• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವಿಜಯಪುರದಲ್ಲಿ ರಾಷ್ಟ್ರಪಿತನ ಅಪರೂಪದ ಸಂಗತಿಗಳ ವಿಶೇಷ ಛಾಯಾಚಿತ್ರ ಪ್ರದರ್ಶನ

ವಿಜಯಪುರದಲ್ಲಿ ರಾಷ್ಟ್ರಪಿತನ ಅಪರೂಪದ ಸಂಗತಿಗಳ ವಿಶೇಷ ಛಾಯಾಚಿತ್ರ ಪ್ರದರ್ಶನ

ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಾಂಧೀಜಿ ಅವರ ಅಪರೂಪದ ಫೋಟೋ ಪ್ರದರ್ಶನ

ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಾಂಧೀಜಿ ಅವರ ಅಪರೂಪದ ಫೋಟೋ ಪ್ರದರ್ಶನ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಭಾಗವಾಗಿ ವಿಜಯಪುರ ನಗರದ ಅಂಬೇಡ್ಕರ್ ಸ್ಟೇಡಿಯಂನಲ್ಲಿ ಮಹಾತ್ಮ ಗಾಂಧಿ ಅವರ ಜೀವನ ಮತ್ತು ಹೋರಾಟದ ವಿವಿಧ ಕಾಲಘಟ್ಟಗಳ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

  • Share this:

ವಿಜಯಪುರ: ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿನ ಅಪರೂಪದ ಸಂಗತಿಗಳ ಬಗ್ಗೆ ವಿಶೇಷ ಛಾಯಾಚಿತ್ರ ಪ್ರದರ್ಶನ ವಿಜಯಪುರದಲ್ಲಿ ನಡೆಯುತ್ತಿದೆ. ವಿಜಯಪುರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರದಿಂದ ವಿಜಯಪುರ ನಗರದ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಸ್ಟೇಡಿಯಂ ನ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿನ ಅಪರೂಪದ ಸಂಗತಿಗಳ ಬಗ್ಗೆ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. 


ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಗುಜರಾತ್​ನ ಪೋರ್ ಬಂದರ್​ನಲ್ಲಿ ಹುಟ್ಟಿದ ಮೋಹನದಾಸ್ ಕರಮಚಂದ ಗಾಂಧಿ, ವಿದೇಶದಲ್ಲಿ ಕಾನೂನು ಉನ್ನತ ಪದವಿಯನ್ನು ಪಡೆದರು.  ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ನಡೆಸಲು ಹೋದ ಗಾಂಧೀಜಿ ಅನ್ಯಾಯಗಳ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡಿರುವ ಅಪರೂಪದ ಛಾಯಾಚಿತ್ರಗಳು ಇಲ್ಲಿ ಪ್ರದರ್ಶನದಲ್ಲಿವೆ.


ವಕೀಲಿ ವೃತ್ತಿಯಲ್ಲಿ ಒಳ್ಳೆಯ ಹೆಸರು ಪಡೆದ ಮೋಹನದಾಸ ಕರಮಚಂದ ಗಾಂಧೀಜಿ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗೆ ಆಗುತ್ತಿದ್ದ ಅನಾನುಕೂಲತೆಗಳನ್ನು ಸರಿಪಡಿಸಲು ಹೋರಾಟದ ಮಾರ್ಗವನ್ನು ಕೈಗೆತ್ತಿಕೊಂಡರು. ಅದಕ್ಕೆ ರಾಷ್ಟ್ರ ನೇತಾರ ಗೋಪಾಲಕೃಷ್ಣ ಗೋಖಲೆಯವರು ಪ್ರೇರಣೆ ನೀಡಿರುವ ಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ. 1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನದ ಭಾವಚಿತ್ರಗಳೂ ಇಲ್ಲಿವೆ.


ಇದನ್ನೂ ಓದಿ: ದಕ್ಷಿಣ ಕನ್ನಡ: ಅಂತರ್ಜಲ ಕಾಪಾಡುವಲ್ಲಿ ಪುತ್ತೂರಿನ ಕೃಷಿಕನ ಅಳಿಲು ಸೇವೆ


ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದ ಗಾಂಧೀಜಿ ಭಾರತವನ್ನೆಲ್ಲ ಸುತ್ತಿ ಬಂದು ಸ್ವಾತಂತ್ರ್ಯ ಹೋರಾಟದ ಜೊತೆಗೆ ಅನೇಕ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದರು.  ಬ್ರಿಟಿಷ್ ಸರಕಾರದ ವಿರುದ್ಧ ಸತ್ಯಾಗ್ರಹ ಚಳುವಳಿಯನ್ನು ಬೇರೆ ಬೇರೆ ವಿಧಾನಗಳ ಮೂಲಕ ಕೈಗೊಂಡರು. ಅದರಲ್ಲಿ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಅಸಹಕಾರ ಚಳುವಳಿ ಮುಖ್ಯವಾಗಿದ್ದು, ಆ ಛಾಯಾಚಿತ್ರಗಳೂ ಇಲ್ಲಿ ಗಮನ ಸೆಳೆಯುತ್ತಿವೆ.


ಅಷ್ಟೇ ಅಲ್ಲ, ಮಹಾತ್ಮ ಗಾಂಧೀಜಿ ಅವರು ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಮ್ಮೆ ಮಾತ್ರ, ಅದೂ ಕನ್ನಡನಾಡಿನ ಬೆಳಗಾವಿಯಲ್ಲಿ. 1924 ರಲ್ಲಿ ನಡೆದ ಅಧಿವೇಶನದಲ್ಲಿ ಅಧಿವೇಶನದ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಸ್ಮಾರಕ ಸ್ಮಾರಕ ಭವಾನ ಒಂದನ್ನು ನಿರ್ಮಿಸಿದ್ದು, ಈಗ ಅದು ಪ್ರೇಕ್ಷಣೀಯ ಸ್ಥಳವಾಗಿದೆ.  ಕರ್ನಾಟಕಕ್ಕೆ ಬಾಪುರವರು 18ಕ್ಕೂ ಹೆಚ್ಚು ಸಲ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಅಂದೋಲನದ ಜೊತೆಗೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಡಿದ ರಚನಾತ್ಮಕ ಕೆಲಸಗಳ ಛಾಯಾಚಿತ್ರಗಳೂ ಇಲ್ಲಿ ಗಮನಾರ್ಹವಾಗಿವೆ.


ಇದನ್ನೂ ಓದಿ: Photos: ನಾಗರಹೊಳೆಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ಹುಲಿ; ಕ್ಯಾಮರಾ ಕಣ್ಣಿಗೆ ಸಿಕ್ಕ ದೃಶ್ಯ ಇಲ್ಲಿದೆ


ಗಾಂಧೀಜಿ ಕಣ್ಮರೆಯಾಗಿ 67 ವರ್ಷಗಳು ಕಳೆದರೂ ಈಗಲೂ ಅವರು ಪ್ರಸ್ತುತ. ಶಾಂತಿ ಸೇನಾನಿಯಾಗಿ ಅಹಿಂಸಾ ಮಾರ್ಗದಲ್ಲಿ ನಡೆದು ಬಾಪೂಜಿಯ ಆಂದೋಲನ ಈಗ ಇಡೀ ದೇಶವೇ ಅನುಸರಿಸುತ್ತಿರುವ ಮಾರ್ಗ. ಗಾಂಧೀಜಿ ರೂಪಿಸಿದ ಸತ್ಯಾಗ್ರಹ ಚಳುವಳಿಗಳನ್ನು ಅನುಸರಿಸಿ ಸ್ವಾತಂತ್ರ್ಯ ಪಡೆದ ದೇಶಗಳು ಹಲವಾರು. ಸಮಾಜದ ಉನ್ನತಿಗಾಗಿ ಗಾಂಧೀಜಿಯವರು ರೂಪಿಸಿಕೊಟ್ಟ ಕಾರ್ಯಕ್ರಮಗಳು ಸದಾ ಸ್ಮರಣೀಯ ಎಂದು ವಿಜಯಪುರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೈಮಾನ ನದಾಫ ತಿಳಿಸಿದ್ದಾರೆ.


ವಿಜಯಪುರ ನಗರದ ಡಾ| ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಈ ಛಾಯಾಚಿತ್ರವನ್ನು ವಿಜಯಪುರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ವೀಕ್ಷಿಸಿದರು. ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಸ್. ಜಿ. ಲೋನಿ, ಸೈಕ್ಲಿಂಗ್ ಕ್ರೀಡಾಪಟುಗಳು, ವಿಧ್ಯಾರ್ಥಿಗಳು, ಸಾರ್ವಜನಿಕರು ಛಾಯಾಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.


ವರದಿ: ಮಹೇಶ ವಿ. ಶಟಗಾರ

Published by:Vijayasarthy SN
First published: