ತುಮಕೂರು: ತುಮಕೂರು ಜಿಲ್ಲೆಯನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆ ಎಂದು ಎರಡು ವಿಭಾಗ ಮಾಡಲಾಗಿದೆ. ಈ ಎರಡೂ ಶೈಕ್ಷಣಿಕ ಜಿಲ್ಲೆಗಳು ಯಾವಾಗಲೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಿನ್ನಡೆ ಸಾಧಿಸುತ್ತಿದ್ದವು. ಹೇಗಾದರೂ ಮಾಡಿ ಎಸ್.ಎಸ್.ಎಲ್.ಯಲ್ಲಿ ಉತ್ತಮ ಫಲಿತಾಂಶ ನೀಡಬೇಕು ಎಂದು ಪಣತೊಟ್ಟಿದ್ದ ಸಿಇಓ ಶುಭಾ ಕಲ್ಯಾಣ್ ಅವರ ಉಪಾಯ ಫಲಿಸಿದೆ. ಅದರಂತೆ ಈ ಬಾರಿ ಮಧುಗಿರಿ ಶೈಕ್ಷಣಿಕ ಜಿಲ್ಲೆ 11ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದಿದೆ.
ಈ ಬಾರಿಯ ಎಸ್ ಎಸ್ ಎಲ್ ಪರೀಕ್ಷೆ ಫಲಿತಾಂಶ ತುಮಕೂರು ಜಿಲ್ಲೆಯ ಮಟ್ಟಿಗೆ ಆಶಾದಾಯಕವಾಗಿದೆ. ಅದರಲ್ಲೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾಧನೆ ಅತ್ಯುತ್ತಮವಾಗಿದೆ. ಪ್ರತಿಬಾರಿಯೂ 11 ರಿಂದ 20 ಸ್ಥಾನದಲ್ಲಿ ಗಿರಕಿ ಹೊಡೆಯುತ್ತಿದ್ದ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳು ಈಗ ಆಶಾದಾಯಕವಾದ ಫಲಿತಾಂಶ ನೀಡಿವೆ. ಅದರಲ್ಲೂ ಮಧುಗಿರಿ ಶೈಕ್ಷಣಿಕ ಜಿಲ್ಲೆ 11ನೇ ಸ್ಥಾನದಿಂದ 3 ನೇ ಸ್ಥಾನಕ್ಕೇರಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರ ಮಾರ್ಗದರ್ಶನದಲ್ಲಿ ಹಲವು ಕಲಿಕಾ ಕಾರ್ಯಕ್ರಮಗಳನ್ನು ಕೈಗೊಂಡು ಮಧುಗಿರಿ ಶೈಕ್ಷಣಿಕ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಬೆಳಕು ಎಂಬ ಕ್ರಿಯಾ ಯೋಜನೆ ತಯಾರಿಸಿ, ಅದರಲ್ಲಿ ವಿಷನ್ 5 ಧ್ಯೇಯ ಅನುಸರಿಸಲಾಯಿತು ಅಂದರೆ, ಸ್ಪಷ್ಟ ಓದು, ಶುದ್ದ ಬರಹ, ಪುನರ್ ಮನನ, ಮಗ್ಗಿಮಾಸ, ಇಂಗ್ಲೀಷ್ ಫೆಸ್ಟ್, ಸೂತ್ರಗಳ ಮೂಲಕ ದಿಗ್ವಿಜಯ ಸಾಧಿಸಿದ್ದು, ಫಲಿತಾಂಶದಲ್ಲಿ 3ನೇ ಸ್ಥಾನಕ್ಕೇರಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ 264 ಶಾಲೆಗಳಲ್ಲಿ 12230 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಶೇ.88 ಅಂದರೆ 7900 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.85ರಷ್ಟು ಫಲಿತಾಂಶ ಪಡೆದು 11ನೇ ಸ್ಥಾನದಲ್ಲಿತ್ತು. ಒಂದೇ ವರ್ಷದಲ್ಲಿ ಗಮನಾರ್ಹ ರೀತಿಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಾಧನೆಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿಯನ್ನು ಕಡಿಮೆಗೊಳಿಸಿ, ಕಲಿಕಾ ನಿರಂತರತೆಯನ್ನು ಕಾಯ್ದುಕೊಳ್ಳಲಾಯಿತು. ಮೊದಲ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಹೋಬಳಿವಾರು ಕೇಂದ್ರಗಳಲ್ಲಿ ಅವರನ್ನೆಲ್ಲಾ ಒಂದೆಡೆ ಸೇರಿಸಿ ಓದಿಸಲಾಯ್ತು. ವಿಷಯವಾರು ವಿಡಿಯೋ ತಯಾರಿಸಿ ಆಯಾ ಶಾಲೆಗಳ ಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಪೋಷಕರ ವಾಟ್ಸಪ್ಗಳಿಗೆ ಕಳುಹಿಸಿಕೊಟ್ಟು ಎಲ್ಲಾ ಶೈಕ್ಷಣಿಕ ವಿಚಾರಗಳನ್ನು ಗ್ರೂಪ್ನಲ್ಲಿ ಹಂಚಿಕೊಳ್ಳಲಾಯಿತು. ಇದರಲ್ಲಿ ಎಲ್ಲಾ ಶಿಕ್ಷಕರೂ ಬಹಳಷ್ಟು ಶ್ರಮ ವಹಿಸಿ ಕೆಲಸ ನಿರ್ವಹಿಸಿದ್ದು, ಯಶಸ್ಸಿಗೆ ಕಾರಣವಾಗಿದೆ.
ಇದನ್ನು ಓದಿ: SSLC ಟಾಪರ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್
ಮಧುಗಿರಿ ಶೈಕ್ಷಣಿಕ ಜಿಲ್ಲೆ 11ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದರೂ ತುಮಕೂರು ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಅಷ್ಟೇನೂ ಸಮಾಧಾನವಾಗಿಲ್ಲ. ಕಳೆದ ವರ್ಷ 18ನೇ ಸ್ಥಾನದಲ್ಲಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆ ಈ ಬಾರಿ 14ನೇ ಸ್ಥಾನಕ್ಕೆ ಬಂದು ನಿಂತಿದೆ. ಮಧುಗಿರಿಯಲ್ಲಿ ಹಮ್ಮಿಕೊಂಡಿದ್ದ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನೂ ಇಲ್ಲಿಯೂ ಅನುಸರಿಸಲಾಗಿತ್ತೂ. ಆದರೂ ತುಮಕೂರು ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಕಡಿಮೆಯಾಗಿದೆ. ಈ ವರ್ಷದ ಕೆಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷ 5ನೇ ಸ್ಥಾನಕ್ಕೇರುವ ಪ್ರಯತ್ನ ಮಾಡುತ್ತೀವಿ ಅಂತಾರೆ ಸಿಇಒ ಶುಭಾ ಕಲ್ಯಾಣ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ