• Home
  • »
  • News
  • »
  • district
  • »
  • ಮಲೆಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ದ ಸಾಲೂರು ಮಠದ ಉತ್ತರಾಧಿಕಾರಿಯಾಗಿ ಎಂ.ನಾಗೇಂದ್ರ  ಆಯ್ಕೆ; ನಾಳೆ ಪಟ್ಟಾಧಿಕಾರ

ಮಲೆಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ದ ಸಾಲೂರು ಮಠದ ಉತ್ತರಾಧಿಕಾರಿಯಾಗಿ ಎಂ.ನಾಗೇಂದ್ರ  ಆಯ್ಕೆ; ನಾಳೆ ಪಟ್ಟಾಧಿಕಾರ

ಸಾಲೂರು ಮಠ

ಸಾಲೂರು ಮಠ

ಸಮಿತಿಯು ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತರಾಧಿಕಾರಿ ಆಯ್ಕೆ ಮಾಡಲು  ನಿರ್ಧರಿಸಿತ್ತು. ಇದೀಗ ಸಮಿತಿಯು ಈ ಮೊದಲು ಆಯ್ಕೆ ಮಾಡಿದ್ದ ನಾಗೇಂದ್ರ ಅವರನ್ನೇ ಸಾಲೂರು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ  ಮಾಡಿದೆ. ನಾಳೆ ಶನಿವಾರ ನಡೆಯಲಿರುವ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಇಮ್ಮಡಿ ಮಹದೇವಸ್ವಾಮಿ ಬೆಂಬಲಿಗರು ಅಡ್ಡಿಪಡಿಸಬಹುದೆಂಬ ಹಿನ್ನೆಲೆಯಲ್ಲಿ ಸಾಲೂರು ಮಠದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ (ಆಗಸ್ಟ್ 7); ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ದ ಸಾಲೂರು ಮಠದ ಉತ್ತರಾಧಿಕಾರಿಯಾಗಿ ಬಂಡಳ್ಳಿಯ ಎಂ ನಾಗೇಂದ್ರ ಎಂಬ ವಟುವಿನ ಹೆಸರನ್ನು ಮಠದ ಮೇಲುಸ್ತುವಾರಿ ಸಮಿತಿ ಅಂತಿಮಗೊಳಿಸಿ ಇಂದು ಪ್ರಕಟಿಸಿದೆ.


ಈ ಮಠದ ಕಿರಿಯ ಸ್ವಾಮೀಜಿಯಾಗಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಯ ಉಚ್ಛಾಟನೆ ಹಾಗೂ ಉತ್ತರಾಧಿಕಾರಿ ನೇಮಕಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕೊಳ್ಳೇಗಾಲ ಅಪರ ಸಿವಿಲ್ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ನಾಳೆ ಶನಿವಾರ ಬೆಳಗಿನ ಜಾವ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ  ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ. ಈ ಧಾರ್ಮಿಕ ಕಾರ್ಯದಲ್ಲಿ ಸುತ್ತೂರು  ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಗಂಗಾ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ.


ಸಾಲೂರು ಮಠದ  ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ 17 ಜನರ ಸಾವಿಗೆ ಕಾರಣವಾದ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಯಾಗಿ, ಜೈಲು ಸೇರಿದ್ದಾರೆ. ಇಮ್ಮಡಿ ಮಹದೇವಸ್ವಾಮಿ ಜೈಲು ಸೇರಿದ ನಂತರ ಮಠದಲ್ಲಿ ಸಭೆ ಸೇರಿದ್ದ ಭಕ್ತರು ಇಮ್ಮಡಿ ಮಹದೇವಸ್ವಾಮಿಯನ್ನು ಪೀಠಾಧಿಪತಿ ಸ್ಥಾನದಿಂದ ವಜಾಗೊಳಿಸಲು ತೀರ್ಮಾನ ಕೈಗೊಂಡಿದ್ದರು. ಅಲ್ಲದೆ  ಉತ್ತರಾಧಿಕಾರಿ ಆಯ್ಕೆಗೆ ಗಣ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದ್ದರು.


ಈ ನಡುವೆ ಮಠದ ಹಿರಿಯ ಸ್ವಾಮೀಜಿಯಾದ  ಗುರು ಸ್ವಾಮೀಜಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಬಂಡಳ್ಳಿಯ  ನಾಗೇಂದ್ರ ಅವರನ್ನು  ಉತ್ತರಾಧಿಕಾರಿಯಾಗಿ ನೇಮಿಸಿ ವಿಲ್ ಬರೆದಿದ್ದರು. ತಮ್ಮ ಸಂಬಂಧಿಕರಾದ ಹನೂರಿನ ಸುಂದರಮ್ಮ ಮತ್ತು ಮಹದೇವಸ್ವಾಮಿ ಅವರ ಪುತ್ರ ನಾಗೇಂದ್ರ ಅವರನ್ನು ಸಾಲೂರು ಮಠದ ಉತ್ತರಾಧಿಕಾರಿಯಾಗಿ ನೇಮಿಸಿ ಎಂದು ವಿಲ್ ಬರೆದಿದ್ದ  ಗುರುಸ್ವಾಮೀಜಿ, ಮಠದ ಸಮಸ್ತ ಆಸ್ತಿ, ಧಾರ್ಮಿಕ ಅಧಿಕಾರ ಎಲ್ಲವೂ ನಾಗೇಂದ್ರ ಅವರಿಗೆ ಸೇರತಕ್ಕದ್ದೆಂದು ವಿಲ್ ನಲ್ಲಿ ನಮೂದಿಸಿ ಮೈಸೂರಿನ ದಕ್ಷಿಣ ವಲಯದ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು.


ತಮ್ಮ ಕಾಲಾ ನಂತರ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ತಮ್ಮ ಉತ್ತರಾಧಿಕಾರಿಗೆ ಪಟ್ಟಾಧಿಕಾರ ವಹಿಸುವಂತೆ ಅವರು ತಮ್ಮ ವಿಲ್ ನಲ್ಲಿ ತಿಳಿಸಿದ್ದರು. ಆದರೆ ತಮ್ಮ ಸಂಬಂಧಿಕರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿರುವ ಗುರು ಸ್ವಾಮೀಜಿ ಅವರ ಕ್ರಮಕ್ಕೆ ಭಕ್ತರು ಆಕ್ರೋಶಗೊಂಡಿದ್ದರು. ಭಕ್ತರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಗುರು ಸ್ವಾಮೀಜಿ ತಮ್ಮ ವಿಲ್ ವಾಪಸ್ ಪಡೆದಿದ್ದರು. ಮಠದ ಉತ್ತರಾಧಿಕಾರಿಯಾಗಿ ಹಿರಿಯ ಸ್ವಾಮೀಜಿ ಗುರುಸ್ವಾಮಿಗಳ ಸಂಬಂಧಿಕರನ್ನಾಗಲಿ, ಜೈಲು ಸೇರಿರುವ ಇಮ್ಮಡಿ ಮಹದೇವಸ್ವಾಮಿಯ ಸಂಬಂಧಿಕರನ್ನಾಗಲಿ ನೇಮಕ ಮಾಡದೆ ಬೇರೆಯವರನ್ನು ಆಯ್ಕೆ ಮಾಡಬೇಕೆಂದು  ಭಕ್ತರು ತೀರ್ಮಾನಿಸಿದ್ದರು. ಇದಕ್ಕಾಗಿ ಗಣ್ಯರನ್ನೊಳಗೊಂಡ ಆಯ್ಕೆ ಸಮಿತಿ ರಚಿಸಲಾಗಿತ್ತು.


ಉತ್ತರಾಧಿಕಾರಿಯಾಗಿ ಆಯ್ಕೆಯಾದ ಎಂ.ನಾಗೇಂದ್ರ


ಇದನ್ನು ಓದಿ: ಜೀಪ್, ಬೋಟ್ ಏರಿ ಪ್ರವಾಹ ದಾಟಿದ ಸಚಿವ ವಿ.ಸೋಮಣ್ಣ; ಮಳೆಯಿಂದಾಗಿ ಅರ್ಚಕರ ಕುಟುಂಬ ರಕ್ಷಣಾ ಕಾರ್ಯಾಚರಣೆ ವಿಳಂಬ


ಈ ಸಮಿತಿಯು ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತರಾಧಿಕಾರಿ ಆಯ್ಕೆ ಮಾಡಲು  ನಿರ್ಧರಿಸಿತ್ತು. ಇದೀಗ ಸಮಿತಿಯು ಈ ಮೊದಲು ಆಯ್ಕೆ ಮಾಡಿದ್ದ ನಾಗೇಂದ್ರ ಅವರನ್ನೇ ಸಾಲೂರು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ  ಮಾಡಿದೆ. ನಾಳೆ ಶನಿವಾರ ನಡೆಯಲಿರುವ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಇಮ್ಮಡಿ ಮಹದೇವಸ್ವಾಮಿ ಬೆಂಬಲಿಗರು ಅಡ್ಡಿಪಡಿಸಬಹುದೆಂಬ ಹಿನ್ನೆಲೆಯಲ್ಲಿ ಸಾಲೂರು ಮಠದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Published by:HR Ramesh
First published: