಾನೆಯಾಗಿದ್ದು, ನಾಳೆ ಕಲಬುರ್ಗಿಗೆ ತಲುಪುವ ಸಾಧ್ಯತೆಗಳಿವೆ. ಈ ಹಿಂದೆಯೂ ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಸ್ಕ್, ಪಿಪಿಇ ಕಿಟ್ ಗಳನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಚಿತ್ತಾಪುರ ಸೇರಿದಂತೆ ಜಿಲ್ಲೆಯ ಹಲವೆಡೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿತ್ತು. ಇದೀಗ ಮಲ್ಲಿಕಾರ್ಜುನ ಖರ್ಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುವುದನ್ನು ಕೈಬಿಟ್ಟು, ಸೋಂಕಿತರ ನೆರವಿಗೆ ನೆರವಿನ ಹಸ್ತ ಚಾಚಿದ್ದಾರೆ.
Published by:G Hareeshkumar
First published: