• Home
  • »
  • News
  • »
  • district
  • »
  • LockDown: ಲಾಕ್​ಡೌನ್​ನಿಂದ ಕಂಗಾಲಾಗಿರುವ ಭಿಕ್ಷುಕರ ಹಸಿವು ನೀಗಿಸುತ್ತಿದೆ ಮಡಿಕೇರಿ ಸ್ನೇಹಿತರ ಬಳಗ

LockDown: ಲಾಕ್​ಡೌನ್​ನಿಂದ ಕಂಗಾಲಾಗಿರುವ ಭಿಕ್ಷುಕರ ಹಸಿವು ನೀಗಿಸುತ್ತಿದೆ ಮಡಿಕೇರಿ ಸ್ನೇಹಿತರ ಬಳಗ

ಮಡಿಕೇರಿ ಗೆಳೆಯರ ಬಳಗ.

ಮಡಿಕೇರಿ ಗೆಳೆಯರ ಬಳಗ.

ಮಡಿಕೇರಿಯ ಸ್ನೇಹಿತರ ಬಳಗ ಸದ್ದಿಲ್ಲದೆ, ಲಾಕ್​ಡೌನ್​ನಿಂದ ಕಂಗಾಲಾಗಿರುವ ಭಿಕ್ಷುಕರಿಗೆ ತಮ್ಮ ಹಣದಲ್ಲೇ ದಿನನಿತ್ಯ ಅಡಿಗೆ ಮಾಡಿ ಊಟ ನೀಡುತ್ತಾ, ಹಸಿದವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

  • Share this:

ಕೊಡಗು: ಕೋವಿಡ್ ಸೋಂಕು ಹರಡದಂತೆ ತಡೆಯಲು ಸರ್ಕಾರವೇನೋ ಲಾಕ್​ಡೌನ್ ಜಾರಿ ಮಾಡಿದೆ. ಆದರೆ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳುತ್ತಿದ್ದವರ ಗತಿಯೇನು ಅಂತ ಯಾರು ಯೋಚನೆಯನ್ನೂ ಮಾಡಿಲ್ಲ. ಹೀಗೆ ಹಸಿವಿನಿಂದ ಬಳಲುತ್ತಿದ್ದ ಹತ್ತಾರು ಜನರ ಹಸಿವು ನೀಗಿಸೋ ಕೆಲಸವನ್ನು ಮಡಿಕೇರಿಯ ಹೃದಯವಂತ ಸ್ನೇಹಿತರ ಬಳಗ ಸದ್ದಿಲ್ಲದೆ ಮಾಡುತ್ತಿದೆ. ತಾಯಿಯ ಸಹಾಯ ಪಡೆದು ಅಡುಗೆ ಸಿದ್ಧಗೊಳಿಸುತ್ತಿರುವ ಮಗ, ದುಡಿಮೆ ಇಲ್ಲದಿದ್ದರು ಹಸಿದವರ ಹೊಟ್ಟೆ ತುಂಬಿಸಲು ಊಟ ಪ್ಯಾಕ್ ಮಾಡುತ್ತಿರುವ ಆಟೋ ಚಾಲಕ. ಎಲೆಕ್ಟ್ರಿಕಲ್ ಅಂಗಡಿ ಮುಚ್ಚಿ ಊಟ ವಿತರಿಸುತ್ತಿರೋ ಸ್ನೇಹಿತರ ಬಳಗದ ಲೀಡರ್. ಹೌದು ಇದು ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹೃದಯವಂತ ಸ್ನೇಹಿತರ ಬಳಗದ ಮಹತ್ಕಾರ್ಯ.


ಲಾಕ್​ಡೌನ್ ಆದ ಬಳಿಕ ಯಾರೂ ಈ ರಸ್ತೆ ಬದಿಯಲ್ಲಿ ಬದುಕುವವರ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಲಾಕ್​ಡೌನ್ ಘೋಷಣೆಯಾದ ಮಾರನೇ ದಿನವೇ ತಮಿಳು ಭಾಷಿಕ ಭಿಕ್ಷುಕನೊಬ್ಬ ಹಸಿವು ಎಂದು ಕೈಚಾಚಿದ. ಅಂದು ನಮ್ಮ ಮನೆಯಿಂದ ಊಟ ತಂದು ಕೊಟ್ಟೆ. ತಕ್ಷಣವೇ ಇಂತವರೆಲ್ಲರ ಗತಿಯೇನು ಎಂದು ಯೋಚಿಸಿ ಮಡಿಕೇರಿ ನಗರದ ಬೀದಿ ಬೀದಿಯಲ್ಲಿ ಹುಡುಕಿದಾಗ 25 ಕ್ಕೂ ಹೆಚ್ಚು ಜನರು ಹಸಿವಿನಿಂದ ಇರೋದು ಗೊತ್ತಾಯಿತು. ಅಂದಿನಿಂದ ನಮ್ಮ ಸ್ನೇಹಿತರೆಲ್ಲರು ಸೇರಿ ಸ್ನೇಹಿತರ ಮನೆಯಲ್ಲೇ ಅಡುಗೆ ಮಾಡಿ ನಿತ್ಯ ಮೂರೊತ್ತೂ ಇವರಿಗೆ ಊಟ ತಿಂಡಿ ನೀಡುತ್ತಿದ್ದೇವೆ ಎನ್ನುತ್ತಾರೆ ಸ್ನೇಹಿತರ ಬಳಗದ ಮುಖಂಡ ವಿನು.


ನಿತ್ಯ ಮೂರು ಹೊತ್ತು 25 ಜನರ ಹಸಿವು ನೀಗಿಸಲು ಕನಿಷ್ಠ ಒಂದುವರೆ ಸಾವಿರ ವೆಚ್ಚವಾಗುತ್ತಿದೆ. ಈ ವೆಚ್ಚವನ್ನು ಸ್ನೇಹಿತರ ಬಳಗದಲ್ಲಿರುವ ಎಲ್ಲರೂ ತಮ್ಮ ಕೈಯಿಂದಲೇ ಹಣವನ್ನು ಭರಿಸುತ್ತಿದ್ದಾರೆ. ಮತ್ತಷ್ಟು ಜನರು ಅಡುಗೆಗೆ ಬೇಕಾಗಿರುವ ತರಕಾರಿ, ಅಕ್ಕಿ ಮುಂತಾದವುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಪ್ರಚಾರ ಬಯಸದ ಮಡಿಕೇರಿ ನಗರದ ಕೆಲವು ಪೊಲೀಸ್ ಅಧಿಕಾರಿಗಳು ಸದ್ದಿಲ್ಲದೆ ಸ್ನೇಹಿತರ ಬಳಗಕ್ಕೆ ಸಹಕಾರ ನೀಡುತ್ತಾ ಹಸಿವು ನೀಗಿಸಲು ನೆರವಾಗುತ್ತಿದ್ದಾರೆ ಎಂಬುದು ಸಂತಸದ ವಿಚಾರ.


ಇದನ್ನೂ ಓದಿ: ನಾಯಿಯನ್ನು ಬಲೂನಿನಲ್ಲಿ ಹಾರಬಿಟ್ಟಿದ್ದಕ್ಕೆ, ಪೊಲೀಸರ ಅತಿಥಿಯಾಗಿರುವ ಯ್ಯೂಟೂಬರ್


ಸ್ನೇಹಿತರ ಬಳಗವು ಕೇವಲ ಬೀದಿ ಬದಿಯಲ್ಲಿರುವವರ ಹೊಟ್ಟೆಯನ್ನಷ್ಟೇ ತುಂಬಿಸುವ ಕೆಲಸ ಮಾಡುತ್ತಿಲ್ಲ. ಇದರ ಜೊತೆ ಜೊತೆಗೆ ಮಡಿಕೇರಿ ನಗರದಲ್ಲಿರುವ ಹತ್ತಾರು ಬೀದಿ ನಾಯಿಗಳಿಗೂ ಬಿಸ್ಕೆಟ್ ಸೇರಿದಂತೆ ಆಹಾರ ನೀಡಿ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಇವರ ಕಾರ್ಯವೂ ಯಾವುದೇ ಸದ್ದಿಲ್ಲದೆ ಎಲೆಮರೆಯ ಕಾಯಿಯಂತೆ ನಿರಂತರವಾಗಿ ನಡೆಯುತ್ತಿರೋದು ನಿಜಕ್ಕೂ ಪ್ರಶಂಸನೀಯವೇ ಸರಿ.


ಇವರಿಗೆ ಸಹಕಾರ ಮಾಡುವುದಕ್ಕೆ ಯಾರೇ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾದರೆ, ಅವರು ಅದನ್ನು ಸ್ವೀಕರಿಸುತ್ತಿಲ್ಲ. ಕೇವಲ ಆಹಾರ ಪದಾರ್ಥಗಳನ್ನು ಪಡೆದು ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಯಾರೇ ಆಹಾರ ಪದಾರ್ಥಗಳನ್ನು ನೀಡಲು ಮುಂದಾದರೆ, ಇವರೇ ದಾನಿಗಳು ಇರುವಲ್ಲಿ ತೆರಳಿ ಆ ಪದಾರ್ಥಗಳನ್ನು ಸ್ವೀಕರಿಸುತ್ತಾರೆ.


ಇದನ್ನೂ ಓದಿ: Priyanka Gandhi: ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಲಸಿಕೆ ತಯಾರಿಸುವ ಭಾರತದಲ್ಲೇ ಕೊರತೆ ಏಕೆ?ಪ್ರಿಯಾಂಕಾ ಗಾಂಧಿ ಪ್ರಶ್ನೆ


ಸ್ನೇಹಿತರ ಬಳಗದ ಈ ಮಹತ್ಕಾರ್ಯ ಇದೊಂದೇ ಅಲ್ಲ. ಹಲವು ವರ್ಷಗಳಿಂದಲೂ ಬ್ಲಡ್ ಡೋನರ್ ಗ್ರೂಪ್ ಮಾಡಿದ್ದು, ತುರ್ತು ರಕ್ತ ಬೇಕಾಗುವವರಿಗೆ ರಕ್ತವನ್ನು ಪೂರೈಸುತ್ತಾ ಸಾವಿರಾರು ಜನರ ಜೀವ ಉಳಿಸಿದ್ದಾರೆ. ಇವರಿಗೊಂದು ನ್ಯೂಸ್ 18 ನ ಸಲಾಂ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:MAshok Kumar
First published: