Madikeri Municipality: ಚುನಾವಣೆ ಮುಗಿದು 4 ತಿಂಗಳಾದರೂ ಅಧ್ಯಕ್ಷ - ಉಪಾಧ್ಯಕ್ಷರ ಕಾಣದ ಮಡಿಕೇರಿ ನಗರಸಭೆ!

ಈಗಾಗಲೇ ನಾವು ಕೂಡ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದೇವೆ. ಸಿಎಂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ನಗರಸಭೆ

ಮಡಿಕೇರಿ ನಗರಸಭೆ

  • Share this:
ಕೊಡಗು: ಯಾವುದೇ ಪಟ್ಟಣ, ನಗರ ಅಥವಾ ಮಹಾನಗರ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಚುನಾಯಿತ  ಸ್ಥಳೀಯ ಆಡಳಿತಗಳೇ ಮುಖ್ಯವಾಗುತ್ತವೆ. ಆದರೆ ಚುನಾಯಿತ ಆಡಳಿತವೇ ಇಲ್ಲದಿದ್ದರೆ ಯಾರನ್ನು ಕೇಳೋದು ಹೇಳಿ. ಮಡಿಕೇರಿ ನಗರದ ಸ್ಥಿತಿಯೂ ಇದೇ ಆಗಿದೆ. ಹೌದು, ಮಡಿಕೇರಿ ನಗರಸಭೆಗೆ (Madikeri Municipality) ಚುನಾವಣೆ ನಡೆದು ನಾಲ್ಕು ತಿಂಗಳುಗಳೇ ಕಳೆದು ಹೋಗಿವೆ. ಆದರೆ ಇಂದಿಗೂ ಅಧ್ಯಕ್ಷರು ಮತ್ತು ಉಪಾಧ್ಯರ ಸ್ಥಾನಗಳಿಗೆ ಚುನಾವಣೆ (Municipality President And Vice President Election) ನಡೆಯದೆ, ನಗದ ಅಭಿವೃದ್ಧಿ ಎಂಬುದು ಕನ್ನಡಿಯೊಳಗಿನ ಗಂಟಾಗಿ ಉಳಿದಿದೆ. ಮಡಿಕೇರಿ ದಸರಾಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಆದರೆ, ನಗರಸಭೆಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗದೆ ಇರುವುದರಿಂದ ಯಾವೊಂದು ಕೆಲಸಗಳು ಇನ್ನು ಆರಂಭವಾಗಿಲ್ಲ.

ಮಡಿಕೇರಿ ನಗರಸಭೆ ಚುನಾವಣೆ ಏಪ್ರಿಲ್ 3 ನೇ ವಾರದಲ್ಲಿ ನಡೆದು ಫಲಿತಾಂಶವೂ ಹೊರ ಬಿದ್ದಿತ್ತು. 22 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿಯೋದಕ್ಕೆ ಭಾರೀ ಸಿದ್ಧತೆ ನಡೆಸಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕು  ಜಾಸ್ತಿ ಆಗಿದ್ದರಿಂದ ಲಾಕ್ಡೌನ್ ಜಾರಿಯಾಗಿತ್ತು. ಆನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆದರೂ ಕೊಡಗಿನಲ್ಲಿ ಮಾತ್ರ ಕಡಿಮೆ ಆಗಿರಲೇ ಇಲ್ಲ. ಹೀಗಾಗಿ  ಡೆಸೆಂಬರ್ ವರೆಗೆ ಸದ್ಯಕ್ಕೆ ಚುುನಾವಣೆ ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಆದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಾಕಷ್ಟು ಚುನಾವಣೆಗಳೇ ನಡೆದವು. ಆದರೆ ಮಡಿಕೇರಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸಲೇ ಇಲ್ಲ.

ಈಗ ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 2 ಪರ್ಸೆಂಟ್ ಗಿಂತಲೂ ಕಡಿಮೆ ಆಗಿದೆ. ಕೊಡಗಿನಲ್ಲಿ ಹೇರಿದ್ದ ವೀಕೆಂಡ್ ಲಾಕ್ಡೌನ್ ಅನ್ನೂ ತೆರವು ಮಾಡಲಾಗಿದೆ. ಆದರೆ ಮಡಿಕೇರಿ ನಗರಸಭೆಗೆ ಮಾತ್ರ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆದು ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ ಇಂದಿಗೂ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗದೆ ನಗರದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕಡೆಗಣಿಸಲ್ಪಟ್ಟಿವೆ. ಜೂನ್ ನಿಂದ ಆಗಸ್ಟ್ ತಿಂಗಳವರೆಗೆ ಸುರಿದ ಮಹಾಮಳೆಗೆ ಗುಂಡಿ ಬಿದ್ದಿರುವ  ನಗರದ ರಸ್ತೆಗಳನ್ನು ಮುಚ್ಚೋದಕ್ಕೂ ಸಾಧ್ಯವಾಗಿಲ್ಲ. ಹೀಗಾಗಿ ವಾಹನ ಸವಾರರು ನರಕಯಾತನೆ ಅನುಭವಿಸಬೇಕಾಗಿದೆ. ನಗರದ ಹಲವೆಡೆ ತಡೆಗೋಡೆಗಳ ನಿರ್ಮಿಸಬೇಕಾದ ತುರ್ತು ಕೂಡ ಇದೆ.

ಒಟ್ಟಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮೈಸೂರು ಬಿಟ್ಟರೆ ಮಡಿಕೇರಿಯಲ್ಲಿ ನಡೆಯುತ್ತಿದ್ದ ದಸರಾ ಜನೋತ್ಸವಕ್ಕೆ ಕೆಲವು ದಿನಗಳು ಮಾತ್ರವೇ ಬಾಕಿ ಇವೆ. ಆದರೆ ಇದ್ಯಾವುದಕ್ಕೂ ನಗರಸಭೆ ಆಡಳಿತ ಮಂಡಳಿ ರಚನೆ ಆಗದೆ ಇರುವುದರಿಂದ ಎಲ್ಲಾ ಕೆಲಸಗಳೂ ನನೆಗುದಿಗೆ ಬಿದ್ದಿವೆ. ಚುನಾವಣೆ ನಡೆದು ಮೂರು ತಿಂಗಳು ಆದರೂ ಆಡಳಿತದ ಚುಕ್ಕಾಣಿ ಹಿಡಿಯದಿರುವುದರಿಂದ ಆಯಾ ವಾರ್ಡ್ ಗಳ ಕೌನ್ಸಿಲರ್ ಗಳು ತಮ್ಮ ವಾರ್ಡ್ ಗಳ ಮತದಾರರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ಎನ್ನೋದು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ಕೌನ್ಸಿಲರ್ ಗಳ ನೋವು. ಹೀಗಾಗಿ ಆದಷ್ಟು ಬೇಗ ಅಧ್ಯಕ್ಷರು ಮತ್ತು ಉಪಾಧ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಕೌನ್ಸಿಲರ್ ಗಳು ಒತ್ತಾಯಿಸಿದ್ದಾರೆ.

ಇದನ್ನು ಓದಿ: Floating Jetty: ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ ರಾಜ್ಯದ ಮೊದಲ ತೇಲುವ ಜೆಟ್ಟಿ!

ಮತ್ತೊಂದೆಡೆ ಈಗಾಗಲೇ ನಾವು ಕೂಡ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದೇವೆ. ಸಿಎಂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by:HR Ramesh
First published: