ಜೆಡಿಎಸ್ ಹುಟ್ಟಿರುವುದೇ ಹಳ್ಳಿಗಳಿಂದ; ಗ್ರಾ.ಪಂ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ: ಎ ಮಂಜು
ಜೆಡಿಎಸ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಆದರೆ, ಜೆಡಿಎಸ್ ಪಕ್ಷ ಹುಟ್ಟಿರುವುದೇ ಹಳ್ಳಿಗಳಿಂದ. ಹೀಗಾಗಿ, ಗ್ರಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ ಎಂದು ಮಾಗಡಿ ಶಾಸಕ ಎ ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮನಗರ (ಮಾಗಡಿ): ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಮಾಗಡಿ ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ಮಾಗಡಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಮಾಗಡಿಯ ಜೆಡಿಎಸ್ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ಚುನಾವಣೆಯ ತಯಾರಿ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎ. ಮಂಜು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರಲಿವೆ. ಜನರು ಶಾಸಕರಿರುವ ಕಡೆಗೆ ಮತ ಹಾಕುತ್ತಾರೆ. ಶಾಸಕರಿಗೆ ಬಲ ತುಂಬಿದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದು ಕ್ಷೇತ್ರದ ಮತದಾರರು ನಮಗೆ ಅಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದು ಟೀಕಿಸಿದ ಎ ಮಂಜು, ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವವರನ್ನು ತರಾಟೆಗೆ ತೆಗೆದುಕೊಂಡರು. ಹಳ್ಳಿಯಿಂದಲೇ ಜೆಡಿಎಸ್ ಪಕ್ಷ ಹುಟ್ಟಿರೋದು. ಹಾಗಾಗಿ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತದಾರರು ಮತಹಾಕುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಪಕ್ಷದಿಂದ ಅಭ್ಯರ್ಥಿಗಳು ಚುನಾವಣೆಗೆ ಸಿದ್ಧರಿದ್ದಾರೆ ಎಂದು ಹೇಳಿದರು.
ಮಾಗಡಿ ಕ್ಷೇತ್ರಕ್ಕೆ ಹೆಚ್.ಸಿ. ಬಾಲಕೃಷ್ಣ ಕೊಡುಗೆ ಶೂನ್ಯ. ಆದರೆ ನಾನು ಅಭಿವೃದ್ಧಿ ಮಾಡುತ್ತಿದ್ದರೂ ಅವರು ಸಹಿಸುತ್ತಿಲ್ಲ. ಬಾಲಕೃಷ್ಣ ಹಿಂದೆ 4 ಬಾರಿ ಶಾಸಕರಾಗಿದ್ದರೂ ಮಾಗಡಿಯ ಅಭಿವೃದ್ಧಿ ಮಾಡಿಲ್ಲ. ಈಗ ಮಾಗಡಿ ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ರೀತಿಯಲ್ಲಿ ಆಗುತ್ತಿದೆ. ನನಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಬಾಲಕೃಷ್ಣ ಎಲ್ಲಾ ಯೋಜನೆಗಳಿಗೂ ಕೊಕ್ಕೆ ಹಾಕ್ತಿದ್ದಾರೆ ಎಂದು ಮಂಜು ಆರೋಪಿಸಿದರು.
ಇನ್ನು ಗ್ರಾ. ಪಂ. ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಆದರೆ ಯಾರು ಕೂಡ ವಿಚಲಿತರಾಗಬೇಡಿ ಎಂದು ಮನವಿ ಮಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾದರೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ