ಚಾಮರಾಜನಗರ(ನವೆಂಬರ್ 24): ಪ್ರಸಿದ್ದ ಯಾತ್ರಾ ಸ್ಥಳ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲು ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರೆ, ಅಮಾವಾಸ್ಯೆ ಸಂದರ್ಭಗಳಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಇವರಿಗೆಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುವುದು ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ ವಸತಿ, ಕುಡಿಯುವನೀರು, ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಹಲವಾರು ಯೋಜನೆಗಳನ್ನು ಸಾಕಾರಗೊಳಿಸಿದೆ. ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮುಂದುವರಿದ ಭಾಗವಾಗಿ 720 ಜನರು ತಂಗಬಹುದಾದ 4.86 ಕೋಟಿ ರೂ. ವೆಚ್ಚದ ಡಾರ್ಮಿಟರಿ ಕಟ್ಟಡ, 2.15 ಕೋಟಿ ರೂ.ವೆಚ್ಚದ ಆಧುನಿಕ ಸುಸಜ್ಜಿತ ಉಪಹಾರ ಮಂದಿರ, 1.23 ಕೋಟಿ ರೂ. ವೆಚ್ಚದ 65 ಶೌಚಾಲಯ ಕಟ್ಟಡ, 4.27 ಕೋಟಿ ರೂ ವೆಚ್ಚದಲ್ಲಿ ಅಂತರಗಂಗೆ ಸಮೀಪ ಶುದ್ಧ ನೀರಿನ ಕಲ್ಯಾಣಿ ಸೇರಿದಂತೆ 13.84 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿಕಾಮಗಾರಿಗಳು ಪೂರ್ಣಗೊಂಡಿದ್ದು, ನವೆಂಬರ್ 26 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಇನ್ನು ವಿಶೇಷ ಸಂದರ್ಭಗಳಲ್ಲಿ ಸಹಸ್ರಾರು ಭಕ್ತರು ಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುವುದು ಸಾಮಾನ್ಯ. ಪಾದಯಾತ್ರೆಯಲ್ಲಿ ಬರುವವರಿಗೆ ತಾಳಬೆಟ್ಟದಿಂದ ಮಹದೇಶ್ವರಬೆಟ್ಟಕ್ಕೆ ಬಸವನಹಾದಿ, ಸರ್ಪನಹಾದಿ ಎಂಬ ಎರಡು ದಾರಿಗಳಿವೆ. ಬಸವನಹಾದಿ ಎಂದರೆ ಮೆಟ್ಟಿಲುಗಳ ಮೂಲಕವೂ ಸರ್ಪನ ಹಾದಿ ಎಂದರೆ ರಸ್ತೆ ಮೂಲಕವೂ ಹೋಗುವುದಾಗಿದೆ. ಆದರೆ, ಬಸವನಹಾದಿಯ ಮೆಟ್ಟಿಲು ಸಾಕಷ್ಟು ಹಾಳಾಗಿದ್ದು, ಈ ಮೆಟ್ಟಿಲುಗಳ ಮೂಲಕ ಬೆಟ್ಟ ಏರುವುದು ಭಕ್ತರಿಗೆ ತ್ರಾಸದಾಯಕವಾಗಿದೆ. ಈ ಹಿನ್ನಲೆಯಲ್ಲಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾನೈಟ್ ಮೆಟ್ಟಿಲು ನಿರ್ಮಾಣ ಮಾಡುವ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ.
ಬಸವನಹಾದಿಯಲ್ಲಿ ಕೇವಲ ಮೆಟ್ಟಿಲು ನಿರ್ಮಿಸುವುದಷ್ಟೆ ಅಲ್ಲ, ಪಾದಯಾತ್ರಿ ಭಕ್ತರಿಗೆ ಅಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸುವುದುನ್ನು ಈ ಯೋಜನೆ ಒಳಗೊಂಡಿದೆ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನ್ಯೂಸ್ 18 ಗೆ ತಿಳಿಸಿದರು.
ಇದನ್ನೂ ಓದಿ : ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರ ಸಾವು: ಮದುವೆಗೆ ಬಂದವರು ಮಸಣ ಸೇರಿದರು
ಇಷ್ಟೇ ಅಲ್ಲದೆ ಬೆಟ್ಟದ ಮಾಸ್ಟರ್ ಪ್ಲಾನ್ ಆವರಣದಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ 512 ಕೊಠಡಿಗಳ ಅತಿಥಿ ಗೃಹ ನಿರ್ಮಾಣ, 7.9 ಕೋಟಿ ರೂ. ವೆಚ್ಚದಲ್ಲಿ 30 ಜನರು ತಂಗಬಹುದಾದ ಡಾರ್ಮಿಟರಿ ಕಟ್ಟಡ ದೇವಸ್ಥಾನದ ಹಿಂಭಾಗದಲ್ಲಿ 24 ಕೋಟಿ ವೆಚ್ಚದಲ್ಲಿ ಸರತಿ ಸಾಲಿನ ಸಂಕೀರ್ಣ ನಿರ್ಮಾಣ, 4.8 ಕೋಟಿ ರೂಪಾಯಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ ಸೇರಿದಂತೆ 109.93 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದ್ದು ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಮುಖಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ