ಉತ್ತರ ಕರ್ನಾಟಕ ಜೋಳಕ್ಕೂ ಬಂದಿದೆ ಕುತ್ತು; ಕಡಿಮೆಯಾಗುತ್ತಿದೆ ಬಿತ್ತನೆ ಪ್ರಮಾಣ- ಎಚ್ಚೆತ್ತುಕೊಳ್ಳಬೇಕಿದೆ ಸರಕಾರ

ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ವರ್ಷ ಜೋಳ ಬೆಳೆಗೆ ಬಿತ್ತನೆ ಪ್ರಮಾಣ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಜೋಳದ ಬೆಳೆಯೇ ಬದಿಗೆ ಸರಿಯುವ ಆತಂಕ ಎದುರಾಗಿದೆ.

ಜೋಳದ ಬೆಳೆ

ಜೋಳದ ಬೆಳೆ

  • Share this:
ವಿಜಯಪುರ(ಡಿ. 09): ಡೋಣಿ ಹರಿದರೆ ನಾಡೆಲ್ಲ ಕಾಳು ಎಂಬ ಮಾತು ಬಸವ ನಾಡಿನಲ್ಲಿ ಅಷ್ಟೇ ಅಲ್ಲ ಉತ್ತರ ಕರ್ನಾಟಕದಲ್ಲಿ ಜನಜನಿತ.  ಆದರೆ, ಈಗ ಇದೇ ಜೋಳಕ್ಕೆ ಕುತ್ತು ಬಂದಿದೆ.  ವರ್ಷದಿಂದ ವರ್ಷಕ್ಕೆ ಜೋಳದ ಬಿತ್ತನೆ ಕಡಿಮೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಜೋಳದ ಬೆಳೆಯೇ ಬದಿಗೆ ಸರಿಯುವ ಆತಂಕ ಎದುರಾಗಿದೆ.

ವಿಜಯಪುರ ಜಿಲ್ಲೆಯ ಡೋಣಿ ನದಿ ತೀರದಲ್ಲಿ ಬೆಳೆಯುವ ಜೋಳಕ್ಕೆ ಅದರದೇ ಆದ ಇತಿಹಾಸವಿದೆ.  ಈ ಭಾಗದಲ್ಲಿರುವ ರೈತರು 50 ಚೀಲ ಜೋಳ ಬೆಳೆದರು, 100 ಚೀಲ ಜೋಳ ಉತ್ಪಾದಿಸಿದ್ದಾರೆ ಎಂಬ ಮಾತುಗಳು ಈ ಹಿಂದೆೇ ಬಹಳ ಪ್ರಚಲಿತವಿದ್ದವು.  ಅಲ್ಲದೇ, ಈಗಲೂ ಅಲ್ಲೊಬ್ಬ ಇಲ್ಲೊಬ್ಬ ರೈತರು ಇಷ್ಟೋಂದು ಪ್ರಮಾಣದಲ್ಲಿ ಜೋಳ ಬೆಳೆದಿರುವ ಬಗ್ಗೆ ಮಾಹಿತಿ ಸಿಗುತ್ತಿದೆ.  ಆದರೆ, ಕಳೆದ ಕೆಲವು ವರ್ಷಗಳಿಂದ ಈ ಜೋಳದ ಬೆಳೆಗೂ ಕುತ್ತು ಬಂದಿದೆ.

ಅತೀ ಹೆಚ್ಚು ಜೋಳ ಬೆಳೆಯುವ ಬಸವನಾಡಿನಲ್ಲಿಯೇ ಈಗ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.  ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾದ ಬಿಜಾಪುರ ಜೋಳಕ್ಕೂ ಈಗ ಕುತ್ತು ಬಂದಿದೆ.  ಡೋಣಿ ನದಿ ಪಾತ್ರದಲ್ಲಿ ಕಪ್ಪು ಮಣ್ಣಿನಲ್ಲಿ ಬೆಳೆಯುವ ಸಮೃದ್ಧ ಜೋಳದ ರೊಟ್ಟಿಯ ರುಚಿಯೇ ಬೇರೆ.  ಈ ಮಣ್ಣಿನಲ್ಲಿರುವ ಕಬ್ಬಿಣಾಂಶ ಈ ಜೋಳದ ಟೇಸ್ಟ್ ನ್ನು ಹೆಚ್ಚಿಸುತ್ತದೆ. ಆದರೆ, ಕಳೆದ ಮೂರು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.  ಜೋಳಕ್ಕೆ ಹೆಸರುವಾಸಿಯಾದ ವಿಜಯಪುರ ಜಿಲ್ಲೆಯಲ್ಲಿ ಜೋಳ ಬಿತ್ತನೆ ಕುಸಿತವಾಗಿದೆ ಎನ್ನುತ್ತಾರೆ ವಿಜಯಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿಲಿಯಂ ರಾಜಶೇಖರ ಡಿ.

ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲೂ ಬಂದೂಕು ಇಟ್ಟುಕೊಳ್ಳಲು ಅವಕಾಶ ಕೊಡಿ; ಪೊಲೀಸರಿಗೆ ಕಾಫಿ ಬೆಳೆಗಾರರ ಮನವಿ

ಕಳೆದ ಮೂರು ವರ್ಷಗಳಿಂದ ಬಿತ್ತನೆ ಕುಂಠಿತ:

ವಿಜಯಪುರ ಜಿಲ್ಲೆಯಲ್ಲಿ ಜೋಳ ಬಿತ್ತಿ ಮನೆಮಾತಾಗುತ್ತಿದ್ದ ರೈತರು ಈಗ ಜೋಳದ ಬದಲು ದ್ವಿದಳ ಧಾನ್ಯ ಅಂದರೆ ತೊಗರಿ ಮೊರೆ ಹೋಗಿದ್ದು, ಎಲ್ಲಿ ನೋಡಿದರೂ ಜಮೀನಿನಲ್ಲಿ ತೊಗರಿಯೇ ಹೆಚ್ಚಾಗಿ ಆವರಿಸಿದೆ.  2018-19ರಲ್ಲಿ 1.51 ಲಕ್ಷ ಹೆಕ್ಟೇರ್ ನಲ್ಲಿ ಜೋಳ ಬಿತ್ತನೆ ಮಾಡಿದ್ದರು.  ಆದರೆ, ಈ ಪ್ರಮಾಣ 2019-20 ರಲ್ಲಿ 1.28 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ.  ಅದರಲ್ಲೂ ಈ ವರ್ಷ ಅಂದರೆ 2020-21ರಲ್ಲಿ ರೈತರು ಕೇವಲ 90 ಸಾವಿರ ಹೆಕ್ಟೇರ್ ನಲ್ಲಿ ಮಾತ್ರ ಜೋಳ ಬಿತ್ತನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಜೋಳಕ್ಕೆ ಕಂಟಕ ಎದುರಾಗುವ ಲಕ್ಷಣಕ್ಕೆ ಸಾಕ್ಷಿಯಾಗಿದೆ.

ಜೋಳಕ್ಕಿಂತ ತೊಗರಿಗೆ ರೈತರ ಆದ್ಯತೆ ಯಾಕೆ?:

ವಿಜಯಪುರ ಜಿಲ್ಲೆಯ ಜನರಿಗೆ ಜೋಳಕ್ಕಿಂತ ತೊಗರಿ ಬಿತ್ತನೆ ಹೆಚ್ಚು ಅನುಕೂಲವಾಗಿದೆ.  ಜೋಳ ಬಿತ್ತನೆಗೆ ಬೇಕಾಗುವ ತಾಂತ್ರಿಕ ಅಂಶಗಳು ತೋಗರಿ ಬಿತ್ತನೆಯಲ್ಲಿ ಇಲ್ಲ.  ಜೋಳ, ಬಿತ್ತನೆ ನಿರ್ವಹಣೆ ವೆಚ್ಚವೂ ಹೆಚ್ಚಾಗಿದ್ದು, ಲಾಭವೂ ಕಡಿಮೆ ಎಂಬ ಭಾವನೆ ಬಲವಾಗಿದೆ.  ಜೋಳ ಬಿತ್ತನೆಯಿಂದ ಹಿಡಿದು, ನಿರ್ವಹಣೆ ಮತ್ತು ರಾಶಿಯವರೆಗೂ ಕಾರ್ಮಿಕರು ಬೇಕು.  ಆದರೆ, ತೊಗರಿ ಬೆಳೆಗೆ ನಿರ್ವಹಣೆ ಕಡಿಮೆ.  ಯಂತ್ರದ ಮೂಲಕ ರಾಶಿ ಮಾಡಬಹುದಾಗಿದೆ.  ಅಲ್ಲದೇ, ಒಂದು ಎಕರೆಯಲ್ಲಿ ಸುಮಾರು ಮೂರ್ನಾಲ್ಕು ಕ್ವಿಂಟಾಲ್ ಜೋಳ ಬೆಳೆದರೆ ಸಿಗುವ ಹಣಕ್ಕಿಂತ ಹೆಚ್ಚು ಹಣವನ್ನು ತೊಗರಿ ಬಿತ್ತನೆ ಮಾಡಿ ಪಡೆಯಬಹುದಾಗಿದೆ ಎಂಬ ವಿಶ್ವಾಸ ರೈತರಲ್ಲಿದೆ.  ಜೋಳಕ್ಕಿಂತ ತೊಗರಿ ಇಳುವರಿ ಜೊತೆ ಬೆಲೆಯೂ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಎಲ್ಲರ ಸಹಕಾರ ಅಗತ್ಯ; ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

ಈವರೆಗೆ ಕಾಣದಿದ್ದ ರೋಗಗಳೂ ಜೋಳಕ್ಕೆ ಬರುತ್ತಿದೆ.  ಇದೂ ಕೂಡ ರೈತರು ಜೋಳ ಬೆಳೆಯಲು ಹಿಂದೇಟು ಹಾಕಲು ಕಾರಣವಾಗಿದೆ.  ಜಾನುವಾರುಗಳಿಗೆ ಮೇವಿಗಾಗಿ ಜೋಳ ಅಗತ್ಯ ಇರುವವರು ಮಾತ್ರ ಈಗ ಜೋಳ ಬೆಳೆಯುತ್ತಿದ್ದಾರೆ.  ಜಾನುವಾರು ಸಾಕುತ್ತಿರುವವರಿಂದ ಮಾತ್ರ ಜೋಳ ಬಿತ್ತನೆಗೆ ಹೆಚ್ಚಿನ ಒಲವು ಹೆಚ್ಚಿದೆ ಎನ್ನುತ್ತಾರೆ ರೈತರಾದ ಸದಾಶಿವ ಎಸ್. ಬರಟಗಿ.

ಜೋಳದ ಬೆಲೆ ಹೆಚ್ಚಳ, ತಳಿ, ಜಾನುವಾರುಗಳೂ ಮಾಯವಾಗುವ ಆತಂಕ:

ವರ್ಷದಿಂದ ವರ್ಷಕ್ಕೆ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.  ಇದರಿಂದಾಗಿ ಮುಂಬರುವ ದಿನಗಳಲ್ಲಿ ಜೋಳದ ಬೆಲೆ ಗಗನ್ಕಕೇರುವ ಆತಂಕ ಹೆಚ್ಚಾಗಿದೆ.  ಜೋಳದ ತಳಿಯೂ ಮಾಯವಾಗುವ ಆಂತಕ ಎಂದುರಾಗಿದೆ.  ಜಾನುವಾರುಗಳು ಕೇವಲ ಹೈನುಗಾರಿಕೆಗೆ ಸೀಮಿತವಾಗಿ ಈ ಜಾನುವಾರುಗಳಿಗೆ ಮೆಕ್ಕೆಜೋಳದಂಥ ಮೇವು ಬೆಳೆಯುವುದು ಹೆಚ್ಚಾಗಬಹುದು.  ಅಷ್ಟೇ ಅಲ್ಲ, ಜೋಳದ ಮೇವು ಉತ್ಪಾದನೆ ಕುಸಿದು ಮೇವು ಸಿಗದೆ ರೈತರು ಜಾನುವಾರು ಎತ್ತುಗಳು, ಹೋರಿಗಳು ಸಾಕಣೆಯಿಂದಲೂ ದೂರವಾಗಬಹುದು.  ಅಲ್ಲದೇ, ಎತ್ತುಗಳು ಮತ್ತು ಹೋರಿಗಳ ಸಾಕಾಣಿಕೆಯೂ ಕಡಿಮೆಯಾಗುವ ಆತಂಕ ಎದುರಾಗಿದೆ.

ಸರಕಾರ ಎಚ್ಚೆತ್ತುಕೊಳ್ಳಬೇಕು:

ಜೋಳ ಬಿತ್ತನೆ ಪ್ರಮಾಣ ಕುಸಿಯುತ್ತಿರುವುದರಿಂದ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.  ಜೋಳ ಬೆಳೆಯುವುದನ್ನು ಪ್ರೋತ್ಸಾಹಿಸಲೇಬೇಕಿದೆ.  ಇಲ್ಲಿದ್ದರೆ ಉತ್ತರ ಕರ್ನಾಟಕದಲ್ಲಿ ಪ್ರಮುಖ ಆಹಾರ ಬೆಳೆಯಾದ ಜೋಳದ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯೂ ಕಾಡಲಿದೆ.  ಸರಕಾರ ರೈತರಿಗೆ ಜೋಳ ಬೆಳೆಯಲು ಪ್ರೋತ್ಸಾಹಿಸಿ, ಉತ್ತಮ ಬೆಂಬಲ ಬೆಲೆ ನೀಡಿ ನೆರವಾಗದಿದ್ದರೆ ಭವಿಷ್ಯದಲ್ಲಿ ಜೋಳವೇ ಮಾಯವಾಗುವ ಆತಂಕ ತಪ್ಪಿದ್ದಲ್ಲ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: