• Home
  • »
  • News
  • »
  • district
  • »
  • ಮಂಡ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕಲ್ಲು ಗಣಿಗಾರಿಕೆ; ಮದ್ದೂರಿನ ಚಂದಹಳ್ಳಿಯ ಗಣಿಗಾರಿಕೆಗೆ ನಿಷೇಧಕ್ಕೆ ಗ್ರಾಮಸ್ಥರ ಹೋರಾಟ

ಮಂಡ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕಲ್ಲು ಗಣಿಗಾರಿಕೆ; ಮದ್ದೂರಿನ ಚಂದಹಳ್ಳಿಯ ಗಣಿಗಾರಿಕೆಗೆ ನಿಷೇಧಕ್ಕೆ ಗ್ರಾಮಸ್ಥರ ಹೋರಾಟ

ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದಹಳ್ಳಿಯ ಗ್ರಾಮಸ್ಥರು.

ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದಹಳ್ಳಿಯ ಗ್ರಾಮಸ್ಥರು.

ಚಂದಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸುತ್ತಮುತ್ತಲ ಗ್ರಾಮದವರು ಹೈರಾಣಾಗಿದ್ದಾರೆ. ಆರೋಗ್ಯ ಸಮಸ್ಯೆ ಜೊತೆಗೆ ಊರಿನ‌ ಸುಂದರ ಪರಿಸರ ಹಾಳಾಗಿ ಪ್ರಾಕೃತಿಕ ಸಂಪತ್ತು ಕೂಡ ನಾಶವಾಗುತ್ತಿದೆ. ಇದರ ಜೊತೆಯಲ್ಲಿ ಪ್ರಸಿದ್ದ ಪಕ್ಷಿಧಾಮಕ್ಕೂ ಕೂಡ ಕಲ್ಲು ಗಣಿಗಾರಿಕೆ ಕಂಟಕವಾಗುತ್ತಿದೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದು, ಪರಿಸ್ಥಿತಿ ಕೈ ಮೀರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಇಲ್ಲಿನ ಜನರ ಸಮಸ್ಯೆ ಬಗೆ ಹರಿಸಿ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕಿದೆ.

ಮುಂದೆ ಓದಿ ...
  • Share this:

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೀತಾ ಇದೆ. ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣದ ಬಳಿಕ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಜಿಲ್ಲಾಡಳಿತ ನಿಷೇಧ ಮಾಡಿದೆಯಾದರೂ ಮದ್ದೂರು ತಾಲೂಕಿನ ಗಣಿಗಾರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ‌. ಮದ್ದೂರು ತಾಲೂಕಿನ ಚಂದಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಬೇಸತ್ತು ಊರಿನ‌ ಜನರು ಇದೀಗ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಅಹೋರಾತ್ರಿ ಧರಣಿ ಮೂಲಕ ಗಣಿಗಾರಿಕೆ ಸ್ಥಗಿತಕ್ಕೆ ಹೋರಾಟ ಆರಂಭಿಸಿದ್ದಾರೆ.


ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಇವರೆಲ್ಲ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಂದಹಳ್ಳಿ ಗ್ರಾಮದವರು. ಈ ಗ್ರಾಮದಲ್ಲಿ ದಿಲೀಪ್ ಬಿಲ್ಡ್ ಖಾನ್ ಕಂಪನಿಗೆ ರಾಷ್ಟ್ರೀ ಯ  ಹೆದ್ದಾರಿಯ ರಸ್ತೆ ಕಾಮಗಾರಿಗೆಂದು ಸರ್ಕಾರ ಇಲ್ಲಿನ ಕೋಳಿಯರಾಯನ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಅವಕಾಶ ನೀಡಿದೆ. ಈ ಕಂಪನಿಯವರು ಕಳೆದ ಒಂದು ವರ್ಷದಿಂದ ಇಲ್ಲಿ ಹಗಲು ರಾತ್ರಿ ಎನ್ನದೇ ಕಲ್ಲು ಗಣಿಗಾರಿಕೆ ನಡೆಸಿದ್ದರ ಪರಿಣಾಮ ಈ ಗ್ರಾಮದ ಇತಿಹಾಸ ಪ್ರಸಿದ್ದ ಕೋಳಿರಾಯನಗುಡ್ಡೆ ಹೆಸರಿನ ಬೆಟ್ಟ ಈಗ ಸಂಪೂರ್ಣ ಬರಿದಾಗಿ ನೆಲಸಮವಾಗಿದೆ. ಇದರ ಜೊತೆಗೆ  ಸುತ್ತಮುತ್ತಲ ಗ್ರಾಮವನ್ನು ಧೂಳು ಮತ್ತು ಕಲ್ಲಿನ ಕಣದಿಂದ ಕಲುಷಿತ ಮಾಡಿದ್ದಾರೆ. ಇದರ ಜೊತೆ ಹಗಲು ರಾತ್ರಿ ಎನ್ನದೆ ಭಾರೀ ಸ್ಫೋಟಕವನ್ನು ಸಿಡಿಸಿದ್ದರ ಪರಿಣಾಮ ಈ ಗ್ರಾಮದಲ್ಲಿ ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ರೊಚ್ಚಿಗೆದ್ದಿರುವ ಚೆಂದಹಳ್ಳಿಯ ಗ್ರಾಮಸ್ಥರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಸ್ತೂರಿ ಕನ್ನಡ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಕಳೆದ 5 ದಿನದಿಂದ ಗಣಿಗಾರಿಕೆ ಸ್ಥಳದಲ್ಲಿ ಧರಣಿ ಕುಳಿತು ಪರಿಹಾರ ಸೇರಿದಂತೆ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ‌.


ಇನ್ನು ಚಂದಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ DBLಕಂಪನಿಯವರು ಸ್ಫೋಟಕ ಬಳಸದೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದಾರೆ. ಆದರೆ ಇವರು ಮಾತ್ರ ಅನಧಿಕೃತವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಜನರಿಗೆ ಒಂದು ಕಡೆ ಆರೋಗದ ಸಮಸ್ಯೆ ಉಂಟಾದರೆ, ಮತ್ತೊಂದು ಕಡೆ ನೀರು ಕಲುಷಿತಗೊಂಡು ಊರಿನ ಪರಿಸರ ಸಂಪೂರ್ಣ ಹಾಳಾಗಿದೆ. ಇದರ ಜೊತೆಗೆ ಜಾನುವಾರುಗಳ ಮೇಲೂ ಇದು ಪರಿಣಾಮ ಬೀರಿದ್ದು ಅವುಗಳಿಗೆ ಗರ್ಭಪಾತದಂತಹ ಪ್ರಕರಣಗಳು ಹೆಚ್ಚಾಗಿವೆ.


ಭಾರೀ ಸ್ಫೋಟಕಗಳ ಬಳಕೆಯಿಂದ ಮನೆಯ ಗೋಡೆಗಳು ಬಿರುಕುಬಿಟ್ಟು ಆತಂಕದಿಂದ ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ಇಲ್ಲಿನ ಕೃಷಿಯ ಭೂಮಿ ಕೂಡ ಧೂಳಿನಿಂದ ಆವೃತವಾಗಿ ಬೆಳೆ ಕೂಡ ಬೆಳೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮೀಪದಲ್ಲೇ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಕೂಡ ಇದ್ದು ಪಕ್ಷಿಗಳಿಗೂ ಕೂಡ ಮಾರಕವಾಗುತ್ತಿದೆ. ಇಲ್ಲಿನ ಕಲ್ಲು ಗಣಿಗಾರಿಕೆಯಿಂದ ಸಮೀಪವಿರುವ ಶಿಂಷಾ ನದಿ ಕಲುಷಿತಗೊಂಡಿದ್ದರೆ, ಊರಿನ ರಸ್ತೆಗಳಂತು ಭಾರದ ಟಿಪ್ಪರ್ ಲಾರಿಗಳ ಸಂಚಾರದಿಂದ ಸಂಪೂರ್ಣದಿಂದ ಸಂಪೂರ್ಣ ಹಾಳಾಗಿ ಗುಂಡಿ ಬಿದ್ದಿವೆ.


ಇದನ್ನು ಓದಿ: ಕಲಬುರ್ಗಿಯಲ್ಲಿ ಎಸಿಬಿ ದಾಳಿ; ಎಇ ಅವಟೆ ಮನೆಯಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ ಪತ್ತೆ!


ಈ ಕುರಿತು ಗ್ರಾಮಸ್ಥರು, ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಗ್ರಾಮಸ್ಥರು ರೊಚ್ಚಿಗೆದ್ದು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಗಣಿಗಾರಿಕೆ ಸ್ಥಳದಲ್ಲಿ ಅಡುಗೆ ಮಾಡಿಕೊಂಡು ಅಲ್ಲೇ ಧರಣಿ ಮಾಡುತ್ತಿದ್ದು ಕಲ್ಲು ಗಣಿಗಾರಿಕೆ ನಿಷೇಧಿಸುವವರೆಗೂ ಪ್ರತಿಭಟನೆ ಕೈ ಬಿಡಲ್ಲ ಅಂತಿದ್ದಾರೆ.


ಒಟ್ಟಾರೆ  ಚಂದಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸುತ್ತಮುತ್ತಲ ಗ್ರಾಮದವರು ಹೈರಾಣಾಗಿದ್ದಾರೆ. ಆರೋಗ್ಯ ಸಮಸ್ಯೆ ಜೊತೆಗೆ ಊರಿನ‌ ಸುಂದರ ಪರಿಸರ ಹಾಳಾಗಿ ಪ್ರಾಕೃತಿಕ ಸಂಪತ್ತು ಕೂಡ ನಾಶವಾಗುತ್ತಿದೆ. ಇದರ ಜೊತೆಯಲ್ಲಿ ಪ್ರಸಿದ್ದ ಪಕ್ಷಿಧಾಮಕ್ಕೂ ಕೂಡ ಕಲ್ಲು ಗಣಿಗಾರಿಕೆ ಕಂಟಕವಾಗುತ್ತಿದೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದು, ಪರಿಸ್ಥಿತಿ ಕೈ ಮೀರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಇಲ್ಲಿನ ಜನರ ಸಮಸ್ಯೆ ಬಗೆ ಹರಿಸಿ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕಿದೆ.

Published by:HR Ramesh
First published: