ಗದಗ: ಗದಗ ಜಿಲ್ಲೆಯ ರೈತರು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ವರ್ಷದ ಪ್ರವಾಹದ ಗಾಯ ಮಾಸುವ ಮುನ್ನ ಮತ್ತೆ ಪ್ರವಾಹ ಆವರಿಸಿಕೊಂಡು ಬರೆ ಎಳೆದಿದೆ. ಜಿಲ್ಲೆಯ ಅನ್ನದಾತರು ಮಲಪ್ರಭಾ ನದಿಯ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ. ಸಮೃದ್ಧವಾಗಿ ಬೆಳೆದ ಬೆಳೆ ಮಲಪ್ರಭೆ ಉಕ್ಕಿ ಹರಿದ ಪರಿಣಾಮ ಬೆಳೆ ಜಲಾವೃತವಾಗಿದೆ. ಹೀಗಾಗಿ ರೈತರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಮುದ್ರಣ ಕಾಶಿ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ 16 ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಮತ್ತೊಮ್ಮೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಮೂರ್ನಾಲು ದಿನಗಳಿಂದ ಮಲಪ್ರಭಾ ನದಿ ಗದಗ ಜಿಲ್ಲೆಯಲ್ಲಿ ಉಕ್ಕಿ ಹರಿದ ಪರಿಣಾಮ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಸದ್ಯ ನವಿಲು ತೀರ್ಥ ಜಲಾಶಯದಿಂದ ಹರಿ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿವೆ. ಕೊಣ್ಣೂರ, ಹೊಳೆ ಆಲೂರು, ಅಮರಗೋಳ, ಹೊಳೆ ಇಟಗಿ ಸೇರಿದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಬೆಳೆ ಜಲಾವೃತವಾಗಿದೆ. ಹೆಸರು, ಶೇಂಗಾ, ಈರುಳ್ಳಿ, ಹತ್ತಿ, ಸೂರ್ಯಕಾಂತಿ, ಗೋವಿನ ಜೋಳ ನೀರಿನಲ್ಲಿಯೇ ನಿಂತಿದೆ. ಹೀಗಾಗಿ ಈ ಬಾರಿ ಚೆನ್ನಾಗಿ ಮಳೆಯಾಗಿದ್ದರಿಂದ ಸಮೃದ್ಧವಾಗಿ ಬೆಳೆದಿದ್ದ ಫಸಲು ಮಲಪ್ರಭೆಯ ಪಾಲಾಗಿದೆ. ಕಳೆದ ವರ್ಷದ ಪರಿಹಾರ ಸಹ ಸಮರ್ಪಕವಾಗಿ ತಲುಪಿಲ್ಲ. ಈಗ ಮತ್ತೆ ನಮ್ಮ ಬದುಕು ಕೊಚ್ಚಿಕೊಂಡು ಹೋಗಿದೆ. ಹಾಗಾಗಿ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.
ಇದನ್ನು ಓದಿ: ಪಿಯು ಪಿಸಿಎಂಬಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್; ಇನ್ನು ಮುಂದೆ ಕನ್ನಡ ಮಾಧ್ಯಮದಲ್ಲೂ ದೊರೆಯಲಿದೆ ಪಠ್ಯ
ರೋಣ ತಾಲೂಕಿನ ಅಮರಗೋಳ ಭಾಗದ ರೈತರಿಗೆ ಕಳೆದ ವರ್ಷ ಸಹ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ಈವಾಗ ಮತ್ತೆ ಪ್ರವಾಹ ಬಂದು ಸಾಲಸೋಲ ಮಾಡಿ ಬೆಳೆದ ಬೆಳೆ ನೀರಿಗೆ ಆಹುತಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ನೀರು ಜಮೀನಿಗೆ ನುಗ್ಗಿದ್ದು, ಗ್ರಾಮದ ಸನಿಹಕ್ಕೆ ನುಗ್ಗಿದೆ. ಆದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹೊಳೆ ಆಲೂರು ಹಾಗೂ ಬಾದಾಮಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಜನರು ಸಂಚಾರ ಮಾಡಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಹೊಳೆ ರೈಲು ಸೇತುವೆ ಮೇಲೆ ತಾತ್ಕಾಲಿಕವಾಗಿ ಓಡಾಡುತ್ತಿದ್ದಾರೆ. ಬಾದಾಮಿ ಹಾಗೂ ಹೊಳೆ ಆಲೂರು ಸೇತುವೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದರೂ, ಸರ್ಕಾರ ಮಾತ್ರ ಕ್ಯಾರೆ ಮಾಡುತ್ತಿಲ್ಲಾ ಎಂದು ಹೊಳೆ ಆಲೂರು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ