ವಿಜಯಪುರಕ್ಕೆ ಶುರುವಾಯ್ತು ಮಹಾರಾಷ್ಟ್ರದ ಕೊರೋನಾತಂಕ; ಗಡಿ ಪ್ರದೇಶಕ್ಕೆ ದಿಢೀರ್‌ ಭೇಟಿ ನೀಡಿದ ಅಧಿಕಾರಿಗಳು

ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಿನ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಹಿರಿಯ ಅಧಿಕಾರಿಗಳಾದ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮ ಅಗ್ರವಾಲ, ಜಿ. ಪಂ. ಸಿಇಓ ಗೋವಿಂದರೆಡ್ಡಿ ಗುರುವಾರ ಗಡಿ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

news18-kannada
Updated:May 29, 2020, 7:06 AM IST
ವಿಜಯಪುರಕ್ಕೆ ಶುರುವಾಯ್ತು ಮಹಾರಾಷ್ಟ್ರದ ಕೊರೋನಾತಂಕ; ಗಡಿ ಪ್ರದೇಶಕ್ಕೆ ದಿಢೀರ್‌ ಭೇಟಿ ನೀಡಿದ ಅಧಿಕಾರಿಗಳು
ಮಹಾರಾಷ್ಟ್ರ-ವಿಜಯಪುರ ಗಡಿ ಭಾಗವನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.
  • Share this:
ವಿಜಯಪುರ (ಮೇ. 28) ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಪ್ರಕರಣಗಳು ಅಧಿಕವಾಗುತ್ತಿರುವುದಕ್ಕೆ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವುದೇ ಎನ್ನಲಾಗುತ್ತಿದೆ. ಮಹಾರಾಷ್ಟ್ರದಿಂದ ವಾಪಸ್ ಬಂದಿರುವ ಕಾರ್ಮಿಕರಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡರುವ ವಿಜಯಪುರ ಜಿಲ್ಲೆಯಲ್ಲಿಯೂ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಅಧಿಕಾರಿಗಳು ಗಡಿ ಭಾಗಕ್ಕೆ ಗುರುವಾರ ದಿಢೀರ್‌ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈವರೆಗೆ ವಿಜಯಪುರ ಜಿಲ್ಲೆಗೆ ಸುಮಾರು 23,000 ಕಾರ್ಮಿಕರು ವಾಪಸ್ಸಾಗಿದ್ದು, ಅವರಲ್ಲಿ ಶೇ. 80ಕ್ಕಿಂತಲೂ ಹೆಚ್ಚು ಜನ ಅದರೆ ಸುಮಾರು 18,000 ಜನ ಮಹಾರಾಷ್ಟ್ರದಿಂದಲೇ ಬಂದಿದ್ದಾರೆ.  ಇವರಲ್ಲಿ ಸುಮಾರು 8 ಸಾವಿರ ಜನ ಅನಧಿಕೃತವಾಗಿ ವಿಜಯಪುರ ಜಿಲ್ಲೆಗೆ ಮರಳಿದ್ದಾರೆ.  ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಜನ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ಪ್ರವೇಶ ಮಾಡುವುದನ್ನು ತಡೆಯಲು ವಿಜಯಪುರ ಜಿಲ್ಲಾಡಳಿತ ಮಹಾರಾಷ್ಟ್ರದೊಂದಿಗಿರುವ ಎಲ್ಲ ಗಡಿ ರಸ್ತೆಗಳನ್ನು ಬಂದ್ ಮಾಡಿದೆ.

ಕೇವಲ ಚಡಚಣ ತಾಲೂಕಿನ ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಒಂದೇ ಎಂಟ್ರಿ ಮತ್ತು ಎಕ್ಸಿಟ್ ರಸ್ತೆಯನ್ನಾಗಿ ಮಾಡಲಾಗಿದೆ.  ಆದರೂ, ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಿನ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಹಿರಿಯ ಅಧಿಕಾರಿಗಳಾದ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮ ಅಗ್ರವಾಲ, ಜಿ. ಪಂ. ಸಿಇಓ ಗೋವಿಂದರೆಡ್ಡಿ ಗುರುವಾರ ಗಡಿ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾರಾಷ್ಟ್ರದ ಗಡಿಯಲ್ಲಿರುವ ಉಮದಿ, ಶಿರಾಡೋಣ ಹಾಗೂ ಧೂಳಖೇಡ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಈ ಅಧಿಕಾರಿಗಳು, ಹೊರ ರಾಜ್ಯದ ಯಾವೊಬ್ಬ ಪ್ರಯಾಣಿಕರೂ ಅನಧೀಕೃತವಾಗಿ ಚೆಕ್‌ಪೋಸ್ಟ್‌ ಮೂಲಕ ಬರದಂತೆ ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಜಿಲ್ಲೆಗೆ ಯಾರಾದರೂ ಮಹಾರಾಷ್ಟದಿಂದ ಪ್ರವೇಶ ಪಡೆಯುವ ಬಗ್ಗೆ ಗಮನಕ್ಕೆ ಬಂದಲ್ಲಿ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡುವಂತೆಯೂ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಚೆಕಪೋಸ್ಟ್ ನಲ್ಲಿರುವ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದರು.

ಈಗಾಗಲೇ ಕೊರೊನಾ ಹಾಟಸ್ಪಾಟ್ ಆಗಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಅಧಿಕೃತ ಪಾಸ್ ಇಲ್ಲದೆ ಪ್ರವೇಶ ಪಡೆಯುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.  ಸ್ಥಳೀಯರೂ ಕೂಡ ತೀವ್ರ ನಿಗಾ ಇಟ್ಟು ಮಾಹಿತಿ ಒದಗಿಸಿ ಆಯಾ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?
First published: May 29, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading